ರಂಗನಕೆರೆ ಮಹೇಶ್
ಅತ್ಮೀಯ ಸ್ನೇಹಿತ ಶಿಕ್ಷಕರೊಬ್ಬರು ತಮ್ಮ ಶಾಲೆಯಲ್ಲಿ ಸರ್ಕಾರದ ಆದೇಶದಂತೆ ಇಕೋ ಕ್ಲಬ್ ಉದ್ಘಾಟನೆ ಮಾಡಿದ್ದೇವೆ. ಮಕ್ಕಳಿಗೆ ಪರಿಸರ ಮತ್ತು ಕೃಷಿ ಬಗ್ಗೆ ತಿಳಿಸಲು ಉಪನ್ಯಾಸ ಕಾರ್ಯಕ್ರಮಕ್ಕೆ ತಾವು ಬರಬೇಕು ಎಂದು ಆಹ್ವಾನವಿತ್ತರು.
ನನ್ನ ನೆಚ್ಚಿನ ವಿಷಯವಲ್ಲದೆ ಭಾವಿ ಪ್ರಜೆಗಳಲ್ಲಿ ಅರಿವು ಮೂಡಿಸುವ ಕೆಲಸವಾದ ಕಾರಣ ಮರು ಮಾತನಾಡದೆ ಯಾವುದೇ ಕೆಲಸವಿದ್ದರು ಬಿಟ್ಟು ಬರುವುದಾಗಿ ಶಿಕ್ಷಕರಿಗೆ ತಿಳಿಸಿದೆ.
ನಿಗದಿಯಂತೆ ಕಾರ್ಯಕ್ರಮಕ್ಕೆ ಹೋದೆ. ನಾನು ಹೋಗುವ ವೇಳೆಗೆ ಸುಮಾರು 250ಕ್ಕೂ ಶಾಲಾ ವಿದ್ಯಾರ್ಥಿಗಳನ್ನು ಒಂದು ಕೊಠಡಿಯಲ್ಲಿ ಆಸೀನರಾಗಿದ್ದರು. ನನಗಿಂತ ಮೊದಲು ಇನ್ನೊಬ್ಬ ಅತಿಥಿ ಆಯುರ್ವೆದ ಸಸ್ಯಗಳ ಬಗ್ಗೆ ತಿಳಿಸಿದರು.
ನಂತರ ನನ್ನ ಸರದಿ ಆರಂಭವಾದಾಗ ಸಮಯ ಮೀರಿತ್ತು. ನೀರು, ಶುದ್ಧ ಗಾಳಿ, ಉತ್ತಮ ಪರಿಸರ ರಾಸಾಯನಿಕ ಮುಕ್ತ ಕೃಷಿ ಸೇರಿದಂತೆ ಸುಮಾರು ಒಂದು ಗಂಟೆ ಮಕ್ಕಳಿಗೆ ತಿಳಿಸಿದೆ.
ಊಟದ ಸಮಯ ಮೀರಿದರೂ ಸಹ ವಿದ್ಯಾರ್ಥಿಗಳು ಪರಿಸರ ಮತ್ತು ಕೃಷಿಯ ಪಾಠವನ್ನು ತಕರಾರು ಮಾಡದೆ ಆಲಿಸಿದರು. ಕೊನೆಗೆ ಮಕ್ಕಳಲ್ಲಿ ಆಹಾರದ ಬಗ್ಗೆ ಅರಿವು ಮೂಡಿಸುತ್ತಾ ಅನ್ನವನ್ನು ಎಸೆಯಬಾರದು ಅದು ಮಹಾಪಾಪ.
