Monday, June 17, 2024
Google search engine
Homeಜನಮನಸಚಿವ ಮಾಧುಸ್ವಾಮಿ ಯಾಕೆ ಹೀಗಾದರು...?

ಸಚಿವ ಮಾಧುಸ್ವಾಮಿ ಯಾಕೆ ಹೀಗಾದರು…?

Publicstory.in


ತುಮಕೂರು: ಬುದ್ಧಿವಂತ, ಸದನ ಶೂರ ಎಂದು ಜನಮಾನಸದಲ್ಲಿ ಬೇರು ಬಿಟ್ಟಿರುವ ಕಾನೂನು ಸಚಿವರಾದ ಜೆ.ಸಿ. ಮಾಧುಸ್ವಾಮಿ ಕೋಲಾರದಲ್ಲಿ ರೈತ ಮಹಿಳೆಯನ್ನು ಅವಾಚ್ಯ ಶಬ್ದದಿಂದ ನಿಂದಿಸುವ ಮೂಲಕ ಸುದ್ದಿಯಲ್ಲಿದ್ದಾರೆ.

ಇದೇ ಕಾರಣಕ್ಕಾಗಿ ಅವರ ರಾಜೀನಾಮೆ ಪಡೆಯಲು, ಕೊಡುವಂತೆ ಮಾಡಲು ಪಕ್ಷದ ಒಳಗೆ, ಹೊರಗೆ ತಂತ್ರಗಾರಿಕೆ ಆರಂಭವಾಗಿದೆ.

ಮಾಧುಸ್ವಾಮಿ ಅವರನ್ನು ಹತ್ತಿರದಿಂದ ಬಲ್ಲವರಿಗೂ ಅವರ ಏಕೀಗೆ ವರ್ತಿಸುತ್ತಿದ್ದಾರೆ. ಸಿಟ್ಟು ಅದಮಿಟ್ಟುಕೊಳ್ಳಲು ಆಗುವುದಿಲ್ಲವೇ? ಅವರಲ್ಲಿರುವ ಹಳೇ ಗುಣಗಳ ಪುನಾವರ್ತನೆ ಆಗುತ್ತಿದೆಯಲ್ಲ ಏಕೆ ಎಂಬುದು ನಮಗೂ ಗೊತ್ತಿಲ್ಲ ಎನ್ನುತ್ತಿದ್ದಾರೆ.

ಮಹಿಳೆಯರನ್ನು ನಿಂದಿಸುವ ಮಟ್ಟಕ್ಕೆಇಳಿದಿರುವ ಯಾವುದೇ ಸಚಿವರು ಅಧಿಕಾರದಲ್ಲಿ ಇರಬಾರದು. ತಪ್ಪು, ಸರಿ ಬೇರೆ ಮಾತು. ಆದರೆ ಕಾನೂನು ಸಚಿವರೊಬ್ಬರು ಕೆಟ್ಟ ಭಾಷೆಯಲ್ಲಿ ಆಡಿರುವ ಮಾತುಗಳು ಸಮರ್ಥನೀಯವಲ್ಲ. ಈ ವಿಚಾರದಲ್ಲಿ ಮಾಧುಸ್ವಾಮಿ ಅವರನ್ನು ಸಮರ್ಥಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರ ಹತ್ತಿರದವರೇ ಹೇಳುತ್ತಿದ್ದಾರೆ. ಅವರ ಸಿಟ್ಟು ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡಬಿಡಬಲ್ಲದೇ ಎಂಬ ಆತಂಕ ಕೂಡ ಅವರಲ್ಲಿದೆ.

ಮಾಧುಸ್ವಾಮಿ ಅದೃಷ್ಟದ ರಾಜಕಾರಣಿ. ಅವರ ಬುದ್ಧಿವಂತಿಕೆ, ಮಾತುಗಾರಿಕೆ, ಯಡಿಯೂರಪ್ಪ ಅವರ ಪರವಾಗಿ ಬಂಡೆ ರೀತಿ ನಿಂತಿರುವ ಕಾರಣದಿಂದಲೇ ಅವರು ಎಲ್ಲರನ್ನೂ ಬದಿಗೊತ್ತಿ, ಆರ್ ಎಸ್ ಎಸ್ ಹಿನ್ನೆಲೆ ಇಲ್ಲದಿದ್ದರೂ ಸಚಿವರಾದರು. ಅದೃಷ್ಟ ಆಚೀಚೆ ಕತ್ತು ಹಾಯಿಸದಿದ್ದರೆ ಕೆಲ ತಿಂಗಳ ಕಾಲವಾದರೂ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರುವ ಸಂಭವವೂ ಇತ್ತು.

