Thursday, October 3, 2024
Google search engine
Homeಜನಮನಹಳ್ಳಿ ಹುಡುಗರ ದಾರಿದೀಪವಾದ ಅಚ್ಚುಮೆಚ್ಚಿನ ಮೇಷ್ಟ್ರು

ಹಳ್ಳಿ ಹುಡುಗರ ದಾರಿದೀಪವಾದ ಅಚ್ಚುಮೆಚ್ಚಿನ ಮೇಷ್ಟ್ರು

ಮಹೇಂದ್ರ ಕೃಷ್ಣಮೂರ್ತಿ


ಆಗಿನ್ನೂ ನಾನು ಐದನೇ ತರಗತಿಯಲ್ಲಿದ್ದೆ. ಸಿ.ಎಸ್.ಪುರದ ಸರ್ಕಲ್ ನಲ್ಲಿದ್ದ ಕಟ್ಟಡದಲ್ಲಿ ನಮ್ಮ ಶಾಲೆ ಇತ್ತು. ಏಳನೇ ತರಗತಿ ಶಾಲೆ ಸಿ.ಎಸ್.ಪುರದ ಬಸ್ ನಿಲ್ದಾಣದ ಸಮೀಪದಲ್ಲಿತ್ತು. ನಾವು ಪಕ್ಕದ ಸಿ.ಎನ್.ಪಾಳ್ಯದಿಂದ ನಡೆದು ಈ ಶಾಲೆಗೆ ಬರುತ್ತಿದ್ದವು.

ಸರ್ಕಲ್ ನಿಂದ ಬಸ್ ನಿಲ್ದಾಣದ ದಾರಿಯಲ್ಲೇ ನಾವು ನಡೆದುಹೋಗಿರಲಿಲ್ಲ. ಶಾಲೆ ಮುಗಿಸಿ ಮನೆ, ಮನೆಯಿಂದ ಶಾಲೆ ಇಷ್ಟೇ. ಆದರೆ ಆಗೆಲ್ಲ ಒಬ್ಬರ ಮಾತು ಕೇಳಿ ಬರುತ್ತಿತ್ತು. ಪಿಯುಸಿ ಉಪನ್ಯಾಸಕರ ಹೆಸರು ನಮ್ಮಲ್ಲಿ ಬಾಳಾ ಚಾಲ್ತಿಯಲ್ಲಿತ್ತು. ಅವರ ಬಗ್ಗೆ, ಅವರ ಪಾಠ, ಶಿಸ್ತಿನ ಬಗ್ಗೆ ಅನೇಕ ಹುಡುಗರು ಹೇಳುತ್ತಿದ್ದರು. ನಮ್ಗೂ ಕಾಲೇಜಿಗೆ ಹೋಗುವ ಆಸೆ ಮೂಡಿದ್ದು ಈ ಎಚ್ ಕೆ ಎನ್ ಎಂಬ ಹೆಸರಿನ ಆಸೆಯಿಂದ .
ಪ್ರೈಮರಿ ಮುಗಿಸಿ ಹೈಸ್ಕೂಲ್ ಹೋದಾಗ ಎಚ್ ಕೆ ಎನ್ ( ಎಚ್.ಕೆ.ನರಸಿಂಹಮೂರ್ತಿ) ಅವರನ್ನು ನೋಡುವ ಭಾಗ್ಯ ನಮ್ಮದಾಗಿತ್ತು.

