Thursday, June 20, 2024
Google search engine
Homeಜನಮನಬಾಬಾ ಸಾಹೇಬ್ ಅಂಬೇಡ್ಕರರ ದೃಷ್ಟಿಯಲ್ಲಿ ಆದರ್ಶ ಭಾರತ

ಬಾಬಾ ಸಾಹೇಬ್ ಅಂಬೇಡ್ಕರರ ದೃಷ್ಟಿಯಲ್ಲಿ ಆದರ್ಶ ಭಾರತ

ಇಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ‌ದಿನ.‌ ಈ ಪ್ರಯುಕ್ತ ಈ ವಿಶೇಷ ಬರಹವನ್ನು ಮಂಜುನಾಥ್ ಬರೆದಿದ್ದಾರೆ.


ಇಡೀ ವಿಶ್ವದಾದ್ಯಂತ ಅತೀ ಹೆಚ್ಚು ಪ್ರತಿಮೆಗಳನ್ನ ಹೊಂದಿರುವಂತಹ, ವಿಶ್ವದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನಶೀಲ ವ್ಯಕ್ತಿಯಾಗಿ ಉಳಿದುಕೊಂಡ ಜಗತ್ತಿನ ಏಕಮಾತ್ರ ವ್ಯಕ್ತಿ, ಶಕ್ತಿ ಎಂದರೇ ಅದು ಡಾ. ಬಿ.ಆರ್. ಅಂಬೇಡ್ಕರ್.

ವಿಶ್ವದ ಜನ ಬಾಬಾ ಸಾಹೇಬರ ಜ್ಞಾನ, ಆದರ್ಶ ಜೀವನವನ್ನು ಅನುಸರಿಸಿ ಗೌರವಿಸಿದರು. ಆದರೆ,
ಭಾರತದಲ್ಲೊಂದಷ್ಟು ಭಿನ್ನ, ಯಾಕೆಂದರೆ ಇಲ್ಲಿಯವರೆಗೂ ಈ ದೇಶ ಬಾಬಾ ಸಾಹೇಬರನ್ನು ಅವರಲ್ಲಿದ್ದಂತ ಜ್ಞಾನ, ಆದರ್ಶ ಗುಣಗಳಿಂದ ನೋಡಲಿಲ್ಲ, ಬರೀ ಜಾತಿ ಎಂಬ ಪೊರೆ ಬಂದಿರುವ ಕಣ್ಣಿನಿಂದಲೇ ನೋಡಿದೆ. ನೈಜ ಬಾಬಾ ಸಾಹೇಬರ ಚಿಂತನೆಗಳನ್ನ ನೋಡಬೇಕಾದರೆ, ಅರ್ಥೈಸಿಕೊಳ್ಳಬೇಕಾದರೆ ಜಾತಿಯತೆಯ ಕಣ್ಣಿನ ಪೊರೆ ಕಳಚಿದಾಗಷ್ಟೇ ಸಾಧ್ಯ.

ಭಾರತದಾದ್ಯಂತ ಬಹುತೇಕ ಪ್ರದೇಶಗಳಲ್ಲಿ ಬಲಗೈ ತೋರ್ಬೆರಳು ಮಾರ್ಗದರ್ಶಕರಾಗಿ, ಎಡಗೈನಲ್ಲಿ ಸಂವಿಧಾನ ಹಿಡಿದು ಕೊಂಡಿರುವ ಅಂಬೇಡ್ಕರ್ ಪ್ರತಿಮೆಗಳು ಕಾಣಸಿಗುತ್ತವೆ.. ಅದರಲ್ಲೂ ಎರಡು ಪ್ರಮುಖ ಜಾಗದಲ್ಲಿ ಇದ್ದೆ ಇರುತ್ತವೆ.

೧. ಶಾಸಕಾಂಗ ಭವನ/ ಸರ್ಕಾರಿ ಕಚೇ ಮುಂದೆ
೨. ಶೋಷಿತರ ಕೇರಿಗಳಲ್ಲಿ,

ಈ ಎರಡು ಪ್ರದೇಶದ ಭೌಗೋಳಿಕ ವಿವರ ಸಾರ್ವಜನಿಕ ವಲಯದಲ್ಲಿ ಅಂಬೇಡ್ಕರ್ ಬಗೆಗಿನ ಗ್ರಹಿತಗಳನ್ನ ಹೇಳುತ್ತವೆ.
ಮೊದಲನೇ ವರ್ಗದ ಪ್ರಕಾರ ಬಾಬಾ ಸಾಹೇಬರನ್ನ ಗೌರವಿಸಲು ಒಂದೇ ಒಂದು ಕಾರಣ ಸಂವಿಧಾನ ಕತೃು ಮತ್ತು ಇತಿಹಾಸ ಪುರುಷ.