ಮಾಧುಸ್ವಾಮಿ ಅವರನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತು ಅವರು ದುರ್ವಾಸ ಮುನಿ. ವಿಪರೀತ ಸಿಟ್ಟಿನ ಮನುಷ್ಯ. ಜನರ ಬಗ್ಗೆ ಒಳಾಂತರ್ಯದಲ್ಲಿ ಕಾಳಜಿ ಇರುವವರು. ವೋಟಿಗಾಗಿ ಜನರನ್ನು ಓಲೈಸುವುದಿಲ್ಲ. ನೇರವಾಗಿ ಅವರ ಬಳಿ ಅಭಿಮಾನಿಗಳು, ಹಿಂಬಾಲಕರು, ಕಾರ್ಯಕರ್ತರು ಹೋಗುವುದಿಲ್ಲ. ಅದರಿಂದ ಬೈಯಿಸಿಕೊಳ್ಳುವುದು ಖಚಿತ ಎಂಬ ಕಾರಣಕ್ಕೆ ಹೆದರುತ್ತಾರೆ. ಅಳೆದು ತೂಗಿ ಏನಾದರೂ ಇದ್ದರೆ ಹೇಳುತ್ತಾರೆ. ಇದು ಅವರನ್ನು ನೋಡಿದವರಿಗೆ ಗೊತ್ತಿರುವ ವಿಷಯವೇ? ಅವರ ಪಕ್ಷದವರೂ ಸಹ ಅವರಿಗೆ ಏನನ್ನು ಹೇಳಿ ಕೆಲಸ ಮಾಡಿಸಿಕೊಳ್ಳುವುದಿಲ್ಲ.

ಇಂಥ ಸಚಿವರು ಸಾರ್ವಜನಿಕ ವರ್ತನೆಗಾಗಿ ಹಲವು ಬಾರಿ ಟ್ರೋಲ್ ಆಗುತ್ತಿದ್ದಾರೆ. ಅವರ ಬಗ್ಗೆ ಇದ್ದ ಸಾರ್ವಜನಿಕ ಅಭಿಪ್ರಾಯವೇ ತಲೆ ಕೆಳಗು ಆಗುತ್ತಿದೆ.

ಅವರು ಹೇಳಿದ್ದೇ ನಡೆಯಬೇಕು, ಅವರೊಂದಿಗೆ ಎಲ್ಲರೂ ವಿನಯದಿಂದ ನಡೆದುಕೊಳ್ಳಬೇಕು ಎಂಬ ಮನೆ ಯಜಮಾನನ ವರ್ತನೆ ಇಂದು ಮಂತ್ರಿ ಸ್ಥಾನದಿಂದ ಕೈ ಬಿಡುವಂಥಹ ಸ್ಥಿತಿಯನ್ನು ಸೃಷ್ಟಿಸಿದೆ.

ಮಾಧುಸ್ವಾಮಿ ಅವರನ್ನು ಕಂಡರೆ ಬಿಜೆಪಿಯೊಳಗೂ ಆಗುವುದಿಲ್ಲ ಎಂಬುದು ಬಿಜೆಪಿಯ ಯಾವ ನಾಯಕರನ್ನು ಕೇಳಿದರೂ ಹೇಳುತ್ತಾರೆ. ಜಿಲ್ಲೆಯ ಬಿಜೆಪಿಯಲ್ಲೂ ಅವರು ಒಬ್ಬಂಟಿ. ಅವರೊಂದಿಗೆ ಯಾರೂ ಇಲ್ಲ.

ಕಳೆದ ಚುನಾವಣೆಯಲ್ಲಿ ಮಾಜಿ ಸಚಿವ ಜಯಚಂದ್ರ ಅವರ ಪುತ್ರನ ಸ್ಪರ್ಧೆ ಮಾಧುಸ್ವಾಮಿ ಅವರ ಗೆಲುವಿಗೆ ಕಾರಣವಾಯಿತು ಎಂಬುದನ್ನು ಹೇಳಲು ರಾಜಕೀಯ ಬುದ್ಧಿವಂತಿಕೆಯೇನು ಬೇಕಿಲ್ಲ.