ನಾವು ಅಕ್ಷರ ದಾಸೋಹದಡಿ ಮಧ್ಯಾಹ್ನ ಮಾಡುವ ಬಿಸಿಯೂಟದ ಒಂದು ಕೆ.ಜಿ.ಅಕ್ಕಿ ಬೆಳೆಯಲು ಸುಮಾರು 800 ಲೀಟರ್ ನೀರು ವ್ಯರ್ಥವಾಗುತ್ತದೆ. ನಾವು ಅಂದು ಕೊಂಡಂತೆ ನೀರು ಅಪರಿಮಿತ ಗಣವಾಗಿರುವುದರಿಂದ ನೀವು ಅನ್ನವನ್ನು ಎಸೆದರೆ ಅದು ಸಾವಿರಾರು ಲೀಟರ್ ನೀರನ್ನು ವ್ಯರ್ಥ ಮಾಡಿದಂತೆ ಎಂದು ಮನವೊಲಿಸುವ ಪ್ರಯತ್ನ ಮಾಡುತ್ತಿದ್ದೆ.
ನನ್ನ ಮಾತಿನ ಮಧ್ಯೆ ನನಗೆ ಆಹ್ವಾನ ನೀಡಿದ್ದ ಶಿಕ್ಷಕರು ನಿನ್ನೆ ತಾನೇ ಅದೊಂದು ತಪ್ಪು ಮಾಡಿದ ಎಲ್ಲಾ ವಿದ್ಯಾರ್ಥಿಗಳು ಎದ್ದು ನಿಲ್ಲಿ ಎಂದು ಆದೇಶಿಸಿದರು.
ತಕ್ಷಣ ಸುಮಾರು ಎಂಟು ಮಂದಿ ವಿದ್ಯಾರ್ಥಿಗಳು ಎದ್ದು ನಿಂತರು. ನಾನು ಕ್ಷಣ ಕಾಲ ಮಾತು ನಿಲ್ಲಿಸಿ ವಿದ್ಯಾರ್ಥಿಗಳನ್ನು ತಾವು ಏನು ತಪ್ಪು ಮಾಡಿದ್ದೀರಾ ಎಂದು ಪ್ರಶ್ನಿಸಿದೆ. ಆದರೆ ಯಾರೂ ಮಾತನಾಡಲಿಲ್ಲ. ಕೊನೆಗೆ ಶಿಕ್ಷಕರು ಶಾಲೆಯಲ್ಲಿ ಮಧ್ಯಾಹ್ನ ನೀಡಿದ್ದ ಬಿಸಿಯೂಟದ ಅನ್ನವನ್ನು ಕೈಯಿಂದ ನುಣ್ಣಗೆ ಮಾಡಿ ಗೋಡೆಗೆ ಸಿಮೆಂಟ್ ನೊರೆಯುವಂತೆ ನೊರೆದು ಮಾಡಿದ ಮಹಾ ತಪ್ಪಿನ ಬಗ್ಗೆ ವಿವರಿಸಿದರು.
ಏಕೆಂದರೆ ನಾನು ಕೆಲ ವರ್ಷಗಳ ಹಿಂದೆ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷನಾಗಿದ್ದಾಗ ಅಲ್ಲಿನ ವಿದ್ಯಾರ್ಥಿಗಳು ತಾವು ತಟ್ಟೆಗೆ ಹಾಕಿಸಿಕೊಂಡ ಅನ್ನವನ್ನು ಮರಳಿನಲ್ಲಿ ಹೂಳುತ್ತಿದ್ದುದು ನನ್ನ ಮನದಲ್ಲಿ ಇನ್ನೂ ಮಾಸದೆ ಉಳಿದಿತ್ತು.
ಆದರೆ ಈ ಶಾಲೆಯ ವಿದ್ಯಾರ್ಥಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅನ್ನವನ್ನು ಗೋಡೆಗೆ ನೊರೆದಿದ್ದು ತುಂಬಾ ನೋವು ತಂದಿತು.
