Friday, December 13, 2024
Google search engine
Homeಮರೀಚಿಕೆನೆನಪಾಗಿ ಕಾಡುವ ಗೆಳೆಯ ಡಾ.ಸೋ.ಮು.ಭಾಸ್ಕರಾಚಾರ್

ನೆನಪಾಗಿ ಕಾಡುವ ಗೆಳೆಯ ಡಾ.ಸೋ.ಮು.ಭಾಸ್ಕರಾಚಾರ್

ಎನ್. ನಾಗಪ್ಪ, 9449084510


Tumkur: ನಾನು ಸರ್ಕಾರಿ ಕಲಾ ಕಾಲೇಜು ತುಮಕೂರು ಇಲ್ಲಿ 22-09-1980 ಸೋಮವಾರದಂದ ಕರ್ತವ್ಯಕ್ಕೆ ಹಾಜರಾಗಿದ್ದು ಅಂದು ಪ್ರೊ. ಎಚ್.ಜಿ. ಸಣ್ಣಗುಡ್ಡಯ್ಯನವರು ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದರು. ಅವರ ಬಳಿಗೆ ಹೋಗಿ ನಾನು ನನ್ನ ಪರಿಚಯವನ್ನು ಮಾಡಿಕೊಂಡೆ. ನಂತರ ಅಲ್ಲಿಯೇ ಇದ್ದ ಸೋ.ಮು. ಭಾಸ್ಕರಾಚಾರ್ ಅವರನ್ನು ಪರಿಚಯ ಮಾಡಿಕೊಟ್ಟರು. ನಾನು ಕರ್ತವ್ಯಕ್ಕೆ ಹಾಜರಾದ ಪ್ರಯುಕ್ತ ಅರೆಕಾಲಿಕ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರನ್ನು ಅನಿವಾರ್ಯವಾಗಿ ಬಿಡುಗಡೆ ಮಾಡಬೇಕಾಗಿತ್ತು.

ನನ್ನ ಹತ್ತಿರ ಬಂದ ಭಾಸ್ಕರಾಚಾರ್ ನಿಮಗೆ ಒಳ್ಳೆಯದಾಗಲೆಂದು ಹೇಳಿ ನನ್ನ ಕೈಕುಲಿಕಿ ನಸುನಕ್ಕು ತಮ್ಮ ಹೆಗಲಿಗೆ ಬ್ಯಾಗ್ ಹಾಕಿಕೊಂಡು ಹೊರಟು ಹೋದರು.

[ಭಾಸ್ಕರಾಚಾರ್ ತೆಗೆದುಕೊಳ್ಳುತ್ತಿದ್ದ ತರಗತಿ ನಾನು ಪಾಠ ಮಾಡಲು ಹೋದಾಗ ಗೊತ್ತಾದದ್ದು. ಇವರು ತುಂಬಾ ಚೆನ್ನಾಗಿ ಪಾಠ ಮಾಡುತ್ತಿದ್ದರು. ಮತ್ತು ಇಡೀ ತರಗತಿಯನ್ನು ಹಾಸ್ಯಮಯದಿಂದ ನಗುವಂತೆ ಮಾಡುತ್ತಿದ್ದರೆಂದು. ನಾನು ಪ್ರಾರಂಭದಲ್ಲಿ ಸ್ವಲ್ಪ ಶ್ರಮಪಡಬೇಕಾಗಿತ್ತು. ಕಾಲಕ್ರಮೇಣ ನಾನು ಸಹ ಪಾಠ ಮಾಡುವುದರಲ್ಲಿ ಸೈ ಎನಿಸಿಕೊಂಡೆ.

ಭಾಸ್ಕರಾಚಾರ್ ಸಿದ್ದಗಂಗಾ ಸಂಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದುದು ನನಗೆ ಒಂದು ದಿನ ಅವರೇ ಕಾಲೇಜಿಗೆ ಬಂದಿದ್ದಾಗ ತಿಳಿಸಿದ್ದರು. ಅವರು ಕೆಪಿಎಸ್ ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿ ಕೆಜಿಐಡಿ ರಾಯಚೂರು ಇಲ್ಲಿಗೆ ಕರ್ತವ್ಯಕ್ಕೆ ಹಾಜರಾದರು.

