Saturday, October 5, 2024
Google search engine
Homeಜನಮನಮಧ್ಯರಾತ್ರೀಲಿ ಈ ಇಬ್ಬರು ಪತ್ರಕರ್ತರು ಮೆರೆದ ಮಾನವೀಯತೆ...

ಮಧ್ಯರಾತ್ರೀಲಿ ಈ ಇಬ್ಬರು ಪತ್ರಕರ್ತರು ಮೆರೆದ ಮಾನವೀಯತೆ…

ಗುದ್ದಿ

ಚನ್ನಬಸಪ್ಪ ರೊಟ್ಟಿ


ಸ್ನೇಹಿತರೇ, ಇದು ನನ್ನ ಸಹೋದ್ಯೋಗಿಯಾಗಿ ಕಲಬುರ್ಗಿಯ ‘ಪ್ರಜಾವಾಣಿ’ ಬ್ಯೂರೋದಲ್ಲಿ ಕೆಲಸ ಮಾಡುತ್ತಿರುವ ಸಹೃದಯಿ ಸ್ನೇಹಿತ, ನಲ್ಮೆಯ ಬೀಗ ಮನೋಜಕುಮಾರ ಗುದ್ದಿಯ ‘ಅನ್ನದ ಋಣ’ವನ್ನು ನಾನು ಮಧ್ಯರಾತ್ರಿಯಲ್ಲಿ ತೀರಿಸಿದ ಕತೆ.‌‌..

ಅಂದರೆ, ನಾನು ಆತನ ಮನೆಯಲ್ಲಿ ತಿಂದುಂಡ ಋಣ ತೀರಿಸಿದ್ದಲ್ಲ…! ಆತ ತನ್ನ ಬಾಲ್ಯದಿಂದ ತಿಂದುಂಡ ‘ಋಣ’ ತೀರಿಸಿದ ಕತೆ…

ಹೌದು, ಕೊರೊನಾ ಲಾಕ್ ಡೌನ್ ಕಾರಣ ನಮ್ಮ ಕಚೇರಿಯ ಸಹೋದ್ಯೋಗಿಗಳು ಸೇರಿ, ಪ್ರತಿದಿನ ಸಂಜೆ ವೇಳೆ ತಿಂಡಿ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಅದರಲ್ಲಿ ನಮ್ಮ ತಂಗಿ ಜಾನಕಿಗೆ (ಮನೋಜನ ಶ್ರೀಮತಿ) ತೊಂದರೆ ಕೊಟ್ಟು ಅತಿ ಹೆಚ್ಚು ಬಾರಿ ತಿಂಡಿ ಮಾಡಿಸಿಕೊಂಡು ಬಂದವನು ಮನೋಜನೇ…

ಇಂದೂ ಕೂಡ ಆತ ಮನೆಯಿಂದ ಇಪ್ಪತ್ತು ಜನರು ಹೊಟ್ಟೆ ತುಂಬ ತಿನ್ನಬಹುದಾದಷ್ಟು ಅವಲಕ್ಕಿ ಮಾಡಿಸಿಕೊಂಡು ಬಂದಿದ್ದ. ಸಂವಹನ ಕೊರತೆಯಿಂದ ಮತ್ತೊಬ್ಬ ಸಹೋದ್ಯೋಗಿ ಗುರುರಾಜ್ ಕೂಡ ಚಿತ್ರಾನ್ನ ಮಾಡಿಸಿಕೊಂಡು ಬಂದಿದ್ದರು.

ಚಿತ್ರಾನ್ನ ರಾತ್ರಿವರೆಗೆ ತಾಳುವುದಿಲ್ಲ ಎಂದರಿತು ಅದನ್ನು ಸಂಜೆ ಹೊತ್ತಿಗೇ ತಿಂದು ಮುಗಿಸಿ, ಅವಲಕ್ಕಿಯನ್ನು ರಾತ್ರಿಗೆ ಉಳಿಸಿಕೊಂಡೆವು. ಅದರಂತೆ ರಾತ್ರಿ ಕೆಲಸ ಮುಗಿದ ನಂತರ ನಾನೂ ಸೇರಿ ಆರು ಜನ ಅವಲಕ್ಕಿಯನ್ನು ಹೊಟ್ಟೆ ಬಿರಿಯುವಂತೆ ತಿಂದೆವು.‌ ಕೆಲವರು ‘ಚಿತ್ರಾನ್ನವೇ ಸಾಕಾಗಿದೆ’ ಎಂದು ಹಾಗೆಯೇ ಹೊರಟು ಹೋದರು. ಆದರೂ ಹತ್ತು, ಜನರಿಗೆ ಆಗುವಷ್ಟು ಅವಲಕ್ಕಿ ಡಬ್ಬಿಯಲ್ಲಿ ಉಳಿದಿತ್ತು…!

