Thursday, October 3, 2024
Google search engine
Homeಮರೀಚಿಕೆಕೊಚ್ಚಿ ಏರ್ ಪೋರ್ಟ್ ಗೆ ಮುಟ್ಟಿಸಲು ಅಲೀಡಾ ಬರಬೇಕಾಯ್ತು...

ಕೊಚ್ಚಿ ಏರ್ ಪೋರ್ಟ್ ಗೆ ಮುಟ್ಟಿಸಲು ಅಲೀಡಾ ಬರಬೇಕಾಯ್ತು…

ಜಿ ಎನ್ ಮೋಹನ್

ನೀವು ನಂಬಲೇ ಬೇಕು..
ಫೋರ್ಟ್ ಕೊಚ್ಚಿಯಲ್ಲಿದ್ದ ನನ್ನನ್ನು ಬೆಳ್ಳಂಬೆಳಗ್ಗೆ ಏರ್ ಪೋರ್ಟ್ ಗೆ ದಾಟಿಸಲು ಚೆಗೆವಾರನ ಮಗಳು ಅಲೀಡಾನೇ ಬರಬೇಕಾಯ್ತು

ವಾರಕ್ಕೂ ಹೆಚ್ಚು ಕಾಲ ಕೇರಳದಲ್ಲಿರಬೇಕಾಯ್ತು. ಇದಕ್ಕೆ ಮುಖ್ಯ ಕಾರಣ ತ್ರಿಸ್ಸೂರಿನಲ್ಲಿ ಜರುಗಿದ ಅಂತಾರಾಷ್ಟ್ರೀಯ ನಾಟಕ ಉತ್ಸವ ಹಾಗೂ ಕೊಚ್ಚಿಯಲ್ಲಿ ಜರುಗುತ್ತಿದ್ದ ಬಿನಾಲೆ.

ತ್ರಿಸ್ಸೂರಿನ ಅಷ್ಟೂ ಕಾರ್ಯಕ್ರಮಗಳನ್ನು ಮುಗಿಸಿ ಕೊಚ್ಚಿಗೆ ಹೋಗಿ ಅಲ್ಲಿಂದಲೇ ವಿಮಾನ ನಿಲ್ದಾಣ ಸೇರಿಕೊಳ್ಳುವುದು ಎಂದು ನಿರ್ಧರಿಸಿದೆ. ಹೋಗಿ ನೋಡಿದರೆ ಫೋರ್ಟ್ ಕೊಚ್ಚಿಯಿಂದ ವಿಮಾನ ನಿಲ್ದಾಣ ಒಂದು ಗಂಟೆಗೂ ಹೆಚ್ಚು ದೂರದ ದಾರಿ. ಆದರೆ ವಿಮಾನ ಸಂಸ್ಥೆ ಕೈಕೊಟ್ಟಿತ್ತು. 9 ಕ್ಕೆ ಹೊರಡಬೇಕಾದ ವಿಮಾನ ಬೆಳಗ್ಗೆ 6 ಕ್ಕೆ ಹಿಂದೂಡಲ್ಪಟ್ಟಿದೆ.

ಏರ್ ಪೋರ್ಟ್ ಗೆ ಹೋಗಬೇಕೆಂದರೆ 4 ಗಂಟೆಗೆಲ್ಲಾ ನಾನು ಫೋರ್ಟ್ ಕೊಚ್ಚಿಯಿಂದ ಹೊರಬೀಳಬೇಕು. ಗೊತ್ತಿಲ್ಲದ ಜಾಗದಲ್ಲಿ ಕ್ಯಾಬ್ ಇದೆಯೋ, ಬೇರೆ ಏನಾದರೂ ವಾಹನ ಸಿಗುತ್ತದೋ ಏನೂ ಗೊತ್ತಾಗದೆ ಗಲಿಬಿಲಿ. ಇರಲಿ ಬಿಡು ಹೊರಡುವಾಗ ನೋಡಿಕೊಳ್ಳೋಣ ಎನ್ನುವಂತೆಯೂ ಇಲ್ಲ.

ಇಷ್ಟೆಲ್ಲಾ ಯೋಚನೆಯ ಮಧ್ಯೆಯೇ ನಾನು ಫೋರ್ಟ್ ಕೊಚ್ಚಿ ದರ್ಶನ ಮಾಡಿಕೊಂಡು ರಾತ್ರಿ 12 ದಾಟಿದ ಸಮಯದಲ್ಲಿ ಹೋಟೆಲ್ ಗೆ ಹಿಂದಿರುಗಲು ಒಂದು ಆಟೋಗೆ ಕೈ ಅಡ್ಡ ಹಾಕಿದೆ.

