ಜನಮನ

ಚಿರತೆ ಹಾವಳಿಯಿಂದಾಗಿ ಕುರುಡಾದ ಅರಣ್ಯ ಇಲಾಖೆ ಕಣ್ಣು!

ವಿಶೇಷ ವರದಿ: M.N. ಚಿನ್ಮಯಿ


ತುಮಕೂರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಚಿರತೆ, ಕರಡಿ, ಕಾಡುಹಂದಿಗಳ ಹಾವಳಿಯಿಂದಾಗಿ ಅರಣ್ಯ ಇಲಾಖೆಯ ಕಣ್ಣು ಕುರುಡಾಗಿರಬಹುದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಮನುಷ್ಯರ ಮೇಲೆ ಈ ಕಾಡುಪ್ರಾಣಿಗಳು ದಾಳಿ ಮಾಡಿದಾಗ, ಸಾವಿಗೀಡಾದಾಗ, ಇಲ್ಲ ಯಾರಾದರೂ ಹಲ್ಲೆಗೀಡಾದಾಗ ಮಾತ್ರ ಲಘುಬಗೆಯ ಚಟುವಟಿಕೆ, ವಿಶೇಷ ಆಸಕ್ತಿ ತಾಳುವ ಜಿಲ್ಲೆಯ ಅರಣ್ಯ ಇಲಾಖೆಯ ಅಧಿಕಾರಿಗಳು ಉಳಿದಂತೆ ಜನರಿಗೆ ಆಗುತ್ತಿರುವ ತೊಂದರೆ, ಸಮಸ್ಯೆ, ಆರ್ಥಿಕ ನಷ್ಟಕ್ಕೆ ಮೌನತಾಳುತ್ತಾರೆ. ಆಯಾ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳೇ ಇಲ್ಲವೇನೋ ಎಂಬಂತೆ ಕುರುಡಾಗಿ ವರ್ತಿಸತೊಡಗಿದ್ದಾರೆ.

ಹೆಬ್ಬೂರಿನಲ್ಲಿ ಮಗುವೊಂದನ್ನು ಚಿರತೆ ರಕ್ತ ಹೀರಿ ಕೊಂದ ಬಳಿಕ ಆ ಭಾಗದಲ್ಲಿ ಚಿರತೆ ಹಿಡಿಯು ಅರಣ್ಯ ಇಲಾಖೆ ಹಿರಿ-ಕಿರಿಯ ಅಧಿಕಾರಿಗಳು ಓಡಾಡುತ್ತಿದ್ದಾರೆ. ಇದೇ ರೀತಿಯ ಸಮಸ್ಯೆ ಊರ್ಡಿಗೆರೆ ಹೋಬಳಿ, ದೇವರಾಯನದುರ್ಗ ಸುತ್ತಮುತ್ತಲವೂ ಇದೆ. ಇಲ್ಲಿಯ ಜನರು ತಿಂಗಳುಗಳಿಂದಲೇ ಅರಣ್ಯ ಇಲಾಖೆಗೆ ಚಿರತೆ ಹಾವಳಿ ಬಗ್ಗೆ ಹೇಳುತ್ತಿದ್ದರೂ ಅವರುಗಳು ಕಣ್ಣು ಅಷ್ಟೇ ಅಲ್ಲ ಕಿವಿಯೂ ಕಿವುಡಾಗಿದೆ ಎಂಬಂತೆ ವರ್ತಿಸ ತೊಡಗಿದ್ದಾರೆ.

ಚಿರತೆಗೆ ಬಲಿಯಾಗಿರುವ ಕುರಿ

ತುಮಕೂರು ಜಿಲ್ಲಾದ್ಯಂತ ಇತ್ತೀಚಿಗೆ ಕಾಡು ಮೃಗಗಳ ಹಾವಳಿ ಹೆಚ್ಚಾಗಿ ಭಯ ಭೀತಿಯಲ್ಲಿ ಬದುಕುವಂತಾಗಿದೆ. ಜಿಲ್ಲೆಯ ಹೆಬ್ಬೂರು ಹಾಗೂ ಊರ್ಡಿಗೆರೆ ಹೋಬಳಿಯಲ್ಲಿ ಚಿರತೆಯ ಹಾವಳಿ ಇದ್ರೆ, ದೇವರಾಯನದುರ್ಗ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕರಡಿ ಹಾವಳಿ ಇದೆ. ಇನ್ನು ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಕಾಡು ಹಂದಿಗಳ ಉಪಟಳ ಹೇಳತೀರವಾಗಿದೆ.


