ತುರುವೇಕೆರೆ: ಡಿ.ಕೆ.ಶಿವಕುಮಾರ್ ಅವರು ಮುಖ್ಯ ಮಂತ್ರಿ ಆಗುವುದನ್ನು ತಪ್ಪಿಸಲು ಕಾಂಗ್ರೆಸ್ ನ ಕೆಲ ಸಚಿವರು ಹಠಕ್ಕೆ ಬಿದ್ದಿರುವುದು ಒಕ್ಕಲಿಗ ಸಮುದಾಯದ ನಾಯಕರನ್ನು ಮೂಲೆ ಗುಂಪು ಮಾಡುವ ಹುನ್ನಾರವಾಗಿದ್ದು; ಇದು ಕೆ್ಟ್ಟ ರಾಜಕೀಯಕ್ಕೆ ಮುನ್ನುಡಿಯಾಗಲಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ವಿಷಾಧ ವ್ಯಕ್ತಪಡಿಸಿದರು.
ಪಟ್ಟಣದ ಎಸ್.ಎ.ಸಿ ಮಯೂರ ವಿದ್ಯಾಲಯದ ಶಾಲಾ ಆವರಣಲ್ಲಿ ನೇಗಿಲ ಯೋಗಿ ತಾಲ್ಲೂಕು ಘಟಕ ಶಾಖೆ ಉದ್ಘಾಟನೆ ಹಾಗು ಸಾಧಕರಿಗೆ ಅಭಿನಂಧನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶನಿವಾರ ಮಾತನಾಡಿದರು.
ಈ ಕ್ಷೇತ್ರದ ಒಕ್ಕಲಿಗ ಸಮುದಾಯದವರು ಸ್ವಾಭಿಮಾನಿಗಳು ಹಾಗಾಗಿ ನನ್ನನ್ನು ನಾಲ್ಕು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಅವರಿಗೆ ಸದಾ ಬೆಂಬಲವಾಗಿರುವೆ. ಒಂದೊಮ್ಮೆ ನಮ್ಮ ಸಮುದಾಯಕ್ಕೆ ಅನ್ಯಾಯವಾದಲ್ಲಿ ಎಲ್ಲ ನಾಯಕರೂ ಪಕ್ಷಬೇಧ ಮರೆತು ಸಂಘಟಿತರಾಗಿ ಹೋರಾಟ ಮಾಡೋಣ ಎಂದು ಕರೆಕೊಟ್ಟರು.
ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ಸರ್ಕಾರಿ ಉದ್ಯೋಗ ಸಿಗಲಿಲ್ಲವೆಂದರೆ ಬದುಕೇ ಇಲ್ಲ ಎನ್ನುವ ಮಟ್ಟಿಗೆ ಸಮಾಜ ಬಂದು ನಿಂತಿದೆ. ಸಮುದಾಯ ಯುವಕರು ಉದ್ಯಮಶೀಲರಾಗಿ ನೂರಾರು ಜನರಿಗೆ ಉದ್ಯೋಗ ಕೊಡುವಂತೆ ಬೆಳೆಯ ಬೇಕು.
ಸಮುದಾಯದ ರೈತರು ತಮ್ಮ ಮಕ್ಕಳಿಗೆ ಕೃಷಿ ಬಗ್ಗೆ ಹೆಚ್ಚಿನ ಆಸಕ್ತಿ ಮೂಡುವಂತೆ ಮಾಡಿ ಸಾಂಪ್ರದಾಯಿಕ ಕೃಷಿಗಿಂತ ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಸಿಕೊಂಡು ಉತ್ಪಾದನಾ ಕ್ಷೇತ್ರವನ್ನು ಹೆಚ್ಚಿಸಿಕೊಂಡು ಆರ್ಥಿಕವಾಗಿ ಸ್ವಾವಲಂಭಿಗಳಾಗಿ. ಶಿಕ್ಷಣ ವಲಯದಲ್ಲಿ ಪೈಪೋಟಿ ಇರುವುದರಿಂದ ತಮ್ಮ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸಿ. ಒಕ್ಕಲಿಗದ ಸಮುದಾಯದ ಸಂಘ ಸಂಸ್ಥೆಗಳ ಸೇವೆ ಒಂದೇ ಜಾತಿಗೆ ಸೀಮಿತಗೊಳ್ಳದೆ ಎಲ್ಲ ಸಮುದಾಯಗಳ ಏಳಿಗೆಗೂ ಶ್ರಮಿಸುವ ಮೂಲಕ ಈ ಸಮುದಾಯದ ಜಾತ್ಯಾತೀತತೆಯ ಮನೋಭಾವನೆಯನ್ನು ಮೆರೆಯೋಣ ಎಂದರು.