ಆದರೆ ಅಲ್ಲಿ ಕಾಲೇಜು ಬೆಳಿಗ್ಗೆ, ಕಾಲೇಜು ಮುಗಿಯುವ ಹೊತ್ತಿಗೆ ನಮ್ಮ ಹೈಸ್ಕೂಲ್ ಆರಂಭವಾಗುತ್ತಿತ್ತು. ನಾವು ಶಾಲೆ ಒಳಗೆ ಹೋಗುವಾಗ ಸ್ಟಾಪ್ ರೂಂನಿಂದ ಎಚ್ ಕೆ ಎನ್ ಮಾತುಗಳು ಕೇಳುತ್ತಿದ್ದವು. ಆದರೆ ಅವರನ್ನು ದಿನಾಲು ನೋಡಲು ಸಿಗುತ್ತಿರಲಿಲ್ಲ.
ದೂರದಿಂದಲೇ ಅವರನ್ನು ನೋಡುವುದೇ ನಮಗೆಲ್ಲ ಏನೋ ಒಂಥರಾ ಆಸೆ. ಅಲ್ನೋಡಿ ಎಚ್ ಕೆ ಎನ್ ಹೋಗ್ತಾ ಇದ್ದಾರೆ ಎಂದು ಹುಡುಗರು ಹೇಳುತ್ತಿದ್ದರೆ ಎಲ್ಲರೂ ನೋಡುತ್ತಿದ್ದವು. ಇಂತಹ ಎಚ್ ಕೆಎನ್ ಅವರನ್ನು ನೋಡುವ ಭಾಗ್ಯ ಕೊನೆಗೂ ನಮಗೆ ಬಂತು. ಆದರೆ ಅಷ್ಟರಲ್ಲಾಗಲೇ ಕಾಲೇಜು ಕಟ್ಟಡ ಸಿ.ಎಸ್,ಪುರದಿಂದ ನಮ್ಮೂರಿಗೆ ಶಿಫ್ಟ ಆಗಿತ್ತು.

ಎಚ್ ಕೆಎನ್ ಅವರ ಮೊದಲ ಕ್ಲಾಸ್ ಬಗ್ಗೆ ನನಗೆ ನೆನಪಿಲ್ಲ. ಆದರೆ ಪಿಯುಸಿಗೆ ಹೋದ ನಂತರವಷ್ಟೇ ಅವರೊಂದಿಗೆ ಬೆರೆಯುವ ಅವಕಾಶ ಅವರ ಶಿಷ್ಯನಾಗಿ ಸಿಕ್ಕಿತು. ಎಚ್ ಕೆ ಎನ್ ಎಂದರೆ ಬರೀ ಹುಡುಗರಿಗಷ್ಟೇ ಅಲ್ಲ ಸಿ.ಎಸ್.ಪುರದ ಸುತ್ತಮುತ್ತಲಿನ ಎಲ್ಲ ಜನರ ಬಾಯಲ್ಲಿ ಅವರು ಮನೆ ಮಾತಾಗಿದ್ದರು.

ಅವರೊಂಥರಾ ಹೀರೋ. ಸಿನಿಮಾ ಹೀರೋ ಥರಾ ಅಲ್ಲ. ಮಕ್ಕಳಿಂದ ಹಿರೀಕರವರೆಗೂ ಅವರಿಗೆ ಗೌರವ ಸಲ್ಲುತ್ತಿತ್ತು. ಇದು ಕೆಲವರಿಗೆ ಅತಿ ಶಯೋಕ್ತಿ ಎನ್ನಿಸಬಹುದು ಅಥವಾ ಸುಳ್ಳಂತೆಯೂ ಭಾಸವಾಗಬಹುದು. ಆಗ ಎಚ್ ಕೆ ಎನ್ ಗೆ ಸಿಗುತ್ತಿದ್ದ ಗೌರವ ಮಾತ್ರ ಯಾವ ಮೇಷ್ಟ್ರುಗಳಿಗೂ ಸಿಕ್ಕಿರಲಾರದು, ಸಿಗಲಾರದು. ಈಗಲೂ ಸಿ.ಎಸ್.ಪುರ ಸುತ್ತಮುತ್ತಲಿನ ಯಾವ ಗ್ರಾಮಕ್ಕೆ ಹೋಗಿ ಕೇಳಿದರೂ ಎಚ್ ಕೆ ಎನ್ ಜನಜನಿತ.