ಚಿರತೆ ಹಿಡಿಯಲು ಇವರಿಗೇನು ಕಷ್ಟ?

ಉಪಟಳ ನೀಡುತ್ತಿರುವ ಚಿರತೆ, ಕರಡಿ, ಕಾಡುಹಂದಿಗಳನ್ನು ಹಿಡಿದು ಸಾಗಿಸಲು ಅರಣ್ಯ ಇಲಾಖೆಗೆ ಏನು ಕಷ್ಟವಾಗಿದೆ ಎನ್ನುವುದು ಜನರಿಗೆ ತಿಳಿಸಬೇಕು. ಈ ಸಮಸ್ಯೆ ಹೀಗೆ ಮುಂದುವರೆದರೆ ಹಳ್ಳಿಗಳಲ್ಲಿ ಜನರು ಬದುಕುವುದೇ ಕಷ್ಟವಾಗುತ್ತಿದೆ. ಅಲ್ಲದೇ ಕೋಳಿ, ಮಾಂಸದ ತಾಜ್ಯವನ್ನು ಸರಿಯಾದ ನಿರ್ವಹಣೆ ಬಗ್ಗೆ ಜಿಲ್ಲಾಡಳಿತ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎನ್ನುತ್ತಾರೆ ತೋವಿನಕೆರೆಯ ಪದ್ಮರಾಜ್.


ಈಚೆಗೆ ಹೆಬ್ಬೂರು ಬಳಿ ಮಗುವನ್ನು ತಿಂದು ಹಾಕಿದ್ದು, ಒಟ್ಟು ಮೂರು ಜೀವಗಳನ್ನು ಬಲಿ ತೆಗೆದುಕೊಂಡಿದೆ. , ಇನ್ನೂ ಊರ್ಡಿಗೆರೆ ಹೋಬಳಿಯ ಅನೇಕ ಕಡೆಗಳಲ್ಲಿ ಹಲವಾರು ರೈತರ ಜೀವವೋಪಾಯದ ಕುರಿ, ಮೇಕೆಗಳು ಚಿರತೆಯ ನಿತ್ಯ ಆಹಾರವಾಗಿದೆ. ರೈತಾಪಿ ವರ್ಗ ತಮ್ಮ ಜಮೀನುಗಳಲ್ಲಿ ಒಂಟಿ ಯಾಗಿ ಕೆಲಸ ಮಾಡುವುದು ದುಸ್ತರವಾಗಿದೆ.

ಹೀಗಿದೆ ನೋಡಿ ನಮ್ಮ ಅರಣ್ಯ

ಕಾಡು ಹಂದಿಗಳು ಜಮೀನಿನಲ್ಲಿ ಬೆಳೆದ ಉತ್ಪನ್ನ ಗಳನ್ನ ನಾಶಮಾಡಿದರೆ, ಹಂದಿ ಕಾಯಲು ಮುಗ್ಧ ರೈತರು ರಾತ್ರಿ ಹೊತ್ತು ಚಳಿ ಗಾಳಿ ಲೆಕ್ಕಿಸದೆ ಕಾದು ಕಾದು ಸುಣ್ಣವಾಗಿದ್ದಾರೆ. ಇನ್ನು ಈ ಕಾಡು ಹಂದಿಗಳ ಬೇಟೆಗೆ ಬೇಟೆಗಾರರು ರೈತರ ಜಮೀನುಗಳಲ್ಲಿ ಅನಧಿಕೃತ ಮದ್ದು. ಗುಂಡು ಗಳನ್ನು ಇಟ್ಟು ರೈತರಿಗೆ ನಿತ್ಯ ಉಪದ್ರವ ನೀಡುತ್ತಿದ್ದಾರೆ.

