Publicstory.in
ತುಮಕೂರು: ಆರೋಗ್ಯ ಇಲಾಖೆಯಲ್ಲಿ 60 ವರ್ಷ ತುಂಬಿ ನಿವೃತ್ತಿಯಲ್ಲಿದ್ದವರನ್ನು ಕೊರೊನಾ ಹೆಸರಿನಲ್ಲಿ ನಿವೃತ್ತಿಯನ್ನು ಮುಂದೂಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ವೈದ್ಯಕೀಯ ಇಲಾಖೆಯಲ್ಲೇ ಅಸಮಾಧಾನ ಉಂಟಾಗಿದೆ.
ಕಳೆದ ಮೂರು ತಿಂಗಳಿಂದ ಹೊಸ ಹೊಸ ಆದೇಶಗಳನ್ನು ಹೊರಡಿಸುವ ಮೂಲಕ ಕ್ಲಿನಿಕಲ್, ನಾನ್ ಕ್ಲಿನಿಕಲ್ ಸಿಬ್ಬಂದಿ ನಿವೃತ್ತಿಯನ್ನು ಮುಂದೂಡಿದೆ.
ಕೊರೊನಾ ತುರ್ತು ಪರಿಸ್ಥಿತಿ ಕಾರಣ ನಿವೃತ್ತರ ನಿವೃತ್ತಕಯನ್ನು ಒಂದು ತಿಂಗಳ ಕಾಲ ಮುಂದೂಡಿ ಮೊನ್ನೆ, ಮೊನ್ನೆ ಸರ್ಕಾರ ಆದೇಶಿಸಿದೆ. ಇದಕ್ಕೂ ಹಿಂದೆ, ಎರಡು ತಿಂಗಳ ಕಾಲ ನಿವೃತ್ತಿ ಮುಂದೂಡಿ ಆದೇಶಿಸಿತ್ತು.
ವಯಸ್ಸಾದವರಿಗೆ ಕೊರೊನಾ ಸೋಂಕು ತಗುಲುವ ಅಪಾಯ ಹೆಚ್ಚಿರುವುದರಿಂದ ಮನೆಯಿಂದ ಹೊರಗೆ ಬರಬಾರದೆಂದು ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದಾರೆ. ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ವಯಸ್ಸಾದವರಲ್ಲಿ ಕಡಿಮೆ. ಬೇಗ ಸೋಂಕಿಗೂ ಗುರಿಯಾಗುತ್ತಾರೆ. ಆದರೆ ಆರೋಗ್ಯ ಇಲಾಖೆ ನಿವೃತ್ತಿ ನಂತರವೂ ಸಿಬ್ಬಂದಿ ದುಡಿಸಿಕೊಳ್ಳುವ ತುಡಿತದ ಹಿಂದೆ ಏನಿರಬಹುದೋ ಗೊತ್ತಿಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.
ಸೋಂಕಿನ ವಿರುದ್ಧ ಹೋರಾಡಲು ಸರ್ಕಾರ ಯುವಕರಿಗೆ ಅವಕಾಶ ನೀಡಬೇಕು. ಹೊಸ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಬದಲು ಏಕೆ ಈ ರೀತಿ ನಡೆದುಕೊಳ್ಳುತ್ತಿದೆ ಎಂಬುದೇ ಪ್ರಶ್ನೆಯಾಗಿದೆ.
ಆರೋಗ್ಯ ಸಚಿವ ಶ್ರೀರಾಮಲು ಅವರನ್ನು ಅಧಿಕಾರಿಗಳು, ಕೆಲವರು ದಾರಿ ತಪ್ಪಿಸಿರಬಹುದು. ಮುಂದೂಡಿಕೆಯಿಂದೆ ಯಾವುದೊ ಗೊತ್ತಾಗದ ರಾಜಕೀಯ ಇರಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ಅನುಮಾನ ವ್ಯಕ್ತಪಡಿಸಿದರು.