Friday, November 22, 2024
Google search engine
Homeಸಾಹಿತ್ಯ ಸಂವಾದಅಂತರಾಳಒಂದು ನಾಟಕದಿಂದಾಗಿ ಏನೆಲ್ಲಾ..

ಒಂದು ನಾಟಕದಿಂದಾಗಿ ಏನೆಲ್ಲಾ..

ಜಿ.ಎನ್.ಮೋಹನ್


‘ರಂಗಶಂಕರ’ದಲ್ಲಿ ಸುಂಟರಗಾಳಿ ಎದ್ದಿತ್ತು.

ಅದೂ ಅಂತಿಂಥ ಸುಂಟರಗಾಳಿಯಲ್ಲ, ಭಾರೀ ಸುಂಟರಗಾಳಿ, ಧಾಂ ಧೂಂ ಸುಂಟರಗಾಳಿ.

ಹಾಗೆ ಸುಂಟರಗಾಳಿ ಎಬ್ಬಿಸಿದ್ದು ಮಂಡ್ಯ ರಮೇಶ್ ಅವರ ‘ನಟನ’ ತಂಡ. ಷೇಕ್ಸ್ ಪಿಯರ್ ನ ‘ಟೆಂಪೆಸ್ಟ್’ ನಾಟಕವನ್ನು ವೈದೇಹಿ ಮಕ್ಕಳ ಮನಸ್ಸಿನ ಮೂಲೆಯಲ್ಲಿ ಕೂಡಿಸಬೇಕು ಎಂಬ ಉದ್ಧೇಶದಿಂದ ಚಂದ ಚಂದ ಹಾಡುಗಳ, ಗಮ್ಮತ್ತಿನ ಕುಂದಾಪ್ರ ಭಾಷೆಯ ಸೊಗಡಿನ ಮೂಲಕ ‘ಧಾಂ ದೂಂ ಸುಂಟರಗಾಳಿ’ ಕಟ್ಟಿಕೊಟ್ಟಿದ್ದರು.

ಕಡಲ ತಡಿ ಹಾಗೂ ಮಲೆನಾಡು ಹೀಗೆ ಎರಡರ ಸಂಸರ್ಗವಿರುವ ಜೀವನರಾಮ್ ಸುಳ್ಯ ಈ ನಾಟಕವನ್ನು ರಂಗಕ್ಕೇರಿಸಿದ್ದರು.

‘ಓಬೆಲೆ ಓಬೇಲೆ ಓಬೆಲೆ ಬೇಲೆ ಐಸಾ, ಕಡಲ ನಡುವೆ ನಡೆದ ಕಥೆಯ ಕೇಳಿರೆಲ್ಲ ಬಾಲ ಬಾಲೆ…’ ಎನ್ನುತ್ತಾ ಇಡೀ ತಂಡ ದೊಡ್ಡ ಹಡಗನ್ನು ರಂಗದ ಮೇಲೆ ತಂದೇಬಿಟ್ಟರು.

ಎಂತಹ ಹಾಯಿದೋಣಿ ಅದು, ಚಂದದ ಚಿತ್ತಾರದ, ಯಾರು ನೋಡಿದರೂ ಇದು ರಾಜಮನೆತನದ್ದೇ ಎಂದು ಹೇಳಿಬಿಡಬಹುದಾದ ಹಡಗು.

ಆದರೆ ಎಲ್ಲಿತ್ತೋ ಆ ಬಿರುಗಾಳಿ, ಭರ್ರನೆ ಬೀಸಿ ಇಡೀ ಹಡಗನ್ನು ಅಲ್ಲೋಲ ಕಲ್ಲೋಲ ಮಾಡಿ, ಒಳಗೆ ಬೆಂಕಿ ಉಕ್ಕಿಸಿ, ಇದ್ದವರನ್ನೆಲ್ಲಾ ಸಮುದ್ರಕ್ಕೆ ದೂಡಿ, ಓಹ್ ! ಎಲ್ಲರೂ, ರಾಜ, ಮಂತ್ರಿ, ರಾಜಕುಮಾರ, ಆಳು ಕಾಳು, ಅಡುಗೆ ಭಟ್ಟ ಎಲ್ಲರೂ ನೀರಿನ ಪಾಲಾಗಿಯೇ ಹೋದರು.

ಅಲ್ಲಿಂದಲೇ ನಾಟಕದ ಕಥೆ ಬಿಚ್ಚಿಕೊಳ್ಳಲು ಆರಂಭ.

