ಜನಮನ

ಗ್ರಾಮ ಹಬ್ಬದಂತೆ ರಾಜ್ಯೋತ್ಸವ ಆಚರಣೆ

ಗ್ರಾಮದ ಬೀದಿಗಳನ್ನು ಬಾಳೆಕಂದು, ಮಾವಿನ ತೋರಣ, ಹೂವುಗಳಿಂದ ಅಲಂಕರಿಸಲಾಗುತ್ತದೆ. ಬಂಧುಗಳನ್ನು, ನೆರೆ ಗ್ರಾಮದವರನ್ನು ಕರೆಸಿ ಹಬ್ಬದ ಊಟ ಹಾಕಿಸುತ್ತಾರೆ. ಹೊಸ ಬಟ್ಟೆ ಧರಿಸಿ ಮಕ್ಕಳೊಂದಿಗೆ ನಲಿದಾಡುತ್ತಾರೆ……

ಇದು ಯಾವುದೋ ಗ್ರಾಮ ದೇವತೆಯ ಜಾತ್ರೆ ಅಥವಾ ಹಬ್ಬವಿರಬಹುದು ಎಂದುಕೊಂಡರೆ ನಿಮ್ಮ ಊಹೆ ತಪ್ಪು..

ರಾಜ್ಯದ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ನಿಡಗಲ್ ಹೋಬಳಿಯ ಪುಟ್ಟ ಗ್ರಾಮ ರಾಮಯ್ಯನಪಾಳ್ಯದಲ್ಲಿ ಕನ್ನಡ ರಾಜ್ಯೋತ್ಸವವನ್ನೂ ಹಬ್ಬದಂತೆ ಆಚರಿಸುತ್ತಾರೆ. ಇದು ಒಂದೆರೆಡು ವರ್ಷಗಳ ಆಚರಣೆಯಲ್ಲ ಸತತ 23 ವರ್ಷಗಳಿಂದ ಇದೇ ಪರಿಪಾಠ ಮುಂದುವರೆದುಕೊಂಡು ಬರುತ್ತಿದೆ.

ಬೆಳಿಗ್ಗೆ ಗ್ರಾಮದ ಸರ್ಕಾರಿ ಕನ್ನಡ ಶಾಲೆ ಮಕ್ಕಳಿಗೆ ಸ್ವತಂತ್ರ ಹೋರಾಟಗಾರರು, ದಾರ್ಶನಿಕರ ಪೋಷಾಕು ಹಾಕಿಸಿ, ಅಲಂಕೃತ ವಾಹನಗಳಲ್ಲಿ ಭುವನೇಶ್ವರಿಯ ಭಾವಚಿತ್ರ, ಕನ್ನಡ ಭಾವುಟಗಳೊಂದಿಗೆ ಮೆರವಣಿಗೆ ನಡೆಸಲಾಗುತ್ತದೆ.  ಕೆ.ಟಿ.ಹಳ್ಳಿ, ದೇವಲಕೆರೆ, ಚಿನ್ನಮ್ಮನಹಳ್ಳಿ, ಗುಜ್ಜನಡು ಇತ್ಯಾದಿ ನೆರೆಹೊರೆಯ ಗ್ರಾಮಗಳಿಗೆ ಮೆರವಣಿಗೆ ಹೋಗಿ ಬರಲಾಗುತ್ತದೆ.

ಸಂಜೆ ಸಾಹಿತಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಕರೆಸಿ ವೇದಿಕೆ ಕಾರ್ಯಕ್ರಮ ನಡೆಸಲಾಗುತ್ತದೆ. ನಂತರ ಕನ್ನಡ ಶಾಲೆ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುತ್ತಾರೆ.

ಇದರ ಸಂಪೂರ್ಣ ವೆಚ್ಚವನ್ನು ಗ್ರಾಮದ ಯುವಕರು, ಗ್ರಾಮಸ್ಥರೇ ಭರಿಸುವುದು ವಿಶೇಷ. ಬೆಂಗಳೂರಿಗೆ ಕೆಲಸ ಹರಸಿ ಹೋಗಿರುವವರು,  ಗ್ರಾಮದ ಸರ್ಕಾರಿ ನೌಕರರು ತಮ್ಮ ಕೈಲಾದಷ್ಟು ವಂತಿಗೆ ನೀಡಿ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅಳಿಲು ಸೇವೆ ಮಾಡುತ್ತಿದ್ದಾರೆ.

ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಸಣ್ಣನಾಗಪ್ಪ ಮಾತನಾಡಿ,  ರಾಜ್ಯೋತ್ಸವವನ್ನು ಊರ ಹಬ್ಬದಂತೆ ಆಚರಿಸುವ ಗ್ರಾಮಸ್ಥರ ಕನ್ನಡ ಪ್ರೇಮ ಅನುಕರಣೀಯ.   ಗ್ರಾಮದ ರಾಜ್ಯೋತ್ಸವ ಆಚರಣೆ ರಾಜ್ಯಕ್ಕೆ ಮಾಧರಿ ಎಂದು ಶ್ಲಾಘನೆ ವ್ಯಕ್ತಪಡಿಸಿದರು.


ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಟಿ.ಖಾನ್, ಕಾರ್ಯದರ್ಶಿ ಕೃಷ್ಣಮೂರ್ತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ್, ಬಿ.ಆರ್.ಸಿ ಪವನ್ ಕುಮಾರ್ ರೆಡ್ಡಿ,  ಶಿಕ್ಷಕ ಸಿದ್ದೇಶ್, ನಾಗರಾಜಪ್ಪ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ಶಿವಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಈರಣ್ಣ, ಉಪಾಧ್ಯಕ್ಷ ಭಾಗ್ಯಮ್ಮ ಶಿವಣ್ಣ, ರಾಮಚಂದ್ರಪ್ಪ, ನಾಗಣ್ಣ, ರಂಗದಾಮಣ್ಣ, ಹನುಮಂತರಾಯಪ್ಪ, ವೀರಕ್ಯಾತಪ್ಪ, ಮಲ್ಲಪ್ಪ, ನರಸಿಂಹಮೂರ್ತಿ ಉಪಸ್ಥಿತರಿದ್ದರು.

Comment here