ಜಸ್ಟ್ ನ್ಯೂಸ್

ಕೃಷ್ಣೆಯ ನೀರಲ್ಲಿ ರಕ್ತದ ಕಲೆಗಳ ಶುದ್ಧಿ

ಗಡಿ ಹಂಚಿಕೊಂಡಿರುವ ತಾಲ್ಲೂಕಿನಲ್ಲಿ ಈ ಹಿಂದೆ ಅಂಟಿದ್ದ ರಕ್ತದ ಕಲೆಗಳನ್ನು ಕೃಷ್ಣೆಯ ನೀರಿನಿಂದ ತೊಳೆಯಲು ಬದ್ಧರಾಗಿದ್ದೇವೆ ಎಂದು ಆಂಧ್ರದ ಹಿಂದೂಪುರ ಕ್ಷೇತ್ರದ ಲೋಕಸಭೆ ಸದಸ್ಯ ಗೋರೆಂಟ್ಲ ಮಾಧವ್ ತಿಳಿಸಿದರು.

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕು ನಾಗಲಮಡಿಕೆ ಹಂದ್ರಿನಿವಾ ಯೋಜನೆ ಕಾಮಗಾರಿ ನಿರ್ವಿಘ್ನವಾಗಿ ನೆರವೇರಲೆಂದು ಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಪೇರೂರು ಡ್ಯಾಂಗೆ ನೀರು ಹರಿಸುವ ಸಲುವಾಗಿ ಜನತೆಯ ಕಾಲಿಗೆ ಮುಗಿಯಲು ಸಿದ್ದರಿದ್ದೇವೆ. ರೈತರಿಗೆ ಅನುಕೂಲವಾಗುವಂತೆ ಕಾಮಗಾರಿ ನಡೆಸಲಾಗುವುದು ಎಂದರು.

ರಾಪ್ತಾಡು ಶಾಸಕ ತೋಪುದುರ್ತಿ ಪ್ರಕಾಶ್ ರೆಡ್ಡಿ, ಫೆಬ್ರವರಿ 5 ರೊಳಗೆ ನಾಗಲಮಡಿಕೆ ಮೂಲಕ ಆಂಧ್ರದ ಪೇರೂರು ಡ್ಯಾಂಗೆ ನೀರು ಹರಿಸಲಾಗುವುದು. ಸರ್ಕಾರ ಅನುದಾನ ಬಿಡುಗಡೆ ಮಾಡುವುದು ತಡವಾಗುತ್ತದೆ.ಹೀಗಾಗಿ ಸ್ವಂತ ಖರ್ಚಿನಿಂದ ಕಾಮಗಾರಿ ಆರಂಭಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಉತ್ತರ ಪಿನಾಕಿನಿ ನದಿ ಮೂಲಕ ನೀರು ಹರಿಸಲಾಗುವುದು ಎಂದರು.

ಆಂಧ್ರದ ರೊದ್ದಂ ಕೆನಾಲ್ ನಿಂದ ತುರ್ಕಲಾಪಟ್ನಂ ನಿಂದ ನದಿಯಲ್ಲಿಯೇ ಕಾಲುವೆ ತೋಡಿ ನಾಗಲಮಡಿಕೆ ಚೆಕ್ ಡ್ಯಾಂ ತುಂಬಿಸಿ ಅಲ್ಲಿಂದ ಪೇರೂರಿಗೆ ನೀರು ಹರಿಸಲಾಗುವುದು. ತಾಲ್ಲೂಕಿನಾದ್ಯಂತ ಇಲ್ಲ ಸಲ್ಲದ ಊಹಾ ಪೋಹಗಳನ್ನು ಹಬ್ಬಿಸಲಾಗುತ್ತಿದೆ. ಪೇಪರ್ ಬಳಸದೆ ರೈತರಿಗೆ ಅನುಕೂಲವಾಗುವ ರೀತಿಯಲ್ಲಿಯೇ ನೀರು ಹರಿಸಲಾಗುವುದು ಎಂದರು.

ಹಿಂದಿನ ಶಾಸಕಿ ಪರಿಟಾಲ ಸುನಿತಾ ನಾಗಲಮಡಿಕೆ ಹೋಬಳಿ ರೈತರಿಗೆ ನೀರು ಕೊಡುವುದಿಲ್ಲ. ಕರ್ನಾಟಕದವರಿಗೆ ಏಕೆ ನೀರು ಕೊಡಬೇಕು ಎಂದು ಹೇಳಿಕೆ ನೀಡಿ ಗೊಂದಲ ಸೃಷ್ಠಿಸಿದ್ದರು. ಎರಡೂ ರಾಜ್ಯದವರು ಅಣ್ಣ ತಮ್ಮಂದಿರಿದ್ದಂತೆ. ರಾಪ್ತಾಡು ಕ್ಷೇತ್ರದಷ್ಟೇ ಪ್ರಾಮುಖ್ಯತೆಯನ್ನು ಪಾವಗಡ ತಾಲ್ಲೂಕಿನ ರೈತರಿಗೂ ನೀಡಲಾಗುವುದು ಎಂದರು.

ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಕಾಲುವೆಗೆ ಪೇಪರ್ ಅಳವಡಿಸಿದರೆ ಅದರಿಂದ ತಾಲ್ಲೂಕಿನ ಜನತೆಗೆ ಅನುಕೂಲವಾಗುವುದಿಲ್ಲ. ನಾಗಲಮಡಿಕೆ ಚೆಕ್ ಡ್ಯಾಂ ತುಂಬಿಸಿ ನಂತರ ನೀರು ಹರಿಸಿ ಎಂದು ಮನವಿ ಮಾಡಿದರು.

ಮುಖಂಡ ತಿಮ್ಮಾರೆಡ್ಡಿ, ಎಸ್.ಕೆ.ರೆಡ್ಡಿ, ಗಂಗುಲ ಭಾನುಮತಿ, ಮೀನುಗ ನಾಗರಾಜು, ಸಿಮೆಂಟ್ ಮಂಜು, ಬೋರ್ ವೆಲ್ ಮಂಜುನಾಥ ರೆಡ್ಡಿ, ರಾಮಕೃಷ್ಣರೆಡ್ಡಿ, ಕೃಷ್ಣಾರೆಡ್ಡಿ, ರಮೇಶ್ ಉಪಸ್ಥಿತರಿದ್ದರು.

Comment here