ದ್ವೀಪದಲ್ಲಿ ಮಂತ್ರಬುದ್ಧಿ, ಆತನ ಮಗಳು ಕುಮಾರಿ, ಇವರ ಅಡಿಯಾಳಾಗಿ ಕಿರಾತ, ಬೇಕಾದ್ದು ಮಾಡುವವನಾಗಿ ಕಿನ್ನರ ಹೀಗೆ ಒಂದು ದಂಡೇ ಇದೆ.

ಈ ದಂಡಿಗೂ ಆ ಹಡಗು ಪಾಲಾದವರ ಮಧ್ಯೆ ಒಂದು ನಂಟಿದೆ. ಆ ನಂಟನ್ನು ಹಾಡು, ಹಾಸ್ಯ, ಕುಣಿತಗಳ ಮೂಲಕ ರಸವತ್ತಾಗಿ ಜೀವನರಾಂ ಬಿಚ್ಚಿಡುತ್ತಾ ಹೋದರು.

ಅವರು ನಿರ್ಮಿಸಿದ್ದ ಕಾಡು, ಆ ಗಾಳಿ ಕಿನ್ನರರು, ಆ ಹಡಗು, ಆ ಮರ, ಆ ಯಕ್ಷಿಣಿ ಎಲ್ಲವೂ ಮೋಡಿ ಮಾಡಿ ಬಿಸಾಕಿತ್ತು.

ರಂಗಮಂದಿರದಿಂದ ಹೊರಬಂದಾಗ ಮಂಡ್ಯ ರಮೇಶ್ ಅಲ್ಲಿಯೇ ನಿಂತಿದ್ದ, ಒಂದು ಗಾಢ ಹಗ್ ಕೊಟ್ಟು ‘ಅದ್ಭುತ’ ಎಂದೆ.

ಇದಾಗಿ ಒಂದಷ್ಟು ತಿಂಗಳು ಕಳೆದು ಹೋಗಿತ್ತು.

ಮಂಗಳೂರಿನ ಡಾನ್ ಬಾಸ್ಕೋ ಹಾಲ್ ನಲ್ಲಿ ಇದೇ ನಾಟಕವನ್ನು ನೋಡಲು ಮತ್ತೆ ಕುಳಿತಿದ್ದೆ.

ಪಕ್ಕದಲ್ಲಿ ವೈದೇಹಿ.

ನಾಟಕ ಥೇಟ್ ಹಾಗೇ ಶುರುವಾಯಿತು. ಓಬೆಲೆ ಓಬೇಲೆ ಓಬೇಲೆ ಬೇಲೆ ಐಸಾ.. ಹಡಗು ರಂಗ ಏರಿತು, ಬಿರುಗಾಳಿ ಬೀಸಿತು, ಒಡೆದು ಹೋಗಿದ್ದೂ ಆಯ್ತು, ಇಡೀ ರಾಜ ಪರಿವಾರ ನೀರು ಪಾಲಾದದ್ದೂ ಆಯ್ತು.

ಇತ್ತ ದ್ವೀಪದೊಳಗಿದ್ದ ಮಂತ್ರಶಕ್ತಿ ಮಗಳು ಕುಮಾರಿಗೆ ಕಥೆ ಹೇಳಲು ಶುರು ಮಾಡಿದ. ತಾನು ಮಿಲಾನಿನ ರಾಜನಾಗಿದ್ದದ್ದು, ತಮ್ಮನ ಕುಯುಕ್ತಿಯಿಂದ ಸಮುದ್ರಕ್ಕೆಸೆಯಲ್ಪಟ್ಟದ್ದು, ಸಮುದ್ರದ ಅಲೆಗಳನ್ನು ಎದುರಿಸುತ್ತಾ ಈ ದ್ವೀಪ ಬಂದು ತಲುಪಿದ್ದು,

ಎಲ್ಲರೂ ಹಾಹಾಗೇ.. ‘ರಂಗಶಂಕರ’ದಲ್ಲಿ ಹೇಗಿತ್ತೋ ಹಾಗೆಯೇ ನಾಟಕ ಓಡುತ್ತಿತ್ತು ಕಿಂಚಿತ್ತೂ ಬದಲಾವಣೆಯಿರಲಿಲ್ಲ.

