ಸುಜಾತ ಎಸ್.ಎನ್
ಹಣ್ಣುಗಳ ರಾಜನೆನಿಸಿಕೊಂಡಿರುವ ಮಾವಿನಹಣ್ಣಿನ ಸ್ವಾದವನ್ನು ಸವಿಯದವರಿಲ್ಲ. ಹಣ್ಣುಗಳ ಯಶಸ್ವಿ ಮಾರಾಟ ಮತ್ತು ರುಚಿಯು ಹಲವಾರು ಅಂಶಗಳ ಮೇಲೆ ಅವಲಂಬಿತವಾಗಿದ್ದು, ಫಸಲು ಕೊಯ್ಲಿನ ಸಮಯ, ವಿಧಾನ, ಕೊಯ್ಲೋತ್ತರ ಉಪಚಾರ, ಶ್ರೇಣೀಕರಣ, ಪ್ಯಾಕಿಂಗ್ ಮುಂತಾದ ಅಂಶಗಳನ್ನು ಹೊಂದಿರುತ್ತದೆ.
ಕೊಯ್ಲಿನ ಹಂತ
ಮಾವಿನ ವಿವಿಧ ತಳಿಗಳಿಗನುಸಾರವಾಗಿ ಹೂವು ಬಿಟ್ಟ ನಂತರ 120 ರಿಂದ 140 ದಿನಗಳಲ್ಲಿ ಫಸಲು ಕೊಯ್ಲಿಗೆ ಬರುತ್ತದೆ. ಹಣ್ಣಿನ ಭುಜಗಳು ತೊಟ್ಟಿನ ಮಟ್ಟಕ್ಕಿಂತ ಹೆಚ್ಚು ಉಬ್ಬಿ ಬೆಳೆದು ಗಾಢ ಹಸಿರಿನಿಂದ ತೆಳು ಹಸಿರು ಅಥವಾ ಹಳದಿ ಅಥವಾ ಕೆಂಪುವರ್ಣಕ್ಕೆ ತಿರುಗಲು ಪ್ರಾರಂಭಿಸಿದ ಹಂತದಲ್ಲಿ ಕೊಯ್ಲು ಮಾಡುವುದು ಉತ್ತಮ.
ಈ ಹಂತದಲ್ಲಿ ಹಣ್ಣಿನ ತೊಟ್ಟನ್ನು ಸುಲಭವಾಗಿ ಮುರಿದು ಕೊಯ್ಲು ಮಾಡಬಹುದಾಗಿರುತ್ತದೆ. ಕೆಲವು ಅರ್ಧ ಮಾಗಿದ ಹಣ್ಣುಗಳು ಮರದಿಂದ ಬೀಳುವ ಹಂತ ಕೂಡ ಕೊಯ್ಲಿಗೆ ಸರಿಯಾದ ಸಮಯವಾಗಿದ್ದು, ಹಣ್ಣು ಪೂರ್ತಿಯಾಗಿ ಮಾಗಿ ಮೆತ್ತಗಾಗುವವರೆಗೆ ಮರದ ಮೇಲೆ ಬಿಡಬಾರದು.
ಕೊಯ್ಲು ಮಾಡುವ ವಿಧಾನ
ಮಾವಿನ ಫಸಲು ಕೊಯ್ಲಿಗೆ ಸಿದ್ಧವಾದಾಗ ಕೈಗಳಿಂದ, ಬಲೆ ಮತ್ತು ಚಾಕು ಅಳವಡಿಸಿದ ಕೋಲಿನ ಸಾಧನ ಅಥವಾ ಇತರೆ ಸುಧಾರಿತ ಅಥವಾ ಯಾಂತ್ರೀಕೃತ ಉಪಕರಣಗಳಿಂದ ಕೊಯ್ಲು ಮಾಡಬಹುದು. ಮರಗಳನ್ನು ಅಲ್ಲಾಡಿಸಿ ಅಥವಾ ಕೋಲಿನಿಂದ ಬಡಿದು ನೆಲಕ್ಕೆ ಬೀಳಿಸಿ ಕೊಯ್ಲು ಮಾಡಬಾರದು. ಈ ವಿಧಾನದಿಂದ ಹಣ್ಣುಗಳಿಗೆ ಪೆಟ್ಟುತಗುಲಿ ಹಾನಿಯುಂಟಾಗುತ್ತದೆ. ಮಳೆ ಬೀಳುತ್ತಿರುವ ಸಮಯದಲ್ಲಿ ಕೊಯ್ಲು ಮಾಡಬಾರದು. ಇದರಿಂದ ಹಣ್ಣುಗಳ ಮಣ್ಣಿನ ಜೊತೆ ಬೆರೆತು ಸೂಕ್ಷ್ಮ ಜೀವಿಗಳಿಂದ ಕೊಳೆಯುವಿಕೆಯನ್ನು ತಡೆಗಟ್ಟಿದಂತಾಗುತ್ತದೆ.
