Saturday, December 21, 2024
Google search engine
Homeಸಾಹಿತ್ಯ ಸಂವಾದಅಂತರಾಳನಾಲಿಗೆ ಕಟ್ಟಿ ಹಾಕುವ ಇಂಗ್ಲಿಷ್

ನಾಲಿಗೆ ಕಟ್ಟಿ ಹಾಕುವ ಇಂಗ್ಲಿಷ್

ಜಿ ಎನ್ ಮೋಹನ್


ಸಿ.ಎಚ್. ಹನುಮಂತರಾಯರ ‘ವಕೀಲರೊಬ್ಬರ ವಗೈರೆಗಳು’ ಪುಸ್ತಕ ಓದುತ್ತಾ ಕುಳಿತಿದ್ದೆ.

ಕರ್ನಾಟಕ ಕಂಡ ಅನೇಕ ಸೆನ್ಸೇಷನಲ್ ಪ್ರಕರಣಗಳನ್ನು ಹ್ಯಾಂಡಲ್ ಮಾಡಿದವರು ಹನುಮಂತರಾಯರು.

ಇಡೀ ಪುಸ್ತಕ ಎಂತಹ ಪತ್ತೇದಾರಿ ಕಾದಂಬರಿಗಳನ್ನೂ ನಿವಾಳಿಸಿ ಒಗೆಯುವಂತಿತ್ತು.

ಇಂತಹ ಹನುಮಂತರಾಯರು ತಮ್ಮ ಊರು ಚಿಕ್ಕಬೆಳವಂಗಲದಿಂದ ಬೆಂಗಳೂರಿಗೆ ಬಂದು ತಟ್ಟಿದ್ದು ಸೇಂಟ್ ಜೋಸೆಫ್ ಕಾಲೇಜಿನ ಬಾಗಿಲು,

ಇಂಗ್ಲೀಷ್ ಸೆಂಟು ವಾಸನೆಯ ನಡುವೆ ಅಪ್ಪಟ ಕನ್ನಡದ ಹುಡುಗ.

ಡಿಬೇಟ್ ಎಂದರೆ ಹನುಮಂತರಾಯರಿಗೆ ಪಂಚಪ್ರಾಣ. ಎಲ್ಲಿ ಹೋದರು ಶೀಲ್ಡ್ ಕಟ್ಟಿಟ್ಟ ಬುಟ್ಟಿ. ಏಳು ವರ್ಷ ಡಿಬೇಟ್ ನಲ್ಲಿ ಸೋತು ಸುಣ್ಣಗಾಗಿದ್ದ ಕಾಲೇಜಿಗೆ ಹನುಮಂತರಾಯರು ಶೀಲ್ಡ್ ತಂದುಕೊಟ್ಟರು.

ಸಂತಸಗೊಂಡ ಪ್ರಿನ್ಸಿಪಾಲರು ಹನುಮಂತರಾಯರನ್ನು ಚೇಂಬರ್ ಗೆ ಕರೆಸಿದರು.

ತನ್ನ ಮುಂದೆ ನಿಂತ ಹುಡುಗನನ್ನು ಪ್ರಿನ್ಸಿಪಾಲ್ ಪ್ರೀತಿಯಿಂದ ‘ವಾಟ್ ಈಸ್ ಯುವರ್ ಫಾದರ್?’ ಅಂತ ಕೇಳಿದರು.

ತಕ್ಷಣ ಹನುಮಂತರಾಯರು ‘my father is a man’ ಅಂದರು.

ಕಕ್ಕಾವಿಕ್ಕಿಯಾದ ಪ್ರಿನ್ಸಿಪಾಲರಿಗೆ ಮಾತೇ ಹೊರಡಲಿಲ್ಲ.

