Thursday, July 25, 2024
Google search engine
Homeಜನಮನಶಿರಾ ಉಪಚುನಾವಣೆ: ಜಯಚಂದ್ರ ಸೋಲಿಸಲು ಬಿಜೆಪಿಗೇಕಿಷ್ಟು ಒದ್ದಾಟ?

ಶಿರಾ ಉಪಚುನಾವಣೆ: ಜಯಚಂದ್ರ ಸೋಲಿಸಲು ಬಿಜೆಪಿಗೇಕಿಷ್ಟು ಒದ್ದಾಟ?

ಮಹೇಂದ್ರ ಕೃಷ್ಣಮೂರ್ತಿ


ತುಮಕೂರು: ಕಾಂಗ್ರೆಸ್ ನ ತಿಮ್ಮನಹಳ್ಳಿ ಬೋರಯ್ಯ ಜಯಚಂದ್ರ (T.B.Jayachandra) ಅವರನ್ನು ಶಿರಾ ಉಪ‌ಚುನಾವಣೆಯಲ್ಲಿ ಸೋಲಿಸಲು ಈಗಾಗಲೇ ಒಂದು ಸುತ್ತಿನ ಬೆವರು ಹರಿಸಿರುವ ಬಿಜೆಪಿ ಏಕಿಷ್ಟು ಒದ್ದಾಟ ಆರಂಭಿಸಿದೆ ಎಂಬುದು ಶಿರಾ ನೋಡಿದವರಿಗೆಲ್ಲ ಗೊತ್ತಾಗುತ್ತದೆ.

ಹಾಗೇ, ನೋಡಿದರೆ ಕೃಷ್ಣಾ ಕೊಳ್ಳದ ಶಿರಾ ಬಿಜೆಪಿಯ ಸೆರಗೇನಲ್ಲ. ಬಿಜೆಪಿ ಬಗ್ಗೆ ಅಲ್ಲಿ ಬೆರಳಣಿಕೆ ಮಂದಿ ಯೋಚಿಸುವಂತಾಗಲೂ ಕಾರಣ ಸಂಘ ಪರಿವಾರದ ಕಾರ್ಯಾಚರಣೆ. ಆನಂತರ ಅಲ್ಲಿಗೆ ಒಂದಿಷ್ಟು ಭದ್ರ ಬುನಾದಿ ಹಾಕಿದವರು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸುರೇಶಗೌಡ.

ಸತ್ಯನಾರಾಯಣ್ ಇರುವವರೆಗೂ ನಮಗೆ ದೇವೇಗೌಡರು ಟಿಕೆಟ್ ಕೊಡುವುದಿಲ್ಲ ಎಂದು ಒಳ ಒಳಗೆ ಕೊತ ಕೊತ ಕುದಿಯುತ್ತಿದ್ದ ಜೆಡಿಎಸ್ ಮುಖಂಡರನ್ನು ಮೆಲ್ಲಗೆ ಬಿಜೆಪಿ ತೆಕ್ಕೆಗೆ ಸೇರಿಸಿಕೊಂಡರು, ಅವರಲ್ಲಿ ಪ್ರಮುಖರು ಎಸ್.ಆರ್.ಗೌಡ. ಸುರೇಶಗೌಡರ ಹಿಡಿತಕ್ಕೆ ಸಿಗದಂತೆ ತಪ್ಪಿಸಿಕೊಂಡವರು ಸಿ.ಆರ್. ಗೌಡ, ಪ್ರೆಸಿಡೆನ್ಸಿ ಶಾಲೆಯ ಚಿದಾನಂದ.

ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಆಫರೇಷ‌ನ್ ಕಮಲಕ್ಕೆ ಬಲಿಯಾಗದವರು ಈಚೆಗಷ್ಟೇ ನಿಧ‌ನರಾದ ಶಾಸಕ ಬಿ.ಎಸ್.ಸತ್ಯನಾರಾಯಣ್

ಸತ್ಯನಾರಾಯಣ್ ಅವರು ಎಷ್ಟು ಉದಾರಿ, ಕುಲ್ಲಂಕುಲ್ಲ ಮನುಷ್ಯ ಎಂದರೆ ಅವರಿಗೆ ಏನನ್ನು ಮುಚ್ಚಿಕೊಳ್ಳಲು ಬರುತ್ತಿರಲೇ ಇಲ್ಲ.