ಫಸಲನ್ನು ತೀರಾ ನಸುಕಿನಲ್ಲಿ ಕೊಯ್ಲು ಮಾಡಬಾರದು. ಮಾಡಿದಲ್ಲಿ ಹಣ್ಣುಗಳ ಬಣ್ಣವು ಮಾಸುತ್ತದೆ. ಹಣ್ಣುಗಳ ತೊಟ್ಟನ್ನು ಹಣ್ಣಿಗೆ ಸಮೀಪದಲ್ಲಿ ಕತ್ತರಿಸಬಾರದು. ತೊಟ್ಟು ಸುಮಾರು ಒಂದು ಸೆಂ.ಮೀ ಉದ್ದವಾಗಿರುವಂತೆ ಕತ್ತರಿಸಿ ಕೊಯ್ಲು ಮಾಡುವುದು ಒಳಿತು. ಹಣ್ಣಿನ ಸಮೀಪದಲ್ಲಿ ತೊಟ್ಟು ಕತ್ತರಿಸಿದಾಗ ಆ ಭಾಗದಿಂದ ಹೊರ ಸೂಸುವ ರಸ ಅಥವಾ ಹಾಲು ಹಣ್ಣಿನ ಚರ್ಮವನ್ನು ಸುಟ್ಟು ಕಲೆಗಳನ್ನು ಉಂಟು ಮಾಡುತ್ತದೆ.
ಕೊಯ್ಲಿನ ನಂತರ ತೆಗೆದುಕೊಳ್ಳಬೇಕಾದ ಕ್ರಮ
ಕೊಯ್ಲು ಮಾಡಿದ ಫಸಲನ್ನು ಬಿಸಿಲಿನಲ್ಲಿ ಇಡಬಾರದು ಮರದ ನೆರಳಿನಲ್ಲಿ ಮಣ್ಣಿನ ಸಂಪರ್ಕಕ್ಕೆ ಬಾರದಂತೆ ಹುಲ್ಲಿನ ಮೇಲೆ ಸಂಗ್ರಹಿಸಬೇಕು. ಹಣ್ಣುಗಳನ್ನು ಪ್ಯಾಕಿಂಗ್ ಮಾಡುವ 20 ರಿಂದ 30 ನಿಮಿಷ ಮುಂಚಿತವಾಗಿ ಹಣ್ಣುಗಳನ್ನು ತಲೆಕೆಳಗಾಗಿ ಅಥವಾ ತೊಟ್ಟಿನ ಭಾಗ ಕೆಳಗಾಗಿರುವಂತೆ ಹಿಡಿದು ತೊಟ್ಟನ್ನು ಪೂರ್ತಿ ತೆಗೆದುಹಾಕಬೇಕು ಮತ್ತು ತೊಟ್ಟಿನ ರಸ ಅಥವಾ ಹಾಲು ಪೂರ್ತಿ ಸೋರಿ ಹೋಗುವಂತೆ ತಲೆಕೆಳಗಾಗಿ ಇಟ್ಟು ನಂತರ ಪ್ಯಾಕಿಂಗ್ ಮಾಡಬೇಕು.
ಪ್ಯಾಕಿಂಗ್ ಮಾಡುವ ಮುನ್ನ ಗಾತ್ರಕ್ಕನುಗುಣವಾಗಿ ಶ್ರೇಣೀಕರಣ ಮಾಡಿ, ಹಣ್ಣು ತಲೆಕೆಳಗಾಗಿರುವಂತೆ ಪ್ಯಾಕಿಂಗ್ ಮಾಡಬೇಕು. ಇದರಿಂದ ತೊಟ್ಟಿನ ರಸ ಅಥವಾ ಹಾಲು ಹಣ್ಣಿನ ಮೇಲೆ ಸೋರಿಕೆಯಾಗಿ ಸುಟ್ಟ ಕಲೆ ಆಗುವುದನ್ನು ತಡೆಗಟ್ಟಬಹುದು. ಪ್ಯಾಕಿಂಗ್ ಮಾಡುವ ಮುನ್ನ ಪೂರ್ತಿ ಮಾಗಿದ, ಕೊಳೆತ, ಪೆಟ್ಟುತಿಂದ, ಹಾನಿಯಾದ ಕಾಯಿಗಳನ್ನು ಆರಿಸಿ ತೆಗೆದು ಹಾಕುವುದು.
ಹಣ್ಣನ್ನು ಮಾಗಿಸಲು ಯಾವುದೇ ಕಾರಣಕ್ಕೂ ಕ್ಯಾಲ್ಸಿಯಂ ಕಾರ್ಬೈಡ್ ಬಳಸಬಾರದು. ನೈಸರ್ಗಿಕ ವಿಧಾನದಿಂದ ಅಥವಾ ಎಥಿಲಿನ್ ಬಳಕೆಯಿಂದ ಮಾತ್ರ ಹಣ್ಣನ್ನು ಮಾಗಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಹಾರ್ಟಿಕ್ಲಿನಿಕ್ ಅಥವಾ ಆಯಾ ತಾಲ್ಲೂಕಿನ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ತೋಟಗಾರಿಕೆ ಉಪನಿರ್ದೇಶಕ ಬಿ.ರಘು ತಿಳಿಸಿದ್ದಾರೆ.
ಲೇಖಕರು ವಾರ್ತಾ ಇಲಾಖೆಯಲ್ಲಿದ್ದಾರೆ, ತುಮಕೂರು