ಜಸ್ಟ್ ನ್ಯೂಸ್

ಮುಖ್ಯಶಿಕ್ಷಕರ ಕರ್ತವ್ಯ ಲೋಪ : ಪೋಷಕರ ಧರಣಿ

Public story.in


ವೈ.ಎನ್.ಹೊಸಕೋಟೆ : ಶಾಲೆಗೆ ಮುಖ್ಯಶಿಕ್ಷಕರು ಸರಿಯಾಗಿ ಬರುತ್ತಿಲ್ಲವಾಗಿ ಮಕ್ಕಳ ಪ್ರಗತಿ ಕುಂಟಿತವಾಗುತ್ತಿದ್ದು, ಕೂಡಲೆ ಸಂಬAಧಿಸಿದ ಅಧಿಕಾರಿಗಳು ಇವರ ವಿರುದ್ದ ಕ್ರಮ ಕೈಗೊಳ್ಳಬೇಕು ಸಾಸಲಕುಂಟೆ ಗ್ರಾಮದ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆಯ ಪೋಷಕರು ಮಂಗಳವಾರ ಶಾಲೆಯ ಮುಂದೆ ಧರಣಿ ನಡೆಸಿದರು.

೧೨೦ ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ೫ ಜನ ಶಿಕ್ಷಕರಿದ್ದಾರೆ. ಅದರಲ್ಲಿ ಮುಖ್ಯೋಪಾಧ್ಯಯರು ಕಛೇರಿಗೆ ಸೀಮಿತವಾಗುತ್ತಾರೆ. ಒಬ್ಬರು ಸದಾ ಇಲಾಖಾ ತರಬೇತಿಗಳಿಗೆ ಮೀಸಲಾಗುತ್ತಾರೆ. ಇನ್ನೊಬ್ಬರು ೩ ವರ್ಷಗಳಿಂದ ನಿಯೋಜನೆಚಿಯಲ್ಲಿದ್ದಾರೆ.

ಉಳಿದ ಒಬ್ಬ ಟಿಜಿಟಿ ಶಿಕ್ಷಕ ಮತ್ತೊಬ್ಬ ಅತಿಥಿ ಶಿಕ್ಷಕ ಮಾತ್ರ ಪಾಠಗಳನ್ನು ಮಾಡುತ್ತಿದ್ದಾರೆ. ಇದರಿಂದ ಎಲ್ಲಾ ತರಗತಿಗಳಲ್ಲಿನ ಮಕ್ಕಳಲ್ಲಿ ಸಕಾಲಿಕವಾದ ಮತ್ತು ವ್ಯವಸ್ಥಿತವಾಗಿ ಕಲಿಕೆ ಆಗುತ್ತಿಲ್ಲ. ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಇಂತಹ ಶಿಕ್ಷಕರು ಶಾಲೆಗೆ ಅಗತ್ಯ ಇಲ್ಲ. ಹಾಗಾಗಿ ಈ ಕೂಡಲೆ ಮೇಲಾಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಂಡು ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಧರಣಿಯಲ್ಲಿ ಒತ್ತಾಯಿಸಿದರು.

ಪ್ರಸ್ತುತವಿರುವ ತಿಪ್ಪೇಸ್ವಾಮಿಯವರು ಮುಖ್ಯೋಪಾಧ್ಯಯರಾದ ದಿನದಿಂದ ಶಾಲೆಯು ಅವ್ಯವಸ್ಥೆಯ ಗೂಡಾಗಿದೆ. ಮನಸೋ ಇಚ್ಚೆ ಶಾಲೆಗೆ ಗೈರು ಹಾಜರಾಗುತ್ತಾರೆ. ನಂತರ ಬಂದು ಹಾಜರಾತಿ ವಹಿಯಲ್ಲಿ ಸಹಿ ಮಾಡುತ್ತಾರೆ. ರಾಷ್ಟ್ರೀಯ ಹಬ್ಬಗಳಂದು ಶಾಲೆಗೆ ಬರುವುದಿಲ್ಲ. ಶಾಲೆಯ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ.

ಎಲ್ಲಾ ಸಮಸ್ಯೆಗಳಿಗೂ ಮೂಲ ಕಾರಣ ಇವರೇ ಎಂದು ಮುಖಂಡ ನರಸಿಂಹಯ್ಯ ದೂರಿದರು.
ಬೆಳಿಗ್ಗೆ ೧೦.೩೦ ರ ನಂತರ ಶಾಲೆ ಪ್ರಾರಂಭವಾಗಿ ೪.೧೦ ಕ್ಕೆ ಕೊನೆಗೊಳ್ಳುತ್ತಿದೆ. ಮಕ್ಕಳ ಬಿಸಿಯೂಟದ ಕಡೆ ಮುಖ್ಯಶಿಕ್ಷಕ ಗಮನ ನೀಡುತ್ತಿಲ್ಲ. ಹಲವು ಬಾರಿ ವಿದ್ಯಾರ್ಥಿಗಳು ಹುಳುಗಳಿರುವ ಆಹಾರ ತಿಂದಿದ್ದಾರೆ.

