ರಂಗಭೂಮಿ ಕ್ಷೀಣಿಸುವುದಿಲ್ಲ.. ಬದಲಿಗೆ ಅದು ಬೆಳವಣಿಗೆ ಕಂಡು ಬರುತ್ತಿದ್ದು ನಾಟಕ ನೋಡುವ ಆಸಕ್ತರ ಸಂಖ್ಯೆ ಹೆಚ್ಚಾಗಬೇಕಾಗಿದೆ ಎಂದು ರಾಜ್ಯಸಭಾ ಮಾಜಿ ಸದಸ್ಯೆ ಹಾಗೂ ಹಿರಿಯ ರಂಗಭೂಮಿ ಕಲಾವಿದೆ ಬಿ.ಜಯಶ್ರೀ ಹೇಳಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಯುವಬರಹಗಾರರ ಒಕ್ಕೂಟ ವತಿಯಿಂದ ತುಮಕೂರಿನ ಕನ್ನಡ ಭವನದಲ್ಲಿ ಸಾಧಕರೊಂದಿಗೆ ಸಂವಾದದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದರು.
ರಂಗಭೂಮಿ ಕ್ಷೀಣಿಸುತ್ತಿದೆ ಅನ್ನಿಸುವುದಿಲ್ಲ.
ನಾಟಕ ಪ್ರಯೋಗಗಳು ನಡೆಯುತ್ತಿವೆ. ಆದರೆ ನೋಡುಗರ ಸಂಖ್ಯೆ ಹೆಚ್ಚಬೇಕು ಎಂದರು. ಕನ್ನಡ ಭಾಷೆಯೂ ಕೂಡ ಮರೆಯಾಗುತ್ತಿಲ್ಲ. ಕನ್ನಡ ಭಾಷೆ ನಶಿಸುವುದಿಲ್ಲ. ಕನ್ನಡ ಭಾಷೆ ಬೆಳೆಯುತ್ತದೆ. ಆದರೆ ಇಂಗ್ಲೀಷ್ ಭಾಷೆ ಕಳೆದುಹೋಬಹುದು. ಇಂಗ್ಲೀಷ್ ಭಾಷೆಯಲ್ಲಿ ಆಗುತ್ತಿರುವ ಬದಲಾವಣೆ ಪಲ್ಲಟಗಳು ಇದಕ್ಕೆ ಕಾರಣ ಎಂದರು.
ನಾನು ರಾಜ್ಯಸಭೆಗೆ ಆಯ್ಕೆಯಾದಾಗ ನನಗೆ ಯಾವುದೇ ಒಂದು ಕ್ಷೇತ್ರ ಇರಲಿಲ್ಲ. ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮತ್ತು ಪೂರ್ವ ಭಾಗದಿಂದ ಈಶಾನ್ಯ ರಾಜ್ಯಗಳವರೆಗೆ ನನಗೆ ಕ್ಷೇತ್ರ ವ್ಯಾಪ್ತಿ ಇತ್ತು. ನಾನು ರಾಜ್ಯಸಭೆ ಸದಸ್ಯರಾದ ಮೇಲೆ ಸಾಕಷ್ಟು ಕಲಿತೆ. ಹಲವು ಮಂದಿ ಪಂಡಿತರು, ಪ್ರಶಸ್ತಿ ಪುರಸ್ಕøತರನ್ನು ಭೇಟಿಯಾದೆ. ಇದರಿಂದ ನನಗೆ ಉತ್ತಮ ಸಂಪರ್ಕ ಬೆಳೆಯಿತು. ಸಂತೋಷವೂ ಆಯಿತು ಎಂದು ತಿಳಿದರು.
ಮುಖ್ಯ ಅತಿಥಿಯಾಗಿದ್ದ ಲೇಖಕಿ ಮಲ್ಲಿಕಾ ಬಸವರಾಜು ಮಾತನಾಡಿ, ಜಯಶ್ರೀ ಅವರನ್ನು ಕರೆಸಿರುವುದು ಒಳ್ಳೆಯದು ಎಂದರು. ಕಾವ್ಯ ಬದುಕನ್ನು ಮಾನವೀಯಗೊಳಿಸುತ್ತದೆ. ಕಾವ್ಯ ಓದುವುದರಿಂದ ಮನಸ್ಸು ಉಲ್ಲಸಿತವಾಗಿರುತ್ತದೆ ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಾ.ಹ.ರಮಾಕುಮಾರಿ, ಹಿರಿಯ ಕಲಾವಿದ ಲಕ್ಷ್ಮಣ್ ದಾಸ್ ಮಾತನಾಡಿದರು. ಎಸ್‍ವಿಎಸ್ ಶಿಕ್ಷಣ ಮಹಾವಿದ್ಯಾಲಯ, ಬಸವೇಶ್ವರ ಕಾಲೇಜು ಮತ್ತು ಅಕ್ಷಯ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.