ಈ ಲಾಕ್ ಡೌನ್ ಸಂದರ್ಭದಲ್ಲಿ ಅದೆಷ್ಟೋ ಜನ ತುತ್ತು ಕೂಳಿಗಾಗಿ ಪರದಾಡುತ್ತಿರುವ ಚಿತ್ರ ಕಣ್ಮುಂದೆ ಬಂತು. ನಿತ್ಯ ಅಂಥ ಹತ್ತಾರು ಸುದ್ದಿಗಳನ್ನು ನಾವೇ ಬರೆದು, ಓದಿ, ಪ್ರಕಟಿಸುತ್ತಿರುವುದೂ ನೆನಪಾಯಿತು…

ಏನೇ ಆಗಲಿ, ಅವಲಕ್ಕಿಯನ್ನು ‘ವೇಸ್ಟ್’ ಮಾಡದಿರಲು ನಿರ್ಧರಿಸಿದೆ. ರಾತ್ರಿ 12.15ಕ್ಕೆ ಸ್ನೇಹಿತ ರಾಮಮೂರ್ತಿಯನ್ನು ಬೈಕ್ ಮೇಲೆ ಕೂರಿಸಿಕೊಂಡು, ಅವಲಕ್ಕಿ ಮತ್ತು ಎರಡು ಹಳೆಯ ದಿನಪತ್ರಿಕೆಗಳನ್ನು ತೆಗೆದುಕೊಂಡು ಕಲಬುರ್ಗಿ ನಗರದ ರೈಲುನಿಲ್ದಾಣಕ್ಕೆ ತೆರಳಿದೆನು. ಅಲ್ಲಿ ಬಂದೋಬಸ್ತ್ ಡ್ಯೂಟಿಯಲ್ಲಿದ್ದ ನಾಲ್ಕು ಪೊಲೀಸರಿಗೆ ಅವಲಕ್ಕಿಯನ್ನು ವಿತರಿಸಿದೆನು. ಅವರು ಖುಷಿಯಿಂದಲೇ ಅವಲಕ್ಕಿ ತಿಂದು ಧನ್ಯವಾದ ಹೇಳಿದರು.

ಇನ್ನೂ ಆರು ಜನರಿಗೆ ಆಗುವಷ್ಟು ಅವಲಕ್ಕಿ ಇತ್ತು. ಅಲ್ಲೇ ರಸ್ತೆ ಬದಿ ಮಲಗಿದ್ದ ಅಜ್ಜಿಗೆ ಒಂಚೂರು ಅವಲಕ್ಕಿ ಬಡಿಸಿ, ಬಸ್ ಸ್ಟ್ಯಾಂಡನಲ್ಲಿ ಯಾರಾದರೂ ಸಿಗಬಹುದೇನೋ ಎಂಬ ನಿರೀಕ್ಷೆಯಲ್ಲಿ ನಾನು ರಾಮು ಬಸ್ ಸ್ಟ್ಯಾಂಡಿಗೆ ತೆರಳಿದೆವು.

ಖಾಲಿ ಇರುವ ಬಸ್ ಸ್ಟ್ಯಾಂಡ್ ಕಾಯಲೆಂದೇ ಡ್ಯೂಟಿ ಮೇಲಿದ್ದ ಮೂವರು ಕಂಟ್ರೋಲರ್ ಗಳು, ಇಬ್ಬರು ಸೆಕ್ಯೂರಿಟಿ ಗಾರ್ಡ್ ಗಳು ಅಲ್ಲಿದ್ದರು. ಅವರಿಗೆ ನಮ್ಮ ಪರಿಚಯ ಹೇಳಿಕೊಂಡು, ‘ಅವಲಕ್ಕಿ ತಿನ್ನುತ್ತೀರಾ ಸರ್?’ ಎಂದು ಕೇಳಿದೆವು.

