ಸುಜಾತ ಎಸ್.ಎನ್
Tumkur: ತುಮಕೂರಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ವಿವಿಧ ಬಗೆಯ ಪುಷ್ಪರಾಣಿಯರ ಆಗಮನದಿಂದ ತೋಟಗಾರಿಕೆ ಆವರಣವು ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ತೋಟಗಾರಿಕಾ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ತೋಟಗಾರಿಕಾ ಸಂಘ ಹಾಗೂ ಕೃಷಿ ಇಲಾಖೆ ಆತ್ಮ ಯೋಜನೆ ಇವರ ಸಹಯೋಗದಲ್ಲಿ ಜನವರಿ 31 ರಿಂದ ಫೆಬ್ರುವರಿ 2ರವರೆಗೆ 3 ದಿನಗಳ ಕಾಲ ನಡೆಯುವ ಫಲ-ಪುಷ್ಪ ಪ್ರದರ್ಶನದಲ್ಲಿ ಮೋಹಕ ಮತ್ತು ಅತ್ಯಾಕರ್ಷಕ ಜಗತ್ತನ್ನೇ ತೆರೆದಿಡುವ ವಿವಿಧ ವರ್ಣಮಯ ಹೂವುಗಳು ನೋಡುಗರನ್ನು ಕೈಬೀಸಿ ಕರೆಯುತ್ತಿದೆ.
ವಿಶೇಷವಾಗಿ ಹೂವಿನಲ್ಲಿ ವಿವಿಧ ಪ್ರಾಣಿ, ಪಕ್ಷಿಗಳ ಕಲಾಕೃತಿಗಳನ್ನು ನೋಡುಗರ ಕಣ್ಣಿಗೆ ತಂಪೆರೆಯುವ ಅವಕಾಶವನ್ನು ತೋಟಗಾರಿಕೆ ಇಲಾಖೆಯು ಫಲಪುಷ್ಪ ಪ್ರದರ್ಶನದ ಮೂಲಕ ಕಲ್ಪಿಸಿದೆ. ಘಮ-ಘಮ ಸುವಾಸೆನೆಗಳಿಂದ ಕೂಡಿರುವ ಪ್ರದರ್ಶನ ವೀಕ್ಷಿಸಲು ಪ್ರವೇಶ ಉಚಿತವಾಗಿದೆ.
ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 10ರವೆರೆಗೆ ನಾಗರಿಕರು ಕಣ್ತುಂಬಿಕೊಳ್ಳಬಹುದು. ಇದರ ಜತೆಗೆ ಮೂರು ದಿನಗಳ ಕಾಲ ಕೃಷಿ ತಜ್ಞರು, ವಿಜ್ಞಾನಿಗಳಿಂದ ರೈತರಿಗೆ ತರಬೇತಿ, ಕಾರ್ಯಾಗಾರ ಹಾಗೂ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.
ಪ್ರದರ್ಶನದಲ್ಲಿ ಏನೇನಿದೆ…?
ಗುಲಾಬಿ, ಮಾರಿಗೋಲ್ಡ್, ಕೋಲಿಯಸ್, ಜೀನಿಯಾ, ಕ್ರೈಸಾನ್, ತಮಮ್, ಪೆಟೂನಿಯ, ಆರ್ಕಿಡ್ ಸೆಲೋಷಿಯಾ, ಸಾಲ್ವಿಯ, ಡೆಲಿಯೋ, ಚೆಂಡು ಹೂ, ಸೆಲೋಶಿಯ, ಗೋಲ್ಡನ್‍ಶೆಪ್ಸ್‍ಘಿ, ಬಟನ್ ಹೂ ಸೇರಿದಂತೆ 25ಕ್ಕೂ ಹೆಚ್ಚು ಬಗೆಯ 18 ಸಾವಿರ ಹೂವಿನ ಗಿಡಗಳನ್ನು ಪ್ರದರ್ಶನಕ್ಕಿಡಲಾಗಿದೆ. ಅಲ್ಲದೇ ತರಕಾರಿ-ಹಣ್ಣುಗಳ, ಕೈ ತೋಟ, ಛಾವಣಿ ತೋಟ, ಮನೆ ಮುಂದಿನ ಅಲಂಕಾರಿಕ ತೋಟ, ಕುಂಡದಲ್ಲಿ ಬೆಳೆಸಿದ ಅಲಂಕಾರಿಕ ಗಿಡಗಳು, ರೈತರು ಬೆಳೆದಿರುವ ಉತ್ತಮ ತೋಟಗಾರಿಕೆ ಬೆಳೆಗಳ ಉತ್ಪನ್ನಗಳನ್ನು ಪ್ರದರ್ಶನದಲ್ಲಿ ಕಾಣಬಹುದಾಗಿದೆ.