ಮಗನ ಮಾಂಸವನ್ನೇ ತಿಂದ ಬ್ರೂಕ್ಸ್, ಮಗಳನ್ನೇ ಕೊಂದ ತಾಯಿ, ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯನವರ ಮೊಮ್ಮಗ ದರೋಡೆಕೋರನಾದದ್ದು, ಸೊಸೆ ಬೀನಾಳನ್ನೇ ಇಡೀ ರಾತ್ರಿ ಕತ್ತರಿಸಿದ ಪ್ರೊಫೆಸರ್ ವಿಷಕಂಠಯ್ಯ, ಲಲಿತಮಹಲ್ ಕೊಳದಲ್ಲಿ ನಡೆದ ಕೊಲೆ, ನಗರಿ ಬಾಬಯ್ಯ ನಕ್ಸಲೈಟ್ ಪುರಾಣ, ಪ್ರಿನ್ಸಿಪಾಲನನ್ನೇ ಕೊಂದ ವಿದ್ಯಾರ್ಥಿ…. ಹೀಗೆ ಒಂದಕ್ಕಿಂತಾ ಒಂದು ಕಾಡುವ ಪ್ರಕರಣ ಈ ಪುಸ್ತಕದಲ್ಲಿದೆ.

ಆದರೆ ಇದನ್ನೆಲ್ಲಾ ಮೀರಿ ನನ್ನನ್ನು ಕಾಡಿದ್ದು ‘ಮೈ ಫಾದರ್ ಈಸ್ ಎ ಮ್ಯಾನ್’ ಪ್ರಕರಣ.

ರಂಜಾನ್ ದರ್ಗಾ ತುಂಬ ಹಿಂದೆ ‘ಸುಧಾ’ದಲ್ಲಿ ಒಂದು ಲೇಖನ ಬರೆದಿದ್ದರು.’ನಗರವೆಂಬ ಚಕ್ರವ್ಯೂಹದಲ್ಲಿ ಹಳ್ಳಿಗರೆಂಬ ಅಭಿಮನ್ಯುಗಳು’ ಅಂತ.

ಈ ಪ್ರಕರಣ ಓದಿದ ತಕ್ಷಣ ನನಗೆ ಯಾಕೋ ಆ ಲೇಖನ ಮೇಲಿಂದ ಮೇಲೆ ನೆನಪಿಗೆ ಬಂತು

ಹೌದಲ್ಲಾ ಇಂಗ್ಲಿಷ್ ಎಂಬ ಚಕ್ರವ್ಯೂಹದಲ್ಲಿ ಎಷ್ಟೊಂದು ಅಭಿಮನ್ಯುಗಳು ಸಿಕ್ಕಿಹಾಕಿಕೊಂಡಿದ್ದಾರೆ ಅಂತ.

‘ಇಫ್ ಯು ಕಂ ಟುಡೇ ಇಟ್ಸ್ ಟೂ ಅರ್ಲಿ, ಇಫ್ ಯು ಕಂ ಟುಮಾರೋ, ಇಟ್ಸ್ ಟೂ ಲೇಟ್…. ಅಂತ ರಾಜ್ ಕುಮಾರ್ ಸಿನಿಮಾದಲ್ಲಿ ಗಿಟಾರ್ ಮೀಟುತ್ತಾ ಹಾಡಿದ್ದು ಬೇಡಾ ಎಂದರೂ ನೆನಪಿಗೆ ಬರುತ್ತಿದೆ.

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೇ ಅಡ್ಡ ಹಾಕಿ ಪ್ರಶ್ನೆ ಕೇಳುವ, ಸಿಡಿ ಸಿಡಿ ಎನ್ನುವ ದೇವೇಗೌಡರಿಗೂ ಇರಸು ಮುರಸಾಗುವ ಪ್ರಶ್ನೆ ಎದುರಿಗಿಡುವ, ನೀವಿನ್ನೂ ಬಚ್ಚಾ ಎನ್ನುವಂತೆ ನೋಡುವ ಸಿದ್ದರಾಮಯ್ಯನವರಿಗೂ ಪ್ರಶ್ನೆ ಎಸೆಯುವ ಪತ್ರಕರ್ತರು ಅದೇ ಸೋನಿಯಾ ಗಾಂಧಿಯೋ, ಸಚಿನ್ ತೆಂಡುಲ್ಕರೋ, ಸಾನಿಯಾ ಮಿರ್ಜಾ, ಪ್ರಿಯಾಂಕಾ ಚೋಪ್ರ ಎದುರಾದರೆ ಸಾಕು ಬಾಯಿ ಕಳೆದುಕೊಂಡುಬಿಡುತ್ತಾರೆ.

ಇವರನ್ನು ಪ್ರಶ್ನಿಸುವ ಧೈರ್ಯ ಇಲ್ಲ ಅಂತಲ್ಲ. ಕೇಳಲು ಪ್ರಶ್ನೆಗಳಿಲ್ಲ ಅಂತಲ್ಲ, ಅವರ ಬಗ್ಗೆ ಹೋಂವರ್ಕ್ ಮಾಡಿಲ್ಲ, ಅಂತಲ್ಲ..

