Thursday, June 20, 2024
Google search engine
Homeಜನಮನಮಗ್ಗದವರ ಬದುಕು ಮುಗ್ಗಲಾಯಿತಲ್ಲೋ ಶಿವನೇ!

ಮಗ್ಗದವರ ಬದುಕು ಮುಗ್ಗಲಾಯಿತಲ್ಲೋ ಶಿವನೇ!

ತುರುವೇಕೆರೆ ಪ್ರಸಾದ್
ತುರುವೇಕೆರೆ: ಜಾಗತೀಕರಣ ಹಾಗೂ ಯಂತ್ರಗಳ ದಾಂಗುಡಿಯಿಂದಾಗಿ ಅತಂತ್ರ ಸ್ಥಿತಿಯಲ್ಲಿದ್ದ ಕೈಮಗ್ಗಗಳ ಪುನಶ್ಚೇತನಕ್ಕೆ ಹೊಸದೊಂದು ಸಂಚಲನ ಮೂಡಬೇಕಿದ್ದ ಸಂದರ್ಭದಲ್ಲೇ ತಾಲ್ಲೂಕಿನ ಮುನಿಯೂರಿನ ಕೈ ಮಗ್ಗ ನೇಕಾರರು ಕೊರಾನಾದಿಂದಾಗಿ ತಮ್ಮ ವೃತ್ತಿಯನ್ನೇ ಬಿಟ್ಟು ಕೂಲಿ ನಾಲಿ ಮಾಡಿ ಹೊಟ್ಟೆ ಹೊರೆದುಕೊಳ್ಳುವ ಶೋಚನೀಯ ಸ್ಥಿತಿ ತಲುಪಿದ್ದಾರೆ.

ಮುನಿಯೂರು ತುಮಕೂರು ಜಿಲ್ಲೆಯಲ್ಲೇ ನೇಕಾರಿಕೆಗೆ ಹೆಸರುವಾಸಿಯಾದ ಗ್ರಾಮ. ಸುಮಾರು 200ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ನೇಕಾರಿಕೆಯನ್ನೇ ನೆಚ್ಚಿವೆ. ಬಹುತೇಕ ಹಿಂದುಳಿದ ವರ್ಗಕ್ಕೆ ಸೇರಿದ ದೇವಾಂಗ ಕುಟುಂಬಗಳಲ್ಲಿ 300ಕ್ಕೂ ಹೆಚ್ಚು ಮಗ್ಗಗಳು ಪ್ರತಿದಿನ ಅಹರ್ನಿಶಿ ಸಾವಿರಾರು ಸೀರೆಗಳನ್ನು ನೇಯುತ್ತವೆ. ಆದರೆ ಕೈ ಮಗ್ಗದಿಂದ ಜೀವನೋಪಾಯ ಮಾಡಲಾಗದೆ ಶೇ.70ರಷ್ಟು ಕುಟುಂಬಗಳು ಕೈ ಮಗ್ಗವನ್ನು ಬಿಟ್ಟು ವಿದ್ಯುತ್ ಮಗ್ಗವನ್ನು ಅಳವಡಿಸಿಕೊಂಡಿವೆ.

ಇಡೀ ಗ್ರಾಮದಲ್ಲಿ ಕೇವಲ 20 ಕೈ ಮಗ್ಗಗಳು ಮಾತ್ರ ಉಳಿದಿವೆ. ಇಳಿವಯಸ್ಸಿನಲ್ಲಿ ಬದುಕಿನ ಮುಸ್ಸಂಜೆಯಲ್ಲಿರುವವರು ಮಾತ್ರ ಕೈ ಮಗ್ಗಕ್ಕೆ ಅಂಟಿಕೊಂಡಿದ್ದಾರೆ. ಮಿಕ್ಕವರು ಒಂದೋ ಕಸುಬನ್ನೇ ಬಿಟ್ಟಿದ್ದಾರೆ ಇಲ್ಲ ವಿದ್ಯುತ್ ಮಗ್ಗಕ್ಕೆ ಬದಲಾವಣೆ ಹೊಂದಿದ್ದಾರೆ.