ಎರಡನೇ ವರ್ಗದ ಜನರು ಗೌರವಿಸಲು ಹುಟ್ಟಿನಿಂದಲೇ ಅಸ್ಪೃಷ್ಯತೆ ಆಚರಿಸಬೇಕಾದ ಕೊಳಕನ್ನ ಕಿತ್ತೊಗೆದ, ಬಹುಜನ ವಿಮೋಚನಕಾರ, ಸಾಮಾಜಿಕ ಸಮಾನತೆಯನ್ನು ಶಾಸನಬದ್ಧಗೊಳಿಸಿದ ಮಹಾನ್ ಕ್ರಾಂತಿಕಾರಿ ಎಂಬ ವಿಷಯದಿಂದ. ಇವೆರಡರ ನಡುವಿನ ವರ್ಗದ ಜನರಿಗೆ ಬಾಬಾ ಸಾಹೇಬರ ಬಗ್ಗೆ ಸಂಪೂರ್ಷ ಅರಿವಿಲ್ಲದಂತಾಗಿರುವುದೇ ವಿಪರ್ಯಾಸ.

ಅಂಬೇಡ್ಕರ್ ಎಂದರೆ ಅಸ್ಪೃಶ್ಯರ ಏಳ್ಗೆಯ ಹರಿಕಾರ ಮಾತ್ರ ಆಗಿರಲಿಲ್ಲ. ಶತಶತಮಾನಗಳ ಸ್ವಾಭಾವಿಕ ಜಾತಿಯ ಅಸಮಾನತೆ, ಅದೇ ನೆಪದಲ್ಲಿ ಮನುಷ್ಯರನ್ನು ಪ್ರಾಣಿಗಳಂತೆ ಕಾಣುತ್ತಿದ್ದ ವ್ಯವಸ್ಥೆ, ಶ್ರೇಣಿಕೃತ ಅಸಮಾನತೆಗಳ ಆಚರಣೆಯನ್ನು ವಿರೋಧಿಸುತ್ತಲೇ ತಮ್ಮ ಅಪಾರವಾದ, ಸಂಶೋಧನಾತ್ಮಕ ಅಧ್ಯಯನದಿಂದ ಭವಿಷ್ಯ ಭಾರತದ ಕನಸು ಕಂಡು, ದೇಶದಲ್ಲಿ ಸಮಸಮಾಜಕ್ಕೆ ಸಾಮಾಜಿಕ ನ್ಯಾಯ ವಿಧಾನವೊಂದು ಪರಿಹಾರ ಎಂದು ಭಾವಿಸಿ. ದೇಶವನ್ನು ಸರಿಯಾದ ದಿಕ್ಕು ದಿಸೆಯಲ್ಲಿ ಸಾಗುವಂತೆ ನಿರ್ದೇಶಿಸಿದ ಮಹಾನ್ ಸಂತ.

ಸಾಮಾಜಿಕ ನ್ಯಾಯವನ್ನು ನಿರ್ವಚಿಸಿ ಅದರರ್ಥವನು ಎಳೆಎಳೆಯಾಗಿ ವಿಶ್ವಕ್ಕೆ ಅದರಲ್ಲೂ ಭಾರತದಂತಹ ಅಸಮಾನತೆಯ ಆಗರದ ವ್ಯವಸ್ಥೆಗೆ ತಿಳಿಸಿದ ಭಾರತದ ಶ್ರೇಷ್ಟ ಮೇಧಾವಿ ಮತ್ತು ಮಾರ್ಗದರ್ಶಕ.

ಬಾಬಾ ಸಾಹೇಬರ ಸಾಮಾಜಿಕ ನ್ಯಾಯವನ್ನು ವಿಶ್ವವೇ ಒಪ್ಪಿತು. ಭಾರತ ಸರ್ಕಾರ ಕೂಡಾ ಬಾಬಾ ಸಾಹೇಬರ ಜನ್ಮಶತಮಾನೋತ್ಸವದ ಅಂಗವಾಗಿ 14-04-1990 ರಿಂದ 14-04-1991 ರವರೆಗೆ ಸಾಮಾಜಿಕ ನ್ಯಾಯದ ವರ್ಷವೆಂದೇ ಆಚರಿಸಿತು.

ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೂ ಸಾಮಾಜಿಕ ನ್ಯಾಯ ಬೇಕೆಂದು ಕೇಳುವುದು ಅವರ ಅಧಿಕಾರ ಮತ್ತು ಹಕ್ಕು. ಸರ್ಕಾರಗಳು ಕೂಡಾ ನೀಡುವುದು ತಮ್ಮ ಆದ್ಯ ಕರ್ತವ್ಯಗಳಾಗಬೇಕು. ಈ ನೆಲದ ಮಣ್ಣಲ್ಲಿ ನೆಲೆಗೊಂಡಿದ್ದ ಅಸಮಾನತೆಗಳ ದುರಾಚಾರಗಳನ್ನ ನಾಶಮಾಡಬೇಕೆಂಬ ಆಶಯದಿಂದ ಉಂಟಾದ “ಜಾಗೃತಿ” ಯೇ ಸಾಮಾಜಿಕ ನ್ಯಾಯ.

ಬಾಬಾ ಸಾಹೇಬರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ, ಜಾಗೃತಿ ಮೂಡಿಸಿದ ಕಾಲವನ್ನ, “ಸಾಮಾಜಿಕ ನ್ಯಾಯ ಶಕೆ” ಎಂದೇ‌ ಹೇಳುತ್ತಾರೆ. ಈ ಸಾಮಾಜಿಕ ನ್ಯಾಯ ಶಕೆಯನ್ನು “ಅಂಬೇಡ್ಕರ್ ಶಕೆ” ಎಂದೇ ಕರೆಯಬಹುದು.

ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಅಸಮಾನತೆಗಳಿರದ ಸಮ ಸಮಾಜದ ನಿರ್ಮಾಣವೇ ನಮ್ಮಗಳ ಜವಾಬ್ದಾರಿಯಾಗಬೇಕು, ಜಾತಿ, ಕುಲ, ಪಂಥ, ಲಿಂಗಭೇದ, ಸಂಪನ್ನತೆ, ಸಾಮಾಜಿಕ ಅಂತಸ್ತು, ರಾಜಕೀಯ ಪ್ರಭಾವದಿಂದಲೂ ಅಸಮಾನತೆ ಸೃಷ್ಟಿಯಾಗಬಾರದೆಂದು ಅಭಿಪ್ರಾಯಪಟ್ಟವರು.

ಬಾಬಾ ಸಾಹೇಬರು ಆರ್ಥಿಕ, ಸಾಮಾಜಿಕ, ರಾಜಕೀಯ ಸಂಬಂಧವಾದ “ನ್ಯಾಯ” ಎಂಬುದು ಜೀವನಕ್ರಮಗಳಲ್ಲಿರುವ ಎಲ್ಲಾ ಕ್ಷೇತ್ರದಲ್ಲೂ ಅನುಸರಿಸಬೇಕಾದದ್ದು ನ್ಯಾಯ ಸಮ್ಮತವೆಂದು ಅಭಿಪ್ರಾಯಪಟ್ಟವರು.

ಮೊದಲು ಸಾಮಾಜಿಕ ನ್ಯಾಯ, ನಂತರ ಆರ್ಥಿಕ ನ್ಯಾಯ, ಕೊನೆಯದಾಗಿ ರಾಜಕೀಯ ನ್ಯಾಯಕ್ಕೆ ಪ್ರಧಾನ್ಯತೆ ನೀಡುತ್ತಿದ್ದರು.

ಬಾಬಾ ಸಾಹೇಬರ ದೃಷ್ಟಿಯಲ್ಲಿ ಸಾಮಾಜಿಕ ನ್ಯಾಯ ಎಂದರೇ ಸಾಮಾಜಿಕ ಸಮಾನತೆ, ಆರ್ಥಿಕ ನ್ಯಾಯ ಎಂದರೇ ಆರ್ಥಿಕ ಸಮಾನತೆ, ರಾಜಕೀಯ ನ್ಯಾಯ ಎಂದರೇ ರಾಜಕೀಯ ಸಮಾನತೆ.

ಅಸಮಾನತೆ & ತಾರತಮ್ಯ ಯಾವ ವಲಯದಲ್ಲಾಗಲಿ, ಯಾವ ರೂಪದಲ್ಲಿ ಅಸ್ತಿತ್ವ ಹೊಂದಿದ್ದರೂ ಅದು ಸಮ ಸಮಾಜದ ನೈತಿಕ ಸೂತ್ರಗಳಿಗೆ & ಮಾನವ ಗೌರವಗಳಿಗೆ ಧಕ್ಕೆ ತರುವಂತದ್ದು ಎಂದು ದೃಢವಾಗಿ ಪ್ರತಿಪಾದಿಸುತ್ತಿದ್ದರು.