ಅಲ್ಲಿಗೆ ಹೋಗಿ ಕೆಲವು ದಿನಗಳ ನಂತರ ಒಬ್ಬ ಆತ್ಮೀಯ ಗೆಳೆಯನಿಗೆ ಪತ್ರ ಬರೆಯುವಂತೆ ನನಗೆ ಪತ್ರ ಬರೆದಿದ್ದರು. ಅಲ್ಲಿಯ ಬಿಸಿಲು, ಅನಾರೋಗ್ಯ, ಊಟ, ಅವುಗಳ ವಿಷಯದ ಜೊತೆಗೆ ನನಗೆ ಈಗಲೂ ನೆನಪಿದೆ. ನನಗೆ ಅವರು ಈ ರೀತಿ ಹೇಳಿದ್ದು, ನೀವು ಬರವಣಿಗೆಯನ್ನು ರೂಢಿಸಿಕೊಳ್ಳಿ ಎಂದು.

ಇತ್ತ ವಿದ್ಯಾವಾಹಿನಿ ಕಾಲೇಜು ಪ್ರಾರಂಭ. ಅಲ್ಲಿಗೆ ಒಳ ಒಪ್ಪಂದ ಮಾಡಿಕೊಂಡ ಗುಮಾಸ್ತನ ಕೆಲಸಕ್ಕೆ ರಾಜಿನಾಮೆ ಸಲ್ಲಿಸಿ ವಿದ್ಯಾವಾಹಿನಿ ಕಾಲೇಜಿಗೆ ಪೂರ್ಣ ಪ್ರಮಾಣದ ಉಪನ್ಯಾಸಕರಾಗಿ ಸೇರಿಕೊಂಡರು. ಅವರು ಅನೇಕ ಕಾರಣಗಳಿಗೆ ಕಾಲೇಜಿಗೆ ಬರುತ್ತಿದ್ದರರು. ಬಂದಾಗ ಕನ್ನಡ ವಿಭಾಗಕ್ಕೆ ಬಂದು ಬನ್ನಿ ಟೀ ಕುಡಿಯುವ ಎಂದು ಕ್ಯಾಂಟೀನಿಗೆ ಕರೆದುಕೊಂಡು ಹೋಗುತ್ತಿದ್ದರು. ಕೆಲವೊಮ್ಮೆ ನಮ್ಮ ಜೊತೆ ಸಣ್ಣಗುಡ್ಡಯ್ಯ, ಲೋಹಿತಾಶ್ವ, ಎಚ್.ಎಸ್.ಶಿವಪ್ರಕಾಶ್, ಅವರುಗಳು ಸಹ ಇರುತ್ತಿದ್ದರು.

ಪ್ರಗತಿಪರವಾಗಿ ಚಿಂತಿಸುತ್ತಿದ್ದ ಗೆಳೆಯ ಭಾಸ್ಕರಾಚಾರ್ ಅವರು ಬರೆದ ಕತೆ ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು. ಆ ಕತೆ ಅವರ ಹಳ್ಳಿಯಲ್ಲಿ ನಡೆದ ಕತೆ. ಆ ಕತೆಯಲ್ಲಿ ಮೂಢನಂಬಿಕೆಯ ವಿಷಯ, ಅಂತರಜಾತಿ ವಿಷಯ – ಇನ್ನೂ ಅನೇಕ ವಿಷಯಗಳಿದ್ದವು. ನನಗೆ ಇವತ್ತಿಗೂ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಈ ಸಂದರ್ಭದಲ್ಲಿ ಅವರ ಮದುವೆ ವಿಷಯವನ್ನು ಇಲ್ಲಿ ಅವಶ್ಯಕವಾಗಿ ಹೇಳಬೇಕಾಗಿದೆ. ಅತ್ಯಂತ ಸರಳವಾಗಿ ಮದುವೆಯಾದದ್ದು.