ಈ ದ್ವೀಪಕ್ಕೆ ಬಂದಾಗ ಅವನಿಗೆ ಎಂತಹ ಸವಾಲಿತ್ತು, ‘ಈ ದ್ವೀಪದಲ್ಲಿದ್ದ ಚೌಡಿ ನನ್ನ ಮೇಲೆ ಹಾಯ್ದು ಬಂದಳು. ಇವಳು ದ್ವೀಪದ ಮೂಲ ನಿವಾಸಿ..’ ಅಂತ ಮಂತ್ರಬುದ್ಧಿ ತನ್ನ ಸಂಭಾಷಣೆಯನ್ನು ನೀಟಾಗಿ ಒಪ್ಪಿಸುತ್ತಿದ್ದ. ನಾನೂ ನಾಟಕದಲ್ಲಿ ಮುಳುಗಿ ಹೋಗಿದ್ದೆ.

ಆಗ ವೈದೇಹಿ ನನ್ನ ಕಿವಿಯಲ್ಲಿ ‘ಇದು ಮೂಲನಿವಾಸಿಗಳನ್ನು ನಾಶ ಮಾಡಿದ ಕಥೆಯೂ ಹೌದಲ್ಲವಾ? ಅಮೇರಿಕಾದಲ್ಲಿ ಆಗಿದ್ದು ಹಾಗೇ ತಾನೆ?’ ಎಂದರು.

‘ಅರೆ! ಹೌದಲ್ಲಾ’ ಎನಿಸಿತು. ‘ಕತ್ತಲಲ್ಲಿ ಬೆಳಕು ಮಿಂಚಿ ಅಡಗಿತೇಳು ಬಣ್ಣ..’ ಎನ್ನುವಂತೆ, ವೈದೇಹಿ ಹಾಗೆ ಹೇಳಿದ್ದೇ ತಡ ನನಗೆ ಆ ನಾಟಕ ಕೇವಲ ನಾಟಕವಾಗಿ ಉಳಿಯಲಿಲ್ಲ. ಚರಿತ್ರೆಯ ಒಳಗಿನ ಏನೆಲ್ಲವನ್ನೂ ಹೊರಗೆಳೆದು ನಿಲ್ಲಿಸುವ ಆಟವೂ ಆಗಿ ಹೋಯಿತು.

ರಂಗಶಂಕರದಲ್ಲಿ ಈ ಇದೇ ನಾಟಕವನ್ನು ನಾನು ಮಗುವಲ್ಲಿ ಮಗುವಾಗಿ, ಅಚ್ಚರಿಗಣ್ಣುಗಳಿಂದ, ಬಾಯಿ ಬಿಟ್ಟುಕೊಂಡು, ಹಾಡಿಗೆ ತಲೆದೂಗುತ್ತಾ, ತಾಳಕ್ಕೆ ಚಪ್ಪಾಳೆ ಸೇರಿಸುತ್ತಾ ಒಂದು ಕಟ್ಟು ಕಥೆಯಂತೆ, ಮಾಂತ್ರಿಕ ಲೋಕದ ಒಂದು ತುಂಡಿನಂತೆ ನೋಡಿದ್ದೆ.

ಆದರೆ ಆ ಅದೇ ನಾಟಕ ಈಗ ನನಗೆ ಹಾಗೆ ಕಾಣುತ್ತಿಲ್ಲ.

ಆ ಹಾಡು, ಆ ಮಾತು, ಆ ದೃಶ್ಯ, ಎಲ್ಲವೂ ನನಗೆ ಅದರಾಚೆಗಿನ ಏನನ್ನೋ ಹೇಳುತ್ತಿತ್ತು. ಅದರಾಚೆಗಿನ ಸತ್ಯವನ್ನು ಮಂಡಿಸುತ್ತಿತ್ತು. ಅಥವಾ ಹೀಗೆ ಹೇಳಬಹುದೇನೋ ರಂಗಶಂಕರ ಹಾಗೂ ಡಾನ್ ಬಾಸ್ಕೋ ನಡುವೆ ವೈದೇಹಿ ಇದ್ದರು.

ನಾನು ಕೊಲಂಬಸ್ ನ ಬೆನ್ನುಬಿದ್ದು ಆಗಲೇ ಸಾಕಷ್ಟು ವರ್ಷಗಳಾಗಿ ಹೋಗಿದೆ.