ಎಲ್ಲರೊಂದಿಗೆ ಗುದ್ದಾಟಕ್ಕಿಳಿಯುವ ಅವರ ನಾಲಿಗೆ ಇದ್ದಕ್ಕಿದ್ದಂತೆ ಸತ್ತುಹೋಗುವಂತೆ ಮಾಡುವುದು ಇನ್ನಾವುದೂ ಅಲ್ಲ- ಇಂಗ್ಲಿಷ್.

ನನಗೆ ಇನ್ನೂ ನೆನಪಿದೆ. ಪ್ರತಿಮಾ ಬೇಡಿ ಹೆಸರಘಟ್ಟದಲ್ಲಿ ನೃತ್ಯಗ್ರಾಮಕ್ಕೆ ಚಾಲನೆ ಕೊಟ್ಟಿದ್ದರು. ದೊಡ್ಡ ಗುಲ್ಲೆದ್ದಿತ್ತು.

ಕಥಕ್ ಗ್ಯಾಕೆ ಜಾಗ? ಹೊರರಾಜ್ಯದ ಪ್ರತಿಮಾ ಬೇಡಿಗೇಕೆ ಮಣೆ? ರಾಮಕೃಷ್ಣ ಹೆಗಡೆಗೇಕೆ ಇಷ್ಟೊಂದು ಆಸಕ್ತಿ? ಅಂತೆಲ್ಲಾ,

ಪ್ರತಿಮಾ ಬೇಡಿ ಸಹಾ ಬಿಂದಾಸ್ ಶೈಲಿಯಲ್ಲಿ ಪ್ರತಿಯೊಬ್ಬರ ಕೈಯಲ್ಲಿ ಬಿಯರ್ ಇಟ್ಟು ಈ ದೇಶ ತನ್ನಿಂದ ಎಂಟನೆಯ ಅದ್ಭುತಕ್ಕಾಗಿ ಕಾಯುತ್ತಿದೆ ಎನ್ನುವಂತೆ ಮಾತಾಡಿ ಈಗ ಕೇಳಿ ಪ್ರಶ್ನೆ ಅಂದರು.

ಯಸ್, ನನ್ನ ಬಳಿ ನೂರಾರು ಪ್ರಶ್ನೆ ಇತ್ತು. ‘ಕೋಡಗಾನ ಕೋಳಿ ನುಂಗಿತ್ತು…. ನೋಡವ್ವಾ ತಂಗಿ’ ಅನ್ನೋ ರೀತಿ ನನ್ನ ಪ್ರಶ್ನೆಗಳನ್ನೆಲ್ಲಾ ಇಂಗ್ಲಿಷ್ ನುಂಗಿ ನೀರು ಕುಡಿದು ಕುಳಿತಿತ್ತು.

‘ಈಟಿವಿ’ಯಲ್ಲಿದ್ದ ಒಂದು ದಿನ ರಾಜಸ್ಥಾನ ಚಾನೆಲ್ ನ ಚೀಫ್ ನನ್ನ ಬಳಿ ಬಂದರು.

ಎಷ್ಟು ಹೊತ್ತಾದರೂ ಏನೂ ಮಾತಾಡಲಿಲ್ಲ. ಏನು ಎಂಬಂತೆ ನೋಡಿದೆ. ಅಕ್ಕ ಪಕ್ಕ ಯಾರೂ ಇಲ್ಲ ಅಂತ ಖಾತರಿಪಡಿಸಿಕೊಂಡ. ಆತ ಪಿಸುಮಾತಿನಲ್ಲಿ ‘ಗ್ರಾಫಿಟಿ ಅಂದ್ರೆ ಸೆಕ್ಸ್ ಅಲ್ವಾ’ ಅಂದ್ರು.

ಕಮ್ಯುನಿಕೇಷನ್ ವಿದ್ಯಾರ್ಥಿಯಾಗಿದ್ದ ನಾನು ಒಂದು ಕ್ಷಣ ಬೆಚ್ಚಿಬಿದ್ದೆ.