ಅವರು ಅತ್ಯಂತ ಸಂತಸದಿಂದ ಎಲ್ಲ ಅಲಕ್ಕಿಯನ್ನು ತಾವೇ ಬಡಿಸಿಕೊಂಡು ಖುಷಿಯಿಂದ ಸವಿದು ಧನ್ಯವಾದ ಹೇಳಿದರು. ಅನ್ನಾಮೃತವನ್ನು ಸವಿದು ಅದು ಕೇಡಾಗದಂತೆ ನೋಡಿಕೊಂಡದ್ದಕ್ಕಾಗಿ ನಾವೂ ಅವರಿಗೆ ಪ್ರತಿ ಧನ್ಯವಾದ ಹೇಳಿದೆವು.

ಮಧ್ಯರಾತ್ರಿಯಲ್ಲಿ ಹಸಿದವರಿಗೆ ಅವಲಕ್ಕಿ ಉಣಿಸಿದ ಖುಷಿ ನಮ್ಮಲ್ಲಿತ್ತು. ಬೇಕೆಂದರೂ ಒಂದು ಬಿಸ್ಕತ್ತೂ ಸಿಗದ ಅವಧಿಯಲ್ಲಿ ಹಾಟ್ ಬಾಕ್ಸ್ ನಲ್ಲಿ ಬಂಧಿಯಾಗಿದ್ದ ಬಿಸಿ ಅವಲಕ್ಕಿ ಅವರ ಹೊಟ್ಟೆಯ ಹಸಿವನ್ನು ಹಿಂಗಿಸಿತ್ತು.

ಆ ಪೊಲೀಸಪ್ಪಗಳು ಮತ್ತು ಸಾರಿಗೆ ಸಿಬ್ಬಂದಿ ಕುಚೇಲ ಕೊಟ್ಟ ಅವಲಕ್ಕಿಯನ್ನು ಆತ್ಮತೃಪ್ತಿಯಿಂದ ಸವಿದ ಕೃಷ್ಣನಿಗಿಂತ ಕಡಿಮೆ ಏನಲ್ಲ ಎಂದೆನಿಸಿತು…

ಇನ್ನು ಮನೋಜನ ‘ಅನ್ನದ ಋಣ’ಕ್ಕೆ ಬರುವುದಾದರೆ, ಆತನ ತಂದೆ ಈಶಾನ್ಯ ಸಾರಿಗೆಯಲ್ಲಿ ಕಂಡಕ್ಟರ್, ಕಂಟ್ರೋಲರ್ ಆಗಿ ಸೇವೆ ಸಲ್ಲಿಸಿ, ಕಳೆದ ವರ್ಷವಷ್ಟೇ ನಿವೃತ್ತರಾಗಿದ್ದಾರೆ. ಅವಲಕ್ಕಿ ಸವಿದ ಸಾರಿಗೆ ಸಿಬ್ಬಂದಿ ಮನೋಜನ ತಂದೆಯೊಂದಿಗೆ ತಮ್ಮ ಮನೆಯ ಅನ್ನವನ್ನು ಅದ್ಯಾವಗಲೋ ಹಂಚಿಕೊಂಡು ತಿಂದಿರಬಹುದು… ಅಥವಾ ತಮ್ಮ ತಂದೆಯ ದುಡಿಮೆಯಿಂದ ನಮ್ಮ ಮನೋಜ ಪಡೆದಿದ್ದ ಅನ್ನ, ಶಿಕ್ಷಣದ ಋಣ ಅವಲಕ್ಕಿಯ ರೂಪದಲ್ಲಿ ಸಾರಿಗೆ ಇಲಾಖೆಗೆ ಮರು ಸಂದಾಯವಾಗಿರಬಹುದು..‌.!

