ಮಂಗಳೂರು: ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಮಹಿಳಾ ಹೆಡ್ ಕಾನ್ಸ್ಟೇಬಲ್ ನಯನಾ ಅವರ ಕೆಲಸಕ್ಕೆ ಇಡೀ ಮಂಗಳೂರಿನ ಕರೊನಾ ವೈದ್ಯರ ತಂಡ ತಲೆತೂಗುತ್ತಿದೆ.
ವೈದ್ಯರಷ್ಟೇ ಅಲ್ಲ, ಪೊಲೀಸರಿಗೂ ಇವರ ಕೆಲಸ ಹೆಮ್ಮೆ ತರಿಸಿದೆ.
ನಯನಾ ಅವರು ಪ್ರಸ್ತುತ ಕೋವಿಡ್-19ಗೆ ಸಂಬಂದಿಸಿದ ವೆನ್ಲಾಕ್ ಆಸ್ಪತ್ರೆಯ ಕೋವಿಡ್-19ನ ವಿಶೇಷ ಕಟ್ಟಡ ಆಯುಷ್ ಬಿಲ್ಡಿಂಗ್ ನ ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.
ವೆನ್ಲಾಕ್ ಆಸ್ಪತ್ರೆಯ ಆಯುಷ್ ಬಿಲ್ಡಿಂಗ್ ನಲ್ಲಿ ಕೊರೊನಾ ವೈರಸ್ ದೃಢಪಟ್ಟ ರೋಗಿಗಳು ಮತ್ತು ಸಂಶಯಾಸ್ಪದ ರೋಗಿಗಳನ್ನು ಚಿಕಿತ್ಸೆ ನೀಡುವ ಬಿಲ್ಡಿಂಗ್ ನಲ್ಲಿ ಸ್ವಇಚ್ಛೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕರೊನಾ ಪೀಡಿತ ರೋಗಿಗಳ ಸೇವೆ ಮಾಡಬೇಕೆಂಬ ಕಾರಣದಿಂದಲೇ ತಾವೇ ಕೇಳಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವೆನ್ಲಾಕ್ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಹಾಗೂ ಚಿಕಿತ್ಸೆ ಪಡೆದು ಗುಣಮುಖಗೊಂಡು ಬಿಡುಗಡೆ ಹೊಂದಿರುವವರ ಸ್ವ-ವಿವರವುಳ್ಳ ಮಾಹಿತಿಯನ್ನು ಆಸ್ಪತ್ರೆಯಿಂದ ಪಡೆದು ಕ್ಲಿಪ್ತ ಸಮಯದಲ್ಲಿ ಸಂಬಂದಪಟ್ಟ ಪೊಲೀಸ್ ಠಾಣೆಗಳಿಗೆ ನಿಗಾವಹಿಸಲು ಹಾಗೂ ಮೇಲಾಧಿಕಾರಿಗಳಿಗೆ ಮಾಹಿತಿಯನ್ನು ನೀಡುವಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ.
ಆಸ್ಪತ್ರೆಯ ವೈದ್ಯರೊಂದಿಗೆ ಹಾಗೂ ಸಿಬ್ಬಂದಿ ಜತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ವೆನ್ಲಾಕ್ ಆಸ್ಪತ್ರೆಯನ್ನು ಕೋವಿಡ್-19 ಚಿಕಿತ್ಸೆಗೆ ಮೀಸಲಿರಿಸಿದ್ದರಿಂದ, ಇತರೆ ಖಾಯಿಲೆಯ ಚಿಕಿತ್ಸೆಗೆಂದು ಬರುವ ರೋಗಿಗಳ ಬಗ್ಗೆ ವೈದ್ಯರೊಂದಿಗೆ ಸಮಾಲೋಚಿಸಿ ವೈದ್ಯರ ಸೂಚನೆಯಂತೆ ಬೇರೆ ಆಸ್ಪತ್ರೆಗೆ ಕಳುಹಿಸಿಕೊಡುವ ಕೆಲಸವನ್ನು ಮಾಡುತ್ತಿದ್ದಾರೆ.
ರೋಗಿಗಳ ಜತೆ ಆಪ್ತತತೆಯ ಇವರ ಕೆಲಸ ಕಂಡು ರೋಗಿಗಳು ಮಾತ್ರವಲ್ಲ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಖುಷಿ ವ್ಯಕ್ತಪಡಿಸುತ್ತಿದ್ದಾರೆ.