ಜಸ್ಟ್ ನ್ಯೂಸ್

ಭೂಸೇನಾ ನಿಗಮದ ನಿರ್ಲಕ್ಷ್ಯ: ಕೋಟ್ಯಂತರ ರೂಪಾಯಿ ವ್ಯರ್ಥ ಆರೋಪ

ಪಾವಗಡ:ಗ್ರಾಮ ವಿಕಾಸ ಯೋಜನೆಯಡಿ ನಲಿಗಾನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸಿದ್ದಪಡಿಸಿರುವ ಕ್ರಿಯಾ ಯೋಜನೆಯಂತೆ ಭೂಸೇನಾ ನಿಗಮ ಕಾಮಗಾರಿಗಳನ್ನು ನಡೆಸುತ್ತಿಲ್ಲ. ಕೆಲ ಕಾಮಗಾರಿಗಳು ಕಳಪೆಯಿಂದ ಕೂಡಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಂಜುನಾಥಚೌಧರಿ ಆರೋಪಿಸಿದರು.

ಗುಂಡ್ಲಹಳ್ಳಿ, ದಂಡಾಪಾಳ್ಯ ಗ್ರಾಮಕ್ಕೆ ಯೋಜನೆಯಡಿ ಆಗಬೇಕಿರುವ ಕಾಮಗಾರಿಗಳ ಬಗ್ಗೆ ಗ್ರಾಮ ಪಂಚಾಯಿತಿ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಆದರೆ ಭೂಸೇನಾ ನಿಗಮದ ಅಧಿಕಾರಿಗಳು ಗ್ರಾಮ ಸಭೆಯಲ್ಲಿ ತೀರ್ಮಾನಿಸಿದ ಕೆಲ ಕಾಮಗಾರಿಗಳನ್ನು ಕೈಬಿಟ್ಟಿದ್ದಾರೆ. ಮತ್ತೆ ಈಗಾಗಲೇ ಬೇರೆ ಯೋಜನೆಯಡಿ ಆಗಿರುವ ಕಾಮಗಾರಿಗಳನ್ನು ಕೈ ಗೆತ್ತಿಕೊಂಡಿದ್ದಾರೆ ಎಂದು ಪಟ್ಟಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ದೂರಿದರು.

ಈಗಾಗಲೇ 44 ಲಕ್ಷ ಹಣವನ್ನು ಗ್ರಾಮ ಪಂಚಾಯಿತಿ ವತಿಯಿಂದ ಬಿಡುಗಡೆ ಮಾಡಲಾಗಿದೆ. ಎರಡೂ ಗ್ರಾಮಗಳಲ್ಲಿ ಎಸ್.ಟಿ.ಪಿ. ಟಿ.ಎಸ್.ಪಿ ಯೋಜನೆಯಡಿ ಮುಕ್ತಾಯಗೊಳಿಸಿರುವ ಕಾಮಗಾರಿಗಳನ್ನು ಭೂಸೇನಾ ನಿಗಮದ ಕ್ರಿಯಾ ಯೋಜನೆಯಲ್ಲಿ ಮತ್ತೆ ತೋರಿಸಲಾಗಿದೆ. ಬೇರೆ ಯೋಜನೆಗಳಲ್ಲಿ ಆಗಿರುವ ಕಾಮಗಾರಿ ಹೊರತು ಪಡಿಸಿ ಹೊಸಕಾಮಗಾರಿಗಳನ್ನು ಸೇರಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಬೇಜವಬ್ಧಾರಿ ಪ್ರದರ್ಶಿಸಲಾಗುತ್ತಿದೆ ಎಂದು ದೂರಿದರು.

ಕಾಮಗಾರಿಗಳು  ಕಳಪೆಯಿಂದ ಕೂಡಿವೆ. ಸಮರ್ಪಕ ಕ್ರಿಯಾ ಯೋಜನೆ ಸಿದ್ದಪಡಿಸುವವರೆಗೆ ಕೆಲಸಗಳನ್ನು ಸ್ಥಗಿತಗೊಳಿಸುವಂತೆ  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಕೋಟ್ಯಾಂತರ ರೂಪಾಯಿ ಸರ್ಕಾರದ ಹಣ ವ್ಯರ್ಥವಾಗುತ್ತಿದೆ.  ಅಧಿಕಾರಿಗಳು ಶೀಘ್ರ ಗಮನಹರಿಸಿ ಸಮಸ್ಯೆ ಬಗೆಹರಿಸದಿದ್ದಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಖಂಡ ರಮೇಶ್, ಹನುಮಂತರಾಯ ಉಪಸ್ಥಿತರಿದ್ದರು.

Comment here