ಇನ್ನೂ, ಕಾಯಿತಿಮ್ಮನಹಳ್ಳಿ ಬೋರಯ್ಯ ಜಯಚಂದ್ರ ಕಾಂಗ್ರೆಸ್ ನ ಘಟಾನುಗಟಿ ನಾಯಕರಲ್ಲಿ ಒಬ್ಬರು ಎಂಬುದರಲ್ಲಿ ಅನುಮಾನ ಇಲ್ಲ. ಆದರೆ ಅವರಿಗೆ ಸರಿಯಾದ ಅದೃಷ್ಟ ಕೂಡಿ ಬರಲೇ ಇಲ್ಲ. ಬಂದರೂ ಅದನ್ನು ಬಳಸಿಕೊಳ್ಳಲಿಲ್ಲ. ಹೀಗಾಗಿ ಶಿರಾಗಷ್ಟೇ ಸೀಮಿತ ವಾಗಿ ಉಳಿದರು. ಎಷ್ಟರ ಮಟ್ಟಿಗೆಂದರೆ ಅವರೊಬ್ಬರು ಜಿಲ್ಲೆಯ ನಾಯಕರಾಗಿಯೂ ರೂಪುಗೊಳ್ಳದಷ್ಟು.

ಬಿಜೆಪಿ ಸಂಸದ ಜಿ.ಎಸ್.ಬಸವರಾಜ್ ಅವರ ಮಾತುಗಳಲ್ಲೇ ಹೇಳಬೇಕೆಂದರೆ ಜಯಚಂದ್ರ ಒಬ್ಬ ಬ್ರಾಹ್ಮಣ ರಾಜಕಾರಣಿ. ಅಂದರೆ ಜಿಲ್ಲೆಯ ಚತುರಾತಿ ಚತುರ ರಾಜಕಾರಣಿ. ಅವರು ಯಾರ ವಿರುದ್ಧವೂ ಮಾತನಾಡಿದವರಲ್ಲ. ಹೀಗಾಗಿಯೇ ಹಿರಿಯ ಮುಖಂಡ ಕೆ.ಎನ್.ರಾಜಣ್ಣ ಟೀಕಿಸಿದಾಗಲೂ ಅವರು ಮರು ಮಾತಾಡಿಲ್ಲ. ಈಗ ಈ ಮೌನದ ಚರುರತೆಯೇ ಅವರ ನೆರವಿಗೆ ಬಂದಂತಿದೆ ಎಂಬುದನ್ನು ಹೇಳಕೇಕಾದರೆ ಚುನಾವಣಾ ಫಲಿತಾಂಶದವರೆಗೂ ಕಾಯಬೇಕಾಗಿದೆ.

ಒಕ್ಕಲಿಗರು ಅದರಲ್ಲಿ ಕುಂಚಿಟಿಗ ಒಕ್ಕಲಿಗರು, ಗೊಲ್ಲರು, ಮುಸಲ್ಮಾನರು, ಕುರುಬರು, ದಲಿತರು ಹೆಚ್ಚಿರುವ ಇಲ್ಲಿ ಉಳಿದ ಸಮುದಾಯ ಗೌಣ. ಲಿಂಗಾಯತರ ಪ್ರಾಬಲ್ಯ ಇಲ್ಲದ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಆರಿಸುವ ಮೂಲಕ ನನ್ನ ತಂದೆ ಬಿ.ಎಸ್.ಯಡಿಯೂರಪ್ಪ ಎಲ್ಲ ಜನರ ಪ್ರಶ್ನಾತೀತ ನಾಯಕ ಎಂದು ಹೈ ಕಮಾಂಡ್ ಗೆ ಸಾರುವುದು, ಸರ್ಕಾರವನ್ನು ಮತ್ತಷ್ಟು ಗಟ್ಟಿಗಳಿಸಿಕೊಳ್ಳುವ ಉದ್ದೇಶ ಮುಖ್ಯಮಂತ್ರಿ ಮಗ ವಿಜಯೇಂದ್ರ ಅವರಿಗೆ ಇದ್ದಂತಿದೆ. ಹೀಗಾಗಿಯೇ‌ ಅವರು ಚುನಾವಣೆಗೆ ಮುಂಚೆಯೇ ಶಿರಾಗೆ ಒಂದು ಹೋಗಿದ್ದಾರೆ.

