ಪಾವಗಡ: ಪಟ್ಟಣದ ಪುರಸಭೆ ಕಚೇರಿ ಮುಂಭಾಗ ಮಂಗಳವಾರ ಸಂಕ್ರಾಂತಿ ಪ್ರಯುಕ್ತ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ವಿದ್ಯಾರ್ಥಿನಿಯರು, ಮಹಿಳೆಯರು ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಸಂಭ್ರಮಿಸಿದರು.
ಪುರಸಭೆ ಮುಖ್ಯಾಧಿಕಾರಿ ನವೀನ್ ಚಂದ್ರ, ಸಂಕ್ರಾತಿ ಸುಗ್ಗಿಯ ಹಬ್ಬ. ಗ್ರಾಮಿಣ ಭಾಗದಲ್ಲಿ ರೈತಾಪಿ ವರ್ಗವದವರು ಕಣದಲ್ಲಿ ಸಂಗ್ರಹಿಸಿರುವ ದವಸ, ಧಾನ್ಯ, ಬೆಳೆಗಳಿಗೆ ಪೂಜಿಸುವ ವಾಡಿಕೆ ಇದೆ. ಸ್ಥಳೀಯ ಕ್ರೀಡೆಗಳಲ್ಲಿ ಭಾಗವಹಿಸಿ ಐಕ್ಯತೆ ಸಾರುವ ಸಂದೇಶ ಹಬ್ಬದಲ್ಲಿದೆ ಎಂದರು.
ಪುರಸಭೆ ವತಿಯಿಂದ ಸ್ವಚ್ಚತೆ, ಪ್ಲಾಸ್ಟಿಕ್ ನಿಷೇಧದ ಬಗ್ಗೆ ಅರಿವು ಮೂಡಿಸಲು ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ. ಸಾರ್ವಜನಿಕರು ಪುರಸಭೆಯ ಕಾರ್ಯಕ್ರಮಗಳಿಗೆ ಸಹಕಾರ ಕೊಟ್ಟು, ಪಟ್ಟಣದ ಸ್ವಚ್ಚತೆಗೆ ಸಹಕರಿಸಬೇಕು ಎಂದರು.
ಪುರಸಭೆ ಸದಸ್ಯ ಗೊರ್ತಿ ನಾಗರಾಜು, ಸಂಕ್ರಾಂತಿಯನ್ನು ಸುಗ್ಗಿ ಹಬ್ಬವಾಗಿ ರೈತರು ಆಚರಿಸುತ್ತಾರೆ. ಎಳ್ಳು ಬೆಲ್ಲ ತಯಾರಿಸಿ ಮನೆ ಮನೆಗೆ ಹಂಚಿ ಸೌಹಾರ್ಧತೆ ಮೆರೆಯುವ ಹಬ್ಬ. ಬೇಧ ಭಾವ ಮರೆತು ಶಾಂತಿಯುತ ಜೀವನ ನಡೆಸಬೇಕು ಎಂದರು.
ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಭಾರತಿ, ಎನ್.ಮಂಜುಳಾ, ದ್ವಿತೀಯ ಸ್ಥಾನ ಭಾಗ್ಯಶ್ರೀ, ಸುಜಾತ, ತೃತೀಯ ಸ್ಥಾನ ಪಡೆದ ಸುಜಾತ, ಸೌಭಾಗ್ಯಮ್ಮ ಅವರಿಗೆ ಬಹುಮಾನ ವಿತರಿಸಲಾಯಿತು.
ಪುರಸಭೆಯ ಸದಸ್ಯ ರಾಮಂಜಿನಪ್ಪ, ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂಶಶಿಕಿರಣ್, ಬ್ರೈಟ್ ಪ್ಯುಚರ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಶ್ರೀಧರ್ ಗುಪ್ತ, ರೋಟರಿ ಸಂಸ್ಥೆಯ ನಿರ್ದೇಶಕ ಕಿರಣ್, ಅಂತರಗಂಗೆ ಶಂಕರಪ್ಪ ಉಪಸ್ಥಿತರಿದ್ದರು.