ಹೊರಪೇಟೆಯಲ್ಲಿರುವ ನೀಲಕಂಠೇಶ್ವರ ದೇವಸ್ಥಾನದ ಸಣ್ಣ ಛತ್ರದಲ್ಲಿ. ಈ ಮದುವೆಗೆ ಕೆಲವು ಆಪ್ತ ಸ್ನೇಹಿತರಿಗೆ ಮಾತ್ರ ಆಹ್ವಾನ. ನನಗೆ ನೆನಪಿರುವಂತೆ ಪ್ರೇಮಕುಮಾರ್ ಹರಿಯಬ್ಬೆ ಮತ್ತು ಇವರ ಶ್ರೀಮತಿ ಮಂಜುಳ ಬಂದಿದ್ದರು.

ವಿದ್ಯಾವಾಹಿನಿ ಕಾಲೇಜಿನ ಕೆ.ಬಿ.ಜಯಣ್ಣ ಮತ್ತು ಕುಮಾರಸ್ವಾಮಿ ಇನ್ನೂ ಮುಂತಾದವರು. ಮದುವೆ ಮಾಲಾರ್ಪಣೆ, ಸರಳವಾದ ಮಂತ್ರ ಉಚ್ಛಾರಣೆ, ತಾಳಿಕಟ್ಟಿದ್ದು. ಇದಾದ ನಂತರ ಊಟದ ವ್ಯವಸ್ಥೆ. ಮದುವೆಗೆ ಬಂದಿದ್ದವರಿಗೆ ಆಶ್ಚರ್ಯವೋ ಆಶ್ಚರ್ಯ. ಕೆಲವು ಸಂಪ್ರದಾಯಗಳನ್ನು ಕೈಬಿಟ್ಟು ಸಂಪ್ರದಾಯಸ್ಥರ ಮುಂದೆ ಮದುವೆಯಾಗುವುದು ಸಾಮಾನ್ಯವಾದ ಮಾತಲ್ಲ ಎಂಬುದು ಅಂದು ನನ್ನ ಅರಿವಿಗೆ ಬಂದಿತ್ತು.

ಏಪ್ರಿಲ್ ಎರಡು, ಸಾವಿರದ ಒಂಬೈನೂರ ಎಂಭತ್ತ್ಮೂರಂದು ನಾವು ಮದುವೆಯಾದದ್ದು. ತುಮಕೂರಿನಲ್ಲಿ ದೊಡ್ಡ ಸುದ್ದಿಯಾಗಿತ್ತು. ದೋಬಿಘಾಟ್ ನ ಹತ್ತಿರ ಮನೆ ಮಾಡಿದ್ದೆ. ಅದರ ಹತ್ತಿರ ಈಗ ಒಂದು ಉದ್ಯಾನ ಇದೆ.

ಅಲ್ಲಿಯೇ ಮಹಡಿ ಮನೆಯಲ್ಲಿ ಭಾಸ್ಕರಾಚಾರ್ ಮನೆ ಮಾಡಿದ್ದರು. ನನ್ನಾಕೆಯು ಕುಡ ಭಾಸ್ಕರಾಚಾರ್ ಅವರ ಶಿಷ್ಯೆಯಾಗಿದ್ದವಳು. ನಾವು ಮನೆಗೆ ಬಂದಿರುವುದು ಗೊತ್ತಾಗಿ ತಕ್ಷಣ ಗಂಡ-ಹೆಂಡತಿ ಇಬ್ಬರು ಬಂದು ಮಾತಿಗೆ ಮಾತು ಬೆಳೆದು ನಿಮ್ಮದು ನಿಜವಾದ ಬಂಡಾಯದ ಮದುವೆ ಎಂದು ಹೇಳಿ ನನ್ನನ್ನು ಪ್ರಶಂಸಿದ್ದರು.

ಇದಾದ ನಂತರ ಪ್ರತಿನಿತ್ಯ ನಾವು ಕಾಲೇಜಿಗೆ ಹೋದನಂತರ ನನ್ನಾಕೆ ಮತ್ತು ಭಾಸ್ಕರಾಚಾರ್ ಶ್ರೀಮತಿಯವರು ತುಂಬಾ ಆಪ್ತರಾಗಿಬಿಟ್ಟರು.

