ಪಾವಗಡ ತಾಲ್ಲೂಕಿನಾದ್ಯಂತ ಲಾಕ್ ಡೌನ್ ವೇಳೆಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದವರಿಗೆ ನಮ್ಮ ಹಕ್ಕು ಸಂಸ್ಥೆ ವತಿಯಿಂದ ಸೋಮವಾರ ಅಭಿನಂದನೆ ಸಲ್ಲಿಸಲಾಯಿತು.
ಪೌರ ಕಾರ್ಮಿಕರು ಹಾಗೂ ತಾಲ್ಲೂಕಿನ ರೊಪ್ಪ ಗ್ರಾಮ ಪಂಚಾಯಿತಿ ಜಾಡ ಮಾಲಿಗಳಿಗೆ ಪಡಿತರ ವಿತರಿಸಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀರಾಮ ನಾಯ್ಕ, , ಕಾರ್ಯದರ್ಶಿ ಮೊಹಮದ್ ರಪೀಕ್, 313 ಅಲ್ ಅಮೀನ್ ಪದಾಧಿಕಾರಿಗಳಾದ ಯೂನಸ್, ಷಾರಿಕ್, ಮುದೀದ್ ಅವರನ್ನು ಸನ್ಮಾನಿಸಲಾಯಿತು.
ನಾಗಲ ಮಡಿಕೆ ಹೋಬಳಿಯಲ್ಲಿ ಚೆಕ್ ಪೋಸ್ಟ್ ನಲ್ಲಿ ಕೆಲಸ ಮಾಡಿದ ಯುವಕರಿಗೆ ಮಾಸ್ಕ್, ಸ್ಯಾನಿಟೈಸರ್, ಪ್ರಮಾಣ ಪತ್ರ ವಿತರಿಸಿ ಪ್ರೋತ್ಸಾಹ ನೀಡಿದರು.
ರಾಜ್ಯ ಘಟಕದ ಅಧ್ಯಕ್ಷ ರಜತ್ ಗೌಡ ಮಾತನಾಡಿ, ಎಚ್.ಎಸ್.ಆರ್ ಬಡಾವಣೆಯ ಇನ್ ಸ್ಪೆಕ್ಟರ್ ರಾಘವೆಂದ್ರ ಅವರ ಹುಟ್ಟು ಹಬ್ಬವನ್ನು ವಾರಿಯರ್ಸ್ ಗೆ ಅಭಿನಂದನೆ ಸಲ್ಲಿಸುವ ಮುಖಾಂತರ ಆಚರಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಸಿಲುಕಿಕೊಂಡಿದ್ದ ಸುಮಾರು 8 ಸಾವಿರ ಮಂದಿಗೆ ಪಡಿತರ ವಿತರಿಸಲಾಗಿದೆ. ಸಂಸ್ಥೆ ವತಿಯಿಂದ ತಾಲ್ಲೂಕಿನ 3 ಶಾಲೆಗಳನ್ನು ದತ್ತು ತೆಗೆದುಕೊಳ್ಳಲಾಗಿದೆ. ನಿರ್ಗತಿಕರು, ಅಬಲರಿಗೆ ಸಂಸ್ಥೆ ಕೈಲಾದ ಸಹಾಯ, ಸಹಕಾರ ನೀಡುತ್ತಿದೆ. ಈ ಎಲ್ಲ ಸಮಾಜ ಮುಖಿ ಕೆಲಸಗಳು ಇನ್ ಸ್ಪೆಕ್ಟರ್ ರಾಘವೆಂದ್ರ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ ಎಂದರು.
ತಾಲ್ಲೂಕು ಅಧ್ಯಕ್ಷ ಎ.ಗಿರೀಶ್, 313 ಅಲ್ ಮದದ್ ಸಂಸ್ಥೆಯ ವತಿಯಿಂದ ಸ್ಪೀಡ್ ಮಾರುತಿ ಸರ್ವಿಸ್ ಸ್ಟೇಷನ್ ಮಾಲೀಕ ಯೂನಸ್ ಲಾಕ್ ಡೌನ್ ಸಮಯದಲ್ಲಿ ನಿರ್ಗತಿಕರಿಗೆ ಆಹಾರ ವಿತರಿಸಿದ್ದಾರೆ. ಸ್ನೇಹಿತರ ಸಹಕಾರ ಪಡೆದು ಸ್ವಂತ ಖರ್ಚಿನಿಂದ ಪಟ್ಟಣದ ವಿವಿಧ ಬಡಾವಣೆಗಳಿಗೆ ಔಷಧಿ ಸಿಂಪಡಿಸಿದ್ದಾರೆ. ಸಮಾಜಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸುವವರನ್ನು ಸಂಘ ಗುರುತಿಸಿ ಸನ್ಮಾನಿಸುತ್ತಿದೆ.
ಗ್ರಾಮ ಪಂಚಾಯಿತಿ, ಪುರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಮಂದಿ ಜೀವದ ಅಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅಂತಹವರಿಗೆ ಕೃತಜ್ಞತೆ ಸಲ್ಲಿಸುವುದು ಎಲ್ಲರ ಕರ್ತವ್ಯ ಎಂದರು.
ಷಾದಿ ಮಹಲ್ ನಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ, ಸಂಸ್ಥೆ ಕಾರ್ಯದರ್ಶಿ ಹರಿನಾಥ್, ಇನಾಯತ್, ನಿಸಾರ್ ಅಹಮದ್, ಷಕೀಲ್, ಬಾಬು, ಚಾಂದು, ವಹೀದ್, ಆಕೀಬ್, ಸಾದಿಕ್ ಇತರರು ಉಪಸ್ಥಿತರಿದ್ದರು.