ಜಸ್ಟ್ ನ್ಯೂಸ್

ಪಾವಗಡ ನಾಗಲಮಡಿಕೆಗೆ ನದಿ ನೀರು ಕೊಟ್ಟ ಆಂಧ್ರದ ಶಾಸಕ!

Publicstory.in


ಪಾವಗಡ: ಉತ್ತರ ಪಿನಾಕಿನಿ ಮೂಲಕ ಆಂಧ್ರದ ಪೇರೂರು ಡ್ಯಾಂಗೆ ನೀರು ಹರಿಸುವ ಕಾಮಗಾರಿಗೆ ಭಾನುವಾರ ಚಾಲನೆ ಸಿಗಲಿದೆ.

ಆಂಧ್ರ ಪ್ರದೇಶ ರಾಪ್ತಾಡು ಶಾಸಕ ತೋಪುದುರ್ತಿ ಪ್ರಕಾಶ್ ರೆಡ್ಡಿ ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ ತಿಮ್ಮಾಪುರ ಏರಿಯ ಮೇಲೆ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.

ಹಂದ್ರಿನಿವಾ ಕೆನಾಲ್ ನಿಂದ ಉತ್ತರ ಪಿನಾಕಿನಿ ನದಿ ಮೂಲಕ ಆಂಧ್ರದ ಪೆರೂರಿಗೆ ನೀರು ಹರಿಸುವ ಕಾಮಗಾರಿಗೆ ಆಂಧ್ರ ಸರ್ಕಾರ ಎರಡು ದಿನಗಳ ಹಿಂದೆಯಷ್ಟೆ, ಜನವರಿ-23 ರಂದು ಅನುಮೋದನೆ ನೀಡಿತ್ತು.

ಹಂದ್ರಿನಿವಾ ಕಾಲುವೆಯಿಂದ ಸುಮಾರು 26 ಕಿ.ಮೀ ದೂರದ ಪೇರೂರಿಗೆ ಉತ್ತರ ಪಿನಾಕಿನಿ ನದಿಯಲ್ಲಿ ನೀರು ಹರಿಸಲು ಅಗತ್ಯವಿರುವ ಜಂಗಲ್ ಕಟಿಂಗ್, ನದಿಯಲ್ಲಿ ಕಾಲುವೆ ನಿರ್ಮಿಸಲು, ಎಚ್.ಡಿ.ಪಿ.ಇ(ಹೈ ಡೆನ್ಸಿಟಿ ಪಾಲಿಥಿಲಿನ್) ಫಿಲ್ಮ್ ಅಳವಡಿಸಲು ಇತ್ಯಾದಿ ಕಾಮಗಾರಿಗಳಿಗಾಗಿ 1.19 ಕೋಟಿ ರೂಪಾಯಿಯನ್ನು ಆಂಧ್ರ ಸರ್ಕಾರ ಮಂಜೂರು ಮಾಡಿದೆ. ಕಾಮಗಾರಿ ಮುಗಿದ ಕೂಡಲೇ 1 ಟಿ.ಎಂ.ಸಿ ನೀರು ನದಿ ಮೂಲಕ ಪೆರೂರು ಡ್ಯಾಂಗೆ ಹರಿಯಲಿದೆ.

ಆಂಧ್ರ ಸರ್ಕಾರ ಕಾಮಗಾರಿ ಗೆ ಅನುಮೋದನೆ ನೀಡಿರುವ ಆದೇಶ ಪ್ರತಿ.

ಉತ್ತರ ಪಿನಾಕಿನಿ ನದಿ ಮೂಲಕ ನೀರು ಹರಿದು ಪೇರೂರು ಡ್ಯಾಂ ನಲ್ಲಿ ನೀರು ಸಂಗ್ರಹವಾದರೆ ತಾಲ್ಲೂಕಿನ ಬಿ.ಕೆ.ಹಳ್ಳಿ, ತಿಮ್ಮಮ್ಮನಹಳ್ಳಿ, ಬುಗಡೂರು, ಪೆಂಡ್ಲಿಜೀವಿ, ನಾಗಲಮಡಿಕೆ, ಕ್ಯಾತಗಾನಚೆರ್ಲು ಸೇರಿದಂತೆ ಹತ್ತಾರು ಗ್ರಾಮಗಳಿಗೆ ಅನುಕೂಲವಾಗಲಿದೆ.

ಅಂತರ್ಜಲ ಹೆಚ್ಚಿ ಕೊಳವೆ ಬಾವಿಗಳಲ್ಲಿ ಸದಾ ನೀರಿರುತ್ತದೆ. ತಾಲ್ಲೂಕಿನ ಜನತೆಯೂ ಭಾನುವಾರ ನಾಗಲಮಡಿಕೆಗೆ ಆಗಮಿಸುವ ಶಾಸಕ ತೋಪುದುರ್ಪಿ ಪ್ರಕಾಶ್ ರೆಡ್ಡಿ ಅವರಿಗೆ ಭವ್ಯ ಸ್ವಾಗತ ನೀಡಲು ಸಿದ್ದತೆ ನಡೆಸುತ್ತಿದ್ದಾರೆ.

ಕೆಲವೇ ತಿಂಗಳಲ್ಲಿ ಆಂಧ್ರ ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಅನುದಾನ ತಂದು, ರಾಜ್ಯದ ಮುಖ್ಯಮಂತ್ರಿ ಯಡ್ಯೂರಪ್ಪ ಅವರನ್ನು ಭೇಟಿ ಮಾಡಿ ಸರ್ಕಾರದ ಅನುಮತಿ ಪಡೆದು ತಮ್ಮ ಕ್ಷೇತ್ರದ ಜನತೆಯ ಅನುಕೂಲಕ್ಕಾಗಿ ಯೋಜನೆ ಅನುಷ್ಠಾನ ಮಾಡುತ್ತಿರುವ ಪ್ರಕಾಶ್ ರೆಡ್ಡಿ ಅವರ ಬದ್ಧತೆ ಬಗ್ಗೆ ತಾಲ್ಲೂಕಿನ ಜನತೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

ಆಡಂಬರ, ಪ್ರಚಾರವಿಲ್ಲದೆ, ವೇದಿಕೆಗಳಲ್ಲಿ ನೀರು ತರುತ್ತೇನೆ ಎಂದು ಬಡಾಯಿಯ ಮಾತನಾಡದೆ. ಎರಡು ರಾಜ್ಯಗಳ ಸರ್ಕಾರದ ಸಮ್ಮತಿಯೊಂದಿಗೆ ತಮ್ಮ ಕ್ಷೇತ್ರದ ಜನರಿಗಾಗಿ ಶ್ರಮಿಸುತ್ತಿರುವ ಅವರ ಕರ್ತವ್ಯ ನಿಷ್ಠೆಯನ್ನು ಜನತೆ ಕೊಂಡಾಡುತ್ತಿದ್ದಾರೆ.

ನೆರೆ ರಾಜ್ಯದ ಶಾಸಕರಿಂದ ತಾಲ್ಲೂಕಿಗೆ ನೀರು ಬರುತ್ತಿದೆ. ನಾಗಲಮಡಿಕೆ ಹೋಬಳಿಯ ಜನರಿಗೆ ಇದರಿಂದ ತಕ್ಕ ಮಟ್ಟಿನ ಅನುಕೂಲವಾಗುತ್ತದೆ ಎಂಬ ಸಮಾಧಾನದ ಮಾತು ಜನರ ಮಧ್ಯೆ ಹರಿದಾಡುತ್ತಿದೆ.

Comment here