ನೈತಿಕವಾದ ನ್ಯಾಯಬದ್ಧವಾದ ಸಮಾಜದ ಬುನಾದಿಯನ್ನ ಅಲುಗಾಡಿಸುವ ಜಾತಿ ಆಧಾರಿತ ಅಸಮಾನತೆಗಳು, ದುರದೃಷ್ಚವಶಾತ್ ಆದರ್ಶಯುತ ಸಾಮಾಜಿಕ ಸಂಬಂಧ ಗಳಾಗಿ ಏರ್ಪಟ್ಟಿದೆ.
ಇಂತಹ ಅನಚಾರದ ಸ್ಥಿತಿಗಳನ್ನ ಸವಾಲಾಗಿ ಎದುರಿಸುವುದಕ್ಕಾಗೇ ಒಂದು ಸದುದ್ದೇಷದಿಂದ ರೂಪಿಸಲಾಗಿರುವುದೇ ಅಂಬೇಡ್ಕರ್ ರವರ ಸಾಮಾಜಿಕ ನ್ಯಾಯ.

ಸಾಮಾಜಿಕವಾಗಿ ಮೇಲ್ವರ್ಗದ ಜಾತಿಗಳು ಗೌರವಾರ್ಹತೆಗಳಿಂದಲೂ, ಕೆಳಜಾತಿ/ ತಳಸಮುದಾಯಗಳು ಅವಮಾನಕರ ಭಾವಕ್ಕೂ, ಗುರಿಯಾಗಿರುವುದು ಭಾರತೀಯ ಸಾಮಾಜಿಕ ಸ್ಥಿತಿ. ಇಂತಹ ವ್ಯವಸ್ಥೆ ಪ್ರಜಾಪ್ರಭುತ್ವ ವಿಧಾನಕ್ಕೆ, ಸಮಾನತೆ, ಸೌಭ್ರಾತೃತ್ವದಂತಹ ಭಾವನೆಗಳ ಬೆಳವಣೆಗೆಗೆ ಅವಕಾಶವೇ ಇಲ್ಲದಂತೇ ಮಾಡುತ್ತದೆ.

ಇನ್ನೂ ಆರ್ಥಿಕವಾಗಿ ಬಲಾಢ್ಯರಾದ ಈ ಸಮಾಜದಲ್ಲಿ ದೇಶದ ಪರವಾಗಿ ಮಾತಾಡುವುದು, ಸ್ವಾತಂತ್ರ್ಯಕ್ಕಾಗಿ ರಾಜಕೀಯ ಚಳುವಳಿ ರೂಪಿಸುತ್ತಿದ್ದರೂ ಆರ್ಥಿಕವಾಗಿ ಬಲಹೀನರನ್ನು ಸಂಕುಚಿತಭಾವದಿಂದ ನೋಡುವುದನ್ನ ಬಿಟ್ಟಿಲ್ಲ.

ಈ ಮೇಲ್ಕಂಡ ಕಾರಣದಿಂದಲೇ ದುಂಡುಮೇಜಿನ ಪರಿಷತ್ ನಲ್ಲಿ “ರಾಜಕೀಯ ಯಂತ್ರಾಂಗ” ಸಮಾಜದ ಮನೋಭಾವನೆಗಳನ್ನು ತೆಗೆದುಕೊಂಡು ಸಮಾಜದ ಜೊತೆ ನೇರವಾಗಿ ಸಂಬಂಧ ಹೊಂದಿರಬೇಕೆಂದು ತಾವು ಆಶಿಸಿದ ಹಾಗೇಯೆ “ರಾಜಕೀಯ ನ್ಯಾಯ” ಕುರಿತಾಗಿ ಒತ್ತಡ ತಂದರು.

ಬಾಬಾ ಸಾಹೇಬರ ದೃಷ್ಟಿಯಲ್ಲಿ ಸಾಮಾಜಿಕ ನ್ಯಾಯತತ್ವ 3 ನ್ಯಾಯಗಳ ಸಮಗ್ರತೆಯಿಂದ ಕೂಡಿದೆ.
1. ಸ್ವಾತಂತ್ರ್ಯ
2. ಸಮಾನತೆ
3. ಭಾತೃತ್ವ

ಈ ಅಂಶಗಳ ಆಧಾರದ ಮೇಲೆ ರೂಪಿತವಾದ ಆರ್ಥಿಕ, ಸಾಮಾಜಿಕ, ರಾಜಕೀಯ ಸಂಬಂಧ ನ್ಯಾಯಯುತವಾದದ್ದು.

ಸ್ವಾತಂತ್ರ್ಯ, ಸಮಾನತೆ, ಭಾತೃತ್ವ ಒಂದರ ಮೇಲೊಂದು ಅವಲಂಭಿತವಾದದ್ದು, ಇವುಗಳನ್ನು ಭಿನ್ನ ಅಂಶಗಳಾಗಿ ಕಾಣಬಾರದು. 3 ಅಂಶಗಳು ಒಟ್ಟಾಗಿ ಏರ್ಪಟ್ಟಿವೆ. ಒಟ್ಟಾಗಿಯೇ ಇರಲು ಬಿಡಬೇಕು. ಒಂದನ್ನೊಂದು ಬೇರ್ಪಡಿಸಲಾಗದು.