ದೊಡ್ಡಬಳ್ಳಾಪುರದ ಹಿರಿಯ ಸಾಹಿತಿ ಎಂ.ಬಿ.ಚಂದ್ರಶೇಖರಯ್ಯ ಮಾತನಾಡಿ , ದೈಹಿಕ ಮತ್ತು ಬೌದ್ಧಿಕ ಶ್ರಮ ಸಂಸ್ಕೃತಿಯ ಪ್ರತೀಕವಾಗಿರುವ ನೇಗಿಲ ಯೋಗಿಯು ಇಂದು ಕೌಟುಂಬಿಕ, ಔದ್ಯೋಗಿಕ ಸೇರಿದಂತೆ ಹಲವು ಬಿಕ್ಕಟ್ಟಿಗಳನ್ನು ಎದುರಿಸುತ್ತಿದ್ದಾನೆ. ಎಲ್ಲ ವರ್ಗದ ದುಡಿಮೆಗಾರರ ಸ್ಥಿತಿ ಇಂದು ಬಂಡವಾಳಶಾಹಿಗಳ ಕಪಿಮುಷ್ಠಿಯಲ್ಲಿ ಸಿಕ್ಕಿ ನರಳುತ್ತಿದೆ. ರೈತ ತನ್ನ ವೃತ್ತಿ ಆಯಾಮಗಳಲ್ಲಿ ಪರಿವರ್ತನೆಗಳನ್ನು ಕಂಡುಕೊಳ್ಳದಿದ್ದರೆ ಗ್ರಾಮೀಣ ಕೃಷಿ ಸಂಸ್ಕೃತಿಯ ಅಸ್ಮಿತೆ ಕಣ್ಮರೆಯಾಗಲಿದೆ. ಒಕ್ಕಲಿಗ ಸಮುದಾಯದವರು ಕೃಷಿಯ ಜೊತೆ ಜೊತೆಯಲ್ಲೇ ಸಣ್ಣ ಸಣ್ಣ ಉದ್ಯಮಗಳನ್ನು ಪ್ರಾರಂಭಿಸಿ ತಮ್ಮ ಬದುಕು ಕಟ್ಟಿಕೊಳ್ಳಬೇಕಿದೆ ಎಂದರು.
ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಾದ ಪ್ರೊ.ಪುಟ್ಟರಂಗಪ್ಪ, ವಿಜಯಲಕ್ಷ್ಮಿ ವಿಶ್ವೇಶ್ವರಯ್ಯ, ಸೇರಿದಂತೆ ಹಲವು ಸಾಧಕರನ್ನು ಅಭಿನಂಧಿಸಿಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ನೇಗಿಲ ಯೋಗಿ ಸಂಘದ ತಾಲ್ಲೂಕು ಅಧ್ಯಕ್ಷ ಎಚ್.ಆರ್.ರಂಗನಾಥ್, ರೇಷ್ಮೆ ಇಲಾಖೆಯ ಆಯುಕ್ತರಾದ ಎಂ.ಬಿ.ರಾಜೇಶ್ ಗೌಡ, ಮೈಸೂರು ನೇಗಿಲ ಯೋಗಿ ಸೇವಾ ಸಮಾಜ ಅಧ್ಯಕ್ಷ ಡಿ.ರವಿಕುಮಾರ್, ರಾಜೇಂದ್ರ ಪ್ರಸಾದ್, ಸಂಘದ ಗೌರವಾಧ್ಯಕ್ಷ ಡಾ.ನವೀನ್, ಗೌರವ ಸಲಹೆಗಾರ ಪ್ರೊ.ಪುಟ್ಟರಂಗಪ್ಪ, ಸಂಚಾಲಕರಾದ ಡಾ.ಬಿ.ಚೌದ್ರಿನಾಗೇಶ್, ಪ್ರಧಾನ ಕಾರ್ಯದರ್ಶಿ ಎಚ್.ಆರ್.ತುಕಾರಾಮ್, ಖಜಾಂಚಿ ವೇಣುಗೋಪಾಲ್ ಮತ್ತಿತರರು ಇದ್ದರು.