ನನ್ನಾಕೆ ಗರ್ಭಿಣಿಯಾದಾಗ ಒಬ್ಬ ಅಕ್ಕನ ರೀತಿಯಲ್ಲಿ ಅವರು ನೋಡಿಕೊಂಡರು. ನನ್ನಾಕೆಯ ಬಸುರಿ ಬಯಕೆಯನ್ನು ಸಹ ಪೂರೈಸುವಲ್ಲಿ ಅವರ ಪಾತ್ರ ಮರೆಯುವಂತಿಲ್ಲ. ಮಗುವಿದ್ದಾಗ ಪ್ರತಿದಿನ ಮಗುವನ್ನು ಮುದ್ದಾಡಲು ಮನೆಗೆ ಬಂದು ಸಾಕಷ್ಟು ಸಮಯ ಕಳೆಯುತ್ತಿದ್ದರು. ನನಗೆ ಕುಣಿಗಲ್ ಕಾಲೇಜಿಗೆ ವರ್ಗಾವಣೆಯಾದಾಗ ಭಾಸ್ಕರಾಚಾರ್ ಅವರ ಮನೆಯಲ್ಲಿ ನಮಗೆ ಊಟದ ವ್ಯವಸ್ಥೆಯನ್ನು ಮಾಡಿದ್ದರು.

: ಇದಾದ ನಂತರ ನಾನು ಕುಣಿಗಲ್ ನಿಂದ ಚಿಕ್ಕಮಗಳೂರಿನ ಕಡೆಗೆ ಕರ್ತವ್ಯದ ನಿಮಿತ್ತ ಹೋಗಿ 1989ರಲ್ಲಿ ಬಿಳಿಗೆರೆ ಕಾಲೇಜಿಗೆ ಬಂದ ನಂತರ ತುಮಕೂರಿನಲ್ಲಿ ನಡೆಯುತ್ತಿದ್ದ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾವು ಸಹಜವಾಗಿ ಭೇಟಿಯಾಗುತ್ತಿದ್ದೆವು.

ಚಿಕ್ಕನಾಯಕನಹಳ್ಳಿಯಲ್ಲಿ ಕೆ.ದೊರೈರಾಜ್ ಪ್ರಿನ್ಸಿಪಾಲರು. ಅಲ್ಲಿಗೆ ನಾನು ವರ್ಗವಾಗಿ ಹೋದೆ. ಆಗ ತುಮಕೂರು ಜಿಲ್ಲಾ ಬಂಡಾಯ ಸಂಘಟನೆಯ ಸಂಚಾಲಕರಾಗಿ ಸೋ.ಮು. ಭಾಸ್ಕರಾಚಾರ್ ಹೆಸರು ಮಾಡಿದ್ದರು.

ಬರಗೂರು ರಾಮಚಂದ್ರಪ್ಪನವರು ತುಮಕೂರಿನಲ್ಲಿ ಇಡೀ ಜಿಲ್ಲೆಯಲ್ಲಿ ಪುಸ್ತಕ ಜಾಥಾದ ಜವಾಬ್ದಾರಿಯನ್ನು ವಹಿಸಿದರು. ಅಂದು ತುಮಕೂರಿನಲ್ಲಿ ಕೆ.ಬಿ., ಬಾ.ಹ.ರಮಾಕುಮಾರಿ, ಶೈಲಾನಾಗರಾಜ್ ನನಗೆ ಚಿಕ್ಕನಾಯಕನಹಳ್ಳಿ ತಾಲೂಕು ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕರನ್ನಾಗಿ ಮಾಡಿದ್ದರು.

ಚಿಕ್ಕನಾಯಕನಹಳ್ಳಿಯಲ್ಲಿ ಮೊದಲ ಬಾರಿಗೆ ಕೆ.ದೊರೈರಾಜ್ , ನಾನು ಅಲ್ಲಿಯ ಅನೇಕ ಪ್ರಗತಿಪರ ಚಿಂತಕರು ಆ ದಿನ ಪುಸ್ತಕ ಜಾಥಾ ಬಿಡುಗಡೆ ಕಾರ್ಯಕ್ರಮಕ್ಕೆ ಭಾಸ್ಕರಾಚಾರ್ ಬಂದಿದ್ದರು. ಅದ್ಯುತವಾಗಿ ಮಾತನಾಡಿದರು. ನಂತರ ಪುಸ್ತಕಗಳನ್ನು ತಳ್ಳುವ ಗಾಡಿಯಲ್ಲಿಟ್ಟುಕೊಂಡು ಬೀದಿ ಬೀದಿಯಲ್ಲಿ ಪುಸ್ತಕ ಮಾರಾಟ ಮಾಡಲಾಯಿತು. ಭಾಸ್ಕರಾಚಾರ್ ಸಂಜೆಯ ತನಕ ನಮ್ಮ ಜೊತೆ ಇದ್ದು ಸಂತಸ ವ್ಯಕ್ತಪಡಿಸಿದ್ದರು.

