Friday, November 22, 2024
Google search engine
Homeಸಾಹಿತ್ಯ ಸಂವಾದಅಂತರಾಳಕಾಯಿ ಕಾಯಿ ನುಗ್ಗೇಕಾಯಿ ಆಸೆಗೆ..

ಕಾಯಿ ಕಾಯಿ ನುಗ್ಗೇಕಾಯಿ ಆಸೆಗೆ..

ಜಿ ಎನ್ ಮೋಹನ್


ಅದು ಪತ್ರಿಕಾ ಗೋಷ್ಠಿ.

ಅಂತಿಂತ ಪತ್ರಿಕಾ ಗೋಷ್ಠಿಯಲ್ಲ.

ದೇಶ ವಿದೇಶದ ಎಲ್ಲಾ ಅಧ್ಯಕ್ಷರೂ ಕುತೂಹಲದಿಂದ ಕಾಯುತ್ತಿದ್ದ ಪತ್ರಿಕಾ ಗೋಷ್ಠಿ.

ಜಗತ್ತಿನ ಅನೇಕ ದೇಶಗಳಲ್ಲಿ ಸಂಚಲನ ಹುಟ್ಟಿಸಬಹುದಾದ ಪತ್ರಿಕಾ ಗೋಷ್ಠಿ.

ಜಗತ್ತಿನ ಹೋರಾಟಗಳಿಗೆ ಹೊಸ ಹುಮ್ಮಸ್ಸು ನೀಡಬಹುದಾದ, ಹೊಸ ತಿರುವು ನೀಡಬಹುದಾದ ಪತ್ರಿಕಾ ಗೋಷ್ಠಿ.

ಪತ್ರಿಕಾ ಗೋಷ್ಠಿಯ ಕೋಣೆಯಲ್ಲಿ ಪತ್ರಕರ್ತರು ಕಿಕ್ಕಿರಿದಿದ್ದರು. ದೇಶ ವಿದೇಶದ ಟೆಲಿವಿಷನ್ ಚಾನಲ್ ಗಳು ನೇರ ಪ್ರಸಾರಕ್ಕೆ ಸಜ್ಜಾಗಿದ್ದವು. ಹೊರಗಡೆ ಓ ಬಿ ವ್ಯಾನ್ ಗಳ ದಂಡು.

ಅದು ಫಿಡೆಲ್ ಕ್ಯಾಸ್ಟ್ರೋ ಪತ್ರಿಕಾ ಗೋಷ್ಠಿ.

ಅಂತಹ ಅಮೆರಿಕಾವನ್ನು ತನ್ನ ಒಂದು ಪುಟ್ಟ ಮುಷ್ಟಿಯಿಂದ ಗುದ್ದಿ ಗುದ್ದಿ ಹಾಕಿದ್ದ ಫಿಡೆಲ್ ಕ್ಯಾಸ್ಟ್ರೋ ಪತ್ರಿಕಾ ಗೋಷ್ಠಿ. ಸಿ ಐ ಎ ೬೩೮ ಬಾರಿ ಹತ್ಯೆ ಮಾಡಲು ಯತ್ನಿಸಿದರೂ ಬೆಕ್ಕಿನಂತೆ ಜೀವ ಉಳಿಸಿಕೊಂಡಿದ್ದ ಫಿಡೆಲ್ ಕ್ಯಾಸ್ಟ್ರೋ ಪತ್ರಿಕಾ ಗೋಷ್ಠಿ. ‘ಇನ್ನೇನಿದ್ದರೂ ಅವರು ನನ್ನ ಸಹಜ ಸಾವನ್ನಷ್ಟೇ ಕಾಯುತ್ತಾ ಕೂರಬೇಕು..’ ಎಂದು ಅಬ್ಬರಿಸಿ ಹೇಳಿದ್ದ ಕ್ಯಾಸ್ಟ್ರೋ ಪತ್ರಿಕಾ ಗೋಷ್ಠಿ.

