ಜಿ.ಎನ್.ನಾಗರಾಜ್
ನನ್ನ ಪ್ರತೀ ಸ್ಟೇಟಸ್ ಗೆ ಬರುವ ಕಾಮೆಂಟ್ ಗಳನ್ನು ನೀವು ಗಮನಿಸಿದ್ದೀರೋ ಇಲ್ಲವೋ ಗೊತ್ತಿಲ್ಲ. ಗಮನಿಸಿದ್ದರೆ ಒಂದು ವಿಷಯ ನಿಮ್ಮನ್ನು ಕಾಡಿರಲೇಬೇಕು.
ಚಿತ್ರಶೇಖರ ಕಂಠಿ ಎನ್ನುವ ಮಿತ್ರರು ಯಾವುದೇ ಪ್ರತಿಕ್ರಿಯೆ ಬರೆಯದೆ ಬರೀ ಎಮೋಜಿ ಮಾತ್ರ ಕಳಿಸುತ್ತಾರೆ. ನನ್ನ ಇಷ್ಟೂ ದಿನದ ಸ್ಟೇಟಸ್ ಗೆ ಅವರು ಕೊಡುವ ಎಲ್ಲಾ ಪ್ರತಿಕ್ರಿಯೆ ಎಮೋಜಿ ರೂಪದಲ್ಲಿಯೇ ಇರುತ್ತದೆ.
ವಿಚಿತ್ರ ಆದರೂ ನಿಜ..
ಹಾಗನ್ನಿಸುವುದು ನಿಮಗೆ, ನನಗಲ್ಲ. ಏಕೆಂದರೆ ಚಿತ್ರಶೇಖರ ಕಂಠಿ ಅವರು ಬರೆಯುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ.
ಕಂಠಿ ಎಂದರೆ ಕಲಬುರ್ಗಿಯ ಪ್ರಮುಖ ಸಾಂಸ್ಕೃತಿಕ ಬಿಂದು. ಅವರಿಲ್ಲದೆ ಒಂದೂ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗುತ್ತಿರಲಿಲ್ಲ ಎನ್ನುವಷ್ಟು ಕಂಠಿ ಅವರನ್ನು ಎಲ್ಲರೂ ಅವಲಂಬಿಸಿದ್ದರು.
ಅವರೂ ಅಷ್ಟೇ ತಮ್ಮ ಮನೆಯನ್ನು ಎಲ್ಲರಿಗಾಗಿಯೇ ನಿರ್ಮಿಸಿದ ಛತ್ರವೇನೋ ಎನ್ನುವಂತೆ ತೆರೆದಿಟ್ಟರು.
ಅವರ ಪತ್ನಿ ಆಶಾ ಹಗಲೂ ರಾತ್ರಿ ನಡೆಯುತ್ತಿದ್ದ ಈ ಚರ್ಚೆಗೆಲ್ಲ ಕಿವಿಯಾಗುತ್ತಾ ಸತತವಾಗಿ ಟೀ ಸರಬರಾಜು ಮಾಡುತ್ತಾ, ಹೊತ್ತು ಹೊತ್ತಿಗೆ ಹೊಟ್ಟೆ ತುಂಬಿಸುತ್ತಾ ಇರುತ್ತಿದ್ದರು.
ಹೀಗಾಗಿ ಇವರ ಮನೆಯಲ್ಲಿ ಸಾಹಿತಿಗಳ ಜಾಗರಣೆ ಸದಾ.
ಕಂಠಿ ಹೈದ್ರಾಬಾದ್ ಕರ್ನಾಟಕದ ಪ್ರಮುಖ ಕಥೆಗಾರ, ಕವಿ. ‘ಬಿಸಿಲು ನಾಡಿನ ಬೆಳದಿಂಗಳು’ ಎನ್ನುವ ಉಪಮೆ ಸರಿಯಾಗಿ ಅನ್ವಯವಾಗುವುದು ಕಂಠಿಯವರಿಗೇ. ಅಷ್ಟರ ಮಟ್ಟಿಗೆ ಅವರು ಪ್ರತಿಯೊಬ್ಬರಿಗೂ ತಂಪಾದ ನೆನಪು.
