Wednesday, December 4, 2024
Google search engine
Homeನಮ್ಮೂರುಪೊಲೀಸ್ ಅಧಿಕಾರಿಗಳ ಗ್ರಾಮ ವಾಸ್ತವ್ಯ ಮುಂದುವರೆಯುವುದೆ?

ಪೊಲೀಸ್ ಅಧಿಕಾರಿಗಳ ಗ್ರಾಮ ವಾಸ್ತವ್ಯ ಮುಂದುವರೆಯುವುದೆ?

ಕೆ.ಆರ್.ರಾಘವೇಂದ್ರ


ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಪೊನ್ನಸಮುದ್ರ ಗ್ರಾಮದಲ್ಲಿ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಗ್ರಾಮವಾಸ್ತವ್ಯ ಮಾಡುವ ಮೂಲಕ ಗ್ರಾಮಸ್ಥರ ನಾಡಿ ಹಿಡಿಯುವ ಕೆಲಸ ಮಾಡಿದ್ದಾರೆ.

ನಕ್ಸಲ್ ಪೀಡಿತ ಹಾಗೂ ಗಡಿ ತಾಲ್ಲೂಕಿನ ಗ್ರಾಮದಲ್ಲಿ ವಾಸ್ತವ್ಯ ಮಾಡುವುದರೊಂದಿಗೆ ಪೊಲೀಸ್ ಅಧಿಕಾರಿಗಳು ಜನರ ಮಧ್ಯೆ ಇದ್ದು ಅವರ ಮನಸ್ಸನ್ನು ಅರಿಯಬೇಕು. ಸಾರ್ವಜನಿಕರೊಡನೆ ಇದ್ದುಕೊಂಡು ಪೊಲೀಸ್ ಇಲಾಖೆ ಜನ ಸ್ನೇಹಿ ಎಂಬುದನ್ನು ಮನದಟ್ಟು ಮಾಡಬೇಕು ಎಂಬ ಸಂದೇಶವನ್ನು ನೀಡ ಹೊರಟಿರುವುದರ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಇಲಾಖೆಯ ಡಿವೈ ಎಸ್ ಪಿ, ಸರ್ಕಲ್ ಇನ್ ಸ್ಪೆಕ್ಟರ್ ಪ್ರತಿ 15 ದಿನಕ್ಕೊಮ್ಮೆ ಗ್ರಾಮ ವಾಸ್ತವ್ಯ ಮಾಡಿ ಗ್ರಾಮಗಳ ಸಮಸ್ಯೆ ಬಗೆಹರಿಸಿ ಇಲಾಖೆ ಅಪರಾಧಗಳನ್ನು ತಡೆಯುವುದರ ಜೊತೆಗೆ ಗ್ರಾಮಗಳ ಹಾಗೂ ಜನ ಸಾಮಾನ್ಯರ ಸಮಸ್ಯೆ ಪರಿಹರಿಸುತ್ತದೆ ಎಂಬ ಆಶಾಕಿರಣವನ್ನು ಜನಮಾನಸದೊಳಗೆ ಮೂಡಿಸುವ ಕೆಲಸವಾಗಬೇಕು ಎಂಬ ಇಂಗಿತವನ್ನು ಜನತೆ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿಯೊಬ್ಬ ಅಧಿಕಾರಿ ವರ್ಷಕ್ಕೆ 24 ಗ್ರಾಮಗಳಲ್ಲಿ ವಾಸ್ತವ್ಯ ಮಾಡಿ ಅಕ್ರಮ ಚಟುವಟಿಕೆಗಳಿಗೆ ಶಾಶ್ವತವಾಗಿ ಕಡಿವಾಣ ಹಾಕುವ ಕೆಲಸ ಮಾಡಿದಲ್ಲಿ ಉತ್ತಮ ವಾತಾವರಣ ಮೂಡಿಸಬಹುದು.

ಎಸ್.ಪಿ. ಡಾ.ಕೆ.ವಂಶಿಕೃಷ್ಣ ಅವರ ಗ್ರಾಮ ವಾಸ್ತವ್ಯ ಸಮುದಾಯದೆಡೆಗೆ ಪೊಲೀಸರು ಎಂಬ ಹೊಸ ಕಾರ್ಯಕ್ರಮಕ್ಕೆ ನಾಂಧಿ ಹಾಕಿಕೊಟ್ಟಿದೆ. ತಾಲ್ಲೂಕು, ಉಪ ವಿಭಾಗ ಮಟ್ಟದ ಅಧಿಕಾರಿಗಳು ಇದನ್ನು ಕಾರ್ಯಗತಗೊಳಿಸುತ್ತಾರೆಯೇ ಕಾದು ನೋಡಬೇಕಿದೆ.
ಪಾವಗಡ ತಾಲ್ಲೂಕಿನ ಪೊನ್ನ ಸಮುದ್ರ ಗ್ರಾಮದಲ್ಲಿ ಒಂದು ದಿನ ವಾಸ್ತವ್ಯ ಹೂಡಿದ ಎಸ್ ಪಿ ಅವರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡಿದ್ದಾರೆ.