ಫಲಪುಷ್ಪ ಪ್ರದರ್ಶನದಲ್ಲಿ ಮಧುವನ ಮಳಿಗೆ ತೆರೆಯಲಾಗಿದ್ದು, ಇದರಲ್ಲಿ ಜೇನು ಕೃಷಿಗೆ ಸಂಬಂಧಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ಪ್ರದರ್ಶನದ ಜತೆಯಲ್ಲಿಯೇ ಸಾಂಸ್ಕøತಿಕ ರಸದೌತಣ ಏರ್ಪಡಿಸಲಾಗಿದೆ. ಸಂಜೆ ವೈವಿಧ್ಯಮಯ ಕಲಾವಿದರಿಂದ ಸಂಗೀತ, ಭರತನಾಟ್ಯ ಹಾಗೂ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ರೈತರು ಮತ್ತು ನಾಗರಿಕರಿಗೆ ಮಾಹಿತಿ ನೀಡಲು ತೊಟಗಾರಿಕೆ ಇಲಾಖೆಯಿಂದ 40 ಮಳಿಗೆ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ಸಂಘ-ಸಂಸ್ಥೆಗಳಿಂದ ಸುಮಾರು 120 ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. ಆಯಾ ಇಲಾಖೆಯ ಯೋಜನೆಗಳ ಬಗ್ಗೆ ರೈತರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಲಿವೆ. ಸರ್ಕಾರಿ ಅಲ್ಲದೆ ಖಾಸಗಿ ಸಂಘ ಸಂಸ್ಥೆಗಳಿಗೆ ಮಳಿಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ.
ಡಿಸ್ನಿ ಥೀಮ್ ನಿರ್ಮಾಣ: ಫಲಪುಷ್ಪ ಪ್ರದರ್ಶನದ ಮತ್ತೊಂದು ವಿಶೇಷವೆಂದರೆ ಸಂಪೂರ್ಣ ಹೂವಿನ ಅಲಂಕೃತ ಡಿಸ್ನಿ (ಕಾರ್ಟೂನ್)ಥೀಮ್. ಬೆಂಗಳೂರಿನ ಕಲಾವಿದರು ಸುಮಾರು 1.8 ಲಕ್ಷ ಹೂಗಳನ್ನು ಬಳಸಿ 30ಅಡಿ ಅಗಲ ಮತ್ತು 20ಅಡಿ ಎತ್ತರದ ಡಿಸ್ನಿ ಥೀಮ್ ನಿರ್ಮಿಸಿದ್ದಾರೆ. ಅಲ್ಲದೇ ಮಕ್ಕಳನ್ನು ಆಕರ್ಷಿಸಲು ವಿವಿಧ ಹೂಗಳನ್ನು ಬಳಸಿ ಪ್ರಾಣಿಗಳ ಕಲಾಕೃತಿ, ಕಾರ್ಟೂನ್‍ಗಳನ್ನು ಅಲಂಕರಿಸಿದ್ದಾರೆ.
ವಿವೇಕಾನಂದರ ಕಲಾಕೃತಿ: ಪ್ರದರ್ಶನದಲ್ಲಿ ಮೈಸೂರಿನ ಕಲಾವಿದೆ ಗೌರಿ ಅವರು ಸ್ವಾಮಿ ವಿವೇಕಾನಂದರ 15 ಅಡಿ ಉದ್ದ ಮತ್ತು 15 ಅಡಿ ಎತ್ತರದ ಮರಳಿನ ಕಲಾಕೃತಿ ತಯಾರಿಸಿದ್ದಾರೆ. ಇದರ ಜತೆಗೆ ಯುವಜನತೆ ಮತ್ತು ಮಹಿಳೆಯರನ್ನು ಆಕರ್ಷಿಸಲು ಸೆಲ್ಫಿ ಪಾಯಿಂಟ್ ನಿರ್ಮಿಸಲಾಗಿದೆ.
ವರದಿಗಾರರು ತುಮಕೂರು ವಾರ್ತಾ ಇಲಾಖೆಯಲ್ಲಿ ನೌಕರರು