ಮಧುಗಿರಿ – ಮಾಜಿ ಶಾಸಕ ಕೆ.ಎನ್.ರಾಜಣ್ಣ ನುಡಿದಂತೆ ನಡೆದವರಾಗಿದ್ದು, 5 ವರ್ಷಗಳಲ್ಲಿ ತಾಲ್ಲೂಕಿನಾದ್ಯಂತ ಅಭಿವೃದ್ದಿ ಕೆಲಸಗಳನ್ನು ಮಾಡಿ ತೋರಿಸಿದ್ದಾರೆ. ಅವರ ವಿರುದ್ದ ಆರೋಪ ಮಾಡಿರುವವರ ಹೇಳಿಕೆಯನ್ನು ಖಂಡಿಸುತ್ತೇವೆ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ ತಿಳಿಸಿದರು.
ಪಟ್ಟಣದ ಎಂ.ಎನ್.ಕೆ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಹೊಸಕೆರೆ ಗ್ರಾಮದಲ್ಲಿ ಡಿಸಿಸಿ ಬ್ಯಾಂಕಿನ ನೂತನ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಕೆ.ಎನ್.ರಾಜಣ್ಣನವರು ಮಾತನಾಡಿ, ಅವರ ಅಧಿಕಾರಾವಧಿಯಲ್ಲಿ ಮಾಡಿದ ಅಭಿವೃದ್ದಿ ಕಾರ್ಯಗಳ ಬಗ್ಗೆ ತಿಳಿಸಿ ಇಷ್ಟು ಅಭಿವೃದ್ದಿ ಕಾರ್ಯಗಳು ಮತಗಳಾಗಿ ಪರಿವರ್ತನೆಯಾಗಲಿಲ್ಲ. ಮತದಾರರು ಆಸೆ ಆಮೀಷಗಳಿಗೆ ಒಳಗಾಗಿದ್ದರೆಂದು ನೊಂದು ನುಡಿದರೆ ಹೊರತು ಮತದಾರರು ಭ್ರಷ್ಟರೆಂದು ಹೇಳಲಿಲ್ಲ.
ಸಿದ್ದರಾಮಯ್ಯ ಸಿ.ಎಂ ಆಗಿದ್ದಾಗ ಮಿಡಿಗೇಶಿಗೆ ಆಗಮಿಸಿದ್ದಾಗ ಶೂ ಭಾಗ್ಯ ಘೋಷಣೆ ಮಾಡಿದ್ದರಿಂದ ಈ ಯೋಜನೆ ಇಡೀ ರಾಜ್ಯಕ್ಕೆ ವಿಸ್ತಾರಗೊಂಡು ಸಾವಿರಾರು ಬಡ ವಿಧ್ಯಾರ್ಥಿಗಳಿಗೆ ಅನುಕೂಲವಾಯಿತು. ಎತ್ತಿನಹೊಳೆ ಯೋಜನೆಗೆ ಆಯವ್ಯಯದಲ್ಲಿ 12.900 ಕೋಟಿ ರೂ ಮೀಸಲಿರಿಸಿದ್ದು, 4000 ಕೋಟಿ ರೂ ತಕ್ಷಣ ಬಿಡುಗಡೆಗೊಳಿಸಿದ್ದರಿಂದ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ರೈತರ ಸಾಲ ನೀಡುವಲ್ಲಿ ಅವ್ಯವಹಾರ ಆಗಿದೆ ಮತ್ತು ವಿ.ಎಸ್.ಎಸ್.ಎನ್‍ನಲ್ಲಿ ರೈತರಿಗೆ ಸಾಲ ನೀಡುವಾಗ ಹಣ ಕಟಾವು ಮಾಡಿ ಕೊಡುತ್ತಾರೆ ಎಂದು ಜೆ.ಡಿ.ಎಸ್ ನವರು ಸುಳ್ಳು ಆರೋಪ ಮಾಡಿದ್ದಾರೆ. ಸಹಕಾರಿ ನಿಯಮದಂತೆ ಶೇಕಡ ಇಂತಿಷ್ಟು ಷೇರು ಹಣ ಹಿಡಿಯುತ್ತಾರೆ. ಅದು ರೈತರ ಖಾತೆಯಲ್ಲಿದ್ದು, ಮರು ಪಾವತಿ ಮಾಡುವಾಗ ಅದನ್ನು ಜಮಾ ತೆಗೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.
ಇತ್ತೀಚಿನ ಬರಗಾಲದಲ್ಲಿ ಮೇವು ಬ್ಯಾಂಕಿನಿಂದ ರಾಸುಗಳಿಗೆ ಪ್ರತಿದಿನ ಮೇವು ವಿತರಿಸಲಾಗಿದೆ ಎಂದು ಹೇಳಿಕೆ ನೀಡುತ್ತಾರೆ. ಐಡಿಹಳ್ಳಿ ಮತ್ತು ಮಿಡಿಗೇಶಿ ಹೋಬಳಿಗಳಲ್ಲಿ ಕಾಟಾಚಾರಕ್ಕೆ ಮೇವು ವಿತರಿಸಿದ್ದು, ಅದೂ ಕೂಡ ಕಳಪೆಯಾಗಿದೆ. ಹಸಿ ಮೇವು ಸರಬರಾಜು ಮಾಡಿ ಒಣ ಮೇವಿನ ದರದಲ್ಲಿ ಬಿಲ್ ಮಾಡಿದ್ದಾರೆ ಎಂದು ಆರೋಪಿಸಿದರು.