ಗೋಡೆ ಮೇಲಿನ ಬರಹ ಅನ್ನೋದು ‘ಗ್ರಾಫಿಟಿ’ ಅಂತ ಓದಿ ಕೇಳಿ ಗೊತ್ತಿದ್ದ ನನಗೆ ಈತ ಹೊಸ ಅರ್ಥ ಕಂಡುಹಿಡಿದಿದ್ದು ನೋಡಿ ಆಶ್ಚರ್ಯ ಆಗಿತ್ತು.

ಆತ ಒಳ್ಳೆಯ ಕವಿ. ರಾಜಸ್ಥಾನದ ಸಂಸ್ಥೆಗಳಿಂದ ಗೌರವ ಪಡೆದಾತ. ಹಾಗಾಗಿ ಇಲ್ಲಿ ಏನೋ ಸ್ಪೆಲಿಂಗ್ ಮಿಸ್ಟೇಕ್ ಆಗಿದೆ ಅನಿಸಿತು. ‘ಯಾಕೆ ಅಂತ ಕೇಳಿದೆ.

‘ಟೈಮ್ಸ್ ಆಫ್ ಇಂಡಿಯಾ’ದ ಸ್ಪೋರ್ಟ್ಸ್ ಪುಟದಲ್ಲಿ ‘ಗ್ರಾಫಿಟಿ’ ಅನ್ನೋ ಪುಟಾಣಿ ಕಾಲಂ ಇದೆ. ಸ್ವಲ್ಪ ಗರ್ಮಾಗರಂ ಕಾಲಂ ಅದು. ಯಾರದ್ದಾದ್ರೂ ಒಂದು ಅಹಾ… ಅನ್ನುವ ಫೋಟೋ ಅದರಲ್ಲಿ ಗ್ಯಾರಂಟಿ.

ಯಾವಾಗಲೂ ಈ ಬಿಚ್ಚಮ್ಮಂದಿರ ಫೋಟೋಗಳನ್ನೇ ಅಲ್ಲಿ ನೋಡಿದ್ದ ಆತ ‘ಗ್ರಾಫಿಟಿ’ ಎಂದರೆ ಸೆಕ್ಸ್ ಅಂತ ಅರ್ಥ ಮಾಡಿಕೊಂಡಿದ್ದ.

ಸಮಸ್ಯೆ ಆತನದ್ದಲ್ಲ ಇಂಗ್ಲಿಷ್ ನದ್ದು. ಒಬ್ಬ ಪ್ರತಿಭಾವಂತ ಜರ್ನಲಿಸ್ಟ್ ಇಂಗ್ಲಿಷ್ ಮುಂದೆ ಕುಬ್ಜನಾಗಿ ಹೋಗಿದ್ದ.

ಕೆ ಎ ಎಸ್ ಅಧಿಕಾರಿಯಾಗಿರುವ ಮಮತಾ ಗೌಡ ನನ್ನ ಕ್ಲಾಸ್ ಮೇಟ್. ಜರ್ನಲಿಸಂ ಓದುತ್ತಿದ್ದ ಸಮಯದಲ್ಲಿ ನಾನು ‘ಪ್ರಜಾವಾಣಿ’ಯಲ್ಲಿ ಆಕೆ ‘ಡೆಕನ್ ಹೆರಾಲ್ಡ್’ನಲ್ಲಿ ಇಂಟರ್ನ್ಷಿಪ್ ಮಾಡ್ತಾ ಇದ್ದ ದಿನಗಳು ಅವು.

ಒಂದು ದಿನ ಅಲ್ಲಿ ಇಲ್ಲಿ ಸುತ್ತಾಡಿ ಬಂದು ಡೆಕ್ಕನ್ ಹೆರಾಲ್ಡ್ ಮೆಟ್ಟಲು ಹತ್ತಿದಾಗ ಆಕೆ ‘ಹ್ಯಾಂಗ್ ಅರೌಂಡ್ ಹಿಯರ್’ ಅಂದವಳೇ ಎಲ್ಲೋ ತೂರಿಕೊಂಡಳು.