ಕರೋನಾ ಹೊಡೆತದಿಂದಾಗಿ ವಿದ್ಯುತ್ ಮಗ್ಗ ಮತ್ತು ಕೈ ಮಗ್ಗ ಎರಡನ್ನೂ ಅವಲಂಭಿಸಿದ್ದವರ ಜೀವನ ದಿಕ್ಕಾಪಾಲಾಗಿ ಬೀದಿಗೆ ಬಿದ್ದಿದೆ. ಗ್ರಾಮದಲ್ಲಿ ಈಗ 200 ಮಗ್ಗಗಳ ಪೈಕಿ ಐದಾರು ಮಗ್ಗಗಳು ಮಾತ್ರ ಕೆಲಸ ಮಾಡುತ್ತಿವೆ, ಮಿಕ್ಕ ಮಗ್ಗಗಳು ಸಂಪೂರ್ಣವಾಗಿ ಸ್ಥಗಿತವಾಗಿವೆ.

ಚೈನ್ ಡ್ರಾಬಿ ಹಾಗೂ ಗಣಕೀಕೃತ ಡ್ರಾಬಿಯಿಂದ ನಾಜೂಕು ಕೆಲಸ ಮಾಡುವ ತಂತ್ರಜ್ಞಾನವನ್ನು ಹಲವು ವಿದ್ಯುತ್ ಮಗ್ಗಗಳಲ್ಲಿ ಅಳವಡಿಸಲಾಗಿದೆ. ಈ ಮಗ್ಗಗಳಲ್ಲಿ ವಿಶೇಷವಾಗಿ ಅರ್ಟ್ ರೇಷ್ಮೆ ಸೀರೆಗಳನ್ನು ನೇಯಲಾಗುತ್ತದೆ. ಈ ಸೀರೆಗಳಿಗೆ ಸ್ಥಳಿಯವಾಗಿ ಮಾರುಕಟ್ಟೆ ಇಲ್ಲ.

ಇಲ್ಲೇನಿದ್ದರೂ ಶುಭ ಸಮಾರಂಭ,ಮದುವೆಗಳಲ್ಲಿ ಶುದ್ಧ ರೇಷ್ಮೆ ಮತ್ತು ಹತ್ತಿ ಬಟ್ಟೆಗಳಿಗೇ ಬೇಡಿಕೆ. ಈ ಆರ್ಟ್ ಸೀರೆಗಳಿಗೆ ವಿಶೇಷ ಬೇಡಿಕೆ ಇರುವುದು ಹೊರರಾಜ್ಯಗಳಲ್ಲಿ ಅದೂ ಬಹುತೇಕ ಪಕ್ಕದ ರಾಜ್ಯ ಮಹಾರಾಷ್ಟ್ರ ಹಾಗೂ ದೂರದ ಕೊಲ್ಕತ್ತದಲ್ಲಿ. ಹೀಗಾಗಿ ಬೆಂಗಳೂರು ವರ್ತಕರ ಮೂಲಕ ಈ ಸೀರೆಗಳು ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ಉತ್ತಮ ಮಾರುಕಟ್ಟೆ ಹೊಂದಿದ್ದವು.

ಮಾಲು ಪಡೆದ ಬೆಂಗಳೂರು ವರ್ತಕರು ಒಂದು ತಿಂಗಳ ಅಡ್ವಾನ್ಸ್ ಚೆಕ್ಕನ್ನು ಮಗ್ಗದವರಿಗೆ ನೀಡುತ್ತಿದ್ದರು, ಮಗ್ಗದವರು ಅದನ್ನು ಕಚ್ಚಾವಸ್ತು ಮಾರಾಟಗಾರರಲ್ಲಿ ಮುರಿಸಿ ನೇಯ್ಗೆಗೆ ಬೇಕಾದ ಕಚ್ಛಾವಸ್ತುಗಳನ್ನು ಪಡೆಯುತ್ತಿದ್ದರು. ಇಂತಹದೊಂದು ಸರಪಣಿ ನೇಕಾರರು, ಕಚ್ಚಾವಸ್ತು ಸರಬರಾಜುದಾರರು ಮತ್ತು ಮಾರಾಟಗಾರರ ನಡುವೆ ಇದ್ದು ಹೇಗೋ ಅವತ್ತಿನ ಹೊಟ್ಟೆಪಾಡು ನಡೆದುಹೋಗುತ್ತಿತ್ತು.