ತಾ.ಪಂ.ಅಧ್ಯಕ್ಷೆ ಇಂದಿರಾ ದೇನಾನಾಯ್ಕ್ ಮಾತನಾಡಿ, ಮೇವು ವಿತರಣೆಯಲ್ಲಿ ಅವ್ಯವಹಾರ ನಡೆದಿಲ್ಲವೆಂದು ಜೆ.ಡಿ.ಎಸ್ ಮುಖಂಡರು ಹೇಳುತ್ತಾರೆ. ಆದರೆ ಅಧಿಕಾರಿಗಳೇ ಬಂದು ಬಿಲ್ ಮಾಡುವುದಕ್ಕೋಸ್ಕರ ಶಾಸಕರಿಗೆ ಹಣ ನೀಡಬೇಕೆಂದು ನನ್ನ ಬಳಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ರಾಜ್ಯ ಸಹಕಾರಿ ಮಹಾಮಂಡಲದ ಅಧ್ಯಕ್ಷ ಎನ್.ಗಂಗಣ್ಣ ಮಾತನಾಡಿ, ಪುರಸಭಾ ಸದಸ್ಯ ಈ ಹಿಂದ ಮಾಡಿರುವ ಅಕ್ರಮ, ಅವ್ಯವಹಾರಗಳ ಬಗ್ಗೆ ಇಡೀ ತಾಲ್ಲೂಕಿನ ಜನತೆಗೆ ತಿಳಿದಿದೆ. ಕೆ.ಎನ್.ರಾಜಣ್ಣನವರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ತಮ್ಮ ನಡವಳಿಕೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಕೆ.ಎನ್.ಆರ್ ಬಗ್ಗೆ ಮಾತನಾಡಲಿ ಎಂದರು.
ತುಮುಲ್ ಮಾಜಿ ಅಧ್ಯಕ್ಷ ಬಿ.ನಾಗೇಶ್ ಬಾಬು ಮಾತನಾಡಿ, ಎಂಪಿಸಿಎಸ್ ಕಾರ್ಯದರ್ಶಿಗಳಿಂದ ಉದ್ಯೋಗ ಕೊಡಿಸುವುದಾಗಿ ಆಮೀಷ ಹೊಡ್ಡಿ ಅಧಿಕಾರಿಯೊಬ್ಬರು ಸುಮಾರು 50 ಲಕ್ಷದವರೆಗೂ ವಸೂಲಿ ಮಾಡಿದ್ದಾರೆ. ಶಾಸಕರು ಈ ಭ್ರಷ್ಟ ಅಧಿಕಾರಿಯನ್ನು ಕರೆಸಿ ಕಾರ್ಯದರ್ಶಿಗಳಿಗೆ ಹಣ ಮರುಪಾವತಿ ಮಾಡಿಸಲಿ. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು.
ತಾ.ಪಂ.ಸದಸ್ಯ ಸೊಸೈಟಿ ರಾಮಣ್ಣ ಮಾತನಾಡಿ, ನಮ್ಮ ಸಮುದಾಯದ 8 ಮಂದಿಗೆ ಡಿಸಿಸಿ ಬ್ಯಾಂಕಿನಲ್ಲಿ ಉದ್ಯೋಗ ಕೊಡಿಸಿ ಕೆ.ಎನ್.ರಾಜಣ್ಣ ನುಡಿದಂತೆ ನಡೆದಿದ್ದಾರೆ. ಆಪೆಕ್ಸ್ ಬ್ಯಾಂಕಿನಲ್ಲಿಯೂ ಜಾತಿ ಪಕ್ಷ ನೋಡದೆ ತಾಲ್ಲೂಕಿನ ಯುವ ಜನರಿಗೆ ನೌಕರಿ ಕೊಡಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ ಸದಸ್ಯ ಚೌಡಪ್ಪ, ಮಾಜಿ ಸದಸ್ಯ ಎಸ್.ಡಿ.ಕೃಷ್ಣಪ್ಪ, ಪುರಸಭಾ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಸದಸ್ಯರಾದ ಎಂ.ವಿ.ಗೋವಿಂದರಾಜು, ತಿಮ್ಮರಾಯಪ್ಪ, ಲಾಲಾಪೇಟೆ ಮಂಜುನಾಥ್, ಎಪಿಎಂಸಿ ಅಧ್ಯಕ್ಷ ಎಂ.ಬಿ.ಮರಿಯಣ್ಣ, ಮಾಜಿ ಅಧ್ಯಕ್ಷ ಪಿ.ಸಿ.ಕೃಷ್ಣಾರೆಡ್ಡಿ, ಗ್ರಾ.ಪಂ.ಅಧ್ಯಕ್ಷ ವಿ.ಆರ್.ಭಾಸ್ಕರ್, ಮುಖಂಡರುಗಳಾದ ಎಸ್.ಆರ್.ರಾಜಗೋಪಾಲ್, ಎಂ.ಎಸ್.ಶಂಕರನಾರಾಯಣ್, ಆದಿನಾರಯಣ ರೆಡ್ಡಿ, ಸುವರ್ಣಮ್ಮ, ದೊಡ್ಡೇರಿ ಕಣಿಮಯ್ಯ, ಡಿ.ಟಿ.ಸಂಜೀವಮೂರ್ತಿ, ಷಕೀಲ್, ಸಾದಿಕ್, ಅಲೀಂ, ಅನಂದ್, ಸಿದ್ದಾಪುರ ವೀರಣ್ಣ, ಎಸ್.ಬಿ.ಟಿ ರಾಮು, ಎಂ.ಜಿ.ರಾಮು, ಅದ್ದೂರಿ ಗೌಡ, ಬಾಬಾ ಫಕೃದ್ದಿನ್,ಸೂರ್ಯಪ್ರಕಾಶ್, ಬಾಲಾಜಿ. ಹೆಂಜಾರಪ್ಪ ಹಾಗೂ ಮುಂತಾದವರು ಇದ್ದರು.