ಇಡೀ ಜಗತ್ತು ಕಿವಿಯಾಗಿ ಈ ಗೋಷ್ಠಿಯತ್ತ ಕುಳಿತದ್ದಕ್ಕೆ ಕಾರಣವಿತ್ತು.

ಫಿಡೆಲ್ ಕ್ಯಾಸ್ಟ್ರೋ ಕ್ಯಾನ್ಸರ್ ಎಂದೇ ಸಂಶಯಿಸಲಾಗಿದ್ದ ಹೊಟ್ಟೆನೋವಿನಿಂದ ಸುಧೀರ್ಘ ಕಾಲ ಆಸ್ಪತ್ರೆಯ ಮಂಚದ ಮೇಲಿದ್ದು ಇದೇ ಮೊದಲ ಬಾರಿಗೆ ಜಗತ್ತನ್ನು ಉದ್ಧೇಶಿಸಿ ಮಾತನಾಡಲಿದ್ದರು.

ಅವರು ಇನ್ನೂ ನೂರು ವರ್ಷ ಉಳಿಯಲಿ ಎಂದು ಹಾರೈಸಿದವರಿಗೂ, ಮತ್ತೆ ಬದುಕಿಬಿಟ್ಟರಲ್ಲಾ ಎಂದು ಸಂಕಟಪಟ್ಟ ಇಬ್ಬರಿಗೂ ಮಹತ್ವವಾಗಿದ್ದ ಪತ್ರಿಕಾ ಗೋಷ್ಠಿ.

ಟಿ ವಿ ಕ್ಯಾಮೆರಾಗಳು ಆನ್ ಆದವು, ಅದರ ಬೆಳಕು ಕೋಣೆಯಲ್ಲಿ ಹರಡಿ ಚೆಲ್ಲಾಡಿ ಹೋಯಿತು. ದೇಶ ವಿದೇಶಗಳ ಸ್ಟುಡಿಯೋಗಳಲ್ಲಿ ಸಂಚಲನ, ಸುದ್ದಿ ವಾಚಕರು ಅಲರ್ಟ್ ಆದರು. ಫಿಡೆಲ್ ಕ್ಯಾಸ್ಟ್ರೋ ಒಂದು ಮಾತು ಇಡೀ ಜಗತ್ತಿಗೆ ಸಾಂತ್ವನವೂ ಹೌದು, ಚಾಟಿ ಏಟೂ ಹೌದು.

ಫಿಡೆಲ್ ಕ್ಯಾಸ್ಟ್ರೋ ಬಂದು ಕುಳಿತವರೇ ನನ್ನ ಜೀವ ಉಳಿಸಿದ ಮಹಾಶಯನಿಗೆ ಮೊದಲ ವಂದನೆ ಎಂದರು.

ಎಲ್ಲರ ಕಿವಿ ನೆಟ್ಟಗಾಯಿತು.

ಅದಾರು ಆ ಮಹಾಶಯ. ಸಾವ ದವಡೆಯಿಂದ ಕ್ಯಾಸ್ಟ್ರೋನ ಎತ್ತಿಕೊಂಡು ಹೊರಗೆ ಬಂದವರು ಎಂದು ಕುತೂಹಲ ಮೂಡಿತು. ತಕ್ಷಣ ಕೇಳಿಯೇಬಿಟ್ಟರು. ಕ್ಯಾಸ್ಟ್ರೋ ಒಂದು ಕ್ಷಣ ಕೂಡಾ ತಡಮಾಡಲಿಲ್ಲ. ತಮ್ಮ ಎದುರಿನ ಟೇಬಲ್ ಮೇಲಿದ್ದ ಅದನ್ನು ಎತ್ತಿ ಹಿಡಿದರು. ಇಡೀ ಸಭೆಯೇ ಕಕ್ಕಾಬಿಕ್ಕಿಯಾಗಿ ಹೋಯಿತು.

ಪತ್ರಿಕಾ ಗೋಷ್ಠಿಯತ್ತ ಕಣ್ಣು ನೆಟ್ಟಿದ್ದ, ಕಿವಿ ಕೊಟ್ಟಿದ್ದ ಜಗತ್ತು ಸಹಾ ‘ಏನಿದೇನಿದು?’ ಎಂದು ಕಣ್ಣು ಬಾಯಿ ಬಿಟ್ಟುಕೊಂಡು ನೋಡಿತು.