ಒಳ್ಳೆಯ ಅಭ್ಯರ್ಥಿ ಸಿಗದಿದ್ದರೆ ಚುನಾವಣೆ ಫಲಿತಾಂಶ ಘೋಷಣೆಗೆ ಮುನ್ನವೇ ಬಿಜೆಪಿ ಫಲಿತಾಂಶ ಏನಾಗಬಹುದು ಎಂಬುದು ಗೋಡೆ ಮೇಲೆ ಬರೆದಂತೆಯೇ ಇರಲಿದೆ.

ಅಭ್ಯರ್ಥಿಗಳನ್ನು ಕೊನೆ ಗೊಳಿಸದಿದ್ದರೂ ಐದಾರು ಜನರ ಹೆಸರನ್ನು‌ ಜೆಡಿಎಸ್ ನಂತೆ ಬಿಜೆಪಿಯೂ ತೇಲಿ ಬಿಟ್ಟಿದೆ. ಅಷ್ಟರ ಮಟ್ಟಿಗೆ ಆಯಾ ಜಾತಿಯ ಮುಖಂಡರ ಜಾತಿಯ ಜನರು ಬಿಜೆಪಿ ಬಗ್ಗೆ ಯೋಚಿಸಲಿ ಎಂಬುದು ಆ ಪಕ್ಷದ ಚಿಂತಕರ‌ ಚಾವಡಿಯ ಉದ್ದೇಶ ಇರಬಹುದು.

ಈಗ ತೇಲಿ ಬಿಟ್ಟಿರುವ ಹೆಸರುಗಳ ನಾಯಕರಿಗೆ ಜಯಚಂದ್ರ ಅವರ ಎದುರು‌ ನಿಲ್ಲುವಂತಹ ನಾಯಕಗಿರಿ ಏನಿಲ್ಲ. ಹಾಗೇ‌ನಾದರೇ, ಯಡಿಯೂರಪ್ಪ, ಹೇಮಾವತಿ ನೀರು, ಹಿಂದುತ್ವದ ಮುಖ ಮುಂದು ಮಾಡಿ ಬಿಜೆಪಿ ಚುನಾವಣೆ ಎದುರಿಸಬೇಕಾಬಹುದು. ಕೃಷ್ಣಾ‌ಕೊಳ್ಳದ ನೀರಿನ ಹೆಸರಿನಿಂದಲೇ ಶಿರಾದಲ್ಲಿ ರಾಜಕೀಯ ನೆಲೆ‌ಕಂಡುಕೊಂಡ ಜಯಚಂದ್ರ, ಕೆ.ಎನ್.ರಾಜಣ್ಣ ಟೀಂ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಇವುಗಳಿಗೆ ಕಾಂಗ್ರೆಸ್ ನ ಬತ್ತಳಿಕೆಯಲ್ಲಿ ಬಾಣಗಳಿದ್ದಂತೆ ಕಾಣುತ್ತಿಲ್ಲ. ಆದರೆ ಈ ಚುನಾವಣೆ ಮೂಲಕ ಕೆ.ಎನ್.ರಾಜಣ್ಣ ಜಿಲ್ಲೆಯ ರಾಜಕಾರಣದಲ್ಲಿ ಮತ್ತೊಂದು ಹೆಜ್ಜೆ ಮುಂದೆ ಸಾಗಿ ಹೋಗುವುದಂತೂ ಸತ್ಯ.

ಇನ್ನು ಜಯಚಂದ್ರ ಅವರ ಅಭಿವೃದ್ಧಿ ರಾಜಕಾರಣದ ಬೆನ್ನು ಮುರಿಯಲು ಅಭಿವೃದ್ಧಿ ವಿಷಯದಲ್ಲಿ‌ ಜಿಲ್ಲೆಯ ಮನೆ ಮಾತಾಗಿರುವ ಮಾಜಿ ಶಾಸಕ ಬಿ.ಸುರೇಶಗೌಡ‌ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿಸಿದರೆ ಮಾತ್ರ ಬಿಜೆಪಿಗೆ ಪ್ರಚಾರ ಸುಲಭವಾಗಲಿದೆ. ಗೆಲುವಿ‌ನ‌‌ ದಡ ಸೇರಬಹುದೇನೊ ಎಂಬ ವಿಶ್ವಾಸ ಆ ಪಕ್ಷದ ಕಾರ್ಯಕರ್ತರಲ್ಲಿ, ಕ್ಷೇತ್ರದ ಜನರಲ್ಲಿ ಮೂಡಬಹುದುದೇನೊ?

