ಸುಮಿತ್ರಾ ವಿನಯ್
ಇತಿಹಾಸ ಪ್ರಸಿದ್ಧ ಹಂಪಿ ನೋಡಿದವರು ಅಲ್ಲೇ ಸಮೀಪವಿರುವ ಆನೆಗೊಂದಿಗೂ ಹೋಗುವುದುಂಟು. ಕಾರಣ ಅಂಜನಾದ್ರಿ ಬೆಟ್ಟ.
ಇದು ಹನುಮಂತನ ಜನ್ಮಸ್ಥಳ ಎನ್ನುವ ನಂಬಿಕೆ ಇದೆ. ಅಂಜನಾ ದೇವಿ ಇಲ್ಲಿ ವಾಸವಾಗಿದ್ದಳು. ವಾಯುವಿನ ಸಂಗ ಬೆಳೆಸಿ, ಆಕೆಗೆ ಜನಿಸಿದವನೇ ಹನುಮಂತ. ಇದರ ಪ್ರತೀಕವಾಗಿ ಬಾಲ ಹನುಮ, ಅಂಜನಾದೇವಿಯ ಶಿಲ್ಪ ಇರುವ ದೇವಸ್ಥಾನ ಅಂಜನಾದ್ರಿ ಬೆಟ್ಟದ ಮೇಲಿದೆ.
ಆನೆಗೊಂದಿಯಿಂದ ಮುನಿರಾಬಾದ್‌ಗೆ ತೆರಳುವ ರಸ್ತೆಯಲ್ಲಿ ಸಾಗುವಾಗ ಬಲಬದಿಯಲ್ಲಿ ಈ ಅದ್ಭುತವಾದ ಬೆಟ್ಟವಿದ್ದು ಹನುಮನ ದರ್ಶನಕ್ಕಾಗಿ ದೇಶ ವಿದೇಶಗಳ ಭಕ್ತರು ಈಗಲು ಪ್ರತಿನಿತ್ಯ ಇಲ್ಲಿಗೆ ಭೇಟಿ ನೀಡುತ್ತಾರೆ.
ಮತ್ತೊಂದು ಹತ್ತಿರದ ಆಕರ್ಷಣೆ ಕಿಷ್ಕಿಂದಾ ರೆಸಾರ್ಟ್. ಗಂಗಾವತಿ ಮೂಲಕ ಕಿಷ್ಕಿಂದಾ ರೆಸಾರ್ಟ್ ಮಾರ್ಗದಲ್ಲಿ ಅಂಜನಾದ್ರಿ ಪರ್ವತವಿದೆ. ಇಲ್ಲಿ ಬರುವವರ ಸಂಖ್ಯೆ ವಿರಳ. ಬೆಟ್ಟದ ಮೇಲೆ ದೇವಾಲಯ ಕಾಣುತ್ತದೆ. ಮೆಟ್ಟಿಲುಗಳನ್ನೇರಿದರೆ ಮಾತ್ರ ಅಂಜನಾ ಪರ್ವತ ನೋಡಲು ಸಾಧ್ಯ.
ಅಂಜನಾದ್ರಿ ಪರ್ವತದ ಮೇಲೆ ಬರಲು ಕಡಿದಾದ ಬೆಟ್ಟದ ಮಧ್ಯದಲ್ಲಿ 575 ಮೆಟ್ಟಿಲುಗಳಿವೆ. ಈ ಮೆಟ್ಟಿಲುಗಳನ್ನೇರುವುದು ಒಂದು ಸಾಹಸವೇ ಸರಿ. ಕೆಲವೆಡೆ ಚಿಕ್ಕಪುಟ್ಟ ಮೆಟ್ಟಿಲುಗಳಿದ್ದರೆ ಇನ್ನು ಕೆಲವೆಡೆ ವಿಸ್ತಾರವಾದ ಮೆಟ್ಟಿಲುಗಳಿವೆ.
ಮತ್ತೊಂದೆಡೆ ಬಂಡೆಗಲ್ಲುಗಳ ನಡುವೆ ಬಾಗುತ್ತ ಮೆಟ್ಟಿಲು ಏರುತ್ತ ಸಂದುಗಳಲ್ಲಿ ತೂರಿ ಮೇಲೆ ಬರುವಂತೆ ಮೆಟ್ಟಿಲುಗಳು ಅಲ್ಲಲ್ಲಿ ಬೆಟ್ಟದಲ್ಲಿ ಜಿನುಗುವ ನೀರಿನ ಝರಿಗಳು ಸುತ್ತಲೂ ಹಸಿರುಟ್ಟ ನಿಸರ್ಗ ಇವುಗಳನ್ನೆಲ್ಲ ನೋಡುತ್ತ ಸಾಗಿ ಬೆಟ್ಟ ಏರಿದರೆ ಪೂರ್ಣ ಮೇಲ್ತುದಿಗೆ ಬಂದರೆ ಸಾಕು ಮೆಟ್ಟಿಲು ಏರಿರುವ ಆಯಾಸವೆಲ್ಲ ಪ್ರಕೃತಿ ಮಡಿಲಲ್ಲಿ ಮರೆತು ಹೋಗುತ್ತದೆ.
