ತುಮಕೂರು ಲೈವ್

ಮಠದ ಮಕ್ಕಳಿಗೆ ರಾಜಕೀಯ ಪಾಠ ಹೇಳಿದ ನರೇಂದ್ರ ಮೋದಿ

ತುಮಕೂರು: ಪ್ರಧಾನಿ ನರೇಂದ್ರ ಮೋದಿ ತುಮಕೂರಿಗೆ ಬಂದಿಳಿದಿದ್ದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ. ಜೊತೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಿದ್ದು ಮಠದ ದ್ವಾರದಲ್ಲಿ ಪ್ರಧಾನಿಗಳನ್ನುಅದ್ದೂರಿಯಾಗಿ ಸ್ವಾಗತ ಮಾಡಲಾಯಿತು.

ವ್ಯಾಪಕ ಭದ್ರತೆ ಕಲ್ಪಿಸಿರುವುದರಿಂದ ಕೆಲವೇ ಮಂದಿಗೆ ಸ್ವಾಗತಿಸಲು ಅವಕಾಶ ದೊರೆಯಿತು.
ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಡಿ.ವಿ.ಸದಾನಂದಗೌಡ, ಸಚಿವ ಆರ್. ಅಶೋಕ್ ಪ್ರಧಾನಿಗೆ ಸಾಥ್ ನೀಡಿದ್ದಾರೆ.

ಕೇಂದ್ರ ಸರ್ಕಾರ, ನವಭಾರತಕ್ಕಾಗಿ ಯುವಕರು, ಮಹಿಳೆಯರು, ಮಕ್ಕಳು, ಬಡವರು, ದಲಿತರು, ವಂಚಿತರು, ಹಿಂದುಳಿದವರು ಮತ್ತು ಆದಿವಾಸಿಗಳ ಆಕಾಂಕ್ಷೆಗಳನ್ನು ಈಡೇರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಿದ್ದಗಂಗಾ ಮಠದಲ್ಲಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮಿಗಳ ಗದ್ದುಗೆಗೆ ನಮಿಸಿ ಬಂದ ಬಳಿಕ ವೇದಿಕೆಯಲ್ಲಿ ಭಾಷಣ ಮಾಡಿದ ಪ್ರಧಾನಿ ಶ್ರೀಮಠ ಶಿಕ್ಷಣ, ಸಮಸಮಾಜ ನಿರ್ಮಾಣಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದೆ. ಶ್ರೀಗಳ ಪ್ರೇರಣೆಯಿಂದ ಅದ್ಬುತ ಕೆಲಸವಾಗಿದೆ. ಆದರೆ ಇಂದು ಅವರ ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಅದರೂ ಅವರ ಪ್ರೇರಣೆ ನಮ್ಮೆಲ್ಲರ ಮೇಲೆ ಇದೆ ಎಂದು ತಿಳಿಸಿದರು.

ದಲಿತರು, ಆದಿವಾಸಿಗಳು, ಬಡವರು, ವಂಚಿತರ ಆಕಾಂಕ್ಷೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ದವಾಗಿದೆ. ಅದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಜನರ ಸಾರ್ಥಕ ಬದಲಾವಣೆಗೆ ಶ್ರಮಿಸುತ್ತಿದ್ದೇವೆ. ಕಳೆದ 2014 ರಿಂದ ಈಚೆಗೆ ನಮ್ಮ ರಾಷ್ಟ್ರ ಸಾರ್ಥಕ ಆಕಾಂಕ್ಷೆಯ ಶಿಖರಕ್ಕೆ ಏರಿದೆ. ಅದೇ ಕಾರಣಕ್ಕಾಗಿ ನಮ್ಮನ್ನು ಮತ್ತೊಮ್ಮೆ ಆಯ್ಕೆ ಮಾಡಿದ್ದಾರೆ ಎಂದು ವಿವರಿಸಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸ್ವಚ್ಛ ಭಾರತ ಯೋಜನೆಯಡಿ ದೇಶಾದ್ಯಂತ ಬಯಲುಮುಕ್ತ ಶೌಚಾಲಯ ನಿರ್ಮಿಸಿ ಯಶಸ್ವಿಯಾಗಿದ್ದೇವೆ. ಎಲ್ಲ ಬಡವರ ಮನೆಗೆ ಗ್ಯಾಸ್ ಒದಗಿಸಿದ್ದೇವೆ. ರೈತರಿಗೆ ನೇರ ಹಣ ವರ್ಗಾವಣೆ ಮಾಡಿದ್ದೇವೆ. ಶ್ರಮಿಕರು, ಕಾರ್ಮಿಕರು, ಸಣ್ಣವ್ಯಾಪಾರಿಗಳಿಗೆ ವಿಮಾ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಸರ್ಕಾರದ ಸಾಧನೆಗಳನ್ನು ಪಟ್ಟಿಮಾಡಿದರು.

ಕೇಂದ್ರ ಸರ್ಕಾರ ಜಮ್ಮುಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಅಲ್ಲಿನ ಆತಂಕವನ್ನು ದೂರಮಾಡಿದೆ. ಅತ್ಯಂತ ಹಳೆಯದಾದ ರಾಮಜನ್ಮಭೂಮಿ -ಬಾಬ್ರಿ ಮಸೀದಿ ವಿವಾದವನ್ನು ಬಗೆಹರಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಹೀಗಾಗಿ ರಾಮ ಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಮಕ್ಕಳಿಗೆ ತಿಳಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಪಾಕಿಸ್ತಾನ, ಆಫ್ಗಾನಿಸ್ತಾನ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳು, ಬೌದ್ಧರು, ಸಿಖ್ಖರು, ಪಾರ್ಸಿಗಳು, ಜೈನರು ಮತ್ತು ಕ್ರಿಶ್ಚಿಯನ್ನರಿಗೆ ಭಾರತದ ಪೌರತ್ವ ನೀಡಲಾಗುವುದು. ಅಲ್ಲಿನ ಅಲ್ಪಸಂಖ್ಯಾತರು ಹಿಂಸೆಗೆ ತುತ್ತಾಗಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಇತರರು ಪಾಕಿಸ್ತಾನದ ವಿರುದ್ಧ ಪ್ರತಿಭಟನೆ ನಡೆಸುವುದು ಬಿಟ್ಟು ಸಂಸತ್ ವಿರುದ್ಧ ಹೋರಾಟದಲ್ಲಿ ತೊಡಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮಠದ ಮಕ್ಕಳಿಗೆ ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಪಾಠ ಹೇಳಿದರು. ವೇದಿಕೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮೊದಲಾದವರು ಹಾಜರಿದ್ದರು.

Comment here