ನೀವು ನಂಬಬೇಕು. ಹಾಗೆ ಕ್ಯಾಸ್ಟ್ರೋ ಕೈನಲ್ಲಿ ಇದ್ದದ್ದು ನುಗ್ಗೇಕಾಯಿ.

ಸಾವಿಲ್ಲದ ಮನೆಯಿಂದ ಸಾಸಿವೆ ತರಲು ಸಾಧ್ಯವಿಲ್ಲ ಆದರೆ ಸಾವು ಕಾಡುವ ಮನೆಗೆ ನುಗ್ಗೇಕಾಯಿ ಇರಬೇಕು ಎನ್ನುವುದು ಫಿಡೆಲ್ ಅನುಭವವಾಗಿ ಹೋಗಿತ್ತು.

‘ಇದೊಂದು ಪವಾಡದ ಕಾಯಿ. ಇದೇ ನನ್ನ ಜೀವ ಉಳಿಸಿದ್ದು..’ ಎಂದು ಬಣ್ಣಿಸಿದಾಗ ಇಡೀ ಸಭೆ ಕಣ್ಣು ಕಣ್ಣು ಬಿಟ್ಟಿತ್ತು.

ಆದರೆ ಫಿಡೆಲ್ ಅಲ್ಲಿಗೆ ನಿಲ್ಲಿಸಲಿಲ್ಲ ಅದು ಹೇಗೆ ಸಾಧ್ಯವಾಯಿತು ಎನ್ನುವುದನ್ನು ಬಿಡಿಸಿಡುತ್ತಾ ಹೋದರು.

ನುಗ್ಗೇಕಾಯಿ ಎನ್ನುವುದು ಹಸಿವನ್ನೂ, ಆರೋಗ್ಯವನ್ನೂ, ಜೀವಂತಿಕೆಯನ್ನೂ, ದೇಹದ ಕುಶಲತೆಯನ್ನೂ ಹೇಗೆ ಕಾಪಾಡುತ್ತದೆ ಎಂದು ಬಿಡಿಸಿಟ್ಟರು.

ಹಾಗೆ ಮಾತನಾಡುತ್ತಿರುವಾಗ ಅವರ ಎದುರಿಗಿದ್ದ ಬಟ್ಟಲಿನಲ್ಲಿ ಅದೇ ನುಗ್ಗೆಕಾಯಿಯಿಂದ ಮಾಡಿದ ಸೂಪ್ ನಿಂದ ಎದ್ದ ಹಬೆ ಕೋಣೆಯ ಸುತ್ತಾ ಸುತ್ತುತ್ತಿತ್ತು.

ಫಿಡೆಲ್ ಗುಣಮುಖರಾಗಿ ದಿನನಿತ್ಯದ ಚಟುವಟಿಕೆಗೆ ಸಜ್ಜಾದಾಗ ಅವರು ನಡೆಸಿದ ಮೊದಲ ಸಭೆಯೇ ನುಗ್ಗೆಕಾಯಿಯ ಬಗ್ಗೆ.