ಕಾಲೇಜು ಮುಖವನ್ನೇ ನೋಡದ ಜನರ ಮನೆಯಲ್ಲೂ ಎಚ್ ಕೆಎನ್ ಬಗ್ಗೆ ಗೊತ್ತಿತ್ತು. ಅವರನ್ನು ಕಂಡರೆ ಸಿಕ್ಕಾಪಟ್ಟೆ ಗೌರವ ಕೊಡುತ್ತಿದ್ದರು. ಸರ್ಕಲ್ ನಲ್ಲಿ ಪ್ರತಿ ದಿನ ಬಸ್ ಇಳಿಯುತ್ತಿದ್ದ ಮೇಷ್ಟ್ರು ಸೀದಾ ನಮ್ಮೂರಿನವರೆಗೂ ದಾರಿ ಉದ್ದಕ್ಕೂ ಅವರು ನಡೆದುಕೊಂಡು ಬರುತ್ತಿದ್ದರು (ಸುಮಾರು ಒಂದುಕಿಲೋ ಮೀಟರ್). ಅಷ್ಟೇ ಗಾಂಬೀರ್ಯ. ಸಹದ್ಯೋಗಿಗಳೊಂದಿಗೆ ಮಾತನಾಡಿಕೊಂಡು ಅವರು ಬರುತ್ತಿದ್ದರೂ ಎಂದಿಗೂ ಅವರು ರಸ್ತೆಯಲ್ಲಿ ನಿಂತು ನಗಾಡಿದ್ದನ್ನು ಯಾರೂ ಕಂಡಿಲ್ಲ.

ವಿದ್ಯಾರ್ಥಿಗಳಿಗೆ ಅವರು ಗದರಿದ್ದು ಇಲ್ಲ. ಹೆಣ್ಣು ಮಕ್ಕಳನ್ನು ತಾಯಿ ಎಂದೇ ಅವರು ಕರೆಯುತ್ತಿದ್ದದ್ದು. ಸ್ನೇಹಮಯಿ ಉಪನ್ಯಾಸಕ ಅನ್ನುವುದಕ್ಕಿಂತಲೂ ಮಾರ್ಗ ತೋರುತ್ತಿದ್ದ ಕಾರುಣ್ಯದ ಗುರು ಅವರಾಗಿದ್ದರು.

ಆದರೆ ಅವರಿಗೆ ಪಾಠ ಬಿಟ್ಟರೆ ಬೇರೇನೂ ಬೇಕಿರಲಿಲ್ಲ. ಅವರೊಮ್ಮೆ ಕೆಎಎಸ್ ಹುದ್ದೆಗೆ ಆಯ್ಕೆಯಾಗಿದ್ದ ನೆನಪು. ಆಡಳಿತಾತ್ಮಕ ಹುದ್ದೆಗಳಲ್ಲಿ ಲಂಚ ತೆಗೆದುಕೊಳ್ಳಬೇಕಾಗುತ್ತದೆ ಹಾಗೂ ಕೊಡಬೇಕಾಗುತ್ತದೆ ಎಂದು ( ರಾಜಕಾರಣಿಗಳು, ಹಿರಿಯ ಅಧಿಕಾರಿಗಳಿಗೆ) ಅವರು ಹುದ್ದೆ ತಿರಸ್ಕರಿಸಿ ಉಪನ್ಯಾಸಕ ಹುದ್ದೆಯಲ್ಲೇ ಉಳಿದರು.

ಅವರ ಪಾಠ ಕೇಳುವುದೇ ಚೆನ್ನ. ಬೋರ್ಡ್ ಮೇಲೆ ಅವರ ಬರಹ ಇನ್ನೂ ಚೆನ್ನ. ಒಂದು ಗಂಟೆ ಕಳೆದಿದ್ದೇ ಗೊತ್ತಾಗುತ್ತಿರಲಿಲ್ಲ. ಯಾರಿಗೂ ಕನ್ನಡ ಕಷ್ಟ ಎನ್ನಿಸಲೇ ಇಲ್ಲ. ಕವಿಗಳ ಬಗ್ಗೆ, ಅವರ ಜೀವನದ ಬಗ್ಗೆಯೂ ಹೇಳುತ್ತಿದ್ದರು.