ರಾಷ್ಟ್ರ ಪಕ್ಷಿ ನವಿಲುಗಳು ಯಥೇಚ್ಛವಾಗಿ ಇದ್ದು ಅವುಗಳ ಮಾರಣ ಹೋಮ ನಡೆಯುತ್ತಿದೆ. ಈ ಎಲ್ಲಾ ಕಾನೂನು ಬಾಹಿರ ಚಟುವಟಿಗೆಕೆಗಳಿಗೆ ಪ್ರತ್ಯಕ್ಷ, ಪರೋಕ್ಷ ವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರಣ ಎಂದು ಜನ ಶಪಿಸುತ್ತಿದ್ದಾರೆ.

ತುರುವೇಕೆರೆ ತಾಲ್ಲೂಕಿನಲ್ಲಿ ಚಿರತೆ ಹಾವಳಿ ತಡೆಯಲು ಜಿಲ್ಲಾಡಳಿತ ಏನೇನು ಮಾಡುತ್ತಿಲ್ಲ ಎಂದು ಅಲ್ಲಿನ ಶಾಸಕ ಮಸಾಲ ಜಯರಾಮ್ ಅವರು ಆರೋಪಿಸಿದ್ದಾರೆ. ಶಾಸಕರ ಮಾತಿಗೆ ಮನ್ನಣೆ ಕೊಡದ ಇಲಾಖೆ ಇನ್ನೂ ನಮ್ಮ ಜನಸಾಮಾನ್ಯರ ಮಾತಿಗೆ ಬೆಲೆ ಕೊಡಲಿದೆಯೇ ಎನ್ನುತ್ತಾರೆ ಜನರು.


ದೇವರಾಯನದುರ್ಗ ಕಾಡಿನಲ್ಲಿ ನೀಲಗಿರಿ ಏಕೆ ತೆಗೆಯುತ್ತಿಲ್ಲ?

ದೇವರಾಯನದುರ್ಗ ಮೀಸಲು ಅರಣ್ಯ ಹಾಗೂ ಸರಹದ್ದಿನಲ್ಲಿ ಕಾಡಿ ವಿಪರೀತ ನಾಶವಾಗುತ್ತಿರುವುದೇ ಚಿರತೆ ಹಾವಳಿಗೆ ಕಾರಣ ಎನ್ನುತ್ತಾರೆ ಭಾರತೀಯ ಕೃಷಿಕ ಸಮಾಜದ ಜಗದೀಶ್ ಕೋಡಿಹಳ್ಳಿ.

ಈ ಅರಣ್ಯದಲ್ಲಿ ನೀಲಗಿರಿ ಮರಗಳನ್ನು ತೆಗೆಯುವಂತೆ ಆದೇಶ ಇದ್ದರೂ ನೀಲಗಿರಿ ತೆಗೆದು ಬೇರೆ ಕಾಡು ಗಿಡಗಳನ್ನು ಬೆಳೆಸಲು ಅರಣ್ಯ ಇಲಾಖೆ ಏಕೆ ಕ್ರಮ ಕೈಗೊಂಡಿಲ್ಲ. ಅರಣ್ಯದಲ್ಲಿ ಪ್ರತಿ ವರ್ಷ ಎಷ್ಟು ಗಿಡಗಳನ್ನು, ಯಾವ ಗಿಡಗಳನ್ನು ನಡೆಯುತ್ತಿದೆ ಎಂಬುದರ ಲೆಕ್ಕ ಕೊಡಬೇಕು. ಪ್ರತಿ ಮರವನ್ನುಗಣತಿ ಮಾಡಿ ಬಯೋ ಜಿಯೋ ಮಾಡಿಸಬೇಕು. ಪ್ರತಿವರ್ಷ ಎಷ್ಟು ಮರಗಳನ್ನು ಕದ್ದು ಸಾಗಿಸಲಾಗಿದೆ ಎಂಬುದರ ವಿವರವನ್ನು ಸಾರ್ವಜನಿಕರಿಗೆ ತಿಳಿಸುವ ಕೆಲಸ ಮಾಡಬೇಕು ಎನ್ನುತ್ತಾರೆ ಅವರು.


ವರದಿಗಾರರು ತುಮಕೂರಿನಲ್ಲಿ ವಕೀಲರು

Comment here