ಹೈಟಿಯಲ್ಲಿ ನಡೆದ ಭೂಕಂಪ ಫಿಡೆಲ್ ರನ್ನು ಇನ್ನಿಲ್ಲದಂತೆ ಕಾಡಿತ್ತು. ಸರಿಯಾಗಿ ಪರಿಹಾರ ಕಾರ್ಯಗಳು ಜರುಗದೆ ಕಾಲರಾ ತಲೆ ಎತ್ತಿತ್ತು. ಕಾಲರಾ ಎಂಬ ಜವರಾಯ ದಿನಕ್ಕೆ ಏನಿಲ್ಲೆಂದರೂ ೫೦ ಜನರನ್ನು ಆಪೋಶನ ತೆಗೆದುಕೊಳ್ಳುತ್ತಾ ಹೆಜ್ಜೆ ಹಾಕಿದ್ದ. ಹೈಟಿ ತತ್ತರಿಸಿ ಹೋಗಿತ್ತು. ಫಿಡೆಲ್ ಜಗತ್ತಿನ ಎಲ್ಲಾ ನೊಂದವರ ಬಂಧು. ಹಾಗಾಗಿಯೇ ಹೈಟಿಯ ಹಸಿವು ಇಲ್ಲವಾಗಿಸಲು, ಹೈಟಿಯ ಆರೋಗ್ಯಕ್ಕೆ ಬೆನ್ನೆಲುಬಾಗಲು ಏನಾದರೂ ಮಾಡಬೇಕು ಎಂದು ತಹತಹಿಸಿದರು. ಆಗಲೇ ಅವರು ಫೋನ್ ತಿರುಗಿಸಿದ್ದು ಫಿನ್ಲೆ ಇನ್ಸ್ಟಿಟ್ಯೂಟ್ ನ ಕನ್ಸೆಪ್ಸಿಯನ್ ಕ್ಯಾಂಪ ಹ್ಯೂರ್ಗೋ ಅವರಿಗೆ.

ಕ್ಯೂಬಾ ಜಗತ್ತಿಗೆ ಆರೋಗ್ಯದ ತೋರುದೀಪ. ಅಲ್ಲಿನ ಫಿನ್ಲೆ ಇನ್ಸ್ಟಿಟ್ಯೂಟ್ ಅನೇಕ ರೋಗಗಳಿಂದ ಕ್ಯೂಬಾವನ್ನು ಕಾಪಾಡಿದ ಸಂಸ್ಥೆ. ಹಲವು ರೋಗಗಳಿಗೆ ಲಸಿಕೆ ಕಂಡು ಹಿಡಿದ ಅದನ್ನು ಲ್ಯಾಟಿನ್ ಅಮೆರಿಕಾ ಹಾಗೂ ಇತರ ದೇಶಗಳಿಗೂ ಒದಗಿಸಿಕೊಟ್ಟ ಹೆಮ್ಮೆ ಇದರದ್ದು.

ಹಾಗೆ ಫಿಡೆಲ್ ಫೋನ್ ಮಾಡಿದ್ದು ಈ ಸಂಸ್ಥೆಯ ಸ್ಥಾಪಕರಲ್ಲೊಬ್ಬರಾದ ಹ್ಯೂರ್ಗೋಗೆ. ಆ ವೇಳೆಗಾಗಲೇ ಯೋಗ. ಯುನಾನಿ. ಆಯುರ್ವೇದ, ಹೋಮಿಯೋಪಥಿ ಎಲ್ಲದರ ಬಗ್ಗೆ ಸಾಕಷ್ಟು ಅನುಭವ ಇದ್ದ ಆಕೆ ನೀಡಿದ ಒಂದೇ ಪರಿಹಾರ-ನುಗ್ಗೇಕಾಯಿ.

ಫಿಡೆಲ್ ಆಶರ್ಯಚಕಿತರಾಗಿ ಹೋದರು. ಒಂದು ಕಾಯಿ ಜಗದ ಹಸಿವು ನೀಗಲು ಸಾಧ್ಯವೇ ಎಂದು.

ಹಾಗೆ ಮಾತುಕತೆ ನಡೆದು ಎರಡು ಗಂಟೆ ಕಳೆದಿತ್ತು ಅಷ್ಟೇ, ಫಿಡೆಲ್ ಮತ್ತೆ ಹ್ಯೂರ್ಗೋ ಅವರಿಗೆ ಫೋನ್ ತಿರುಗಿಸಿದರು. ಆ ಎರಡು ಗಂಟೆಯಲ್ಲಿ ಅವರು ಪುಸ್ತಕಗಳ ರಾಶಿಯನ್ನೇ ತಡಕಾಡಿದ್ದರು. ಅಂತರ್ಜಾಲದಲ್ಲಿ ಮುಳುಗೆದ್ದಿದ್ದರು. ಅವರು ನುಗ್ಗೇಕಾಯಿ ಏನು ಎಂಬುದನ್ನು ಹುಡುಕಿಮುಗಿಸಿದ್ದರು.

