ಮರೀಚಿಕೆ

ಹಾಲನೂರಿನ ಹಾಲಿನಂತ ಮನುಷ್ಯ ಎಲ್ಲಿ ಹೋದ?

ಸುಯೋಧನಂಜಯ

ಶಶಿ….ಶಶಿ ಎಂದು ಕರೆದರೂ ಬಾರದ ಆ ಬಾನಿನ ಶಶಿಯಂತೆ, ಇನ್ನೆಂದೂ ಭೌತಿಕವಾಗಿ ಕೈಗೆ ಸಿಗದವನಾಗಿ, ಮತ್ತೆ ಬಾರದವನಾಗಿ ಧೃವ ತಾರೆಯಾಗಿಬಿಟ್ಟ ನನ್ನ ಸ್ನೇಹ ಲೋಕದೊಳಗಿನ ಈ ಶಶಿ.

ತುಮಕೂರು ಜಿಲ್ಲೆಯ ಹಾಲನ್ನೆಲ್ಲಾ ತನ್ನಲ್ಲಿಗೆ ತರಿಸಿಕೊಳ್ಳುವ ಮಲ್ಲಸಂದ್ರದ ಪಕ್ಕದಿಂದ ಹಾದು ಹೋಗುವ ಹಾಲನೂರಿನ ಹಾಲಿನಂಥಹ ಮನಸ್ಸುಳ್ಳ ಶಶಿ ಇನ್ನೂ ನಮಗೆ ನೆನಪು ಮಾತ್ರ ಅಂಥ ಕಲ್ಪಿಸಿಕೊಳ್ಳುವುದಕ್ಕೂ ಅಸಾಧ್ಯವಾಗಿರುಷ್ಟಿತ್ತು ನಮ್ಮ ಅವನ ಒಡನಾಟ.

ಆಕಸ್ಮಿಕವಾಗಿ ಪರಿಚಿತನಾದವನು ಆತ್ಮೀಯತೆ ಗಳಿಸಿಕೊಂಡು ನಮ್ಮನ್ನಗಲಿ ಒಂದು ದಿನ ಕಳೆದರೂ ಎಡಬಿಡದೆ ಕಾಡಿದ ವ್ಯಕ್ತಿ .ಕೆಲಸದ ಒತ್ತಡದಿಂದ ಕೋಪಿಸಿಕೊಂಡರು ಆಯ್ತು ಬಿಡ್ಲಾ ದುರ್ಯೋಧನಾ, ಬಾರ್ಲಾ ಟೀ ಕುಡಿದು ಬರೋಣ ಅಂತ ಬೇಗ ಸಮಾಧಾನಕ್ಕೆ ಬರುತ್ತಿದ್ದವನು.ಅಲ್ಲಾ ಕಣ್ಲಾ ಆತ್ಮೀಯ ಸ್ನೇಹಿತಂಗೆ ಬೇಗ ಕೆಲ್ಸ ಮಾಡ್ಕೋಡಲ್ಲಾ ಅಂತಿಯಲ್ಲ? ನಮ್ಮನ್ನೇ ಸತಾಯಿಸ್ತೀಯಾ? ಸ್ನೇಹಿತನ ಕೆಲ್ಸ ಮಾಡಿ ಕೋಡೋ.. ಮಗನೇ ಇಲ್ಲಾಂದ್ರೇ ಟ್ರಾನ್ಸ್ವರ್ ಮಾಡುಸ್ತೀನಿ,ಅಂಥ ನಗು ನಗುತ್ತಲೇ ಹೇಳಿ, ತನ್ನ ಕೆಲಸವನ್ನು ನಯವಾಗೇ ಸಾಧಿಸಿಕೊಂಡು, ಸ್ನೇಹವನ್ನು ಕಾಪಾಡಿಕೊಳ್ಳುತ್ತಿದ್ದ ಸ್ನೇಹಮಯಿ.