ಇದೇನಪ್ಪಾ ಇದುವರೆಗೂ ನೆಟ್ಟಗಿದ್ದ ಇವಳು ಈಗ ‘ಇಲ್ಲೇ ನೇಣು ಹಾಕ್ಕೋ ಅಂತ ಹೇಳ್ತಿದ್ದಾಳೆ’ ಅಂತ ತಬ್ಬಿಬ್ಬಾಗಿ ಹೋಗಿದ್ದೆ

‘ಇಲ್ಲೇ ಇರು ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು’ ಅನ್ನೋದಕ್ಕೆ ಇಂಗ್ಲಿಷ್ ನಲ್ಲಿ ‘ಹ್ಯಾಂಗ್ ಅರೌಂಡ್ ಹಿಯರ್’ ಅಂತಾರೆ ಅನ್ನೋದು ಅರ್ಥ ಆಗೋದಕ್ಕೆ ನನಗೆ ದಶಕಗಳು ಬೇಕಾಯ್ತು.

ಇನ್ನೊಂದು ಪ್ರಕರಣ. ಉರ್ದು ಚಾನೆಲ್ ನ ಮುಖ್ಯಸ್ಥ ರಾಜೇಶ್ ರಾಯ್ನಾ ಇದ್ದಕ್ಕಿದಂತೆ ಜೋರಾಗಿ ನಗಲಾರಂಭಿಸಿದರು.

ನಾನು ಅವರ ಕ್ಯಾಬಿನ್ ನಲ್ಲಿ ಇಣುಕಿ ನೋಡಿದೆ. ಉಹುಂ ಯಾರೂ ಇಲ್ಲ. ಒಬ್ಬರೇ ಕುಳಿತು ಹೊಟ್ಟೆ ಹುಣ್ಣಾಗುವಂತೆ ನಗ್ತಿದ್ರು.

ಏನು ಅಂದೆ.

ಅವರು ನನ್ನೆದುರಿಗೆ ತಮ್ಮ ಕಾಶ್ಮೀರ ವರದಿಗಾರನ ರಿಪೋರ್ಟ್ ಒಂದನ್ನ ತಳ್ಳಿದರು.

ಅದರ ಮೇಲೆ ಕಣ್ಣಾಡಿಸಿದ ನನಗೂ ನಗು ತಡೆಯಲಾಗಲಿಲ್ಲ. ರಾಜೇಶ ರಾಯ್ನಾ ಜತೆ ನಾನೂ ಸೇರಿಕೊಂಡೆ.

ಆಗಿದ್ದು ಇಷ್ಟು ಕಾಶ್ಮೀರದ ವರದಿಗಾರ ಕಳಿಸಿದ್ದ ವರದಿಯಲ್ಲಿ ಆತನ ವಿದ್ಯಾಭಾಸದ ಮಟ್ಟ ‘ಇಂಟರ್’ ಎಂದು ಬರೆಯುವ ಬದಲು ‘ಆತ ಇಂಟರ್ ಕೋರ್ಸ್ ಮಾಡಿದ್ದಾನೆ’ ಅಂತ ಬರೆದಿದ್ದ.

ಕಾಶ್ಮೀರದಲ್ಲಿ ಉಗ್ರಗಾಮಿಗಳ ಬಂದೂಕನ್ನೂ ಸಲೀಸಾಗಿ ಎದುರಿಸಲು ಗೊತ್ತಿದ್ದ ಆ ವರದಿಗಾರ ಇಂಗ್ಲಿಷ್ ನ ನಳಿಕೆಯ ಎದುರು ಶರಣಾಗಿ ಹೋಗಿದ್ದ.

ಹುಬ್ಬಳ್ಳಿಯ ಐಬಿಎಂಆರ್ ಸ್ಕೂಲ್ ನಲ್ಲಿ ಮೀಡಿಯಾ ಸೆಮಿನಾರ್ ಇತ್ತು. ನಯನಾ ಗಂಗಾಧರ್ ಪತ್ರಿಕೋದ್ಯಮದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿಕೊಡಿ ಎಂದು ಕೇಳಿದ್ದರು.

ಫಟ್ ಅಂತ ಒಂದು ಪ್ರಶ್ನೆ ಬಂತು. ಒಳ್ಳೆ ಜರ್ನಲಿಸ್ಟ್ ಆಗೋದಿಕ್ಕೆ ಏನು ಪ್ರಿಪರೇಶನ್ ಬೇಕು ಅಂತ. ನಾನು ಒಂದು ಕ್ಷಣವೂ ಯೋಚಿಸದೇ ಇಂಗ್ಲಿಷ್ ಅಂದೆ.

