Sunday, September 8, 2024
Google search engine
Homeಜನಮನಮಾಧುಸ್ವಾಮಿಗೆ ಸಚಿವ ಸ್ಥಾನ ತಪ್ಪಿದರೆ ತುಮಕೂರಿನಿಂದ ಯಾರಾಗಬಹುದು ಸಚಿವರು!

ಮಾಧುಸ್ವಾಮಿಗೆ ಸಚಿವ ಸ್ಥಾನ ತಪ್ಪಿದರೆ ತುಮಕೂರಿನಿಂದ ಯಾರಾಗಬಹುದು ಸಚಿವರು!

Publicstory. in


ತುಮಕೂರು: ರಾಜ್ಯ ಸಚಿವ ಸಂಪುಟದ ವಿಸ್ತರಣೆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಕಾನೂನು ಸಚಿವ, ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ ಅವರಿಗೆ ಸಚಿವ ಸ್ಥಾನ ತಪ್ಪಲಿದೆ ಎಂದು ಊಹಾಪೋಹದ ಗಾಳಿ ಜೋರಾಗಿಯೇ ಬೀಸ ತೊಡಗಿದೆ.

ಮಾಧುಸ್ವಾಮಿ ಅದೃಷ್ಟವಂತ ರಾಜಕಾರಣಿ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಅವರ ಸಂಬಂಧಿಕರು, ಆತ್ಮೀಯರು ಅವರಿಗೆ ಮಾತಿನ ಮಂತ್ರಿ ಎಂಬ ಅಡ್ಡ ಹೆಸರು ಇಟ್ಟಿದ್ದಾರೆ.

ಬಿಜೆಪಿ ಸೇರುತ್ತಲೇ ಶಾಸಕರಾಗಿ ಗೆಲುವು ಸಾಧಿಸಿದ್ದಲ್ಲದೇ ಯಾವುದೇ ಲಾಬಿ ಇಲ್ಲದೇ, ಕಾನೂನು ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದು ಎಂಥವರನ್ನು ಹುಬ್ಬೇರುವಂತೆ ಮಾಡಿದೆ.

ಜೆ.ಸಿ,ಮಾಧುಸ್ವಾಮಿ ಅವರು ಯುಡಿಯೂರಪ್ಪ ಅವರೊಂದಿಗೆ ಇಷ್ಟೊಂದು ಆತ್ಮೀಯರಾಗಿ ಬಿಡಬಲ್ಲರು ಎಂಬುದು ಸಂಸದ ಜಿ.ಎಸ್.ಬಸವರಾಜ್ ಅವರಿಗೂ ಮಾಧುಸ್ವಾಮಿ ಅವರನ್ನು ಕೆಜೆಪಿಗೆ ಕರೆದುಕೊಂಡು ಬಂದಾಗ ಗೊತ್ತಿರಲಿಕ್ಕಿರಲಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ಜಿ.ಎಸ್.ಬಸವರಾಜ್ ಅವರದು ಗಳಸ್ಯ ಕಂಠಸ್ಯ. ಯಡಿಯೂರಪ್ಪ ಅವರು ಎಂಥದೇ ಅಡೆ-ತಡೆ ಬಂದರೂ ಜಿ.ಎಸ್ ಬಿ ಅವರನ್ನು ಕೈ ಬಿಡುವುದಿಲ್ಲ. ಅದಕ್ಕೆ ತಾಜಾ ಉದಾಹಣೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಜಿಎಸ್ ಬಿ ಅವರಿಗೆ ಟಿಕೆಟ್ ಕೊಡಿಸಿದ್ದು. ಬಿಜೆಪಿ ಆಂತರಿಕ ಸಮೀಕ್ಷೆಯಲ್ಲಿ ಜಿಎಸ್ ಬಿ ಸೋಲುತ್ತಾರೆ ಎಂದು ಲೆಕ್ಕಾಚಾರ ಹಾಕಿದ್ದರೂ ಸಹ ಒಂದು ಸೀಟು ಸೋತರೂ ಪರವಾಗಿಲ್ಲ ಬಸವರಾಜ್ ಅವರಿಗೇನೆ ಟಿಕೆಟ್ ಕೊಡಬೇಕೆಂದು ಪಟ್ಟು ಹಿಡಿದವರು. ಇದೇನೇ ಇರಲಿ.

ನ್ಯಾಯವಾಗಿ ನೋಡಿದರೆ ತುಮಕೂರು ಜಿಲ್ಲೆಗೆ ಇಬ್ಬರಿಗಾದರೂ ಸಚಿವ ಸ್ಥಾನ ನೀಡಬೇಕಿತ್ತು. ನಾಲ್ವರು ಬಿಜೆಪಿ ಶಾಸಕರನ್ನು ಜಿಲ್ಲೆಯ ಮತದಾರರು ನೀಡಿದ್ದಾರೆ. ಅಲ್ಲದೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನೇ ಸೋಲಿಸಿ ಬಿಜೆಪಿಗೆ ಮನ್ನಣೆ ನೀಡಿದ್ದಾರೆ.

ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಸೇರಿರುವ ಪಾವಗಡ, ಶಿರಾ ತಾಲ್ಲೂಕಿನಲ್ಲೂ ಬಿಜೆಪಿಯನ್ನು ಜನರು ಕೈಹಿಡಿದರು. ಈ ಎಲ್ಲ ಲೆಕ್ಕಾಚಾರಗಳಲ್ಲಿ ಜಿಲ್ಲೆಗೆ ಹೆಚ್ಚು ಪ್ರಾತಿನಿಧ್ಯ ನೀಡಬೇಕಾದದ್ದು ಆ ಪಕ್ಷದ ಕರ್ತವ್ಯ.

ಅಭಿವೃದ್ಧಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ, ಮಾಜಿ ಶಾಸಕ, ತುಮಕೂರು ಗ್ರಾಮಾಂತರ ಕ್ಷೇತ್ರದ ಬಿ.ಸುರೇಶ್ ಗೌಡ ಅವರು ಬಿಎಸ್ ವೈ ಅವರೊಂದಿಗೆ ಹೊಂದಿರುವ ನಂಟಿಗೆ ಈ ಸಲ ಗೆಲುವು ಸಾಧಿಸಿದ್ದರೆ ಸಚಿವ ಸ್ಥಾನದ ಪಟ್ಟಿಯಲ್ಲಿ ಮೊದಲಿಗೇನೆ ಅವರ ಹೆಸರು ಇರುತ್ತಿತ್ತು ಎಂಬ ಮಾತಿಗೆ ಯಾರೂ ಇಲ್ಲ ಎನ್ನುವುದಿಲ್ಲ. ಬಿಜೆಪಿ ಸರ್ಕಾರ ಬಂದರೆ ಸುರೇಶ್ ಗೌಡ ಅವರು ಸಚಿವರಾಗುತ್ತಾರೆ ಎಂಬ ಕಾರಣದಿಂದಲೇ, ಅವರು ರಾಜಕಾರಣದಲ್ಲಿ ಇನ್ನು ಮೇಲಕ್ಕೆ ತಲುಪುತ್ತಾರೆ ಎಂಬ ಈರ್ಷ್ಯೆಯ ಕಾರಣದಿಂದಲೇ ಬಿಜೆಪಿಯ ಕೆಲವರೇ ಅವರನ್ನು ಸೋಲಿಸಿದರು ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ.

ಇನ್ನೂ ಆರ್ ಎಸ್ ಎಸ್ ಹಿನ್ನೆಲೆಯ ತಿಪಟೂರು ಕ್ಷೇತ್ರದ ಬಿ.ಸಿ.ನಾಗೇಶ್ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಸಂಬಂಧ ಅಷ್ಟಕಷ್ಟೇನೆ. ಇದು ಯಾವ ಕಾರಣಕ್ಕೆ ಎಂಬುದು ಆ ಪಕ್ಷದ ಎಲ್ಲರಿಗೂ ಗೊತ್ತು. ಆರ್ ಎಸ್ ಎಸ್ ಜತೆಗಿನ ನಂಟು ಅವರನ್ನು ಸಚಿವ ಸ್ಥಾನಕ್ಕೆ ತಂದು ನಿಲ್ಲಿಸಬೇಕಿತ್ತು. ಆದರೆ ಅವರಿಗೆ ಸಚಿವ ಸ್ಥಾನ ತಪ್ಪಿದೆ. ಈಗ ಮಾಧುಸ್ವಾಮಿ ಬದಲಾದರೆ ನಾಗೇಶ್ ಅವರಿಗೆ ಸಿಗಬಹುದೇನೋ?

ಇನ್ನೂ ತುರುವೇಕೆರೆಯ ಶಾಸಕ ಮಸಾಲ ಜಯರಾಂ ಅವರು ಇದೇ ಮೊದಲ ಸಲ ಶಾಸಕರಾಗಿರುವ ಕಾರಣ ಅವರು ಸಚಿವ ಸ್ಥಾನದಿಂದ ಗಾವುದ್ದ ದೂರ ಇದ್ದಾರೆ. ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಮೊದಲ ಸಲ ಗೆಲುವು ಸಾಧಿಸಿದ್ದರೂ ಯಡಿಯೂರಪ್ಪ ಅವರೊಂದಿಗಿನ ನಂಟು ಅವರನ್ನು ಸಚಿವ ಸ್ಥಾನದ ಹತ್ತಿರಕ್ಕೆ ಕರೆದುಕೊಂಡು ಹೋಗಬಹುದೇನೋ? ಆದರೆ ಸಚಿವ ಸ್ಥಾನ ಅವರಿಗೆ ಸಿಗುವುದು ಈಗಿನ ಸ್ಥಿತಿಯಲ್ಲಿ ಸಾಧ್ಯವಾಗದ ಮಾತು.