ನಾನು ದಂಡಿನಶಿವರ ಕಾಲೇಜಿನಲ್ಲಿ ಪ್ರಾಂಶುಪಾಲನಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಸರ್ಕಾರದ ಒಂದು ಯೋಜನೆ “ಆಡಳಿತದಲ್ಲಿ ಕನ್ನಡ’ ಮೊದಲು ಬೆಂಗಳೂರಿನಲ್ಲಿ ನಡೆದಾಗ ನಾನು, ಭಾಸ್ಕರಾಚಾರ್ ಮತ್ತು ಡಾ. ಯೋಗೀಶ್ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆವು.

ಆಡಳಿತದಲ್ಲಿ ಕನ್ನಡ ಎಂಬ ಕಾರ್ಯಾಗಾರ ಹಂಪಿ ವಿಶ್ವವಿದ್ಯಾಲಯದಲ್ಲಿ ಕಾ.ತ. ಚಿಕ್ಕಣ್ಣನವರ ನೇತೃತ್ವದಲ್ಲಿ ನಡೆಯಿತು. ತುಮಕೂರಿನಿಂದ ಹೋಗಿದ್ದ ನಾನು ಮತ್ತು ಭಾಸ್ಕರಾಚಾರ್ ಒಂದೇ ಕೊಠಡಿಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಆಗಿತ್ತು. ಸಂಪನ್ಮೂಲ ವ್ಯಕ್ತಿಗಳಿಂದ ಪ್ರತಿದಿನ ವಿಷಯ ಮಂಡನೆ, ಪ್ರಶ್ನೆಗಳಿಗೆ ಉತ್ತರ, ಇದೊಂದು ಅಪರೂಪದ ಕಾರ್ಯಾಗಾರವಾಗಿತ್ತು.

ಈ ಕಾರ್ಯಾಗಾರಕ್ಕೆ ಹೋದ ಪ್ರಯುಕ್ತ ನನಗೆ ಚಿಕ್ಕಮಗಳೂರಿನಿಂದ ಪರಿಚಯವಿದ್ದ ಬಿ.ಎಂ.ಪುಟ್ಟಯ್ಯನವರು ಭಾಸ್ಕರಾಚಾರ್ ಅವರ ಪಿಎಚ್.ಡಿ ಗೈಡ್ ಆಗಿದ್ದರು. ಅವರೇ ಒಂದು ದಿನ ಊಟದ ವ್ಯವಸ್ಥೆ ಮಾಡಿ ಒಬ್ಬ ಗೆಳೆಯನಿಗೆ ಅತ್ಯಂತ ಪ್ರೀತಿಯಿಂದ ಏನೇನು ಹೇಳಬೇಕೋ ಅದನ್ನೆಲ್ಲಾ ಹೇಳಿದ್ದು. ಇದಾದ ನಂತರ ನನಗೆ ಆ ದಿನವೇ ಒಂದು ಮಾತು ಹೇಳಿದರು ‘ ನಾಗಪ್ಪನವರೇ ನಿಮ್ಮ ಗೆಳೆಯರಾದ ಭಾಸ್ಕರಾಚಾರ್ ‘ಮಾತೃತ್ವದ’ ಬಗ್ಗೆ ಅದ್ಬುತವಾದ ಪ್ರಬಂಧ ಮಂಡಿಸುತ್ತಿದ್ದಾರೆ. ಅವರಿಗೆ ಡಾಕ್ಟರೇಟ್ ಬರುವುದರಲ್ಲಿ ಅನುಮಾನ ಇಲ್ಲ ಎಂದು ಹೇಳಿದರು. ಈ ಮಾತು ಸತ್ಯವಾಯಿತು.