ಮಕ್ಕಳಾದ ಕಾರಣ ಏನೂ ಮಾಡಲು ಸಾಧ್ಯವಾಗದೆ ಎಲ್ಲರನ್ನು ಒಟ್ಟಿಗೆ ನಿಲ್ಲಿಸಿ ಇನ್ನು ಮುಂದೆ ಎಂದು ಅನ್ನು ಎಸೆಯುವುದಿಲ್ಲ. ಅಲ್ಲದೆ ಇಂತಹ ಹೀನ ಕೃತ್ಯವನ್ನು ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿಸಿದೆ.
ವಿದ್ಯಾರ್ಥಿಗಳು ಸಹ ನನ್ನ ಒಂದು ಗಂಟೆ ಹೇಳಿದ ವಿಷಯ ಮನದಲ್ಲಿ ಹೋಗಿದ್ದರಿಂದ ತಾವು ಮಾಡಿದ ತಪ್ಪಿನ ಅರಿವಾಗಿ ಉಳಿದ ವಿದ್ಯಾರ್ಥಿಗಳೆದರು ತಲೆ ತಗ್ಗಿಸಿ ನಿಂತಿರು.
ಆದರೆ ನನ್ನ ಪ್ರಶ್ನೆ ಆದಲ್ಲ ರಾಗಿ, ನವಣೆ, ಸಾಮೆ, ಭತ್ತ ಬೆಳೆಯುವ ರೈತ ಕುಟುಂಬದಿಂದ ಬರುತ್ತಿರುವ ಮಕ್ಕಳು ಅವುಗಳನ್ನು ಬೆಳೆಯುವುದು ಎಷ್ಟು ಕಷ್ಟ ಎಂದು ಗೊತ್ತಿದ್ದರೂ ಹೀಗೆ ವ್ಯರ್ಥ ಮಾಡುತ್ತಿರುವಾಗ ನಗರ ಪ್ರದೇಶ ಮಕ್ಕಳಿಗೆ ಇದಾವುದರ ತಿಳುವಳಿಕೆ ಇರುವುದಿಲ್ಲ.
ಇನ್ನೂ ಆ ಮಕ್ಕಳು ಅನ್ನವನ್ನು ಇನ್ನೆಷ್ಟು ವ್ಯರ್ಥ ಮಾಡಬಹುದು. ಮತ್ತೆ ಅವರಿಗೆ ಈ ಬಗ್ಗೆ ಅರಿವು ಮೂಡಿಸುವುದಾದರೂ ಹೇಗೆ ಎಂಬ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ.
ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ.
ಅಲ್ಲಿ ಎಲ್ಲವನ್ನೂ ಶಿಕ್ಷಕರೇ ಕಲಿಸುತ್ತಾರೆ ಎಂಬ ಭ್ರಮೆಯಲ್ಲಿ ನಾವು ಪೋಷಕರಿದ್ದೇವೆ. ಆದರೆ ನಮ್ಮ ಮಕ್ಕಳು ಶಾಲೆಯಲ್ಲಿ ಕಳೆಯುವುದು ಕೇವಲ ಆರು ಗಂಟೆ ಮಾತ್ರ. ಆ ವೇಳೆಯಲ್ಲಿ ಶಿಕ್ಷಕರು ಮಕ್ಕಳಿಗೆ ಏನೆಲ್ಲಾ ಹೇಳಲು ಸಾಧ್ಯ. ಮನೆಯೇ ಮೊದಲ ಪಾಠಶಾಲೆ ಆಗಿರುವುದರಿಂದ ಮಕ್ಕಳಿಗೆ ಇಂತಹ ವಿಷಯವನ್ನು ಮನೆಯಲ್ಲಿಯೇ ತಿಳಿ ಹೇಳಬೇಕು.
ಬಹುಷಃ 70 ರ ದಶಕದಲ್ಲಿ ಭಾರತ ದೇಶದಲ್ಲಿ ಬಂದಿದ್ದ ಅನ್ನದ ಬರ ಮುಂದೆನಾದರೂ ಬಂದರೆ ಆಗ ನಮಗೆ ಅನ್ನದ ಮಹತ್ವ ತಿಳಿಯಬಹುದೇನೋ…?
Nice