ಒಂದು ಕಾಲ ಇತ್ತು ನಮ್ಮ ವಿಧಾನಸೌಧ, ನಮ್ಮ ಸಿಎಂ, ನಮ್ಮ ಪ್ರಾಬಂ ಅನ್ನೋದಷ್ಟೇ ಇದ್ದ ಕಾಲ. ಆದರೆ ಯಾವಾಗ ಜಾಗತೀಕರಣದ ಗಾಳಿ ಬೀಸೋದಿಕ್ಕೆ ಶುರುವಾಯ್ತೋ ಒಂದೇ ಏಟಿಗೆ ಜರ್ನಲಿಸಂನ ಖದರ್ ಬದಲಾಗಿ ಹೋಯಿತು.

ಐಟಿ, ಬಿಟಿ, ಸಿನಿಮಾ, ವಾಣಿಜ್ಯ, ಯಾವುದಕ್ಕೂ ಗಡಿ ಗೋಡೆ ಇಲ್ಲವಾಗಿ ಹೋಯಿತು. ದಿನಕ್ಕೊಬ್ಬರು ವಿಐಪಿ ಸಿಗುವ ಕಾಲದಲ್ಲಿ ಆಟೋಮ್ಯಾಟಿಕ್ ಆಗಿ ಇಂಗ್ಲಿಷ್ ಎಲ್ಲರ ತಲೆಯ ಮೇಲೆ ಬಂದು ಕುಳಿತಿದೆ.

ಪತ್ರಿಕೋದ್ಯಮ ವಿದ್ಯಾರ್ಥಿಗಳ ಕ್ಯಾಂಪಸ್ ಇಂಟರ್ವ್ಯೂಗೆ ಹೋಗಿದ್ದೆವು. ಮಾತನಾಡುತ್ತಾ ಒಬ್ಬ ವಿದ್ಯಾರ್ಥಿಗೆ ‘ವೇರ್ ಡು ಯು ಪುಟ್ ಅಪ್?’ ಅಂತ ಕೇಳಿದೆ.

ತಕ್ಷಣ ಆತ ‘ಸಾರ್ ಪುಟ್ಟಪ್ಪನವರ ಮನೆ ಉದಯರವಿ. ಇಲ್ಲೇ ಕುವೆಂಪು ನಗರದಲ್ಲಿದೆ’ ಅಂತ.

ಪರಿಸ್ಥಿತಿ ಹೀಗಿದೆ ಅಂತ ಗೊತ್ತಿದ್ದರಿಂದಲೋ ಏನೋ ರಾಮೋಜಿರಾಯರು ‘ಇಂಗ್ಲಿಷ್, ಇಂಗ್ಲಿಷ್ ಅಂಡ್ ಇಂಗ್ಲಿಷ್’ ಅಂತ ತಾಕೀತು ಮಾಡಿದ್ದರು.

ಪತ್ರಕರ್ತರಾಗುವವರಿಗೆ ಮಿನಿಮಮ್ ಇಂಗ್ಲಿಷ್ ಜ್ಞಾನಾನಾದ್ರೂ ಇಲ್ಲದೆ ಹೋದ್ರೆ ಹೇಗೆ ಅಂತ.

‘ಕನ್ನಡಪ್ರಭ’ ಹೊಸ ಪತ್ರಕರ್ತರ ಆಯ್ಕೆಗೆ ಲಿಖಿತ ಪರೀಕ್ಷೆ ನಡೆಸಿದಾಗ ಎದೆ ಒಡೆಯುವ ಉತ್ತರ ಬಂದಿತ್ತು.

Ugly ಅನ್ನುವ ಪದದ ಅರ್ಥವೇ ಬಹುತೇಕ ವಿದ್ಯಾರ್ಥಿಗಳಗೆ ಗೊತ್ತಿರಲಿಲ್ಲ. Illusion ಅಂದರೆ ಏನು ಎಂದು ಕೇಳಿದಾಗ ‘ಅನಾರೋಗ್ಯಪೀಡಿತ’ ಅನ್ನುವ ಉತ್ತರ ಬಂದಿತ್ತು.

ಉತ್ತರ ಕೊಟ್ಟಾತನ ಕಾನ್ಫಿಡೆನ್ಸ್ ಕಂಡು ಪರೀಕ್ಷೆ ಮಾಡುತ್ತಿದ್ದವರೇ ದಂಗಾಗಿಹೋಗಿದ್ದರು.