ಕೊಲಂಬಸ್ ನ ಮಾತು ಬಿಡಿ ಯಾರ್ಯಾರು ದಿಕ್ಸೂಚಿಯನ್ನು ಕೈಲಿ ಹಿಡಿದು, ಬೈನಾಕ್ಯುಲರ್ ನ್ನು ಬಗಲಲ್ಲಿಟ್ಟುಕೊಂಡು ಹಡಗು ಹತ್ತಿದರೋ ಅವರನ್ನೆಲ್ಲಾ ಹಿಂಬಾಲಿಸಿದ್ದೇನೆ.

ಅವರು ಹಾಗೆ ಹಡಗು ಏರಿದ್ದು, ಕಂಡ ಕಂಡ ದೇಶಗಳಲ್ಲಿ ಕಾಲಿಟ್ಟದ್ದು, ಅವನ್ನು ತಾವೇ ಕಂಡುಹಿಡಿದದ್ದು ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡದ್ದು, ‘ಅಲ್ಲಿದ್ದವರಿಗೆ ಏನೇನೂ ಬುದ್ಧಿ ಇಲ್ಲ, ನಯ ನಾಜೂಕು ಇಲ್ಲ, ಸಂಸ್ಕೃತಿ ಹೆಸರು ಎತ್ತಲೇಬೇಡಿ’ ಎಂದದ್ದು..

..‘ಇವೆಲ್ಲವನ್ನೂ ಅವರಿಗೆ ನಾವು ಕಲಿಸಿಕೊಡುತ್ತಿದ್ದೇವೆ. ಅದರಿಂದಾಗಿ ನಾಗರಿಕ ಪ್ರಪಂಚವನ್ನು ಸೃಷ್ಟಿಸುತ್ತಿದ್ದೇವೆ’ ಎಂದು ಸಾರಿದ್ದೂ, ಹೌದೌದು ಎಂದು ಹೌದಪ್ಪಗಳು ತಲೆದೂಗಿದ್ದೂ, ಚರಿತ್ರೆಕಾರರು ಇದನ್ನೇ ಬರದದ್ದೇ ಬರೆದದ್ದು, ಇದನ್ನೇ ನಾವು ನೀವೆಲ್ಲಾ ಪಠ್ಯಪುಸ್ತಕವಾಗಿ ಓದುತ್ತಿರುವುದು ಎಲ್ಲವೂ ಆಗುತ್ತಿದೆ.

ಹಾಗಿರುವಾಗ ವೈದೇಹಿ ಈ ಮಾತು ಹೇಳಿಬಿಟ್ಟಿದ್ದರು.

‘ಟೆಂಪೆಸ್ಟ್’ನ ಪ್ರಾಸ್ಪರೋ ಅಥವಾ ಈ ‘ಧಾಂ ದೂಂ ಸುಂಟರಗಾಳಿ’ಯ ಈ ಮಂತ್ರಬುದ್ಧಿ ನನಗೆ ಥೇಟ್ ಕೊಲಂಬಸ್ ನಂತೆ ಕಾಣಿಸಲು ಆರಂಭಿಸಿದ.

ನಾಟಕವನ್ನು ಹಾಗೇ ತಲೆಯಲ್ಲಿ ರೀವೈಂಡ್ ಮಾಡಿಕೊಂಡೆ.

ಸಮುದ್ರಪಾಲಾದ ಮಂತ್ರಬುದ್ಧಿ ಹಾಗೂ ಹೀಗೂ ದ್ವೀಪಕ್ಕೆ ಬಂದು ಸೇರುತ್ತಾನೆ. ಮಗಳಿಗೆ ಹೇಳುತ್ತಾನೆ ‘ಮಗೂ, ಸಮುದ್ರಯಾನ ಮಾಡಿದ ನಾವಿಕರನೇಕರು ಹೇಳಿದ ನಾನಾ ಕಥೆಗಳು ನನಗೆ ತಕ್ಷಣ ನೆನಪಿಗೆ ಬಂತು. ಚೌಡಿ, ದ್ವೀಪದ ಮೂಲನಿವಾಸಿ. ತುಂಬಾ ಕ್ರೂರಿ. ಅವಳನ್ನೆದುರಿಸಲು ನನ್ನ ಬಳಿ ಕತ್ತಿ ಉಂಟೇ ಗುರಾಣಿ ಉಂಟೇ ? ಇದ್ದದ್ದು ಸ್ವಲ್ಪ ಮಟ್ಟಿನ ಮಂತ್ರಬಲ ಮಾತ್ರ..’ ಎಂದವನೇ ಆ ಚೌಡಿಯನ್ನು ಕೊಲ್ಲುತ್ತಾನೆ. ಮಂತ್ರಬಲದಿಂದ ಮಗನನ್ನು ಅಡಿಯಾಳಾಗಿಸಿಕೊಳ್ಳುತ್ತಾನೆ. ಹೇಳುತ್ತಾನೆ- ‘ನೀನು ನನ್ನ ಗುಲಾಮನಾಗಿರು. ಪ್ರತಿಯಾಗಿ ನಿನಗೆ ಭಾಷೆ ಕಲಿಸುತ್ತೇನೆ, ಮನುಷ್ಯನನ್ನಾಗಿ ಮಾಡುತ್ತೇನೆ.’

