ಲೇಖಕರು
ಕೆ.ಜೆ.ಹರ್ಷಿತ
ನಾಡಿನ ಹಬ್ಬಗಳಲ್ಲಿ ದೀಪಾವಳಿ ಪ್ರಮುಖ ಹಬ್ಬ. ವ್ಯಾಪಾರಿಗಳು, ಉದ್ಯಮಿಗಳಿಗೆ ಹೊಸ ಲೆಕ್ಕದ ಪುಸ್ತಕ ಆರಂಭವಾಗುವ ದಿನ. ರೈತರ ಪಾಲಿನ ಕೊಯ್ಲು, ಜಾನುವಾರು ಹಬ್ಬ.
ಕತ್ತಲೆಯು ನಮ್ಮಲ್ಲಿ ಅಧೈರ್ಯವನ್ನು ತುಂಬುತ್ತದೆ ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಆದ್ದರಿಂದ ಜನರು ಭರವಸೆಯ ಬೆಳಕನ್ನು ಹಣತೆಗಳನ್ನು ಹಚ್ಚಿ ಸ್ವಾಗತಿಸುತ್ತಾರೆ. ಕೆಟ್ಟ ಶಕ್ತಿಗಳನ್ನು ದೂರಮಾಡಲು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಾರೆ.
ಹಿಂದೆ ದೀಪಾವಳಿ ಹಬ್ಬದಂದು ಮಣ್ಣಿನ ಹಣತೆಗಳನ್ನು ಹಚ್ಚಿ ಮನೆ, ದೇಗುಲಗಳನ್ನು ದೀಪಗಳಿಂದ ಅಲಂಕರಿಸಿ, ಬಾಳೆಕಂದು, ಮಾವಿನ ತೋರಣ ಕಟ್ಟಿ ಮನೆಮಂದಿಯೆಲ್ಲ ಉತ್ಸಾಹದಿಂದ ಆಚರಿಸುತ್ತಿದ್ದರು. ಗ್ರಾಮೀಣ ಭಾಗದಲ್ಲಿ ಜಾನುವಾರುಗಳನ್ನು ಅಲಂಕರಿಸಿ ಬೆಂಕಿಯ ಸುತ್ತಲೂ ಸುತ್ತಿಸಿ ಈಡಿನ ಹಬ್ಬವಾಗಿ ಆಚರಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಣ್ಣಿನ ದೀಪಗಳು ಕಡಿಮೆಯಾಗಿ ತರಹೇವಾರಿ ಪಟಾಕಿಗಳು ದೀಪಾವಳಿ ಹಬ್ಬವನ್ನು ತೆಕ್ಕೆಗೆ ತೆಗೆದುಕೊಂಡಿವೆ.
ಬಲಿ ರಾಜನ ಕಥೆ
ದೀಪಾವಳಿಯ ಹಬ್ಬಕ್ಕೆ ಬಲಿರಾಜನ ಕತೆಯೂ ಸೇರಿಕೊಂಡಿದೆ. ವಾಮನ ಅವತಾರದಲ್ಲಿ ಬಂದ ವಿಷ್ಣುವು ಬಲಿರಾಜನನ್ನು ಮೂರು ಅಡಿ ಜಾಗ ಬೇಕೆಂದು ಕೇಳಿದನು. ಆಗ ಬಲಿರಾಜ ಅಹಂಕಾರ ಹಾಗೂ ಕ್ಷುಲಕ ಎನ್ನುವ ಭಾವದಿಂದ ಸಮ್ಮತಿ ವ್ಯಕ್ತ ಪಡಿಸಿದನು. ಆಗ ವಾಮನನು ಒಂದು ಹೆಜ್ಜೆಯನ್ನು ಭೂಮಿಯಲ್ಲಿ, ಇನ್ನೊಂದು ಹೆಜ್ಜೆಯನ್ನು ಸ್ವರ್ಗದಲ್ಲಿ ಇಟ್ಟನು. ನಂತರ ಮೂರನೇ ಹೆಜ್ಜೆಯನ್ನು ಎಲ್ಲಿ ಇಡಬೇಕೆಂದು ಬಲಿ ರಾಜನನ್ನು ಕೇಳಿದನು. ಆಗ ಬಲಿ ರಾಜನು ತನ್ನ ತಲೆಯ ಮೇಲೆ ಇಡು ಎಂದು ಹೇಳಿದನು. ಆಗ ವಾಮನ ರೂಪದಲ್ಲಿದ್ದ ವಿಷ್ಣು ಬಲಿರಾಜನ ತಲೆಯ ಮೇಲೆ ಕಾಲಿಟ್ಟು ಪಾತಾಳಕ್ಕೆ ತುಳಿಯುತ್ತಾನೆ.
ಹೀಗಾಗಿ ಮನೆಗಳಲ್ಲಿ ಬಲಿ ಪಾಡ್ಯಮಿಯಂದು [2019, ಅಕ್ಟೋಬರ್ 29 ಮಂಗಳವಾರ] ಹಸುವಿನ ಸಗಣಿಯಿಂದ ಬಲಿ ಕೋಟೆ ಹಾಕಿ ಅದನ್ನು ಜೋಳದ ತೆನೆ, ರಾಗಿ ತೆನೆ, ಸಜ್ಜೆ ತೆನೆ, ಉಚ್ಚೆಳ್ಳು ಹೂವು, ಕುಂಬಳ ಹೂವು ಇತ್ಯಾದಿಗಳಿಂದ ಅಲಂಕರಿಸಿ ಕೋಟೆಯ ಸುತ್ತಲೂ ದೀಪಗಳನ್ನಿಟ್ಟು ಕೋಟೆಯ ಮಧ್ಯಭಾಗಕ್ಕೆ ಹಾಲು ಎರೆದು ಪೂಜಿಸುವ ಪದ್ದತಿ ಇದೆ.