ಕಾಂಗ್ರೆಸ್, ಜೆಡಿಎಸ್ ಬಲಾಢ್ಯದ ಕೋಟೆಯಲ್ಲಿ ಹೂ ಅರಳಿಸುವುದು ಬಿಜೆಪಿಗೆ ಅಷ್ಟು ಸುಲಭದ ಮಾತಲ್ಲ.

ಇನ್ನೂ ಜೆಡಿಎಸ್ ಗೆ ಅನುಕಂಪದ ಅಲೆ ಅಷ್ಟೇನು ಕೆಲಸ ಮಾಡುವುದಿಲ್ಲ. ಕಳೆದ ಸಲ ಸತ್ಯನಾರಾಯಣ್ ಅವರನ್ನು ಗೆಲುವಿನ ದಡ ಮುಟ್ಟಿಸಿದ್ದೇ ಅವರ ಮೇಲಿದ್ದ ಅನುಕಂಪ. ಸುಮ್ಮನೇ ಗೆಲ್ಲಿಸಿ ಬಿಡಬಹುದಾಷ್ಟು ಅನುಕಂಪ ಖಂಡಿತಾ ಆ ಪಕ್ಷಕ್ಕೆ ಉಪ‌ಚುನಾವಣೆಯಲ್ಲಿ ಸಿಗಲಾರದು.

ಜೆಡಿಎಸ್ ನಲ್ಲೂ ಕೂಡ ನಾಲ್ಕಾರು ಜನರು ಹಲವು ದಶಕಗಳಿಂದ ಟಿಕೆಟ್ ಮೇಲೆ ಕಣ್ಣಿಟ್ಟು ಕಾದಿದ್ದಾರೆ. ಇವರನ್ನೆಲ್ಲ ಶಮನಗೊಳಿಸಿಕೊಂಡು ಸತ್ಯ‌ನಾರಾಯಣ್ ಮಗನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸತ್ಯನಾರಾಯಣ್ ಅವರ ಹೆಸರಿನಲ್ಲಿ ಏಕ ಮನಸ್ಸಿನಲ್ಲಿ ಜೆಡಿಎಸ್ ಕೆಲಸ ಮಾಡಿದರೆ ಸದ್ಯದ ಪರಿಸ್ಥಿತಿಯಲ್ಲಿ ಕಾಣುತ್ತಿರುವ ಚುನಾವಣಾ ದೃಶ್ಯ ಏನೆಲ್ಲ ಆಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಬಿಜೆಪಿ ಈಗಾಗಲೇ ಒಂದು ಸುತ್ತಿನ ಪ್ರಚಾರವನ್ನು ಮುಗಿಸಿದಂತಿದೆ. ಅಭ್ಯರ್ಥಿ‌ ಯಾರೆಂಬುದೇ ಗೊತ್ತಿಲ್ಲ. ಆದರೆ ಅಲ್ಲಿ‌ನ ಜನರ ಮನಸ್ಸಿನಲ್ಲಿ ಮಾಜಿ ಶಾಸಕ ಸುರೇಶ ಗೌಡ ಹೆಸರು ತೇಲಿ ಹೋಗುತ್ತಿದೆ. ಸುರೇಶ ಗೌಡರು ತಮ್ಮ ಪ್ರೀತಿಯ ತುಮಕೂರು ಗ್ರಾಮಾಂತರ ಕ್ಷೇತ್ರ ಬಿಟ್ಟು ಶಿರಾಗೆ ಹೋಗುತ್ತಾರೆಯೇ ಎಂಬ ಪ್ರಶ್ನೆ ಕೂಡ ಇದೆ.

ಇನ್ನೂ, ಕಾಂಗ್ರೆಸ್ ನಲ್ಲಿ ಬೇರೇ ಮಾತೇ ಇಲ್ಲದಂತೆ ಟಿಬಿಜೆ ಹೆಸರು ಘೋಷಣೆಯಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರ ಸಾಮರ್ಥ್ಯ ಕೂಡ ಈ ಚುನಾವಣೆ ಹೊರಗಲ್ಲಿಗೆ ಹಚ್ಚಿದೆ.

ಲೋಕಸಭಾ ಚುನಾವಣೆಯಲ್ಲಿ ಸೋತ ಜೆಡಿಎಸ್ ಗೆ ಮತ್ತೇ ಮುಖ ಉಳಿಸಿಕೊಳ್ಳುವ ಸವಾಲು ಸಹ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?