ನಾಟಕದುದ್ದಕ್ಕೂ ಈ ಮೂಲನಿವಾಸಿಗೆ ಬಿರುದುಗಳೇ ಬಿರುದುಗಳು. ಅಯೋಗ್ಯ, ಚಪ್ಪರ ಚೌಡಿ ಮಗ, ಕೀಳುಭೂತ, ಕಿರಾತ, ನೆಲಗುಮ್ಮ, ಅಧಮಾಧಮ.

ಇಂತಹ ‘ಅಧಮಾಧಮ’ ಹೇಳುವುದು ಹೀಗೆ: ‘ ಏನು ಉದ್ಧರಿಸಿದ ಅಂತ ಇಷ್ಟು ಮಾತನಾಡುತ್ತಾನೆ ಇವ? ನೀವೇ ಹೇಳಿ. ಈ ದ್ವೀಪದ ಮೂಲೆ ಮೂಲೆಯೆಲ್ಲಾ ತಿರುಗಿ ಎಲ್ಲೆಲ್ಲಿ ಏನೇನು ಸಿಕ್ಕುತ್ತದೆ ಅಂತೆಲ್ಲಾ ತಿಳಿಸಿಕೊಟ್ಟೆ. ಅಷ್ಟೂ ತಿಳಿಯಿತಾ ಇಲ್ಲವಾ- ನನ್ನ ಮುವತ್ತೆರಡೂ ಹಲ್ಲನ್ನೂ ಲೆಕ್ಕ ಮಾಡಿದ. ಈ ದ್ವೀಪ ಯಾರದೆಂತ ಮಾಡಿದಿರಿ! ನನ್ನ ಅಮ್ಮಂದು! ನನಗೆ ವಂಶದಿಂದ ಬಂದದ್ದು. ಅದನ್ನೂ ಲಪಟಾಯಿಸಿದ ಸ್ವಾಮೀ,.’

ಹೀಗೆಲ್ಲಾ ‘ಕಿರಾತ’ ಹೇಳುತ್ತಲೇ ಹೋಗುತ್ತಿದ್ದ. ಇತ್ತ ನಾನು ಇದೇ ‘ಟೆಂಪೆಸ್ಟ್’ ನಾಟಕವನ್ನು ಇನ್ನು ಯಾರೆಲ್ಲಾ ಕನ್ನಡಕ್ಕೆ ತಂದಿದ್ದಾರೆ ಎಂದು ಹುಡುಕುತ್ತಾ ಹೋದೆ.

ಕುವೆಂಪು, ಮಾಸ್ತಿ, ಎ ಎನ್ ಮೂರ್ತಿರಾವ್.. ಟೆಂಪೆಸ್ಟ್ ‘ಬಿರುಗಾಳಿ’ಯಾಗಿ, ‘ಚಂಡಮಾರುತ’ವಾಗಿ ಕನ್ನಡಕ್ಕೆ ಬಂದಿತ್ತು. ಅದರ ಪುಟ ತೆರೆಯುತ್ತಾ ಹೋದೆ. ವಸಾಹತುಷಾಹಿ ಎನ್ನುವುದರ ಭೀಕರ ಚಿತ್ರ ಬಯಲಾಗಿತ್ತು.