ಅವರೊಮ್ಮೆ ಪಾಠ ಮಾಡುವಾಗ ಸಾಹಿತಿ ಶಿವರಾಮಕಾರಂತರ ಬಗ್ಗೆ, ಅವರ ಮೂಕಜ್ಜಿಯ ಕನಸುಗಳ ಕುರಿತು ಕಣ್ಣಿಗೆ ಕಟ್ಟುವಂತೆ ಹೇಳಿದರು. ಅದೇ ದಿನ ಸಿ.ಎಸ್,ಪುರದ ಲೈಬ್ರರಿಗೆ ತೆರಳಿ ಮೂಕಜ್ಜಿಯ ಕನಸು ಕಾದಂಬರಿ ಪಡೆದು ಓದಲು ಶುರು ಹಚ್ಚಿದೆ. ಅದೂ ಮುಗಿಯವರೆಗೂ ಊಟ, ತಿಂಡಿ ಸೇರಲಿಲ್ಲ. ವಾರಗಳ ಕಾಲ ಮೂಕಜ್ಜಿಯೇ ನನ್ನ ಮುಂದೆ ಬಂದಂಗೆ ಆಗುತ್ತಿತ್ತು. ನಿಜವಾಗಲೂ ಮೂಕಜ್ಜಿ ಇರಲೇಬೇಕೆಂದು ನಂಬಿದ ನಾನು ಶಿವರಾಮ ಕಾರಂತರಿಗೆ ಕೋಕಿಲ ಹೆಸರಿನಲ್ಲಿ ಅಜ್ಜಿಯನ್ನು ನೋಡುವ ಆಸೆ ವ್ಯಕ್ತಪಡಿಸಿ ಒಂದು ಪತ್ರ ಬರೆದೆನು.

ವಾರದ ಬಳಿಕ ಕಾಲೇಜಿನ ವಿಳಾಸಕ್ಕೆ ಶಿವರಾಮ ಕಾರಂತರಿಂದ ಪತ್ರ ಬರಬೇಕೆ. ಅಂಥ ಅಜ್ಜಿ ಇದ್ದಿದ್ದರೆ ಅದಕ್ಕಿಂತ ಪುಣ್ಯ ಇನ್ನೇನು ಇರುತ್ತಿತ್ತು. ಕಾದಂಬರಿಯಲ್ಲಿ ಅದು ಒಂದು ಪಾತ್ರ ಅಷ್ಟೇ ಎಂದು ಪತ್ರದಲ್ಲಿ ಬರೆದಿದ್ದರು. ಕಾಲೇಜಿನಲ್ಲಿ ದೊಡ್ಡ ಚರ್ಚೆಯೇ ಶುರುವಾಯಿತು. ಏಕೆಂದರೆ ಕೋಕಿಲ ಎಂಬ ಹುಡುಗಿಯೇ ಕಾಲೇಜಿನಲ್ಲಕಿ ಇರಲಿಲ್ಲ. ಯಾರು, ಯಾರು ಎಂಬುದೇ ಚರ್ಚೆ. ನನಗೂ ಹೇಳಲು ಭಯ.

ಪತ್ರ ಬಂದು ಎರಡು ದಿನದ ಬಳಿಕ ಕಾಲೇಜಿಗೆ ಪತ್ರವನ್ನು ತಂದ ಎಚ್ ಕೆ ಎನ್ ಅವರು ಕಾರಂತರ ಬಗ್ಗೆ, ಅವರ ವ್ಯಕ್ತಿತ್ವದ ಬಗ್ಗೆ ಮತ್ತಷ್ಟು ಹೇಳಿದರು. ಯಾರೇ ಕಾರ್ಡ್ ಬರೆದರೂ ಕಾರಂತರು ಉತ್ತರಿಸುತ್ತಾರೆ. ಅದಕ್ಕಾಗಿ ಹೆಣ್ಣು ಮಕ್ಕಳ ಹೆಸರಿನಲ್ಲೇ ಬರೆಯಬೇಕಿಲ್ಲ. ತಗೋ ಮಹೇಂದ್ರ, ಪತ್ರ ನೀನೇ ಬರೆದಿರೋದು ಅನ್ನೋದೆ.

ಆನಂತರದಲ್ಲಂತೂ ಶಿಷ್ಯನ ಮೇಲೆ ಅವರ ಪ್ರೀತಿ ಮುಮ್ಮಡಿಯಾಯಿತು.