ತುಮಕೂರಿನ ಹೆಗ್ಗಳಿಕೆ ಕಾರಣವಾಗಬಹುದಾದ ಅವಕಾಶ ಸಿಕ್ಕಿರುವಾಗ ಮಾಧುಸ್ವಾಮಿ ಯಾಕೆ ಹೀಗಾದರು? ಯಾವಾಗ ಸಿಟ್ಟು ಬರುತ್ತದೆ, ಯಾವಾಗ ಬರುವುದಿಲ್ಲ ಎಂಬುದನ್ನು ಅವರೇ ನಿರ್ಧರಿಸಿಕೊಳ್ಳಬೇಕು. ನಾನಿರುವುದೇ ಹೀಗೆ ಎಂದು ಸಿಕ್ಕ ಸಿಕ್ಕವರನ್ನು ಬೈಯುವ, ಅವರಿಗೆ ಅಸಡ್ಡೆ ತೋರುವುದು ಜನ ನಾಯಕರ ಲಕ್ಷಣ ಅಲ್ಲ ಎಂದು ಅವರಿಗೂ ಗೊತ್ತಿರುವ ವಿಷಯವನ್ನು ಇಲ್ಲಿ ಹೇಳಬೇಕಾಗಿಲ್ಲ.’

ನಿಜವಾಗಿಯೂ, ಹೇಳಬೇಕಾದರೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಅವರು ಗೆಲುವಿನ ಹೆಜ್ಜೆಗಳನ್ನು ಇಡುತ್ತಿಲ್ಲ. ಒಂದೊಂದೇ ಸೋಲಿನ ಹೆಜ್ಜೆಯ ಕಡೆಗೇ ಹೋಗುತ್ತಿದ್ದಾರೆ. ಕೊರೊನಾ ಸಂಕಷ್ಟದಲ್ಲೂ ಜನರು ಅಭಿಮಾನ ಪಡುವಂಥ ಆಡಳಿತ ಅವರಿಂದ ಸಾಧ್ಯವಿಲ್ಲವಾಗುತ್ತಿದೆ.

ಜಿಲ್ಲೆಯಲ್ಲಿರುವ ಬಿಜೆಪಿಯ ಮತ್ತೊಂದು ಶಕ್ತಿ ಕೇಂದ್ರ, ಸಚಿವರ ಜೊತೆಗೆ ಇಲ್ಲ ಎಂಬುದು ಗೊತ್ತು. ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಕೆಲವು ಸಲ ಅವರಿಗೆ ಹಿನ್ನಡೆ ಆಗಿರಬಹುದು.

ಅವರ ಸಿಟ್ಟಿನ ವರ್ತನೆ, ಅತ್ಯಂತ ಪ್ರಾಮಾಣಿಕತೆಯಿಂದ ಇರಬೇಕು, ಲಂಚಕ್ಕೆ ಅವಕಾಶ ಇಲ್ಲ ಎಂಬ ಕಾರಣಗಳಿಂದಾಗಿಯೇ ಅವರ ಸ್ವಂತ ಕ್ಷೇತ್ರದಲ್ಲಿ ಅಧಿಕಾರಿಗಳು ವರ್ಗಾವಣೆಯಾಗಿ ಬರಲು ಹೆದರುತ್ತಾರೆ ಎಂಬುದನ್ನು ಅವರು ಗುಪ್ತಚರ ಇಲಾಖೆಯಿಂದ ಮಾಹಿತಿ ತರಿಸಿ ನೋಡಿಕೊಳ್ಳಬಹುದು.

ಹಿಂದುಳಿದಿದ್ದ ಚಿಕ್ಕನಾಯಕನಹಳ್ಳಿಯ ಅಭಿವೃದ್ಧಿಗೆ ಒಳ್ಳೆಯ ಕೆಲಸಗಳನ್ನೇ ಮಾಡುತ್ತಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.

ಸಲಹೆ, ಬುದ್ಧಿ ಹೇಳುವವರನ್ನು ಕಂಡರೆ ಸಚಿವರಿಗೆ ಸುತರಾಂ ಇಷ್ಟ ಆಗುವುದಿಲ್ಲ, ಅದನ್ನೂ ಅವರು ಸಹಿಸುವುದು ಇಲ್ಲ. ಬೆಳೆದು ಬಂದಿರುವ ಈ ಮನಸ್ಥಿತಿ ಕಾರಣದಿಂದಲೇ ಅವರು ಪದೇಪದೇ ಜನ ನಾಯಕನಾಗಿ ಬೆಳೆಯುವುದನ್ನು ತಪ್ಪಿಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಹಲವು ಜನಪ್ರತಿನಿಧಿಗಳು.