ನಾನು ಬಿಡುವಿದ್ದಾಗ ಮತ್ತು ಅನೇಕ ವಿಷಯಗಳ ಬಗ್ಗೆ ಮಾತನಾಡಲು ಭಾಸ್ಕರಾಚಾರ್ ಮನೆಗೆ ಹೋಗುತ್ತಿದ್ದೆ. ಅವರ ಟೇಬಲ್ ಮೇಲೆ ನೂರಾರು ಪುಸ್ತಕಗಳ ರಾಶಿ, ಓದು, ಹುಡುಕಾಟ, ಹಿರಿಯರು ಗೆಳೆಯರ ಜೊತೆ ಚರ್ಚೆ ಹೀಗೆ ಶ್ರಮಪಟ್ಟು ತಯಾರಿಸಿದ ಅವರ ಸಂಶೋಧನಾ ಗ್ರಂಥ ಆಧುನಿಕ ಕನ್ನಡ ಕಾವ್ಯದಲ್ಲಿ ಮಾತೃತ್ವದ ಸ್ವರೂಪ’ ಅಪರೂಪದ ಕೃತಿ.

ಅರ್ಹರಿಗೆ ಡಾಕ್ಟರೇಟ್ ಬಂದಾಗ ಸಂತೋಷವಾಗುತ್ತದೆ. ತುಮಕೂರು ಜಿಲ್ಲೆಯಲ್ಲಿ ಕೇವಲ ಕೆಲವರು ಅರ್ಹರಾದ ಡಾಕ್ಟರೇಟ್ ಪಡೆದವರುಗಳಿದ್ದಾರೆ. ಅವರ ಜೊತೆ ಮಾತನಾಡಲು ಸಂತೋಷವಾಗುತ್ತದೆ. ಆದರೆ ಇತ್ತೀಚೆಗೆ ಅರ್ಹರಲ್ಲದವರುಗಳಿಗೆ ಡಾಕ್ಟರೇಟ್ ಎಂಬುದು ಬಿಕರಿಯ ವಸ್ತುವಾಗಿದೆ. ಇದೊಂದು ಬೇಸರದ ಸಂಗತಿ.

ಪ್ರೊ. ಮರಿದೇವರು ಮತ್ತು ಭಾಸ್ಕರಾಚಾರ್ ಇವರಿಬ್ಬರ ಸ್ನೇಹ ಹೇಗಿತ್ತೆಂದರೆ ಗಳಸ್ಯ-ಕಂಠಸ್ಯ. ಜಿಲ್ಲಾ ಅಧ್ಯಕ್ಷರ ಸ್ಥಾನಕ್ಕೆ ನಿಂತು ಮರಿದೇವರು ಸೋತ ನಂತರ ಅವರು ಕಲ್ಪತರು ಸಾಂಸ್ಕೃತಿಕ ವೇದಿಕೆಯನ್ನು ಹುಟ್ಟುಹಾಕಿದರು. ಅದರ ಕಾರ್ಯದರ್ಶಿಯಾಗಿ ಭಾಸ್ಕರಾಚಾರ್ ವಹಿಸಿಕೊಳ್ಳುತ್ತಾರೆ. ಈ ವೇದಿಕೆ ಇಡೀ ಜಿಲ್ಲೆಯಲ್ಲಿ ಮನೆ ಮಾತಾಗುತ್ತದೆ. ಮನೆಮನೆಯಲ್ಲಿ ಸಾಹಿತ್ಯ ಚರ್ಚೆ ಇದು ತಾಲೂಕಿಗೂ ವಿಸ್ತರಿಸುತ್ತದೆ. ಭಾಸ್ಕರಾಚಾರ್ ನನಗೆ ತಿಂಗಳಿಗೆ ಒಂದು ಅಥವಾ ಎರಡು ಕಾರ್ಯಕ್ರಮಗಳನ್ನು ಕೊಡುತ್ತಿದ್ದರು. ಇದರಿಂದ ಅವರಿಗೆ ನಾನು ಮತ್ತಷ್ಟು ಹತ್ತಿರವಾದೆ.

