ಬೆಂಗಳೂರು: ‘ಸಮಾಜ ಅಸ್ವಸ್ಥವಾದಾಗಲೆಲ್ಲಾ ಕಬೀರ ಚಿಕಿತ್ಸಕನಾಗಿ ಹೊರಹೊಮ್ಮುತ್ತಾನೆ’ ಎಂದು ಹಿರಿಯ ವಿಮರ್ಶಕ ಸುರೇಶ ನಾಗಲಮಡಿಕೆ ಅವರು ಅಭಿಪ್ರಾಯಪಟ್ಟರು.
‘ಅವಧಿಮ್ಯಾಗ್’ ಹಮ್ಮಿಕೊಂಡಿದ್ದ ಕೇಶವ ಮಳಗಿ ಅವರ ಕಬೀರ ಪದಗಳ ಸಂಕಲನ ‘ಹಂಸ ಏಕಾಂಗಿ’ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಬೀರ ಎಲ್ಲ ನಾಯಕರ ಮೇಲೆಯೂ ಪ್ರಭಾವ ಬೀರಿದ್ದಾನೆ. ಅಂಬೇಡ್ಕರ್ ಅವರು ಕಬೀರ ಪಂಥೀಯರಾದ ಕಾರಣಕ್ಕಾಗಿಯೇ ಅವರು ಮಹಾಡ್ ಪ್ರಸಂಗದಲ್ಲಿ ಹೆಚ್ಚು ರಕ್ತಪಾತವಾಗದಂತೆ ಸತ್ಯಾಗ್ರಹವನ್ನು ಹಿಂದೆ ಪಡೆದರು’ ಎಂದು ಅವರು ಅಭಿಪ್ರಾಯಪಟ್ಟರು.
ಕೃತಿ ಬಿಡುಗಡೆ ಮಾಡಿದ ವಿಮರ್ಶಕ ಟಿ ಎನ್ ವಾಸುದೇವಮೂರ್ತಿ ಅವರು ಮಾತನಾಡಿ ‘ಕೋಮು ಸಮನ್ವಯ ಹಾಗೂ ವೈಷಮ್ಯಕ್ಕೆ ಸಾಕ್ಷಿಯಾಗಿದ್ದವನು ಕಬೀರ. ಕಬೀರ ಈ ವೈಷಮ್ಯವನ್ನು ನಿವಾರಣೆ ಮಾಡುತ್ತಾನೆ ಎನ್ನುವ ಹುಂಬ ಭರವಸೆ ನನಗಿಲ್ಲ. ಆದರೆ ಈ ವೈಷಮ್ಯಗಳು ಉಂಟುಮಾಡುವ ನಕಾರಾತ್ಮಕ ಆಲೋಚನೆಗಳಿಂದ ರಕ್ಷಿಸುತ್ತಾನೆ. ಆತ ಒಂದು ರೀತಿಯಲ್ಲಿ ಸಮಾಜದ ವೈದ್ಯ’ ಎಂದು ಅಭಿಪ್ರಾಯಪಟ್ಟರು.
ಕೃತಿಕಾರ ಕೇಶವ ಮಳ ಗಿ ಮಾತನಾಡಿ ‘ಕಬೀರ ಒಬ್ಬ ನುಡಿಚಿಕಿತ್ಸಕ. ಕಬೀರ ಸದಾ ಸಮಾಜದಲ್ಲಿ ಇರುತ್ತಾನೆ. ಸಮಾಜ ಅಸ್ವಸ್ಥವಾದಾಗಲೆಲ್ಲ ಬೇರೆ ರೂಪದಲ್ಲಿ ಪ್ರಕಟಗೊಳ್ಳುತ್ತಾನೆ. ಇಂದಿನ ಭಾರತೀಯ ಸಮಾಜ ಅಂತಹ ಅಸ್ವಸ್ಥತೆಯಲ್ಲಿ ಬಳಲುತ್ತಿದೆ ಎಂದು ಮಳಗಿ ವಿಷಾದಿಸಿದರು.