Thursday, June 20, 2024
Google search engine
Homeಜನಮನತುಮಕುರು ವಾರ್ಡ್ ಸಮಿತಿ: ಶಾಸಕ, ಆಯುಕ್ತರಿಗೆ ಸವಾಲು

ತುಮಕುರು ವಾರ್ಡ್ ಸಮಿತಿ: ಶಾಸಕ, ಆಯುಕ್ತರಿಗೆ ಸವಾಲು

ವಿಶೇಷ ವರದಿ: ಇಮ್ರಾನ್ ಪಾಷಾ


ತುಮಕೂರು: ಇದೇ ಮೊದಲ ಸಲ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ಸಮಿತಿಗಳನ್ನು ನೇಮಕ ಮಾಡಲು ಆಯುಕ್ತರಾದ ಭೂಪಾಲನ್ ಆದೇಶಿಸಿರುವುದು ನಗರದ ಜನರಲ್ಲಿ ಕುತೂಹಲ ಮೂಡಿಸಿದೆ.

ಪಾಲಿಕೆ ಆಯುಕ್ತ ಭೂಪಾಲನ್

ದಕ್ಷ , ಪ್ರಾಮಾಣಿಕ ಅಧಿಕಾರಿಯಾದ ಭೂಪಾಲನ್ ಅವರು , ಪ್ರೆಸ್ ರಾಜಣ್ಣ, ಮಾಜಿ ಟೂಡಾ ಸದಸ್ಯರಾದ ಜಿ.ಕೆ.ಶ್ರೀನಿವಾಸ್, ರಂಗಕರ್ಮಿ ಡಮರುಗ ಉಮೇಶ್, ಹೋರಾಟಗಾರ ಇಮ್ರಾನ್ ಪಾಷ, ಪತ್ರಕರ್ತ ಮಂಜುನಾಥ ಗೌಡ, ಮುಖಂಡರಾದ ಶ್ರೀನಿಧಿ ರಾಜಣ್ಣ, ಸಾಗರ್ ದಯಾನಂದ್, ಗೌ.ತಿ.ರಂಗನಾಥ್ ಮೊದಲಾದವರು ಮನವಿ ಸಲ್ಲಿಸಿದ ಕೆಲವೇ ಗಂಟೆಗಳಲ್ಲೇ ಈ ಮಹತ್ವದ ನಿರ್ಧಾರ ಕೈಗೊಂಡ ಆಯುಕ್ತರ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಸಂವಿಧಾನದ 74 ನೇ ತಿದ್ದುಪಡಿ ಪ್ರಕಾರ, ಮಹಾನಗರ ಪಾಲಿಕೆ ವ್ಯಾಪ್ತಿಯ ಆಡಳಿತದಲ್ಲಿ ಸಾರ್ವಜನಿಕರ ಸಹಭಾಗಿತ್ವಕ್ಕಾಗಿ ಪ್ರತಿಯೊಂದು ವಾರ್ಡ್ನಲ್ಲೂ “ವಾರ್ಡ್ ಸಮಿತಿ”ಯನ್ನು ರಚಿಸುವುದು ಕಡ್ಡಾಯವಾಗಿದೆ. ಇದರ ಮುಂದುವರೆದ ಭಾಗವಾಗಿ ಆಯಾ ವಾರ್ಡ್ ಗಳಲ್ಲಿ “ಏರಿಯಾ ಸಭಾ”ವನ್ನೂ ರಚಿಸಬೇಕಾಗಿದೆ.

2011 ರ ಜನವರಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಹೊರಡಿಸಿದ ಕರ್ನಾಟಕ ಮಹಾನಗರಪಾಲಿಕೆಗಳ (ತಿದ್ದುಪಡಿ) ಕಾಯಿದೆ (ಸಮುದಾಯ ಭಾಗವಹಿಸುವಿಕೆ ಕಾಯಿದೆ) ಮತ್ತು ವಾರ್ಡ್ ಸಮಿತಿ ಮತ್ತು ಏರಿಯಾ ಸಭಾದ ನಿಯಮದಲ್ಲಿ ಈ ಬಗ್ಗೆ ಸ್ಪಷ್ಟ ವಿವರಣೆಗಳನ್ನು ನೀಡಲಾಗಿದೆ. ಇವುಗಳ ಅನುಷ್ಠಾನದಿಂದ ಪಾಲಿಕೆಯ ಆಡಳಿತದಲ್ಲಿ ಜನರ ಸಹಭಾಗಿತ್ವ ದೊರಕುವುದಲ್ಲದೆ, ಆಡಳಿತದ ಪ್ರತಿಯೊಂದು ಹಂತಗಳಲ್ಲೂ ಪಾರದರ್ಶಕತೆ ಮೂಡುತ್ತದೆ. ಇದೇ ನಿಜವಾದ ಪ್ರಜಾಪ್ರಭುತ್ವ ಹಾಗೂ ಆಡಳಿತ ವಿಕೇಂದ್ರೀಕರಣ ಎಂದು ಹೇಳಲಾಗಿದೆ.