ಬೇರ್ಪಡಿಸುವ ದೃಷ್ಚಿಯಲ್ಲಿ ನೋಡಿದರೇ ಪ್ರಜಾಪ್ರಭುತ್ವಕ್ಕೆ ಸೋಲಾಗುವುದೆಂಬ ಖಚಿತ ಎಚ್ಚರಿಕೆ ನೀಡುತ್ತಾರೆ.

ಸಮಾನತೆ ಇಲ್ಲದ ಬಹು ಸಂಖ್ಯಾತರ ಸ್ವಾತಂತ್ರ್ಯ ಕೇವಲ ಕೆಲವೇ ಮಂದಿಗೆ ಆದ್ಯತೆ ನೀಡುತ್ತದೆ.

ಸ್ವಾತಂತ್ರ್ಯವಿಲ್ಲದ ಸಮಾನತೆ ಎಂಬುದು ವ್ಯಕ್ತಿ ಸ್ವಾತಂತ್ರ್ಯವನ್ನು ನಾಶ ಮಾಡುತ್ತದೆ.
ಭಾತೃತ್ವ ಇಲ್ಲದ ಸ್ವಾತಂತ್ರ್ಯ & ಸಮಾನತೆಗಳು ಅರ್ಥಹೀನ ಮತ್ತು ಅಸಂಪೂರ್ಣವೆಂಬ ವಾದ ಮುಂದಿಡುತ್ತಾರೆ.

ಈ ಎಲ್ಲಾ ಕಾರಣಗಳಿಂದಲೇ ನಾವು ಕೇವಲ ರಾಜಕೀಯ ಸಮಾನತೆಯನ್ನು ಮಾತ್ರವೇ ಹೊಂದಿರಬಾರದು, ಸಾಮಾಜಿಕ, ಆರ್ಥಿಕ ಬುನಾದಿಗಳಿಲ್ಲದ ರಾಜಕೀಯ ಸಮಾನತೆ ಇರಲು ಸಾಧ್ಯವೇ ಇಲ್ಲಾ ಎಂಬುದೇ ಅವರ ದೃಢ ನಿರ್ಧಾರವಾಗಿತ್ತು.

ಹಾಗಾಗಿ ಬಾಬಾ ಸಾಹೇಬರು ಧರ್ಮ, ಸಮಾಜ & ಸರ್ಕಾರಗಳನ್ನ ಈ ಮೂರು ಮಾನದಂಡಗಳ ಮೇಲೆ ನಿರ್ಧರಿಸಿ, ಈ ಸೂತ್ರಗಳಿಂದಲೇ ಪರೀಕ್ಷಿಸಿದರು.
ಸ್ವಾತಂತ್ರ್ಯ, ಸಮಾನತೆ, ಭಾತೃತ್ವ ಗಳಿಗೆ ಬೆಂಬಲವಾಗಿ ನಿಲ್ಲದ ಆದರ್ಶ & ಸಿದ್ಧಾಂತವನ್ನು ತೀವ್ರವಾಗಿ ಖಂಡಿಸಿದರು.

ದೇಶದಲ್ಲಿ ಜಾತಿವ್ಯವಸ್ಥೆ ಯಿಂದಾಗಿರುವ ತಾರತಮ್ಯ & ಅಸಮಾನತೆಗಳನ್ನ ಪ್ರೊತ್ಸಾಹಿಸುವ / ಪೋಷಿಸುವ/ ಅನುಸರಿಸುವ ಯುಕ್ತವಲ್ಲದ ಸಿದ್ಧಾಂತಗಳೊಂದಿಗೆ ತನ್ನ ಸೂತ್ರಗಳನ್ನು ರಾಜಿಗೊಳಿಸಿಕೊಳ್ಳಲಿಲ್ಲ, ಭಾರತದೇಶದ ಶ್ರೇಣಿಕೃತ ಸ್ಥಿತಿಕಂಡು ಬಾಬಾ ಸಾಹೇಬರು ಹೀಗೇಳುತ್ತಾರೆ.

“ನಾನು ದೇಶದ ಲೋಪಗಳನ್ನು ಸರಿಪಡಿಸಲು ಸಿದ್ಧನಿದ್ದೇನೆ. ಕಾರಣ ಸಮಾಜ ಅಸಮಾನತೆಯಿಂದ ಕೂಡಿದೆ ಎಂದು ಭಾವಿಸಿದ್ದೇನೆ. ಯುಕ್ತವಲ್ಲದ ಆದರ್ಶಗಳನ್ನ ಪೋಷಿಸಿ ಪಾಲಿಸುವ ಸಮಾಜದಲ್ಲಿ ಜೀವಿಸುವುದಕ್ಕೆ ನಾನು ಸಿದ್ದನಿಲ್ಲ. ಸ್ವಾತಂತ್ರ್ಯ, ಸಮಾನತೆ, ಭಾತೃತ್ವದ ಆಧಾರದ ಮೇಲಿರುವ ಸಮಾಜವೇ ನನ್ನ ಆದರ್ಶ ಸಮಾಜವಾಗಿರುತ್ತದೆ”.