ಈಗ ಕೊರೋನಾದಿಂದಾಗಿ ಈ ಸರಪಣಿ ಕಡಿದು ಬಿದ್ದಿದೆ. ಕಚ್ಚಾವಸ್ತು ಕೊಳ್ಳಲು ಹಣವಿಲ್ಲದೆ, ನೇಯ್ದ ಸೀರೆಗಳಿಗೆ ಬೇಡಿಕೆ ಇಲ್ಲದೆ ನೇಕಾರರು ಮಗ್ಗ ಮುಚ್ಚಿ ಹೊಟ್ಟೆ ಮೇಲೆ ತಣ್ಣಿರು ಬಟ್ಟೆ ಹಾಕಿಕೊಳ್ಳುವಂತಾಗಿದೆ.
ಕರೋನಾ ದಾಂಗುಡಿ ಇಟ್ಟ ನಂತರ ಈ ನೇಕಾರರ ಬದುಕು ಅಕ್ಷರಶಃ ಬೀದಿಪಾಲಾಗಿ ಹೋಯಿತು. ದೂರದ ಕೊಲ್ಕತ್ತದಿಂದ ಯಾವುದೇ ಬೇಡಿಕೆ ಬರಲಿಲ್ಲ, ಪಕ್ಕದ ಮಹಾರಾಷ್ಟ್ರದಲ್ಲಿ ಕೊರೊನಾ ತಾಂಡವ ನೃತ್ಯ ಮಾಡಿದ ಕಾರಣ ಅಲ್ಲಿನ ಮಾರುಕಟ್ಟೆಯೂ ಕುಸಿದು ಬಿತ್ತು. ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಸುಧಾರಿಸಿತು ಎನ್ನುವಷ್ಟರಲ್ಲಿ ಬೆಂಗಳೂರಿನ ಚಿಕ್ಕಪೇಟೆ, ಕಬ್ಬನ್ ಪೇಟೆಗಳು ಪದೇ ಪದೇ ಲಾಕ್‍ಡೌನ್ ಸೀಲ್‍ಡೌನ್ ಸುಳಿಗೆ ಸಿಕ್ಕಿವೆ. ಹೀಗಾಗಿ ಇಡೀ ಗ್ರಾಮದಲ್ಲಿ ನೇಕಾರಿಕೆಯನ್ನೇ ನಂಬಿದ್ದ 200ಕ್ಕೂ ಹೆಚ್ಚು ಕುಟುಂಬಗಳು ಜೀವನೋಪಾಯಕ್ಕೆ ಪರದಾಡುವ ಸ್ಥಿತಿ ತಲುಪಿದ್ದಾರೆ.