ಇನ್ನು ಆ ಪೊಲೀಸರು ಅದ್ಯಾವುದೋ ಸುದ್ದಿ ಮೂಲವಾಗಿ ಮನೋಜನಿಗೆ ಸುದ್ದಿ ಬರೆಯಲು ನೆರವಾಗಿರಬಹುದು… ಅದಕ್ಕಾಗಿಯೇ ಅವರಿಗೂ ಮನೋಜನ ಮನೆಯ ಅವಲಕ್ಕಿಯ ಋಣ ಸಂದಾಯವಾಗಿರಬಹುದು… ಯಾರಿಗೆ ಗೊತ್ತು..?

ಅದಕ್ಕೇ ಅಲ್ಲವೇ ಹಿರಿಯರು ಹೇಳಿದ್ದು, ‘ದಾನೇ ದಾನೇಪೇ ಲಿಖಾ ರೆಹತಾ ಹೈ ಖಾನೇವಾಲೇ ಕಾ ನಾಮ’ ಎಂದು…

ಅಂತೂ ನಾನು ಮನೋಜನ ಮನೆಯ ಅವಲಕ್ಕಿಯನ್ನು ಅದ್ಯಾರ್ಯಾರಿಗೋ ಹಂಚಿದೆನು…!

ಇದರಲ್ಲಿ ನನ್ನ ದೊಡ್ಡತನವೇನಿಲ್ಲ. ಅದೇನಿದ್ದರೂ ನನ್ನ ಬೀಗ ಮನೋಜ ಮತ್ತು ಆತನ ಅರ್ಧಾಂಗಿ, ಅನ್ನಪೂರ್ಣೆ ಸ್ವರೂಪಿ, ಜಾನಕಿಯಮ್ಮನದ್ದು ಮಾತ್ರ…

ಆದರೆ, ಅನ್ನಾಮೃತ ವೇಸ್ಟ್ ಆಗಲಿಲ್ಲ ಎಂಬ ಖುಶಿ ನನ್ನದಾದದ್ದು ಸುಳ್ಳಲ್ಲ…


ಚನ್ನಬಸಪ್ಪ ರೊಟ್ಟಿ ಅವರದು ಸ್ನೇಹಮಯ ವ್ಯಕ್ತಿತ್ವ. ಪತ್ರಕರ್ತರಾಗಿ ಅವರ ಅನೇಕ ವರದಿಗಳು ಗಮನ ಸೆಳೆದಿವೆ. ಬಿ ಇಡಿ ಕಾಲೇಜಿನ ಪ್ರಾಂಶುಪಾಲರಾಗಿದ್ದ ಅವರು ಪ್ರಜಾವಾಣಿಯಲ್ಲಿ ಪತ್ರಕರ್ತ ವೃತ್ತಿ ಆರಿಸಿಕೊಂಡರು. ಶಿಕ್ಷಣದ ಬಗ್ಗೆ ಆಳ ಅಧ್ಯಯನದ ಅವರ ವರದಿಗಳು ಗಮನ ಸೆಳದಿವೆ.

ಹೋರಾಟದ ಮೂಲಕವೇ ಗುರುತಿಸಿಕೊಂಡು ಪತ್ರಿಕೋದ್ಯಮಕ್ಕೆ ಕಾಲಿಟ್ಟ ಮನೋಜ್ ಕುಮಾರ್ ಗುದ್ದಿ ಕಡು ಪ್ರಾಮಾಣಿಕ. ಧಾರವಾಡದಲ್ಲಿ ಅವರು ವರದಿಗಾರರಾಗಿದ್ದಾಗ ಮಾಡಿದ ವರದಿಯೊಂದು ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿತ್ತು. ಚುನಾವಣಾ ಸಮಯದಲ್ಲಿ ಕಾಸಿಗಾಗಿ ಸುದ್ದಿ ವಿಚಾರ ಬಯಲಿಗೆಳೆದಿದ್ದರು. ಇವೆಲ್ಲಕ್ಕಿಂತ ಹೆಚ್ಚಾಗಿ ತಾಯಿ ಹೃದಯದ ಅವರಿಗೆ ಬಡವರೆಂದರೆ ಅಚ್ಚುಮೆಚ್ಚು.

ರೊಟ್ಟಿ ಅವರು ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಬರೆದಿದ್ದು ಇಲ್ಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?