ಬೇರೆ ಸಚಿವರು ಮಹಿಳೆಯೊಂದಿಗೆ ಇಂಥ ಅನುಚಿತ ಮಾತುಗಳನ್ನಾಡಿದರೆ ಖಂಡಿತವಾಗಿಯೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬರುತ್ತಿತ್ತು. ಈಗಲೂ ಮಾಧುಸ್ವಾಮಿ ಅವರ ರಾಜೀನಾಮೆ ತೆಗೆದುಕೊಳ್ಳಲು ಬಿಜೆಪಿಯೊಳಗೆ, ವಿರೋಧ ಪಕ್ಷಗಳು, ರೈತ ಸಂಘಟನೆಗಳು ಒತ್ತಾಯಿಸಬಹುದು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇದಕ್ಕೆ ಅವಕಾಶ ನೀಡುವುದಿಲ್ಲ ಎಂಬುದು ಸ್ವತಃ ಮಾಧುಸ್ವಾಮಿಯವರಿಗೆ ಗೊತ್ತು.

ಹೀಗಾಗಿ ಅವರ ಸಚಿವ ಗಿರಿಗೆ ಇದು ಕುತ್ತು ತರುವುದಿಲ್ಲ. ಆದರೆ ಒಬ್ಬ ಕಾನೂನು ಸಚಿವರು ಇಡೀ ನಾಡಿಗೆ ಗೌರವ, ಅಭಿಮಾನದ ಸಂಕೇತವಾಗಬೇಕೇ ಹೊರತು ಕೆಟ್ಟ ಮಾದರಿಯ ಸಂಕೇತ ಆಗಬಾರದು. ಈ ಮಾತುಗಳನ್ನು ಮುಂದೆಂದಾದರೂ ಬೇರೆಯವರ ವಿಚಾರದಲ್ಲಿ ಅವರು ಸಹ ಹೇಳಬಹುದೇನೋ?

ಕೆರೆ ಉಳಿಸುವ ರೈತ ಮಹಿಳೆಯ ಕಾಳಜಿಯನ್ನು ಸಚಿವರು ಸ್ಥಳದಲ್ಲೇ ಮೆಚ್ಚಬೇಕಾಗಿತ್ತು. ತನಿಖೆಗೆ ಆದೇಶ ಮಾಡಬೇಕಾಗಿತ್ತು. ಸಣ್ಣ ನೀರಾವರಿ ಸಚಿವರಾಗಿ ಕೆರೆಗಳನ್ನು ಉಳಿಸಿಕೊಳ್ಳುವ ಬಗ್ಗೆ ಇಡೀ ನಾಡಿಗೆ ಇಲ್ಲಿಂದಲೇ ಒಂದು ಸಂದೇಶ ಕೊಡವ ಅವಕಾಶವನ್ನು ಅವರು ತಪ್ಪಿಸಿಕೊಂಡಿದ್ದಾರೆ .

ಆ ಮಹಿಳೆಯನ್ನು ಕರೆದು ಸಚಿವರು ಮಾತನಾಡಬೇಕು. ಚಿಕ್ಕನಾಯಕನಹಳ್ಳಿಯಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ, ಪರಿಸರ, ಕೆರೆ ಉಳಿಸುವ ಸಂಬಂಧ ಮಾಧುಸ್ವಾಮಿ ಅವರ ಹೋರಾಟ ಜನರು ಮರೆತಿಲ್ಲ. ಒಬ್ಬ ಒಳ್ಳೆಯ ಮನುಷ್ಯ ತನ್ನ ಸಿಡುಕು, ದುಡುಕು, ನಾಲಿಗೆಗೆ ಬ್ರೇಕ್ ಹಾಕದ ಕಾರಣದಿಂದಾಗಿ ಜನಮಾನಸದಿಂದ ದೂರ ಆಗುವುದು ಇತಿಹಾಸದ ದೃಷ್ಟಿಯಿಂದ ಒಳ್ಳೆಯದಲ್ಲ.

ಇದು‌ ಮಾಧುಸ್ಚಾಮಿ ಅವರಿಗೆ ಆಗುವ ನಷ್ಟ ಅಲ್ಲ. ಬುದ್ಧಿವಂತ ಸಚಿವರೊಬ್ಬರಿಂದ ನಾಡು ಒಳ್ಳೆಯ ಆಡಳಿತವನ್ನು ಕಳೆದುಕೊಂದು ಕೆಟ್ಟ ಮಾದರಿಗೆ ಸಾಕ್ಷಿಯಾಗಬಾರದು ಅಲ್ಲವೇ?

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?