11-09-2019 ರಿಂದ ನಾಲ್ಕು ದಿನಗಳ ಕಾಲ ಮೇಯರ್ ಶ್ರೀಮತಿ ಲಲಿತಾ ರವೀಶ್ ರವರ ಅಧ್ಯಕ್ಷತೆಯಲ್ಲಿ ನಡೆದ ತುಮಕೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮಹಾನಗರ ಪಾಲಿಕೆಯ ಅಧಿನಿಯಮ 1976 ರ ಕಲಂ 13-ಎಚ್ ರಂತೆ ವಾರ್ಡ್ ಸಮಿತಿ ರಚಿಸುವ ಬಗ್ಗೆ ವಿಷಯ (ಸಂಖ್ಯೆ:14) ವನ್ನು ಮಂಡಿಸಲಾಗಿದೆ.

ಈ ಬಗ್ಗೆ ಸರ್ಕಾರದಿಂದ ಪತ್ರ ಬಂದಿರುವುದನ್ನು ಸಭೆಯ ಗಮನಕ್ಕೆ ತರಲಾಗಿದೆ. ಆದರೂ ಸಹ ಸಭೆಯಲ್ಲಿ “ಸದರಿ ವಿಷಯದ ಬಗ್ಗೆ ಚರ್ಚಿಸಿ ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡ್ಗಳಲ್ಲೂ ವಾರ್ಡ್ ಸಮಿತಿ ರಚಿಸಲು ಸದಸ್ಯರು ಒಪ್ಪಿಗೆ ಸೂಚಿಸಿರುವುದಿಲ್ಲ” ಎಂಬ ತೀರ್ಮಾನ ಕೈಗೊಳ್ಳಲಾಗಿದೆ. ಈ ತೀರ್ಮಾನವು ಸಂವಿಧಾನ ವಿರೋಧಿಯಾಗಿದೆ ಹಾಗೂ ಕಾನೂನು ವಿರೋಧಿಯಾಗಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ಇತ್ತೀಚೆಗೆ ತುಮಕೂರಿನ ಸರಸ್ ಫೌಂಡೇಷನ್ ಮತ್ತು ಬೆಂಗಳೂರಿನ ಸಿವಿಕ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ವಾರ್ಡ್ ಸಮಿತಿ ರಚನೆ ಕುರಿತು ನಡೆದ ಕಾರ್ಯಾಗಾರದಲ್ಲಿ ಸಿವಿಕ್ ಸಂಸ್ಥೆಯ ಮುಖ್ಯಸ್ಥರಾದ ಕಾತ್ಯಾಯಿನಿ ಚಾಮರಾಜ್ ಮತ್ತು ಆರ್.ಟಿ.ಐ. ತಜ್ಞರಾದ ವೈ.ಜಿ.ಮುರಳೀಧರನ್ ಅವರು ಈ ಬಗ್ಗೆ ಒತ್ತು ನೀಡಿ ಹೇಳಿದ್ದನ್ನು ನಾವಿಲ್ಲಿ ಸ್ಮರಿಸಬಹುದು ಎನ್ನುತ್ತಾರೆ ಮಾಜಿ ಕಾರ್ಪೊರೇಟರ್ ಪ್ರೆಸ್ ರಾಜಣ್ಣ.

ವಾರ್ಡ್ ಸಮಿತಿ ರಚಿಸಿದರೆ ಪಾಲಿಕೆ ಸದಸ್ಯರು ಹೊಣೆಗಾರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ವಾರ್ಡ್ ಸಮಿತಿಗೂ ಅಧಿಕಾರ ಸಿಗುವುದರಿಂದ ಪಾಲಿಕೆ ಸದಸ್ಯರು ಸಮಿತಿ ರಚನೆಗೆ ಬಿಡುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತವೆ.

ಶಾಸಕ ಜ್ಯೋತಿಗಣೇಶ್ ಸಮಿತಿ ರಚನೆ ನಿರ್ಧಾರದಿಂದ ಹಿಂದೆ ಸರಿಯಬಾರದು. ಈ ಸಮಿತಿಗಳಿಗೆ ಪಾಲಿಕೆ ಸದಸ್ಯರ ಸಂಬಂಧಿಗಳು, ಹಿಂಬಾಲಕ ರಿಗೆ ಅವಕಾಶ ಸಿಗದಂತೆ ನೋಡಿಕೊಳ್ಳಬೇಕು ಎನ್ನುತ್ತಾರೆ ನಗರದ ಜನರು.

ವಾರ್ಡ್ ಸಮಿತಿ ರಚನೆ ಶಾಸಕರು, ಆಯುಕ್ತರು ಇಬ್ಬರಿಗೂ ಸವಾಲಾಗಿದೆ. ಪಕ್ಷಾತೀತ, ಜಾತ್ಯಾತೀತ ವಾಗಿ ಸಮಿತಿಗಳು ರಚನೆಯಾದರೆ ತುಮಕೂರು ನಗರದ ಅಭಿವೃದ್ಧಿ ಚಹರೆ ಬದಲಾಗುವುದರಲ್ಲಿ ಅನುಮಾನ ಇಲ್ಲ ಎನ್ನುತ್ತಾರೆ ಪಾಲಿಕೆಯ ಹಿರಿಯ ಅಧಿಕಾರಿಗಳು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?