ತುಮಕೂರು ಜಿಲ್ಲೆ ಪಾವಗಡ ದಲ್ಲಿ ಕೊರೊನಾ ಲಾಕ್ ಡೌನ್ ನ ಕೆಲ ಷರತ್ತುಗಳನ್ನೇ ಬಂಡವಾಳ ಮಾಡಿಕೊಂಡು ಪೊಲೀಸರು ಹಣ ಸುಲಿಯುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹಾಲು ಮಾರುವವರು ಅಥವಾ ಅಂಗಡಿಯಲ್ಲಿದ್ದ ಸಾಮಗ್ರಿಯನ್ನು ತೆಗೆದುಕೊಳ್ಳಲು ತುರ್ತು ಸ್ಥಿತಿಯಲ್ಲಿ ಬೀಗ ತೆಗೆಯುತ್ತಿದ್ದವರನ್ನು ಕರೆತಂದು ಠಾಣೆಯಲ್ಲಿ ಆಹಾರ, ನೀರು ನೀಡದೆ ಗಂಟೆ ಗಟ್ಟಲೆ ಕೂರಿಸಿ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ. ಠಾಣೆಗೆ ಕರೆತಂದು ಬಡ ಜನತೆಯಿಂದ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂಬ ನೇರವಾದ ಆರೋಪಗಳು ಕೇಳಿ ಬಂದವು.
ತುರ್ತು ಸ್ಥಿತಿಯಲ್ಲಿ ಪೊಲೀಸರಿಗೆ ಕೊಡಲು ಹಣ ಎಲ್ಲಿಂದ ತರಬೇಕು. ಅವರಿಗೆ ಬೇಕಿರುವವರಿಗೆ ಮಾತಿನಲ್ಲಿ ಹೇಳಿ ಕಳುಹಿಸುತ್ತಾರೆ. ಸಾಮಾನ್ಯ ಜನರನ್ನು ಠಾಣೆಗೆ ಕರೆತಂದು ಕೂರಿಸಿ ಕಿರುಕುಳ ಕೊಡುವುದರ ಜೊತೆಗೆ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ದೂರಿದರು.
ಇದರೊಟ್ಟಿಗೆ ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ವಶಪಡಿಸಿಕೊಳ್ಳುವ ಉನ್ನತ ಅಧಿಕಾರಿಗಳ ಆದೇಶವನ್ನೂ ತಮ್ಮ ಲಾಭಕ್ಕೆ ಪೊಲೀಸರು ಬಳಸಿಕೊಳ್ಳುತ್ತಿದ್ದಾರೆ ಎಂದು ಪಟ್ಟಣದ ಜನತೆ ದೂರುತ್ತಿದ್ದಾರೆ. ವಾಹನಗಳನ್ನು ವಶಪಡಿಸಿಕೊಂಡು ಠಾಣೆಗೆ ತಂದ ನಂತರ ಹಣ ಕೊಟ್ಟವರ ವಾಹನಗಳನ್ನು ಬಿಟ್ಟು ಕಳುಹಿಸಲಾಗುತ್ತಿದೆ. ಇವರು ಕೇಳಿದಷ್ಟು ಹಣ ಕೊಡಲಾಗದವರ ವಾಹನಗಳನ್ನು ಮಾತ್ರ ಠಾಣೆಯಲ್ಲಿ ಇರಿಸಿಕೊಳ್ಳಲಾಗುತ್ತಿದೆ.
ವಾಹನಗಳನ್ನು ವಶಪಡಿಸಿಕೊಳ್ಳುವ ವಿಡಿಯೋ ಚಿತ್ರೀಕರಿಸುವಂತೆ ಪೊಲೀಸ್ ಆಯುಕ್ತರು ಸೂಚಿಸಿದ್ದರು. ಆದರೆ ಠಾಣೆಯ ಅಧಿಕಾರಿಗಳು ಇಷ್ಟ ಬಂದಂತೆ ಆದೇಶಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.
144 ಸೆಕ್ಷನ್ ಹಾಗೂ ಲಾಕ್ ಡೌನ್ ಷರತ್ತುಗಳನ್ನು ಹಣ ಮಾಡುವ ಅಸ್ತ್ರವಾಗಿ ಪಟ್ಟಣದ ಪೊಲೀಸರು ಬಳಸಿಕೊಳ್ಳುತ್ತಿರುವುದು ಅಮಾನವೀಯ ಎಂದು ಬಡ ಜನತೆ ಹಿಡಿ ಶಾಪ ಹಾಕುತ್ತಿದ್ದಾರೆ.
ಇದೇ ರೀತಿ ಸಾರ್ವಜನಿಕರಿಗೆ ಸ್ಪಂದಿಸದೆ ತೀವ್ರ ಭ್ರಷ್ಟಾಚಾರದಲ್ಲಿ ತೊಡಗಿದ್ದ ಸಬ್ ಇನ್ ಸ್ಪೆಕ್ಟರ್ ಅನ್ನು ಪೊಲೀಸ್ ವರಿಷ್ಠಾಧಿಕಾರಿ ಕೆಲ ತಿಂಗಳುಗಳ ಹಿಂದೆಯಷ್ಟೆ ಅಮಾನತ್ತುಗೊಳಿಸಿದ್ದರು. ಇದೀಗ ಮತ್ತೆ ಸಮಸ್ಯೆ ಮರುಕಳಿಸುತ್ತಿದೆ ಎಂದು ಜನತೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.