ಮಗ್ಗಗಳು ಧೂಳು ಹಿಡಿಯುತ್ತಿವೆ. ಮಗ್ಗವನ್ನು ನಂಬಿದವರ ಬದುಕು ಅಗ್ಗವಾಗಿ ಮುಗ್ಗುಲಾಗಿ ಹೋಗಿದೆ. ನೇಕಾರರು ಕೂಲಿ, ಗಾರೆ ಕೆಲಸ, ಮಣ್ಣು ಎತ್ತುವುದು, ವೈಡಿಂಗ್ ವರ್ಕ್, ಎಂದು ತಮಗೆ ಕುಶಲತೆ ಇಲ್ಲದ ಕೆಲಸಗಳಲ್ಲಿ ದುಡಿಯುತ್ತಾ ಹೊಟ್ಟೆಪಾಡಿಗೆ ಪರದಾಡುತ್ತಿದ್ದಾರೆ. ಹೆಚ್ಚು ಕಡಿಮೆ ಇದೇ ಸ್ಥಿತಿ ಗುಬ್ಬಿ ತಾಲ್ಲೂಕಿನ ಕಲ್ಲೂರಿನಲ್ಲೂ ಇದೆ.
ಇದು ವಿದ್ಯುತ್ ಮಗ್ಗಗಳ ಕತೆಯಾದರೆ ಕೈ ಮಗ್ಗಗಳ ಸ್ಥಿತಿ ಇನ್ನೂ ಕರುಣಾಜನಕವೆನಿಸಿದೆ.

ಗ್ರಾಮದ ಹಿರಿಯ ನೇಕಾರರು ದೇಸಿ ಕಸುಬನ್ನು ಬಿಡದೆ ಅದರಲ್ಲೇ ಛಲದಿಂದ ಬದುಕು ನಡೆಸಿದ್ದಾರೆ. ಅವರ ಪ್ರಕಾರ ಇಂದಿನ ದುಬಾರಿ ದಿನಗಳಲ್ಲಿ ಕೈಮಗ್ಗ ನೆಚ್ಚಿ ಬದುಕುವುದೇ ಕಷ್ಟ. ವಿದ್ಯುತ್ ಮಗ್ಗದಿಂದ ಕನಿಷ್ಟ ದಿನಕ್ಕೆ 3-4 ಸೀರೆಗಳನ್ನು ತಯಾರಿಸಬಹುದು, ಆದರೆ ಕೈಮಗ್ಗದಲ್ಲಿ ವಾರಕ್ಕೆ 2-3 ಸೀರೆ ತಯಾರಿಸಿದರೆ ಹೆಚ್ಚು. ವಿದ್ಯುತ್ ಮಗ್ಗದಲ್ಲಿ ನೇಯ್ದ ಪಾಲಿಕಾಟ್, ಆರ್ಟ್‍ಸಿಲ್ಕ್ ಸೀರೆಗಳು ಕನಿಷ್ಠ ರೂ.300ರಿಂದ ರೂ.500 ಬೆಲೆಯಲ್ಲಿ ಸಿಗುತ್ತವೆ.

ಇಲ್ಲಿ ಶುದ್ಧ ರೇಷ್ಮೆ ನೂಲು ಬಳಸುವುದರಿಂದ ಸೀರೆ ಬೆಲೆಯೂ ಹೆಚ್ಚಿರುತ್ತದೆ. ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ದರದಲ್ಲಿ ಸೀರೆ ಮಾರಲಾಗದೆ, ಮಧ್ಯವರ್ತಿಗಳ ಹಾವಳಿಯಿಂದ ಬೆಲೆಯಲ್ಲಿ ರಾಜಿ ಮಾಡಿಕೊಂಡು ನಷ್ಟ ಅನುಭವಿಸುತ್ತಿದ್ದವರು ಕರೋನಾ ದೆಸೆಯಿಂದ ಈಗ ಕೈಗೆ ಕೆಲಸವಿಲ್ಲದೆ ಬದುಕಿನ ಮುಸ್ಸಂಜೆಯಲ್ಲಿ ಹತಾಶರಾಗಿ ಕುಳಿತಿದ್ದಾರೆ. ಮೊದಲೇ ಅವರ ದುಡಿಮೆ ‘ಅಜ್ಜಿ ನೂತಿದ್ದು ಅಜ್ಜನ ಉಡಿದಾರಕ್ಕೆ’ ಎಂಬಂತಾಗಿತ್ತು, ಈಗ ಉಡಿದಾರವೂ ಕಿತ್ತುಹೋಗಿ ಬದುಕು ಮೂರಾಬಟ್ಟೆಯಾಗಿದೆ.