ಪ್ರೊ. ಮರಿದೇವರು ಮತ್ತು ಭಾಸ್ಕರಾಚಾರ್ ಅವರ ಅಧ್ಯಕ್ಷತೆಯಲ್ಲಿ ನನಗೆ ಅನೇಕ ಕವಿಗೋಷ್ಠಿಗಳಲ್ಲಿ ಕವನ ವಾಚಿಸಲು ಮತ್ತು ಕವಿಗೋಷ್ಠಿ ಅಧ್ಯಕ್ಷತೆ ವಹಿಸಲು ಅವಕಾಸ ಮಾಡಿಕೊಟ್ಟಿದ್ದರು. ಇವರ ಜೊತೆಗೆ ಎಲ್ಲೇ ಸಮ್ಮೇಳನ ನಡೆದರೆ ಅಲ್ಲಿಗೆ ನಾವು ಹೋಗುತ್ತಿದ್ದೆವು. ಇದಾದ ನಂತರ ಭಾಸ್ಕರಾಚಾರ್ ಕಂಟಲಗೆರೆ ಸಣ್ಣಹೊನ್ನಯ್ಯನವರನ್ನು ಕಾರ್ಯದಶರ್ಶಿಯಾಗಿ ಮಾಡಿಕೊಂಡ ನಂತರ ಅನೇಕ ನೆನಪಿನಲ್ಲು ಉಳಿಯುವಂತಹ ಕಾರ್ಯಕ್ರಮಗಳನ್ನು ಮಾಡಿದರು.

ಇತ್ತೀಚೆಗೆ ಹೇಮಾದ್ರಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ನಾನು, ಮುರಳಿಕೃಷ್ಣಪ್ಪ ಜೊತೆಯಲ್ಲಿದ್ದೆವು. ನಮ್ಮ ಮುಖ ನೋಡುತ್ತಾರೆಯೇ ಹೊರತು ನಮ್ಮ ಹೆಸರು ಹೇಳಲು ಭಾಸ್ಕರಾಚಾರ್ ಅವರಿಗೆ ಆಗಲಿಲ್ಲ.

ಹಲವು ಕಾರ್ಯಕ್ರಮಗಳಲ್ಲಿ ಸೊಗಸಾಗಿ ಮಾತನಾಡುತ್ತಿದ್ದ ಭಾಸ್ಕರಾಚಾರ್ ಹೀಗೇಕೆ ಆದರು. ನನಗಿಂತಲೂ ಚನ್ನಾಗಿ ಮಾತನಾಡುತ್ತಿದ್ದವರು ನಗಿಸುತ್ತಿದ್ದವರು ಹೀಗಾದರಲ್ಲ ಎಂದು ನೊಂದುಕೊಂಡಿದ್ದೆ. ಇಂದು ಒಳ್ಳೆಯ ಗೆಳೆಯನನ್ನು ಕಳೆದುಕೊಂಡಿದ್ದೇನೆ.

ಅವರು ಬರೆದ ಕೃತಿಗಳಿಗೆ ಒಳ್ಳೆಯ ವಿಮರ್ಶೆ ಬರಲಿಲ್ಲ. ನಾನೇ ಹಿಂದೆ ಹಲವುವಿಮರ್ಶೆಗಳನ್ನು ಬರೆದಿದ್ದೆ. ಜಿಲ್ಲಾ ಮಟ್ಟದಲ್ಲಿ ಒಳ್ಳಯ ಗೌರವ ಸಂಪಾದಿಸಿದ್ದರು. ರಾಜ್ಯ ಮಟ್ಟದಲ್ಲಿ ಇವರಿಗೆ ಸಲ್ಲಬೇಕಾದ ಸಾಹಿತ್ಯಕವಾದ ಸ್ಥಾನಮಾತನ ಸಿಕ್ಕಲಿಲ್ಲವೆಂಬುದು ನನ್ನ ಅನಿಸಿಕೆ.


ಲೇಖಕರು ಹಿರಿಯ ಸಾಹಿತಿ. ತುಮಕೂರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?