ನಾವು ಕಾಲೇಜಿನಲ್ಲಿ ಓದುವಾಗ ಕಾಲೇಜು ಮುಚ್ಚುವ ಹಂತಕ್ಕೆ ಬಂತು. ಆಗ ಪ್ರವೇಶ ಹೆಚ್ಚಿರದ ಕಾಲೇಜುಗಳನ್ನು ಮುಚ್ಚುವ ನಿರ್ಧಾರವನ್ನು ಆಗಿನ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಕೈಗೊಳ್ಳಲಾಗಿತ್ತು. ಹಳ್ಳಿಗಳ ಕಾಲೇಜುಗಳಿಗೆ ಉಪನ್ಯಾಸಕರನ್ನು ನೇಮಕ ಮಾಡದ ಸರ್ಕಾರ ಮಕ್ಕಳ ಕೊರತೆ ನೆಪಹೇಳಿ ಮುಚ್ಚುವ ಕೆಲಸ ಮಾಡಿತು.

ನಮ್ಮ ಕಾಲೇಜಿನಲ್ಲಿ ಇದ್ದದ್ದು ಎಚ್ ಕೆಎನ್ ಹಾಗೂ ಅರ್ಥಶಾಸ್ತ್ರ ಉಪನ್ಯಾಸಕರಾದ ಶ್ರೀ ಚಿತ್ತಯ್ಯ ಅವರು. ಹೀಗಾಗಿ ನಮ್ಮ ಕಾಲೇಜಿಗೆ ಸೇರಲು ಹುಡುಗರು ಮುಂದೆ ಬರಲಿಲ್ಲ. ಪ್ರಥಮ ಪಿಯುಸಿಯಿಂದ ದ್ವಿತೀಯ ಪಿಯುಸಿಗೆ ಪ್ರವೇಶ ಮುಂದುವರೆಸದೆ ಅನೇಕ ಹುಡುಗರು ಟಿಸಿ ತೆಗೆದುಕೊಂಡು ಕಲ್ಲೂರು, ಮಾವಿನಹಳ್ಳಿಗೆ ಹೊರಟರು.

ಆಗ,ನನ್ನನ್ನು ಕರೆದ ಎಚ್ ಕೆಎನ್ ಹೇಗಾದರೂ ಮಾಡಿ ಕಾಲೇಜು ಉಳಿಸಿಕೋ. ಈಗ ಕಾಲೇಜು ಮುಚ್ಚಿದರೆ ಮುಂದೆ ತೆಗೆಯೋದು ಕಷ್ಟ. ಇದರಿಂದ ಹಳ್ಳಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಕೊಡಲಿ ಪೆಟ್ಟು ಬೀಳಲಿದೆ ಎಂದು ಹೇಳಿದರು. ಆಗ ನಾನು, ನಾಗರಾಜ, ಗಂಗಾಧರ್, ಶಿವ, ಚಂದ್ರಮ್ಮ, ಪೂರ್ಣಿಮಾ ಇನ್ನೂ ಮುಂತಾದವರೆಲ್ಲ ಸೇರಿ ಒಂದು ನಿರ್ಧಾರ ಮಾಡಿದೆವು.

ನನ್ನ ಮಾತು ಕೇಳಿ 24 ಹುಡುಗರು ನಮ್ಮ ಕಾಲೇಜಿನಲ್ಲೇ ಉಳಿಯುವ ನಿರ್ಧಾರ ಮಾಡಿದರು. ಕೊನೆಗೆ ನನ್ನನ್ನು ಬಿಟ್ಟು ಎಲ್ಲರೂ ಫೇಲಾದರು. ಆದರೆ ಕಾಲೇಜು ಉಳಿಸಿಕೊಳ್ಳುವಲ್ಲಿ ಇವರ ಶ್ರಮ, ಬದುಕನ್ನು ಪಣಕಿಟ್ಟಿದ್ದು ಈಗ ಯಾರಿಗೂ ಬೇಕಾಗಿಲ್ಲ.

