Publicstory. in
Bengaluru: ನಿಮ್ಮ ಲೈಂಗಿಕ ನಿಲುವನ್ನು ಬಚ್ಚಿಟ್ಟುಕೊಳ್ಳಬೇಡಿ ಎಂದು ಖ್ಯಾತ ಸಾಹಿತಿ, ಎಲ್ ಜಿ ಬಿ ಟಿ ಹಕ್ಕುಗಳ ಪ್ರತಿಪಾದಕ ವಸುಧೇಂದ್ರ ಕರೆ ನೀಡಿದರು.’ಅವಧಿ’ ಅಂತರ್ಜಾಲ ತಾಣ ಹಮ್ಮಿಕೊಂಡಿದ್ದ ‘ಚಾಕ್ ಸರ್ಕಲ್’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ‘ನನ್ನ ಬರವಣಿಗೆ ನನಗೆ ಹಣ, ಕೀರ್ತಿ ಹಾಗೂ ಪ್ರೀತಿಯನ್ನು ತಂದುಕೊಟ್ಟಿರಬಹುದು. ಆದರೆ ನಾನು ಗೇ ಲೋಕದ ಸಂಗತಿಗಳನ್ನು ಒಳಗೊಂಡ ‘ಮೋಹನಸ್ವಾಮಿ’ ಬರೆದಾಗ ಅದು ನನಗೆ ಬದುಕನ್ನು ಮರಳಿ ತಂದುಕೊಟ್ಟಿತು ಎಂದರು. ಸಮಾಜದ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸುವುದಕ್ಕೆಂದೇ ನಾವು ಹಾಕಿಕೊಳ್ಳುವ ಮುಖವಾಡಗಳನ್ನು ಕಳಚಬೇಕಾದ ಅಗತ್ಯವಿದೆ. ಹಾಗೆ ಮುಖವಾಡಗಳನ್ನು ಕಳಚಿ ನಮ್ಮಂತೆ ಬದುಕಿದರೆ ನಾವು ಸುಂದರವಾಗಿತೆ ಕಾಣುತ್ತೇವೆ. ಆ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ನಾವು ಗೇ ಎಂದು ಘೋಷಿಸಿಕೊಳ್ಳಲು ಧೈರ್ಯ ಬೇಕು. ಆದರೆ ಹಾಗೆ ಧೈರ್ಯ ತೋರಿಸಿ ಘೋಷಿಸಿಕೊಂಡಲ್ಲಿ ಬದುಕು ಸಹನಶೀಲವಾಗುತ್ತದೆ ಎಂದರಲ್ಲದೆ ನಾನು ಹಾಗೆ ಮೋಹನಸ್ವಾಮಿ ಕೃತಿಯ ಮೂಲಕ ಗೇ ಎಂದು ಘೋಷಿಸಿಕೊಂಡಾಗಲೇ ಸುಪ್ರೀಂ ಕೋರ್ಟ್ ಸಲಿಂಗ ಬದುಕನ್ನು ಅಪರಾಧ ಎನ್ನುವ ತೀರ್ಪು ಕೊಟ್ಟಿತ್ತು. ಆ ಸಮಯದಲ್ಲಿ ನಾನು ತುಂಬು ಆತಂಕದಿಂದ ದಿನಗಳನ್ನು ಕಳೆದಿದ್ದೇನೆ ಸಮಾಜದಲ್ಲಿರುವ ಹೋಮೊಫೋಬಿಯಾ ಹೋಗಬೇಕಾದರೆ ಜ್ಞಾನಪ್ರಸರಣ ಆಗಬೇಕು. ಈ ಕಾರಣದಿಂದಲೇ ನಾನು ಹೆಚ್ಚೆಚ್ಚು ಈ ಅರಿವಿನ ಪ್ರಸಾರದಲ್ಲಿ ನಿರತನಾಗಿದ್ದೇನೆ ಮತ್ತು ಗೇ ಕೌನ್ಸೆಲಿಂಗ್ ನಡೆಸುತ್ತಿದ್ದೇನೆ ಎಂದರು ‘ಅವಧಿ’ಯ ಪ್ರಧಾನ ಸಂಪಾದಕರಾದ ಜಿ ಎನ್ ಮೋಹನ್ ಅವರು ಸಂವಾದದ ನೇತೃತ್ವ ವಹಿಸಿದ್ದರು.