ಈ ಬಗ್ಗೆ ಶಾಲಾ ಸಮಿತಿ ಮತ್ತು ಪೋಷಕರು ಚರ್ಚಿಸಿದರೂ ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಚರ್ಚೆ ಮಾಡಿದರೆ ನಿಮಗೆ ಬೇಕಿದ್ದರೆ ಕ್ಷೇತ್ರಶಿಕ್ಷಣಾಧಿಕಾರಿ ಅಥವಾ ಉಪನಿರ್ದೇಶಕರಿಗೆ ದೂರು ನೀಡಿ ಎಂದು ದರ್ಪದಿಂದ ಮಾತನಾಡುತ್ತಾರೆ.

ಸಹಶಿಕ್ಷಕರೊಡನೆ ಸಹಕಾರದಿಂದ ವರ್ತಿಸುತ್ತಿಲ್ಲ. ಬಡ್ತಿ ವಿಚಾರದಲ್ಲಿ ಇಬ್ಬರು ಶಿಕ್ಷಕರು ಹಲವು ದಿನಗಳ ಹಿಂದೆ ಕುರ್ಚಿಗಳನ್ನು ಎತ್ತಿ ಹೊಡೆದಾಡಲು ಮುಂದಾಗಿದ್ದರು. ಇಂತಹ ಶಿಕ್ಷಕರು ಇದ್ದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತದೆ ಎಂಬ ನಂಬಿಕೆ ಇಲ್ಲ. ಹಾಗಾಗಿ ಇಲ್ಲಿನ ಶಿಕ್ಷಕರನ್ನು ಕೂಡಲೇ ವರ್ಗಾವಣೆ ಮಾಡಿ ಬೇರೆಯವರನ್ನು ನೇಮಿಸಬೇಕು ಎಂದು ಗ್ರಾಮಪಂಚಾಯಿತಿ ಸದಸ್ಯ ಶಿವಾರೆಡ್ಡಿ ಒತ್ತಾಯಿಸಿದರು.

ಈ ಶಿಕ್ಷಕ ಬೇಡ


ಮುಖ್ಯಶಿಕ್ಷಕರು ಯಾವುದೇ ಮಾಹಿತಿ ಇಲ್ಲದೆ ಗೈರುಹಾಜರಾಗುತ್ತಾರೆ. ಶಾಲಾ ಸಮಿತಿಗೆ ಸ್ಪಂದಿಸುವುದೇ ಇಲ್ಲ. ಶಾಲಾ ಪ್ರಗತಿಯತ್ತ ಗಮನ ಹರಿಸುವುದಿಲ್ಲ. ಇಂತಹ ಬೇಜವಾಬ್ದಾರಿ ಶಿಕ್ಷಕರು ನಮ್ಮ ಶಾಲೆಗೆ ಬೇಡ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಳು ಮತ್ತು ಉಪನಿರ್ದೇಶಕರಿಗೆ ವಿಷಯ ತಿಳಿಸಿದರೂ ಯಾರೋಬ್ಬರೂ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿಲ್ಲ. ಹಾಗಾಗಿ ನಾವು ಶಾಲೆಯ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಅಧಿಕಾರಿಗಳು ಬಂದು ಪರಿಶೀಲಿಸುವವರೆಗೂ ಧರಣಿ ಮುಂದುವರೆಸುತೇವೆ.
-ವೀರಾಂಜಿ, ಅಧ್ಯಕ್ಷರು, ಶಾಲಾ ಸಮಿತಿ, ಸ.ಹಿ.ಪ್ರಾ.ಶಾಲೆ, ಸಾಸಲಕುಂಟೆ

ವ್ಯವಸ್ಥೆ ಸರಿಪಡಿಸಿ


ಶಾಲಾ ಆವರಣದಲ್ಲಿ ಶುಭ್ರತೆ ಇಲ್ಲ. ಮುಳ್ಳು, ಗಿಡಗಂಟೆಗಳು ಬೆಳೆದು ಕ್ರಿಮಿಕೀಟಗಳು ಸೇರಿವೆ. ಶೌಚಾಲಯ ಗುಂಡಿಯ ಬಂಡೆ ಒಡೆದು ಬಿದ್ದು ಆಹುತಿಗೆ ಕಾಯುತ್ತಿದೆ. ಶಾಲೆಯ ಅವ್ಯವಸ್ಥೆಯ ತಾಣವಾಗಿದೆ. ಅಧಿಕಾರಿಗಳ ನಿರ್ಲಕ್ಷಕ್ಕೆ ಒಳಗಾಗಿ ಗ್ರಾಮದಲ್ಲಿ ಶಿಕ್ಷಣ ಹಾಳಾಗುತ್ತಿದೆ. ಉನ್ನತಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ವ್ಯವಸ್ಥೆಯನ್ನು ಸರಿಪಡಿಸಬೇಕು.
ಗುರುಮೂರ್ತಿ, ಶಾಲಾ ಸಮಿತಿಯ ಸದಸ್ಯ, ಸಾಸಲಕುಂಟೆ

Comments (1)

  1. ಈ ಹೊಟ್ಟೆ ತುಂಬಿದ ಮೇಷ್ಟ್ರು ಗಳನ್ನಅಥವಾ ಮೈಸಾಪಲುಶಿಕ್ಷಕರನ್ನ ಕಡ್ಡಾಯ ನಿವೃತ್ತಿ ಗೊಳಿಸಿದರೆ ಒಂದಷ್ಟು ಕನ್ನಡ ಶಾಲೆಗಳು ಉಳಿಯುವ ಸಾಧ್ಯತೆ ಇದೆ ಎಂಬುದು ನನ್ನ ಅನಿಸಿಕೆ.

Comment here