ಈ ಬೆಟ್ಟದಲ್ಲಿ ಸುಂದರ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ನೋಡಬಹುದು. ಹಂಪಿಗೆ ಭೇಟಿ ನೀಡುವಿರಾದರೆ ಕಿಷ್ಕಿಂದಾ, ಅಂಜನಾದ್ರಿ, ವಿರುಪಾಪುರಗಡ್ಡೆ, ನವಬೃಂದಾವನ, ಆನೆಗೊಂದಿ ಇವೇ ಮೊದಲಾದ ಐತಿಹಾಸಿಕ ಸ್ಥಳಗಳನ್ನು 30ಕಿಮೀ ಅಂತರದಲ್ಲಿ ನೋಡಿ ಬರಬಹುದು.
ಜೀವನದಲ್ಲಿ ಥ್ರಿಲ್ ಬಯಸುವ ಚಾರಣಿಗರು, ಸಾಹಸಿಗರು ದಿಲ್ ಖುಷ್ ಆಗಬೇಕೆಂದಿದ್ದರೆ ಒಮ್ಮೆಯಾದರೂ ಅಂಜನಾದ್ರಿ ಪರ್ವತಕ್ಕೆ ಬರಬೇಕು. ಈ ಪರ್ವತ ಕೇವಲ ಚಾರಣಕ್ಕಷ್ಟೇ ಸೀಮಿತವಾಗದೇ ಪುರಾಣದ ಐತಿಹ್ಯ ಹೊಂದಿದ್ದು, ರಾಮಾಯಣ ಕಾಲದ ಘಟನೆಗಳಿಗೆ ಸಾಕ್ಷಿಯಂತಿದೆ.
ರಾಮಾಯಣ ಕಾಲಕ್ಕೆ ವಾನರ ಸಹನುಮ ತಾಣವಾಗಿದ್ದ ಕಿಷ್ಕಿಂದಾ,ಅಂಜನಾದ್ರಿ ವಿರುಪಾಪುರದಡ್ಡಿ, ಹನುಮಾಪುರ, ಸನಾಪುರ, ತಿರುಮಲಾಪುರ ಸುತ್ತಲಿನ ಪರಿಸರಕ್ಕೆ ಹೊಂದಿಕೊಂಡ ಅಂಜನಾದ್ರಿ ಪರ್ವತ ತಾಣವು ಆಂಜನೇಯನ ಜನ್ಮಸ್ಥಳವಾಗಿ ಪ್ರಸಿದ್ದ. ಇಲ್ಲಿ ಉದ್ಭವ ಆಂಜನೇಯ ವಿಗ್ರಹ ಪೂಜಿಸಲ್ಪಡುತ್ತಾನೆ.
ರಾಮಾಯಣದಲ್ಲಿ ಬರುವ ವಾನರರಾಜ ಕೇಸರಿ ಮತ್ತು ಅವನ ಪತ್ನಿ ಅಂಜನಾದೇವಿಯರ ಪುತ್ರ ಆಂಜನೇಯನ ಜನ್ಮಸ್ಥಳ ಈ ಅಂಜನಾದ್ರಿ ಬೆಟ್ಟ ಎಂದು ನಂಬಲಾಗಿದೆ.
ಬಹಳಷ್ಟು ಜನರು ಕಣ್ಣಿಗೆ ಕಂಡಂತೆ ಇಲ್ಲಿ ಹನುಮ ಈಗಲೂ ಇದ್ದಾನೆ ಎಂಬ ನಂಬಿಕೆಯಿದೆ, ಅಂಜನಾದ್ರಿ ಪರ್ವತದಲ್ಲಿ ಈಗಲೂ ಬೃಹದಾಕಾರದ ಒಂದು ಅತಿ ದೊಡ್ಡ ಕೋತಿ ವಾಸಿಸುತ್ತಿದ್ದು ಆಗಾಗ ಅಲ್ಲಿನ ಸ್ಥಳೀಯರ ಕಣ್ಣಿಗೆ ಹಾಗೂ ಪ್ರವಾಸಿಗರ ಕಣ್ಣಿಗೆ ಈ ಕೋತಿ ಕಾಣಿಸಿಕೊಳ್ಳುತ್ತದೆ.
ಸಾಕ್ಷಾತ್ ಈ ಆಂಜನೇಯಸ್ವಾಮಿಯೇ ಆ ಕೋತಿ ಎಂಬುದು ಹಲವರ ಅಭಿಪ್ರಾಯ ಆಗಿದೆ.
ಸೂರ್ಯಾಸ್ತದ ಸಮಯದಲ್ಲಿ ಮುಂಜಾನೆಯ ಸಮಯದಲ್ಲಿ ಬೆಟ್ಟದ ಮೇಲೆ ಹನುಮನ ರೀತಿಯಲ್ಲಿ ಆ ಕೋತಿ ನಿಂತಿರುತ್ತದೆ ಎಂಬುದು ಆ ದೃಶ್ಯಗಳನ್ನು ನೋಡಿದವರ ಮಾತಾಗಿದ್ದು ಹನುಮ ಜನಿಸಿದ ಈ ಸ್ಥಳ ಹಲವು ಪವಾಡಗಳ ಮತ್ತು ಭಕ್ತಿಯ ನೆಲೆಬೀಡಾಗಿದೆ.