ಅಂತಹ ಕಂಠಿ ಒಂದು ದಿನ ಲಕ್ವಾದ ಏಟಿಗೆ ತತ್ತರಿಸಿ ಹೋದರು. ಮಾತು ನಿಂತು ಹೋಯಿತು, ಅಕ್ಷರಗಳು ಕೈಗೆಟುಕುತ್ತಿಲ್ಲ. ಹಿಂದಿನ ಏನೆಂದರೆ ಏನೂ ನೆನಪಿಗೆ ಬರುತ್ತಿಲ್ಲ, ಎದುರಿಗೆ ಬಂದವರ ಮುಖ ಗುರುತಾಗುತ್ತಿಲ್ಲ.
ಕಲಬುರ್ಗಿ ಹಾಗೂ ರಾಜ್ಯದ ಅನೇಕ ಕಡೆ ಹರಡಿಹೋಗಿದ್ದ ಅವರ ಗೆಳೆಯರು ತತ್ತರಿಸಿ ಹೋದರು.
ಆಗ ಎದ್ದು ನಿಂತವರು ಆಶಾ ಕಂಠಿ.
ಸೊಲ್ಲಾಪುರ, ಹೈದ್ರಾಬಾದ್, ಬೆಂಗಳೂರು, ಮೈಸೂರು ಹೀಗೆ ಎಲ್ಲೆಲ್ಲಿ ಅತ್ಯುತ್ತಮ ಚಿಕಿತ್ಸೆ ದೊರೆಯುತ್ತದೋ ಅಲ್ಲೆಲ್ಲಾ ಅವರನ್ನು ಕರೆದುಕೊಂಡು ಹೋಗಿ ಇನ್ನೊಂದು ಮಗುವಿಗೆ ಜನ್ಮ ಕೊಟ್ಟೆನೇನೋ ಎನ್ನುವಂತೆ ಚಿತ್ರಶೇಖರ ಕಂಠಿಯವರನ್ನು ನೋಡಿಕೊಂಡರು.
ನೋಡನೋಡುತ್ತಿದ್ದಂತೆಯೇ ಕಂಠಿ ಅಂಬೆಗಾಲಿಡುವ ಮಗುವಾದರು. ತಪ್ಪು ತಪ್ಪು ಹೆಜ್ಜೆ ಇಟ್ಟು ನಡೆದರು. ನಂತರ ಜನರನ್ನು ನೋಡಿ ಮುಗುಳ್ನಗಲು ಕಲಿತರು.
ಒಂದಿಷ್ಟು ನೆನಪು ಮನದ ಪರದೆಯ ಮೇಲೆ ಮೂಡಿತು. ಸ್ಪಷ್ಟ ಅಲ್ಲದಿದ್ದರೂ ತೊದಲು ಮಾತು ಕಲಿತರು. ಸಂವಹನಕ್ಕೆ ಎಷ್ಟು ಬೇಕೋ ಅಷ್ಟು ದಕ್ಕಿಸಿಕೊಂಡರು.
ಈಗ ಮೊಬೈಲ್ ನೋಡುವುದನ್ನು ಕಲಿತುಕೊಂಡಿದ್ದಾರೆ. ಓದಲು ಗೊತ್ತಾಗುತ್ತದೆ. ಅರ್ಥ ಆಗದಿದ್ದರೂ ಗೆಳೆಯರನ್ನು ಗುರುತಿಸುತ್ತಾರೆ.
ಅವರಿಗೆ ಪ್ರತಿಕ್ರಿಯೆ ನೀಡಲು ಗೊತ್ತಾಗುವುದಿಲ್ಲ, ಟೈಪಿಸಲು ಬರುವುದಿಲ್ಲ. ಹಾಗಾಗಿ ನೀವು ಸದಾ ನೋಡುತ್ತಿದ್ದೀರಲ್ಲಾ ಆ ಎಮೋಜಿ ಒತ್ತುತ್ತಾರೆ..
ಅಲ್ಲಿ ಅವರು ಎಮೋಜಿ ಒತ್ತುತ್ತಾರೆ ಇಲ್ಲಿ ನನಗೆ ಕಣ್ತುಂಬಿ ಬರುತ್ತದೆ.
ಎಮೋಜಿ ಹೀಗೂ ಬಳಕೆಯಾಗುತ್ತದೆ. ಎಮೋಜಿ ಸೃಷ್ಟಿಸಿದವರಿಗೆ ಮನಸ್ಸಿನಲ್ಲಿಯೇ ಒಂದು ನಮಸ್ಕಾರ ಕೊಡುತ್ತೇನೆ..