‘ಅನಾರೋಗ್ಯ ಪೀಡಿತ’ ಹೇಗಾಗುತ್ತೆ. ಅಂತ ಕೇಳಿದಾಗ ಆತ ill ಅಂದರೆ ಅನಾರೋಗ್ಯ illusion ಅಂದ್ರೆ ‘ಅನಾರೋಗ್ಯಪೀಡಿತ’ ಅಂತ ಉತ್ತರ ಕೊಟ್ಟು ಎಲ್ಲರನ್ನೂ ತಬ್ಬಿಬ್ಬಾಗಿಸಿದ್ದ.

ಮೊನ್ನೆ ಸೆಮಿನಾರ್ ನಲ್ಲಿ ಹಿರಿಯ ಪತ್ರಕರ್ತ ಶಿವಾನಂದ ಜೋಶಿ ಅವರು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಭಾಷಾ ಶುದ್ಧತೆ ಕಲಿಸಿ ಅಂತ ಒತ್ತಾಯಿಸಿದರು. ಕನ್ನಡದಲ್ಲಿ ಎಷ್ಟೊಂದು ತಪ್ಪುಗಳು ಎನ್ನುವ ಬೇಸರ ಅವರ ಮಾತಿನಲ್ಲಿ ಇಣುಕುತ್ತಿತ್ತು.

ಕನ್ನಡವೂ, ಇಂಗ್ಲಿಷೂ ಎರಡೂ ಕಲಿಸದ ಮಾಧ್ಯಮ ಕೋರ್ಸ್ ಗಳು ತಾಂತ್ರಿಕತೆಯನ್ನು ಮಾತ್ರ ಕಲಿಸುತ್ತಿದೆ. ಕಂಪ್ಯೂಟರ್ ಆಪರೇಟ್ ಮಾಡಲು ಬರುವ ಕ್ವಾರ್ಕ್ ಎಕ್ಸ್ಪ್ರೆಸ್ ಗೊತ್ತಿರುವವರು ಬಹು ಬೇಗ ಮಿಂಚುತ್ತಾರೆ.

ಕ್ಯಾಮೆರಾ, ಎಡಿಟಿಂಗ್ ಗೊತ್ತಿರುವವರು ಎಂತಹ ಕಡೆಯೂ ಸೈ ಅನಿಸಿಕೊಂಡು ಬಿಡುತ್ತಾರೆ. ಆದರೆ ಕ್ಯಾಮೆರಾ, ಕ್ವಾರ್ಕ್ ಎಕ್ಸ್ಪ್ರೆಸ್ ಹರಿತ ಪ್ರಶ್ನೆ ರೂಪಿಸುವ, ಸುದ್ದಿ ಹೊರಗೆ ಎಳೆಯುವುದನ್ನು ಕಲಿಸಿಕೊಡುವುದಿಲ್ಲ.

ಇದೆಲ್ಲಾ ನೆನಪಾದದ್ದು ಆಚಾರ್ಯ ಇನ್ ಸ್ಟಿಟ್ಯೂಟ್ ನಲ್ಲಿ ಜರುಗುತ್ತಿದ್ದ ರಾಷ್ಟ್ರ ಮಟ್ಟದ ಮೀಡಿಯಾ ಸಮ್ಮೇಳನದಿಂದಾಗಿ.

ನಂದಿನಿ ಲಕ್ಷ್ಮೀಕಾಂತ್ ಫೋನ್ ಮಾಡಿ ಪೇನಲ್ ಡಿಸ್ಸಶನ್ ಇದೆ ಬನ್ನಿ ಎಂದರು. ಉತ್ಸಾಹದಿಂದ ಓಕೆ ಎಂದೆ.

ತನ್ನದೇ ಗಟ್ಟಿದನಿಯಲ್ಲಿ ‘ಡಿಸ್ಸಶನ್ ಎಲ್ಲಾ ಇಂಗ್ಲಿಷ್ ನಲ್ಲಿರ್ತದಪ್ಪಾ’. ಅಂತ ಎರಡನೇ ಮಾತನಾಡಿದರು.

ನಾನು ತಕ್ಷಣ ಈ ಸೆಮಿನಾರ್ ಗೆ ಕೈ ಕೊಡುವುದು ಹೇಗೆ ಅಂತ ಯೋಚನೆ ಮಾಡುತ್ತಾ ಕುಳಿತೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?