ನಮ್ಮ ಶಿಕ್ಷಣ ಹಾಳಾಗಬಾರದು ಎಂದು ಎಚ್ ಕೆ ಎನ್ ಅವರು ಕನ್ನಡದ ಜತೆ ಇತಿಹಾಸ, ಸಮಾಜಶಾಸ್ತ್ರವನ್ನು ಬೋಧಿಸಿದರು. ನಮಗೆ ಇಂಗ್ಲಿಷ್ ನದೇ ಕೊರತೆಯಾಯಿತು. ಉಪನ್ಯಾಸಕರು ಬೇಕೆಂದು ನನ್ನ ನೇತೃತ್ವದಲ್ಲಿ ಸಿ.ಎಸ್ ಪುರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿಯಾಯಿತು. ಉಪವಾಸ ಸತ್ಯಾಗ್ರಹ ಮಾಡಿದೆವು. ತುಮಕೂರಿನ ಡಿಡಿಪಿಯು ಕಚೇರಿಗೆ ಲಾರಿಯಲ್ಲಿ ತೆರಳಿ ಮುತ್ತಿಗೆ ಹಾಕಿಬಂದೆವು. ಆದರೆ ಏನೇನು ಪ್ರಯೋಜನವಾಗಲಿಲ್ಲ.

ಆಗ ಪಿಯು ಬೋರ್ಡ್ ನ ನಿರ್ದೇಶಕರಾಗಿ ಜಯರಾಮೇ ಅರಸ್ ಎಂಬುವವರು ಇದ್ದರು. ಪಿಯು ಬೋರ್ಡ್ ಗೆ ಹೋಗಿ ನಿರ್ದೇಶಕರನ್ನು ಕಾಣುವಂತೆ ಹೇಳಿದವರು ಎಚ್ ಕೆಎನ್. ತಮಾಷೆ ಎಂದರೆ, ಅಲ್ಲಿಯವರೆಗೂ ನಾನು ಒಬ್ಬನೇ ಹೋಗಿ ಬೆಂಗಳೂರನ್ನೇ ನೋಡಿರಲಿಲ್ಲ. ನಿರ್ದೇಶಕರ ಕಚೇರಿಯನ್ನು ವಿಳಾಸವನ್ನು, ಅಲ್ಲಿಗೆ ಮೆಜೆಸ್ಟಿಕ್ ನಲ್ಲಿ ಇಳಿದು ಹೇಗೆ ಹೋಗಬೇಕೆಂದು ಒಂದು ಹಾಳೆಯಲ್ಲಿ ಸ್ಕೆಚ್ ಹಾಕಿಕೊಟ್ಟವರು ಎಚ್ ಕೆ ನರಸಿಂಹಮೂರ್ತಿಗಳು.

ಪ್ರತಿ ಹುಡುಗರು ಮೂವತ್ತು-ಮೂವತ್ತು ರೂಪಾಯಿ ಹಾಕಿಕೊಂಡು ಕಾಣದ ಬೆಂಗಳೂರಿಗೆ ಹೊರಟೆವು. ನಿರ್ದೇಶಕರನ್ನು ಭೇಟಿ ಮಾಡಿದ ಸಾಹಸವೇ ಒಂದು ದೊಡ್ಡ ಕತೆ. ಯಾವತ್ತಿಗೂ ನೋಡದ ಲಿಫ್ಟ್ ನೋಡಿದ್ದು. ಅದೆಲ್ಲ ಇರಲಿ, ಇಲ್ಲಿ ಬೇಡ. ಇದರ ಪರಿಣಾಮದಿಂದ ನಮಗೆ ಇಂಗ್ಲಿಷ್, ಸಮಾಜಶಾಸ್ತ್ರಕ್ಕೆ ಉಪನ್ಯಾಸಕರು ಬಂದರು.

ಹೀಗೆ ಕಾಲೇಜು ಉಳಿಯಿತು. ಈಗ ನೂರಾರು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ಪಿಯು ಕಾಲೇಜಿನ ಪರಿಣಾಮದಿಂದಾಗಿ ಸಿ.ಎಸ್,ಪುರದಲ್ಲಿ ಪದವಿ ಕಾಲೇಜು ತೆರೆದಿದೆ.