ಒಂದು ಆದರ್ಶ ಸಮಾಜವೆಂಬುದು ಒಂದು ಪ್ರದೇಶದಲ್ಲಿ ಜಾಗೃತಿಯಿಂದ ಪಡೆಯಲಾದ ಬದಲಾವಣೆಯನ್ನು ಇತರ ಪ್ರದೇಶಗಳಿಗೂ ಕೂಡ ವಿಸ್ತರಿಸುವ ಮಾರ್ಗಗಳಿಂದ ಕೂಡಿರಬೇಕು. ತಾನು ಪಡೆದಂತಹ ಪ್ರಯೋಜನಗಳನ್ನು ನಿಷ್ಕಪಟವಾಗಿ, ಪಾರದರ್ಶಕವಾಗಿ ಎಲ್ಲರ ಪಾಲನ್ನು ಸಮವಾಗಿ ಹಂಚುವ ವಿಧವಾಗಿರಬೇಕು. ಒಂದು ಆದರ್ಶ ಸಮಾಜ ಈ ರೀತಿಯಲ ಅನೇಕ ಮಾರ್ಗಗಳನ್ನು ಹೊಂದಿರಬೇಕು.

ಈಗಾದಗಷ್ಟೇ ಆದರ್ಶ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ.
ಆದರ್ಶ ಸಮಾಜದಲ್ಲಿ “ಸಾಮಾಜಿಕ ಮನಸ್ಸಾಕ್ಷಿ” ಬಹುಮುಖ್ಯವಾದದ್ದು, ಇದಿಲ್ಲದೇ ಹೋದರೆ ಯಾವ ಆದರ್ಶ ಸಮಾಜ ಕೂಡಾ ಭೂಮಿ ಮೇಲಿರಲು ಸಾಧ್ಯವಿಲ್ಲ, ಸಾಮಾಜಿಕ ಮನಸ್ಸಾಕ್ಷಿ ಇಲ್ಲದಿದ್ದರೇ ಇತರೇ ಸಮಾಜಮಾರಕ ಶಕ್ತಿಗಳು ಪ್ರತಿಕೂಲವಾಗಿ ಕೆಲಸ ಮಾಡುತ್ತವೆ & ಸಮಾಜಕ್ಕೆ ಇವೇ ಮಾರಕವಾಗುತ್ತವೆ.

ಭೂಮಿಯ ಮೇಲಿರುವ ಅಕ್ರಮ/ ಸಮಾಜಘಾತುಕ/ ಅನೈತಿಕವಾದ ಆದರ್ಶಗಳಿಗೆ ಯಾವುದೇ ಕಾರಣಕ್ಕೂ ಸಾಮಾಜಿಕ ಮನಸ್ಸಾಕ್ಷಿ ಇರಲಾರದು & ಸಾಮಾಜಿಕ ಮನಸ್ಸಾಕ್ಷಿ ಗಷ್ಟೆ ಇಂತಹ ಅನಿಷ್ಟ ಆದರ್ಶಗಳನ್ನೆದುರಿಸಿ ನಿಲ್ಲುವ ಶಕ್ತಿ ಇರುತ್ತದೆ.

ಸಾಮಾಜಿಕ ಮನಸ್ಸಾಕ್ಷಿ ಯಾವಾಗಲೂ ಸಾಮಾಜಿಕನ್ಯಾಯ, ಶಾಂತಿ, ಪ್ರಗತಿಗಾಗಿ ಹೋರಾಡುತ್ತಲೇ ಇರುತ್ತದೆ. ಮಾನವ ಸಂಭಂಧಗಳಲ್ಲಿ ಸ್ವಾತಂತ್ರ್ಯ, ಸಮಾನತೆ ತರುವ ಅತ್ಯಂತ ತೀಕ್ಷ್ಣ ಮತ್ತು ಪ್ರಖರ ಆಯುಧಗಳಾಗಿ ನಿಲ್ಲುತ್ತವೆ.
ಆದರ್ಶ ಸಮಾಜವೆಂಬುದು ಪ್ರಧಾನವಾಗಿ ಅಭಿವೃದ್ಧಿ, ಪ್ರಜಾಪ್ರಭುತ್ವ ಕಲ್ಪನೆಯಿಂದಕೂಡಿದ್ದು ಆಡಳಿತಗಾರರು ಸಾಮಾನ್ಯರ ಮೇಲೆ ಹೇರುವ ಆಧಿಪತ್ಯವನ್ನು ತಿದ್ದಿ ತೀಡುವ ಶೋಷಣೆಮುಕ್ತ ಸಮಾಜ ನಿರ್ಮಿಸುವ ಕೆಲಸ ನಿರ್ವಹಿಸುವುದರಲ್ಲಿ ಸಂದೇಹವಿಲ್ಲಾ ಎಂದೇಳುತ್ತಾರೆ.