ಆ ವೇಳೆಗೆ ಡಾ. ಕರೀಗೌಡ ಬೀಚನಹಳ್ಳಿ ಟೆಂಪೆಸ್ಟ್ ಹಾಗೂ ಅದರ ಕನ್ನಡ ಅವತರಣಿಕೆಗಳ ಅಧ್ಯಯನವನ್ನು ಬೆಂಬತ್ತಿ ಹೋದೆ. ಅಲ್ಲಿ ಷೇಕ್ಸ್ ಪಿಯರ್ ಸೃಷ್ಟಿಸಿದ ಪಾತ್ರಗಳ ಪೈಕಿ ಹ್ಯಾಮ್ಲೆಟ್ ಹೊರತುಪಡಿಸಿದರೆ ಅತಿ ಹೆಚ್ಚು ವಾದ ವಿದಾದ, ಟೀಕೆ ವ್ಯಾಖ್ಯಾನಕ್ಕೆ ಎಡೆಮಾಡಿಕೊಟ್ಟ ಪಾತ್ರವೆಂದರೆ ಕ್ಯಾಲಿಬನ್ (ಕಿರಾತ) ಎಂದಿತ್ತು.

ಒಂದೆಡೆ ಅಮೇರಿಕಾ ಇನ್ನೊಂದೆಡೆ ಇಂಗ್ಲೆಂಡ್ ಜಗತ್ತನ್ನು ತನ್ನ ಅಡಿಯಾಳಾಗಿಸಿಕೊಳ್ಳುತ್ತಾ ಹೋದ ಕಥೆ ಕಣ್ಮುಂದೆ ಬಿಚ್ಚಿಕೊಳ್ಳುತ್ತಾ ಹೋಯಿತು.

ತಕ್ಷಣವೇ ನನಗೆ ಇಂಗ್ಲೆಂಡ್ ನಲ್ಲಿ ಹರಸೇವ್ ಬಿಯಾನ್ಸ್ ಜೊತೆ ಕುಳಿತದ್ದು ನೆನಪಿಗೆ ಬಂತು.

ಏನೋ ಮಾತನಾಡುತ್ತಾ ಬ್ರಿಟನ್ ಗೆ ‘ಯುನೈಟೆಡ್ ಕಿಂಗ್ ಡಂ’ ಎಂದು ಬಳಸಿದ್ದೆ. ತಕ್ಷಣ ಅವರು ಯುನೈಟೆಡ್ ಕಿಂಗ್ ಡಂ ಅಲ್ಲ, ಬ್ರಿಟನ್ ಎಂದು ಗಂಭೀರವಾಗಿ ಹೇಳಿದರು.

ನನಗೆ ಇದರ ತಲೆಬುಡ ತಿಳಿಯಲಿಲ್ಲ.

‘ಯಾಕೆ ನಾವೆಲ್ಲರೂ ಚರಿತ್ರೆಯಲ್ಲಿ ಓದಿರುವುದು ‘ಗ್ರೇಟ್ ಬ್ರಿಟನ್, ಯುನೈಟೆಡ್ ಕಿಂಗ್ ಡಂ’ ಅಂತ ತಾನೆ?’ ಎಂದೆ.

ಅವರು ಕಡ್ಡಿ ತುಂಡರಿಸಿದಂತೆ ದೇಶಗಳನ್ನು ಅಡಿಯಾಳಾಗಿಸಿಕೊಳ್ಳುವ ಇಂಗ್ಲೆಂಡ್ ಗೆ ತಾನು ‘ಯುನೈಟೆಡ್’ ಎಂದು ಸಾರಿಕೊಳ್ಳುವ ಹಂಬಲ. ಆದರೆ ಅದೇ ಐರ್ಲೆಂಡ್ ನ ದೃಷ್ಟಿಯಿಂದ ನೋಡಿ, ಚರಿತ್ರೆ ಬೇರೆಯೇ ಇದೆ. ಅದು ಅರಸನಿಗೆ ಒಂದಾದರೆ ಆಳಿಗೆ ಮತ್ತೊಂದು ಎಂದರು.

ತಕ್ಷಣ ನನಗೆ ಸುಗತ ಶ್ರೀನಿವಾಸರಾಜು ಫೇಸ್ ಬುಕ್ ನಲ್ಲಿ ಅದೀಗ ತಾನೆ ಏರಿಸಿದ್ದ ಚಿನುವಾ ಅಚಿಬೆಯವರ ಮಾತು ನೆನಪಿಗೆ ಬಂತು- ‘ಸಿಂಹಗಳಿಗೆ ಅವರದೇ ಆದ ಚರಿತ್ರಕಾರರು ಇರುವವರೆಗೂ ಬೇಟೆ ಎನ್ನುವುದು ಬೇಟೆಗಾರರನ್ನು ಮಾತ್ರವೇ ವಿಜೃಂಬಿಸುತ್ತದೆ’

ಹೌದಲ್ಲಾ..!

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?