ಊರಲ್ಲೇ ಮನೆ ಕಟ್ಟ್ತೀಯಂತೆ ತುಂಬಾ ಒಳ್ಳೆಯ ನಿರ್ಧಾರ ಕಣ್ಣ್ಲಾ. ಹುಷಾರು ಮಗನೇ ಅಲ್ಲಿಗೆ ಹೋಗಿ ದಾನಶೂರ ಕರ್ಣ ಆಗೋಕೆ ಓಗ್ಬೇಡಾ.. ಕಷ್ಟದಲ್ಲಿರೋ ಹಳ್ಳಿ ಜನಕ್ಕೆ, ಅಣ್ಣ-ತಮ್ಮಂದಿರಿಗೆ ಒಂದಿಷ್ಟು ಸವಕೋ..ನಾ ಹೇಳಿದ ಜಾಗದಲ್ಲಿ ಮನೆ ಕಟ್ಲಾ, ನಿನಗೆ ಆಗಿ ಬಂದಿರೋ ಆಯ ವೃಷಭಾಯ ಕಣ್ಲಾ, ನಾವು ಬಸವನ ಕುಲದವರು ನಾನೇಳ್ತೀನಿ ಕೇಳು ನಿಂಗೆ ಒಳ್ಳೆದಾಗುತ್ತೆ ಕಣ್ಲಾ ಅಂತ ಮನ ತುಂಬಿ ಹರಸಿದವನು.ನಿಮ್ಮೂರಿಗೆ ರೋಡೇ ಇಲ್ಲವಲ್ಲೋ.! ನಾನೇಳ್ತೀನಿ ಹಾಗೆ ಮಾಡು ಸರ್ಕಾರದಿಂದ ರಸ್ತೆ ಆಗುತ್ತೆ ಅಂದವನ್ನಲ್ಲದೇ ಕೊನೆಗೆ ಸರ್ವೇ ಮಾಡಿ ಅನುಮೋದನೆಯಾಗುವಂತೆ ಅಂದಾಜು ಪಟ್ಟಿ ತಯಾರಿಸಿ ತಕಾರಿಲ್ಲದೇ ಅನುಮೋದಿಸುವಂತೆ ಮಾಡಿ, ರಸ್ತೆ ನಿರ್ಮಾಣಕ್ಕೆ ಮೂಲ ಕಾರಣ ಕರ್ತನಾಗಿ ನಮ್ಮೂರ ಜನರ ಮೇಲೆ ಋಣ ಭಾರ ಹೊರಿಸಿ ಹೋದವ.

ಬರ್ರೋ ಎಲ್ಲಾದರೂ ಪ್ರವಾಸ ಹೋಗೋಣ ಅಂಥ ಹುರಿದುಂಬಿಸಿ ಹೊರಡಿಸುತ್ತಿದ್ದವನು.ತನ್ನ ಕೊನೆಯ ಜೀವನದ ಪ್ರಯಾಣವನ್ನು ಅಷ್ಟೇ ವೇಗವಾಗಿ ಕಾಲನ ಕರೆಗೆ ಬಿಟ್ಟು ಕೊಟ್ಟು ಅಸಹಾಯಕನಂತೆ ತೆರಳಿದ.ಅದೇಕೋ ಇತ್ತೀಚೆಗೆ ತಿಂಗಳು ಗಟ್ಟಲೇ ಮುಖಾಮುಖಿಯಾಗಲಿಲ್ಲ.ನವೆಂಬರ್ 18 ರಂದು ನಮ್ಮೆಲ್ಲರ ನಂಟನ್ನು ದಾಟಿ ತಿರುಗಿ ಬರಲಾದಷ್ಟು ದೂರ ಹೊರಟು ಹೋಗಿದ್ದ.ಅವನಂಥ ಸ್ನೇಹಿತನ ಕೊನೆ ದರ್ಶನವನ್ನು ನೋಡಲಾಗದಷ್ಟು ದೂರದ ಕೊಪ್ಪಳದಲ್ಲಿದ್ದದ್ದು ನನ್ನ ದುರ್ದೈವ.

ಇಡೀ ರಾಜ್ಯದಲ್ಲಿ ನೀನು ದೂರದುಂಬಿ ಹಿಡಿದು ಸರ್ವೇ ಮಾಡಿದ ರಸ್ತೆಗಳಲ್ಲಿ ಈಗಲೂ ಚಿರಸ್ಥಾಯಿಯಾಗಿ ನಿಂತೆ ಇದ್ದೀಯಾ.ಅಂತಹ ನಿನಗೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುವುದಕ್ಕಿಂತ ಮತ್ತೆ ಹುಟ್ಟಿ ಬರಲೆಂಬುದೇ ಆ ದೇವರಲ್ಲಿ ಈ ಗೆಳೆಯ ಮತ್ತು ಗೆಳೆಯರ ಬಳಗದ ಪ್ರಾರ್ಥನೆ.. ಓ ನಮಃ ಶಿವಾಯ…

Comment here