ಬಿಜೆಪಿಗಾಗಿ ಅಧಿಕಾರ ತ್ಯಾಗದ ಮಾತುಗಳನ್ನು ಮಾಧುಸ್ವಾಮಿ ಆಡಿದ್ದಾರೆ. ,ಮಾಧುಸ್ವಾಮಿ ಅವರನ್ನು ಸಚಿವ ಸ್ಥಾನದಿಂದ ಕೈ ಬಿಟ್ಟರೆ ಜಿಲ್ಲೆಗೆ ಇನ್ನೊಬ್ಬರಿಗೆ ಅವಕಾಶ ಮಾಡಿಕೊಡಬೇಕಾಗುತ್ತದೆ. ಜಿಲ್ಲೆಗೆ ಪ್ರಾತಿನಿಧ್ಯ ನೀಡದೇ ಹೋದರೆ ಜಿಲ್ಲೆಗೆ ಅಷ್ಟರಮಟ್ಟಿಗೆ ಆದ ಹಿನ್ನಡೆಯೇ ಆಗಲಿದೆ. ಇದಕ್ಕೆ ಬಿಜೆಪಿಯ ಮುಖಂಡರು ಏನ್ನೆನ್ನುತ್ತಾರೆ ನೋಡಬೇಕು.

ಮಾಧುಸ್ವಾಮಿ ಅವರನ್ನು ಕೈ ಬಿಡುವ ಪ್ರಚಾರ/ ಕೈ ಬಿಡುವಂತೆ ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುತ್ತಿರುವವರ ಹಿಂದೆ ಜಿಲ್ಲೆಯವರೇ ಇದ್ದಾರೆ ಎಂಬುದು ಆ ಪಕ್ಷದ ಬಹುತೇಕ ಜನರಿಗೆ ಗೊತ್ತಿದೆ. ಸಚಿವ ಸ್ಥಾನ ಕಳೆದುಕೊಂಡರೆ ಅದನ್ನು ಮಾಧುಸ್ವಾಮಿ ಅವರು ಎಂದಾದರೂ ಒಂದು ದಿನ ಬಹಿರಂಗಪಡಿಸಬಹುದು. ಆದರೆ ಅಲ್ಲಿಯವರೆಗೂ ಎಲ್ಲರೂ ಕಾಯಬೇಕು.

ಪಕ್ಷದ ಹಿತದೃಷ್ಟಿಯಿಂದ, ಅಭಿವೃದ್ಧಿ ಕಾರಣದಿಂದ ಸೋತವರಿಗೂ ಸಚಿವ ಸ್ಥಾನ ನೀಡಿರುವ ಬಿಜೆಪಿಯ ಅಜೆಂಡಾ ಜಿಲ್ಲೆಗೆ ವಿಸ್ತರಿಸಿದರೆ ಮಾಜಿ ಶಾಸಕ ಸುರೇಶ್ ಗೌಡ ಅವರಿಗೆ ಸಚಿವ ಸ್ಥಾನ ಸಿಗಬಹುದು. ಆದರೆ ಅಂತ ಅವಕಾಶ ಕ್ಷೀಣವಾಗಿದೆ. ಅವರೇನಿದ್ದರೂ ನಿಗಮ- ಮಂಡಳಿಯಲ್ಲಿ ಸ್ಥಾನ ಸಿಗಬಹುದೇನೋ?

ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನದ ವಿಚಾರದಲ್ಲೇ ಮೂರು ಬಣಗಳಾಗಿ ಜಿಲ್ಲಾ ಬಿಜೆಪಿ ಒಡೆದುಹೋಗಿದೆ. ಸಚಿವ ಮಾಧುಸ್ವಾಮಿ, ಸಂಸದ ಜಿ.ಎಸ್.ಬಸವರಾಜ್, ಮಾಜಿ ಸಚಿವ, ಹಿರಿಯ ನಾಯಕ ಎಸ್.ಶಿವಣ್ಣ ಈ ಮೂವರಲ್ಲೂ ಒಮ್ಮತ ಮೂಡಿಬಂದಿಲ್ಲ. ಜಿಲ್ಲೆಯಿಂದ ಯಾರನ್ನು ಸಚಿವರಾಗಿ ಮಾಡಬಹುದು, ಇರುವವರನ್ನೇ ಮುಂದುವರೆಸಬೇಕೆ ಎಂಬ ವಿಚಾರದಲ್ಲಿ ಈ ನಾಯಕರ ನಡುವೆ ಒಗ್ಗಟ್ಟು ಮೂಡಲಿದೆ ಎಂದು ನಿರೀಕ್ಷಿಸಲು ಸಾಧ್ಯವೇ ಎನ್ನುತ್ತಾರೆ ಬಿಜೆಪಿಯ ಮುಖಂಡರೊಬ್ಬರು.

ಜಿಲ್ಲೆಗೆ ಸಚಿವ ಸ್ಥಾನ ತಪ್ಪಿದರೂ ಸಹ ಜಿಲ್ಲೆಗೆ ಪ್ರಾತಿನಿಧ್ಯ ನೀಡುವಂತೆ ಒಟ್ಟಾಗಿ ಕೇಳಲಾರರು. ಇನ್ನೂ, ಮತ್ತೊಂದು ಸ್ಥಾನ ಬೇಕೆಂದು ಒತ್ತಡ ಹಾಕುತ್ತಾರೆ ಎಂಬುದು ಕನಸಿನ ಮಾತು ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?