ಪಾವಗಡ: ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಜನತೆ ಆತಂಕಕ್ಕೆ ಈಡಾಗಿದ್ದಾರೆ. ಕೊರೊನಾ ಆತಂಕದ ನಡುವೆಯೂ ಸಂಘ ಸಂಸ್ಥೆಗಳು ಮಾಸ್ಕ್, ಆಹಾರ, ಡೆಟಾಲ್ ಇತ್ಯಾದಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ಅಳಿಲು ಸೇವೆ ಮಾಡುತ್ತಿವೆ.
313 ಅಲ್ ಮದದ್ ಸಂಘದ ವತಿಯಿಂದ ಪದಾಧಿಕಾರಿಗಳು ಗ್ರಾಮಗಳಿಂದ ಆಸ್ಪತ್ರೆಗೆ ಬಂದವರಿಗೆ, ಬಡ ಜನತೆಗೆ ಮಧ್ಯಾಹ್ನದ ಊಟ ವಿತರಿಸುತ್ತಿದ್ದಾರೆ. ಲಾಕ್ ಡೌನ್ ಹಿನ್ನೆಲೆ ತುರ್ತು ಪರಿಸ್ಥಿತಿಯಲ್ಲಿ ಪಟ್ಟಣದ ಆಸ್ಪತ್ರೆಗಳಿಗೆ ಬರುವವರಿಗೆ ಊಟ ಸಿಗುತ್ತಿಲ್ಲ. ಹೀಗಾಗಿ ಉಪವಾಸ ಇರಬೇಕಿದೆ. ಆದರೆ ಸಂಘದ ಪದಾಧಿಕಾರಿಗಳು ನಿತ್ಯ ತಮ್ಮ ಪದಾಧಿಕಾರಿಗಳಿಂದ ಸಂಪನ್ಮೂಲ ಸಂಗ್ರಹಿಸಿ ಮಧ್ಯಾಹ್ನದ ವೇಳೆ ವಾಹನಗಳಲ್ಲಿ ಆಸ್ಪತ್ರೆಗಳು, ಬಸ್ ನಿಲ್ದಾಣ ಇತರೆಡೆಗೆ ಹೋಗಿ ಆಹಾರದ ಪೊಟ್ಟಣಗಳನ್ನು ವಿತರಿಸುತ್ತಿದ್ದಾರೆ.
ಬೇಕರಿ, ಹೋಟೆಲ್ ಗಳಿಲ್ಲದೆ ಹಸಿವಿನಿಂದ ಪರದಾಡುತ್ತಿರುವ ಜನತೆಗೆ ಸಂಘದ ವತಿಯಿಂದ ಯುವ ಜನತೆ ಆಹಾರ ವಿತರಿಸುತ್ತಿರುವ ಬಗ್ಗೆ ಜನತೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಂತರ ಆರೋಗ್ಯ ಕೇಂದ್ರ ಹಾಗೂ ರಾಮಕೃಷ್ಣ ಸೇವಾಶ್ರಮದ ವತಿಯಿಂದ ಕಳೆದ ವಾರದಿಂದ ಹಮಾಲಿ, ಕೂಲಿ ಕಾರ್ಮಿಕರು, ಪೌರ ಕಾರ್ಮಿಕರು, ಆಸ್ಪತ್ರೆ ಸಿಬ್ಬಂದಿ, ಬೆಸ್ಕಾಂ ಸಿಬ್ಬಂದಿ, ಪೊಲೀಸ್ ರಿಗೆ ಸಹಸ್ರಾರು ಸಂಖ್ಯೆಯಲ್ಲಿ ಸಾಬೂನು, ಮಾಸ್ಕ್, ಟವೆಲ್ ವಿತರಿಸಲಾಗುತ್ತಿದೆ.
ಈ ಬಗ್ಗೆ ಸ್ವಾಮಿ ಜಪಾನಂದ ಜಿ ಮಾತನಾಡಿ, ಎಲ್ಲ ನೌಕರ ವರ್ಗ, ಬಡ ಜನತೆಗೆ ಸಾಬೂಬು, ಮಾಸ್ಕ್ ಅಗತ್ಯ ಸಾಮಗ್ರಿಗಳನ್ನು ವಿತರಿಸಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಕೂಲಿ ಕಾರ್ಮಿಕರಿಗೆ, ಬಡ ಜನತೆಗೆ ಆಹಾರ ವಿತರಿಸುವ ಯೋಜನೆ ಆರಂಭಿಸುವ ಚಿಂತನೆ ಇದೆ ಎಂದರು.
ಭಾರತೀಯ ವೈದ್ಯಕೀಯ ಸಂಘ ದ ವತಿಯಿಂದ ತಾಲ್ಲೂಕಿನಾದ್ಯಂತ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಹೆಲ್ಪ್ ಸೊಸೈಟಿ ಪದಾಧಿಕಾರಿಗಳು, ಸನ್ ರೈಸ್ ಆಸ್ಪತ್ರೆ ವೈದ್ಯರು ಸಾರ್ವಜನಿಕರಿಗೆ, ರೋಗಿಗಳಿಗೆ ಮಾಸ್ಕ್ ಗಳನ್ನು ವಿತರಿಸುತ್ತಿದ್ದಾರೆ.