ಎಚ್.ಕೆ.ನರಸಿಂಹಮೂರ್ತಿ ಅವರೊಬ್ಬರು ಕೇವಲ ಮೇಷ್ಟ್ರು ಆಗಿರಲಿಲ್ಲ. ಅವರು ಹಳ್ಳಿ ಹುಡುಗರಿಗೆ ದಾರಿ ತೋರುವ ಗುರು, ದೇವರು ಆಗಿದ್ದರು. ಕಾಲೇಜು ಮುಗಿದ ಬಳಿಕವೂ ವಿದ್ಯಾರ್ಥಿಗಳು ಬದುಕನ್ನು ಕಟ್ಟಿಕೊಳ್ಳಲು ಆಸರೆಯಾಗಿ ನಿಂತರು. ಅವರುಗಳು ಉನ್ನತ ವಿದ್ಯಾಭ್ಯಾಸಗಳಿಸಲು ಹೆಚ್ಚು ಸಹಕಾರಿಯಾದರು.

ಬದುಕನ್ನು ಹೆದರಿಸುವ ಬಗೆಯನ್ನು ಹೇಳಿಕೊಟ್ಟರು. ವಿದ್ಯಾರ್ಥಿಗಳು ಜೀವನದಲ್ಲಿ ಭದ್ರ ನೆಲೆಯಾಗಿ ನಿಲ್ಲುವುದನ್ನು ದೂರದಿಂದಲೇ ಗಮನಿಸುವ ಕೆಲಸ ನಿರತರವಾಗಿ ಮಾಡುತ್ತಾ ಬಂದಿದ್ದಾರೆ. ನೆಲೆವೂರದ ವಿದ್ಯಾರ್ಥಿಗಳನ್ನು ಕರೆದು ಬುದ್ದಿವಾದ ಹೇಳುವ ಕೆಲಸವನ್ನು ಈಗಲೂ ಮುಂದುವರೆಸಿದ್ದಾರೆ.

ನಗರಕ್ಕೆ ಅಂಟಿಕೊಳ್ಳುವ ಉಪನ್ಯಾಸಕರ ಬದಲಿಗೆ ಇವರು ಸೇವೆಯನ್ನು ಹಳ್ಳಿಗಳೇ ಮಾಡಿದರು. ಬಿದ್ದು ಹೋಗುತ್ತಿದ್ದ ಹಳ್ಳಿಗಳ ಕಾಲೇಜುಗಳನ್ನು ಕಟ್ಟಿ ತೋರಿಸಿದರು. ಇದು ಅವರ ಶಿಷ್ಯಕೋಟಿಗಷ್ಟೇ ಅಲ್ಲದೇ ಮುಂದಿನ ತಲೆಮಾರುಗಳಿಗೆ ಪಿಯು ಶಿಕ್ಷಣಕ್ಕೆ ಬುನಾದಿ ಹಾಕಿಕೊಟ್ಟ ಮೇಷ್ಟ್ರು ಅವರು. ಹೀಗಾಗಿಯೇ ಎಚ್ ಕೆ ಎನ್ ಕೇವಲ ವಿದ್ಯಾರ್ಥಿಗಳ ಹೃದಯದಲ್ಲಿ ಮಾತ್ರವೇ ಸ್ಥಾನಪಡೆದಿಲ್ಲ ಹಳ್ಳಿಗರ ಹೃದಯದಲ್ಲಿ ಭದ್ರವಾಗಿ ಸ್ಥಾನಪಡೆದುಕೊಂಡಿದ್ದಾರೆ.

ಅವರು ಈಗ ಡಿಡಿಪಿಯು ಆಗಿ ಸೇವೆ ಸಲ್ಲಿಸಿ ನಿವೃತ್ತಿಯಾದರು. ಅವರ ಪ್ರಾಮಾಣಿಕತೆ ಅವರಿಗೆ ಅನೇಕ ನೋವುಗಳನ್ನು ತಂದುಕೊಟ್ಟಿದೆ. ಆದರೆ ಹೀಗೆ ನೋವು ನುಂಗಿಕೊಂಡೂ ಪ್ರಾಮಾಣಿಕತೆಯ ಹಾದಿ ಬಿಡದ ಸಾವಿರಾರು ಶಿಷ್ಯರನ್ನು ಅವರು ರೂಪಿಸಿದ್ದಾರೆ. ಅವರಿಗೆ ಸಲಾಂ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?