ಇನ್ನು ಸರ್ಕಾರ ಘೋಷಿಸಿರುವ ಪ್ಯಾಕೇಜ್ ವಿಷಯಕ್ಕೆ ಬಂದರೆ ಅದು ರಾವಣಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ. ಸರ್ಕಾರ ಪ್ರತಿ ನೇಕಾರರಿಗೆ ರೂ.2 ಸಾವಿರ ಸಹಾಯಧನ ಘೋಷಿಸಿದೆ. ಇತರೆ ವೃತ್ತಿಯವರಿಗೆ ರೂ. 5 ಸಾವಿರ ಸಹಾಯ ಧನ ಘೋಷಿಸಿ ನೇಕಾರರಿಗೇಕೆ ಯಾಕೆ 2 ಸಾವಿರ ? ಇದರಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾ? ಸರ್ಕಾರ ಯಾಕೆ ಈ ತಾರತಮ್ಯ ನೀತಿ ಅನುಸರಿಸಬೇಕು? ಎಂದು ನೇಕಾರರು ಪ್ರಶ್ನಿಸುತ್ತಾರೆ.ಆ 2 ಸಾವಿರ ಸಹಾಯಧನವೂ ಎಲ್ಲಾ ನೇಕಾರರ ಕೈ ಸೇರಿಲ್ಲ, ಈಗಷ್ಟೇ ಅದು ವಿತರಣೆಯಾಗುವ ಹಂತದಲ್ಲಿದೆ. ಹೇಳುವಂತೆ ನೇಕಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬದುಕಿನ ಭರವಸೆಯನ್ನೇ ಕಳೆದುಕೊಂಡಿದ್ದಾರೆ.

ಇಂತ ಸಂದರ್ಭದಲ್ಲಿ ಸರ್ಕಾರ ಕೆ.ಎಸ್.ಡಿ.ಸಿ ಮತ್ತು ಕೆ.ಎಸ್.ಐ. ಟಿ.ಡಿ.ಸಿ ಮೂಲಕ ನೇಕಾರರಿಗೆ ಸಹಾಯ ಧನ ನೀಡಬೇಕು. ಅವರು ಕಚ್ಚಾವಸ್ತುಗಳನ್ನು ಕೊಳ್ಳಲು ಸಹಾಯ ಮಾಡಬೇಕು ಎನ್ನುತ್ತಾರೆ. ಬೆಳಗಾವಿಯಲ್ಲಿ ಸಂಕಷ್ಟಕ್ಕೊಳಗಾದ ನೇಕಾರರು ಒಂದಾಗಿ ಕಲ್ಯಾಣ ಮಂಟಪವೊಂದರಲ್ಲಿ ತಮ್ಮ ಸರಕುಗಳು ಪ್ರದರ್ಶನ ಮತ್ತು ಮಾರಾಟ ಆರಂಭಿಸಿದ್ದಾರೆ.

ಹಾಗೆಯೇ ಆನ್‍ಲೈನ್ ಮಾರಾಟವನ್ನೂ ವ್ಯವಸ್ಥೆಗೊಳಿಸಿದ್ದಾರೆ. ಅದೇ ಮಾದರಿಯಲ್ಲಿ ಮುನಿಮೂರು ಮತ್ತು ಕಲ್ಲೂರು ನೇಕಾರರ ಒಂದು ಕ್ಲಸ್ಟರ್ ಮಾಡಿ ನೇಕಾರರ ಉತ್ಪನನ್ನಗಳ ಪ್ರದರ್ಶನ ಮತ್ತು ಆನ್‍ಲೈನ್ ಮಾರಾಟಕ್ಕೆ ಸರ್ಕಾರ ವ್ಯವಸ್ಥೆ ಮಾಡಿಕೊಡಬೇಕು ಎಂದು ದಾಸಿಮಯ್ಯ ವಿದ್ಯುತ್ ಮಗ್ಗ ನೇಕಾರರ ಸಹಕಾರ ಸಂಘದ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?