ಒಳಗೆ ಹೊಕ್ಕವನಿಗೆ ಚೆಗೆವಾರ ಕಾಣಬೇಕೇ.. ಅಷ್ಟೇ ಅಲ್ಲ ಚೆಗೆವಾರನ ಎಷ್ಟೊಂದು ‘ಕೋಟ್’ಗಳು ಆಟೋ ತುಂಬಾ. ಎಲ್ಲವನ್ನೂ ಕಣ್ಣು ಬಿಟ್ಟುಕೊಂಡು ನೋಡುತ್ತಿರುವಾಗಲೇ ಇನ್ನೂ ಒಂದು ಆಶ್ಚರ್ಯ ಕಂಡಿತು. ಆ ಆಟೋ ಡ್ರೈವರ್ ಅಲೀಡಾ ಜೊತೆಗೆ ತೆಗೆಸಿಕೊಂಡಿದ್ದ ಫೋಟೋ ಸಹಾ ಅಲ್ಲಿ ರಾರಾಜಿಸುತ್ತಿತ್ತು.

ನನಗೆ ಗೊತ್ತಿಲ್ಲದಂತೆ ಅಲೀಡಾ ಅನ್ನುವ ಉದ್ಘಾರ ಹೊರಬಿತ್ತು. ಅವನು ಆಟೋ ನಿಲ್ಲಿಸಿದವನೇ ನಿಮಗೆ ಅಲೀಡಾ ಗೊತ್ತಾ ಎಂದ.

ನಾನು ಮೊಬೈಲ್ ತೆಗೆದವನೇ ಅಲೀಡಾ ಬಾಗೇಪಲ್ಲಿಗೆ, ಬೆಂಗಳೂರಿಗೆ ಬಂದಿದ್ದಾಗ ಅವರ ಜೊತೆ ಕಾರ್ಯಕ್ರಮದಲ್ಲಿದ್ದ ಹತ್ತು ಹಲವಾರು ಫೋಟೋ ತೋರಿಸಿದೆ. ಅವನೋ ಫೋರ್ಟ್ ಕೊಚ್ಚಿಗೆ ಅಲೀಡಾ ಬಂದಾಗ ಅವರ ಜೊತೆ ತೆಗೆಸಿಕೊಂಡ ಫೋಟೋಗಳ ರಾಶಿಯನ್ನು ಅವನ ಮೊಬೈಲ್ ನಲ್ಲಿ ತೋರಿಸಿದ.

ಅವನ ಮಲಯಾಳಂ ನನ್ನ ಇಂಗ್ಲಿಷ್ ಅರ್ಥ ಮಾಡಿಕೊಳ್ಳದೆ ಢಿಕ್ಕಿ ಹೊಡೆದುಕೊಳ್ಳುತ್ತಿದ್ದರೂ ಸಹಾ ನಾವು ಅಲೀಡಾ ಹಾಗೂ ಚೆಗೆವಾರ ಹೆಸರಲ್ಲಿ ಒಂದಾಗಿಬಿಟ್ಟಿದ್ದೆವು.

ಆಗ ನಾನು ನನ್ನ ಸಮಸ್ಯೆ ಮುಂದಿಟ್ಟೆ. ಬೆಳ್ಳಂ ಬೆಳಗ್ಗೆ ಏರ್ ಪೋರ್ಟ್ ಸೇರಿಕೊಳ್ಳೋದು ಹೇಗಪ್ಪಾ ಅಂತ. ಅವನೋ ಅಲೀಡಾರನ್ನೇ ಏರ್ ಪೋರ್ಟ್ ಗೆ ಕಳಿಸುತ್ತಿದ್ದೀನೇನೋ ಅನ್ನುವಷ್ಟು ಕಾಳಜಿ ತೆಗೆದುಕೊಂಡು ಅಲ್ಲಿಗೆ ಇಲ್ಲಿಗೆ ಫೋನ್ ಮಾಡಿ ಡೋಂಟ್ ವರಿ ಎನ್ನುವಂತೆ ಮುಖ ಮಾಡಿದ.

ಆ ಗಡಿಬಿಡಿಯಲ್ಲಿ ಅವನ ಹಾಗೂ ಅವನ ಆಟೋ ಜೊತೆ ಫೋಟೋ ತೆಗೆಸಿಕೊಳ್ಳುವುದನ್ನೇ ಮರೆತೆ. ಈಗ ಇನ್ಸ್ಟಾ ತುಂಬಾ ಹುಡುಕಿ ಅವನು ಇರುವ ಕೊಚ್ಚಿ ಕ್ಲಬ್ ಫೋಟೋ ಸೇರಿಸಿದ್ದೇನೆ.

ಬೆಳಗ್ಗೆ 4 ಗಂಟೆಗೆ ನಾನು ಲಗೇಜ್ ಸಮೇತ ಕೆಳಗಿಳಿದಾಗ ಕ್ಯಾಬ್ ಕಾಯುತ್ತಿತ್ತು. ಸರಿಯಾದ ಸಮಯಕ್ಕೆ ಏರ್ ಪೋರ್ಟ್ ತಲುಪಿಕೊಂಡೆ.

ಅಂತೂ ಇಂತೂ ಅಲೀಡಾ ನನ್ನನ್ನು ದಡ ಸೇರಿಸಿಬಿಟ್ಟರು..

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?