ಮುನೀರ್ ಕಾಟಿಪಳ್ಳ
ಮಂಗಳೂರು: ಸುರತ್ಕಲ್ ನ ವೃದ್ದೆಯೊಬ್ಬರಿಗೆ ವಾತದ ಸಮಸ್ಯೆ ಇತ್ತು. ಬಜಾಲ್ ನ ಖಾಸಗಿ ಅಯರ್ವೇದಿಕ್ ಆಸ್ಪತ್ರೆಯಲ್ಲಿ ಸಾಮಾನ್ಯವಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಮೂರು ದಿನದ ಹಿಂದೆ ಅವರ ಸಮಸ್ಯೆ ಉಲ್ಬಣಿಸಿತು. ಮನೆಯವರು ಬಜಾಲ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ “ದಾಖಲಿಸುವ ಮುನ್ನ ಕೋವಿಡ್ ಪರೀಕ್ಷೆ ಮಾಡಿ ಬನ್ನಿ” ಎಂದು ಶರತ್ತು ವಿಧಿಸಿದರು.
ಮನೆಯವರು 8 ನೇ ತಾರೀಖಿಗೆ ಸರಕಾರಿ ವೆನ್ ಲಾಕ್ ಗೆ ಕೊರೊನಾ ಪರೀಕ್ಷೆಗಾಗಿ ಕರೆದೊಯ್ದರು. ಅಲ್ಲಿ ಸ್ಯಾಂಪಲ್ ಕೊಟ್ಟು ವೃದ್ದೆಯನ್ನು ಮನೆಗೆ ಕರೆತಂದರು.
ಮನೆಯಲ್ಲಿ ವರದಿಗಾಗಿ ಕಾಯುತ್ತಲೇ ಚಿಕಿತ್ಸೆ ದೊರಕದೆ ನಿನ್ನೆ ಸಂಜೆ (ಜುಲೈ 9) ವೃದ್ದೆ ಮೃತ ಪಟ್ಟಿದ್ದಾರೆ. ಅಲ್ಲಿಂದ ಅಸಲೀ ಕತೆ ಶುರುವಾಗಿದೆ.
ಕುಟುಂಬಸ್ಥರು ಅಂತ್ಯ ಕ್ರಿಯೆಗೆ ಸಿದ್ದತೆ ಆರಂಭಿಸಿದ್ದಾರೆ. ಆಗ ಸಮಸ್ಯೆ ಎದುರಾಗಿದೆ. “ಕೊರೋನ ಪರೀಕ್ಷೆ ಮಾಡಿದ ವ್ಯಕ್ತಿ ಮೃತ ಪಟ್ಟರೆ ವರದಿ ಬರದೆ ಅಂತ್ಯಕ್ರಿಯೆ ನಡೆಸುವಂತಿಲ್ಲ” ಎಂಬ ನಿಯಮ ಎದ್ದು ನಿಂತಿದೆ.
ಈಗ ಮೃತದೇಹಕ್ಕೆ ಇಪ್ಪತ್ತನಾಲ್ಕು ತಾಸು ದಾಟಿದೆ. ವೆನ್ ಲಾಕ್ ನಲ್ಲಿ ವರದಿ ಕೈ ಸೇರುತ್ತಿಲ್ಲ. “ಎರಡು ತಾಸು ಕಾಯಿರಿ” ಎಂಬ ಡೈಲಾಗ್ ನಿನ್ನೆಯಿಂದ ರಿಪೀಟ್ ಆಗುತ್ತಿದೆ.
ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ. ಸಿಕ್ಕವರದ್ದು ಹಾರಿಕೆಯ ಅಥವಾ ಅಸಹಾಯಕತೆಯ ಮಾತು. ಉಳಿದವರು ಫೋನ್ ಎತ್ರುತ್ತಿಲ್ಲ. ವೃದ್ದೆ ವಾಸ ಇರುವುದು ಬಾಡಿಗೆ ಮನೆಯಲ್ಲಿ. ಕೋವಿಡ್ ಭಯದಿಂದ ಮನೆ ಮಾಲಿಕರು, ನೆರೆಕರೆಯವರು ಆತಂಕಗೊಂಡಿದ್ದಾರೆ. ಮೃತದೇಹದ ಬಳಿ ಯಾರೂ ಸುಳಿಯುವಂತಿಲ್ಲ.
ಕುಟುಂಬ ಸದಸ್ಯರು ದಿಕ್ಕು ತೋಚದೆ ಪರಿತಪಿಸುತ್ತಿದ್ದಾರೆ. ಜಿಲ್ಲಾಡಳಿತ ಉಸಿರಾಡುವ ಲಕ್ಷಣ ಕಾಣುತ್ತಿಲ್ಲ.
ಈಗ ಹೇಳಿ, ಇಂತಹ ಸಣ್ಣಪುಟ್ಟ ಸಮಸ್ಯೆಗಳನ್ನು ಸರಿಯಾಗಿ ನಿಭಾಯಿಸದೆ ಬೆಟ್ಟ ಮಾಡುವ ಜಿಲ್ಲಾಧಿಕಾರಿ, ಶಾಸಕ, ಸಂಸದರು ನಮಗೆ ಬೇಕಾ ? ಎಂದು ಇಲ್ಲಿನ ಜನ ಕೇಳುತ್ತಿದ್ದಾರೆ. ಆದರೆ ಏನು ಮಾಡುವುದು. ಇದನ್ನು ಕೇಳಿಸಿಕೊಳ್ಳುವವರು ಯಾರಾದರೂ ಬರಬೇಕಾದರೆ ಇನ್ನೊಂದು ಚುನಾವಣೆಯೇ ಬರಬೇಕೇನೊ?