ಸಿಬ್ಬಂದಿಯೊಂದಿಗೆ ಗ್ರಾಮವನ್ನು ಸುತ್ತಾಡಿ ಹೆಲ್ಮೆಟ್ ಧರಿಸದೆ ಪ್ರಯಾಣಿಸುತ್ತಿದ್ದ ವಾಹನ ಸವಾರರನ್ನು ತಡೆದು, ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸದಾ ಜೊತೆಯಲ್ಲಿಟ್ಟುಕೊಂಡಿರಬೇಕು. ವಾಹನ ವಿಮೆ ಮಾಡಿಸಬೇಕು ಎಂದು ಜನರಲ್ಲಿ ಜಾಗೃತಿ ಮಾಡಿಸಿದ್ದಾರೆ. ಗ್ರಾಮಸಭೆ ನಡೆಸಿ ಗ್ರಾಮಸ್ಥರಿಂದ ಅಹವಾಲುಗಳನ್ನು ಸ್ವೀಕರಿಸಿದ್ದಾರೆ.

ತಾಯಿ, ಅಜ್ಜಿಯ ಮರಣದಿಂದ 7 ವರ್ಷದ ಬಾಲಕಿ ರೂಪ ಅನಾಥವಾಗಿದ್ದಾಳೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ ಕೂಡಲೇ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮಗುವಿನ ರಕ್ಷಣೆ ಮಾಡುವಂತೆ ಪೊಲೀಸ್ ವರಿಷ್ಠಾಧಿಕಾರಿ ತಿಳಿಸುವ ಮೂಲಕ ಗ್ರಾಮಸ್ಥರ ಮನ ಗೆದ್ದಿದ್ದಾರೆ.
ಗ್ರಾಮ ಸಭೆಯಲ್ಲಿ ಮಾತನಾಡಿ, ಗ್ರಾಮದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ನಡೆಯುವ ಮಾಹಿತಿ ಇದ್ದರೆ ತಕ್ಷಣ ಪೋಲೀಸರಿಗೆ ತಿಳಿಸಬೇಕು. ಕಾನೂನಿಗೆ ಗೌರವ ಕೊಡಬೇಕು. ಪ್ರತಿಯೊಬ್ಬರು ಕಾನೂನು ಪಾಲಿಸಿದಾಗ ಮಾತ್ರ ಅಪರಾಧಗಳು ಕಡಿಮೆಯಾಗುತ್ತವೆ ಎಂದು ಗ್ರಾಮಸ್ಥರಲ್ಲಿ ಕಾನೂನಿನ ಬಗ್ಗೆ ಗೌರವ ಮೂಡಿಸುವ ಕೆಲಸ ಮಾಡಿದರು.

ಪೊಲೀಸ್ ಸಿಬ್ಬಂದಿ ಗ್ರಾಮಕ್ಕೆ ಬೀಟ್ ಬಂದಾಗ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ಮಾತನಾಡಿ ಸಮಸ್ಯೆಗಳನ್ನು ತಿಳಿದುಕೊಳ್ಳಬೇಕು. ಗಲಭೆ ಹಾಗು ಅಕ್ರಮ ಚಟುವಟಿಕೆಗಳು ನಡೆಯದಂತೆ ಎಚ್ಚರಿಕೆಯಿಂದಿರಬೇಕು ಎಂದು ಸಿಬ್ಬಂದಿಗೆ ಎಸ್.ಪಿ ತಮ್ಮದೇ ಶೈಲಿಯಲ್ಲಿ ಒಂದು ಕ್ಲಾಸ್ ತೆಗೆದುಕೊಂಡಿದ್ದು ಗ್ರಾಮಸ್ಥರನ್ನು ಸೂಜಿಗಲ್ಲಿನಂತೆ ಆಕರ್ಷಿಸಿತು.
ಗ್ರಾಮ ವಾಸ್ತವ್ಯಕ್ಕಾಗಿ ಗ್ರಾಮ ಪಂಚಾಯಿತಿ ಸಿಬ್ಬಂದಿ 15 ಸಾವಿರ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿದ್ದರು. ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ನೆಲದ ಮೇಲೆ ಕುಳಿತು ಎಸ್.ಪಿ ಅವರು ಬಾಳೆ ಎಲೆಯಲ್ಲಿ ಊಟ ಸೇವಿಸಿದರು.

ಇವರ ಸರಳತೆ, ಎಲ್ಲರ ಸಮಸ್ಯೆಗೆ ಸ್ಪಂದಿಸುವ ಮನಸ್ಥಿತಿ, ಸ್ವಾಸ್ಥ್ಯ ಸಮಾಜ ನಿರ್ಮಿಸಬೇಕೆಂಬ ಬಯಕೆ ಇತರೆ ಅಧಿಕಾರಿಗಳು ಕಲಿತುಕೊಳ್ಳಬೇಕು. ಗ್ರಾಮ ವಾಸ್ತವ್ಯದ ಚಿಂತನೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಾತ್ರ ಸೀಮಿತವಾಗುತ್ತದೆಯೇ ಅಥವಾ ಇತರೆ ಅಧಿಕಾರಿಗಳು ಅನುಸರಿಸುತ್ತಾರೆಯೆ ಎಂಬುದನ್ನು ಜನರು ಕಾತುರ, ಕೌತುಕದಿಂದ ಎದುರು ನೋಡುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?