Tumkuru: ಭಾಷಾಂತರ ಬಹುಕೋಟಿ ಉದ್ಯಮವಾಗಿ ಬೆಳೆದಿದೆ.ಯುವಜನತೆ ಭಾಷಾಂತರದಂತಹ ಹೊಸಕಾಲದ ಉದ್ಯೋಗಾವಕಾಶಗಳತ್ತ ಗಮನ ಹರಿಸಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಜಿ.ಪಿ.ಶಿವರಾಂ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಭಾಷಾಂತರ ಕಮ್ಮಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾಷಾಂತರವು ಜ್ಞಾನ ಪ್ರಸಾರದ ಅನಿವಾರ್ಯ ಸಾಧನವೆನಿಸಿದೆ. ವೈದ್ಯಕೀಯ, ವಿಜ್ಞಾನ, ಕಾನೂನು, ತಂತ್ರಜ್ಞಾನ ಇತ್ಯಾದಿ ಕ್ಷೇತ್ರಗಳ ಜ್ಞಾನ ಮಾಧ್ಯಮಗಳ ಮೂಲಕ ಜನಸಾಮಾನ್ಯರಿಗೆ ತಲುಪುವುದರ ಹಿಂದೆ ಭಾಷಾಂತರ ಪಾತ್ರ ಅದ್ವಿತೀಯವೆನಿಸಿದೆ ಎಂದರು.
ಭಾಷಾಂತರದಲ್ಲಿ ವಿಷಯಗ್ರಹಿಕೆ ಮುಖ್ಯ. ಒಂದು ಪದಕ್ಕೆ ಅನೇಕ ಅರ್ಥಗಳಿರುತ್ತವೆ. ಶಬ್ದಾನುವಾದ ಅನೇಕ ಸಂದರ್ಭಗಳಲ್ಲಿ ಅಪಾರ್ಥಕ್ಕೆಎಡೆಮಾಡಿಕೊಡುತ್ತದೆ.ಕೆಲವೊಮ್ಮೆ ಕಾನೂನು ಶಿಕ್ಷೆಯೂ ಎದುರಾಗಬಹುದು.ಆದ್ದರಿಂದ ಸಂದರ್ಭ ಅರಿತುಕೊಂಡು ಎಚ್ಚರಿಕೆಯಿಂದ ಅರ್ಥಾನುವಾದ ಮಾಡಬೇಕಿದೆ ಎಂದರು.
ಕುಲಪತಿ ಪ್ರೊ.ವೈ.ಎಸ್. ಸಿದ್ದೇಗೌಡ ಮಾತನಾಡಿ,ಸಮಾಜದ ನಕಾರಾತ್ಮಕ ಶಕ್ತಿಗಳನ್ನು ತೊಲಗಿಸಿ ಧನಾತ್ಮಕತೆ ತುಂಬುವ ಸಾಮಥ್ರ್ಯ ಮಾಧ್ಯಮಗಳಿಗಿದೆ.ಸಮೂಹ ಮಾಧ್ಯಮ ಆಧುನಿಕಯುಗದಲ್ಲಿ ಹೊಸ ನಾಗರಿಕತೆಯನ್ನೇ ಸೃಷ್ಟಿಸಿವೆ ಎಂದರು.
ಭಾಷೆಯ ಬಳಕೆ ಸಮಾಜದ ಸಂಸ್ಕಾರವನ್ನು ಪ್ರತಿಬಿಂಬಿಸುತ್ತದೆ.ಉತ್ತಮ ಗುಣಮಟ್ಟದ ಭಾಷೆಯನ್ನು ಬೆಳೆಸುವಲ್ಲಿ ಮಾಧ್ಯಮಗಳ ಪಾತ್ರದೊಡ್ಡದು. ಮಾಧ್ಯಮ ಅಧ್ಯಯನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲು ವಿಶ್ವವಿದ್ಯಾನಿಲಯದ ಹೊಸ ಕ್ಯಾಂಪಸಿನಲ್ಲಿ ಸುಸಜ್ಜಿತ ಮಾಧ್ಯಮಕೇಂದ್ರ ಸ್ಥಾಪಿಸುವ ಉದ್ದೇಶವಿದೆ ಎಂದರು.
ಕುಲಸಚಿವ ಪ್ರೊ.ಕೆ.ಎನ್. ಗಂಗಾನಾಯಕ್, ಹಿರಿಯ ಪತ್ರಕರ್ತ ಎಂ.ಜಯರಾಮಅಡಿಗ, ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಸದಸ್ಯ ಎಂ. ಎಸ್. ಚೈತ್ರ ಭಾಗವಹಿಸಿದ್ದರು.