ಈ ಎಲ್ಲಾ ಚಿಂತನೆಗಳನ್ನ ತನ್ನ ಆಳವಾದ, ಸಂಶೋಧನಾತ್ಮಕ ಅಧ್ಯಯನದಿಂದ ಅಸಮಾನತೆಮುಕ್ತ ಭವಿಷ್ಯ ಭಾರತದ ನಿರ್ಮಾಣಕ್ಕೆ ಬಾಬಾ ಸಾಹೇಬರು ಅಡಿಗಲ್ಲಾಕಿದರು.

ಬಾಬಾ ಸಾಹೇಬರ ಸಾಮಾಜಿಕ ನ್ಯಾಯ ಕಪೋಲಕಲ್ಪಿತವಾದದ್ದಲ್ಲಾ. ಅದು ಸೈದ್ಧಾಂತಿಕವಾದದ್ದು, ನ್ಯಾಯಯುತವಾದದ್ದು, ಇಂತಹ ಮಾರ್ಗದರ್ಶನವನ್ನು/ ಚಿಂತನೆಗಳನ್ನು ಸರ್ಕಾರ ಜಾರಿಗೆ ತರಲು ಸಾಧ್ಯವಾಗುವ ವಿಧಾನ, ಸಮಾಜವೂ ಕೂಡಾ ಅನುಸರಿಸಲು ಸಾಧ್ಯವಾಗುವ ವಿಧಾನ ಏಕೆಂದರೇ ಬಾಬಾ ಸಾಹೇಬರು ತನ್ನ ಹುಟ್ಟಿನಿಂದಿಡಿದು, ಬಾಲ್ಯ, ಶಿಕ್ಷಣ, ಹೋರಾಟ ಅಂತಿಮವಾಗಿ ಬೌದ್ಧ ಧಮ್ಮ ಸ್ವೀಕರಿಸುವವರೆಗಿನ ಶ್ರೇಣಿಕೃತ ಸಮಾಜದ ವ್ಯವಸ್ಥೆ, ಅಸಮಾನತೆ, ತಾರತಮ್ಯಗಳಿಂದ ತಮ್ಮ ಜೀವಿತಾವಧಿಯುದ್ದಕ್ಕೂ ಹೋರಾಡಿದ ಅನುಭವದಿಂದ್ದಾಗಿದ್ದೆ.

ಬಾಬಾ ಸಾಹೇಬರ ಆದರ್ಶ ಚಿಂತನೆಗಳನ್ನ ಯುವಜನತೆ, ಸರ್ಕಾರ, ಸಮಾಜ ಅನುಸರಿಸುವುದರಿಂದ & ಅನುಷ್ಠಾನಗೊಳಿಸುವುದರಿಂದಷ್ಟೆ ಭಯಮುಕ್ತ, ಶೋಷಣೆಮುಕ್ತ, ಜಾತಿಮುಕ್ತ, ಕೋಮುಮುಕ್ತ, ತಾರತಮ್ಯಮುಕ್ತ ಸಮಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ.

“ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವವಿಲ್ಲದೇ ರಾಜಕೀಯ ಪ್ರಭುತ್ವ ಅರ್ಥಹೀನ”.
ಎಂದು ಬಾಬಾ ಸಾಹೇಬರು ಯಾಕೆ ಹೇಳಿದರು..?
ಬಾಬಾ ಸಾಹೇಬರ ದೃಷ್ಟಿಯಲ್ಲಿ ಹೋರಾಟ ಎಂದರೇನು..?
ಹೋರಾಟ ಎಲ್ಲಿಗೆ ಬಂದು ನಿಂತಿದೆ. ಯಾವುದಕ್ಕಾಗಿ ಹೋರಾಡಬೇಕೆಂದು ಯುವಜನತೆ ಸಮಾಜ ತೀರ್ಮಾನಿಸಬೇಕಿದೆ..
ಸಾಮಾಜಿಕ ನ್ಯಾಯದಂತಹ ಒಂದು ಶ್ರೇಷ್ಟ ನ್ಯಾಯಯುತ ಸಮಾಜದ ಹುಟ್ಟಿಗೆ ಕಾರಣರಾದವರು ದೂರದೃಷ್ಟಿಯುಳ್ಳ, ಪ್ರಮಾಣಿಕತೆಯಿರುವ “ಶ್ರೇಷ್ಟ ಮಾರ್ಗಪ್ರವರ್ತಕ” ವಿಶ್ವ ಜ್ಞಾನಿ ಬಾಬಾ ಸಾಹೇಬ್ ಡಾ. ಭೀಮ್ ರಾವ್ ಅಂಬೇಡ್ಕರ್ ರವರು..
ಜೈ ಭೀಮ್


ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾದ ಮಂಜುನಾಥ್, ಮನಸ್ಸು ಮಾಡಿದ್ದರೆ ಸರ್ಕಾರಿ ಕೆಲಸಕ್ಕೆ ಸೇರಬಹುದಾಗಿತ್ತು. ಪ್ರಜ್ಞಾಪೂರ್ವಕವಾಗಿಯೇ ಅದರಿಂದ ದೂರ ಉಳಿದ ಅವರು ಸಮಾಜ ಸುಧಾರಣೆಯ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಅಂಬೇಡ್ಮರ್ ಕುರಿತು ಆಳ ಅಧ್ಯಯನಕಾರರು ಆಗಿರುವ ಅವರು, ಅಂಬೇಡ್ಕರ್ ಬರಹಗಳನ್ನು ದಲಿತೇತರರು ಓದುವಂತೆ ಮಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ಇದಕ್ಕಾಗಿ ಅವರದೇ ಒಂದು ಬಳಗ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ. ಇದು ಒಳ್ಳೆಯ ಪ್ರಭಾವ ಬೀರುತ್ತಿದೆ.

ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯರೂ ಆಗಿರುವ ಅವರು ಅನೇಕ ವಿದ್ಯಾರ್ಥಿ ಪರ ಹೋರಾಟಗಾರರು ಹೌದು.

RELATED ARTICLES

3 COMMENTS

  1. ಅಸ್ಪೃಶ್ಯತೆಯ ನೋವನ್ನು ಅನುಭವಿಸಿದ ಬಾಬಾ ಸಾಹೇಬ್ ಅಂಬಡ್ಕರ್ ರವರು ಜ್ಞಾನಾರ್ಜನೆಯ ಮೂಲಕ ಅವಿರತವಾಗಿ ಶ್ರಮಿಸಿ ಇಡೀ ಮಾನವ ಸಮುದಾಯಕ್ಕೆ ಅಮೃತವನ್ನು ನೀಡಿದವರು. ಅಸಮಾನತೆಯ ವಿರುದ್ಧ ಹೋರಾಟ ಮಾಡಿದ ಮಹನ್ ಮಾನವತಾವಾದಿಗಳು, ಇಂತಹ ರಾಷ್ಟ್ರ ಪುರುಷರನ್ನು ಒಂದು ಜಾತಿಗೆ ಸೀಮಿತ ಗೊಳಿಸುವುದು ಮೂರ್ಖತನ,
    ಅವರ ಚಿಂತನೆಗಳನ್ನು ಈ ಲೇಖನದ ಮೂಲಕ ಚನ್ನಾಗಿ ವ್ಯಕ್ತಪಡಿಸಿದ್ದಿರ ಮಂಜಣ್ಣ, ನಿಮಗೆ ಹೃತ್ಪೂರ್ವಕ ಅಭಿನಂದನೆಗಳು…💐🙏

    • ಧನ್ಯವಾದಗಳು, ನನ್ನೆಲ್ಲಾ ಪ್ರಯತ್ನಗಳ ಹಿಂದೆ ಒಂದು ಬಹುದೊಡ್ಡ ಪ್ರಜ್ಞಾವಂತ, ಸುಶಿಕ್ಷಿತ ಸಮುದಾಯವಿದೆ. ನನ್ನನ್ನು ಸದಾ ಜಾಗೃತವಾಗಿಡುವ, ಸದಾ ಕ್ರಿಯಾಶೀಲವಾಗಿರುವಂತೆ ಮಾಡುವಂತವರಾದ ಪ್ರೊ. ರಮೇಶ್, ಮಹೇಂದ್ರಣ್ಣಾ, ಡಾ. ಪ್ರೀತಮ್, ಡಾ.ನೀಹಾ, ಡಾ.ಮುಕುಂದು, ವೆಂಕಟೇಶ್ ಡಿ.ಟಿ, ಲಕ್ಷ್ಮಿರಂಗಯ್ಯ ಈ ಸಮುದಾಯವೇ ಈ ಲೇಖನದಿಂದಿರುವ ಶಕ್ತಿ..

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?