ಫೋನ್ ಮಾಡಿದವರೇ ಇದು ಜಗತ್ತಿನ ಹಸಿದವರ ಆಹಾರ ಎಂದು ಘೋಷಿಸಿದವರೇ ಯಾಕೆ ಇಷ್ಟು ದಿನ ಈ ನುಗ್ಗೇಕಾಯಿಯನ್ನು ನನ್ನ ಗಮನಕ್ಕೆ ತರಲಿಲ್ಲ ಎಂದು ಆಕ್ಷೇಪಿಸಿದರು.

ನುಗ್ಗೇಕಾಯಿ ಆ ವೇಳೆಗೆ ಕ್ಯೂಬಾಗೆ ಕಾಲಿಟ್ಟು ಸಾಕಷ್ಟು ವರ್ಷಗಳಾಗಿ ಹೋಗಿತ್ತು. ಕ್ರಾಂತಿಯ ನಂತರ ಕಾಲಿಗೆ ಚಕ್ರ ಕಟ್ಟಿಕೊಂಡು ಗರ ಗರನೆ ಜಗತ್ತು ಸುತ್ತುತ್ತಿದ್ದ ಚೆಗೆವಾರ ಹೋದ ಹೋದ ಕಡೆಯಿಂದ ಸಿಕ್ಕ ಗಿಡಗಳನ್ನೆಲ್ಲ ಹೊತ್ತು ಕ್ಯೂಬಾಗೆ ತರುತ್ತಿದ್ದ.

ಹಾಗೆ ಎಲ್ಲೆಲ್ಲಿಂದಲೋ ತಂದ ಗಿಡಗಳು ಕ್ಯೂಬಾದ ಹವಾಮಾನಕ್ಕೆ ಒಗ್ಗದೆ ನೆಲ ಕಚ್ಚುತ್ತಿದ್ದವು. ಆದರೆ ಈ ನುಗ್ಗೇಕಾಯಿ ಒಂದಿತ್ತು. ಅದು ಕ್ಯೂಬಾದ ಹವಾಮಾನದ ಹೊಡೆತಕ್ಕೆ ಕ್ಯಾರೇ ಎನ್ನದೆ ತಲೆ ಎತ್ತು ನಿಂತುಬಿಟ್ಟಿತ್ತು.

ಹವಾಮಾನ ವೈಪರೀತ್ಯವಾದಾಗಲೂ ತನಗೆ ಏನೂ ಆಗಿಲ್ಲ ಎನ್ನುವಂತೆ ಅರಳುತ್ತಲೇ ಇತ್ತು. ಇದರ ಜೊತೆಗೆ ಅದಕ್ಕೆ ನೀರೂ ಅಷ್ಟೇನೂ ಬೇಕಿರಲಿಲ್ಲ.

ಯಾವಾಗ ಫಿನ್ಲೆ ಇನ್ಸ್ಟಿಟೂಟ್ ನ ಹ್ಯೂರ್ಗೋ ಈ ಎಲ್ಲವನ್ನೂ ಕಿವಿಗೆ ಹಾಕಿದರೋ ಫಿಡೆಲ್ ಯಾರಾದರೂ ಭಾರತಕ್ಕೆ ಹೋಗಬೇಕಲ್ಲಾ ಎಂದರು.

ಹ್ಯೂರ್ಗೋ ಅವರಿಗೆ ಆ ವೇಳೆಗೆ ಭಾರತ ತಮ್ಮ ಅಂಗೈನ ರೇಖೆಯಷ್ಟೇ ಪರಿಚಿತವಾಗಿ ಹೋಗಿತ್ತು. ಯೋಗ, ಯುನಾನಿ, ಪ್ರಕೃತಿ ಚಿಕಿತ್ಸೆ ಹೀಗೆ ಅನೇಕ ಅಧ್ಯಯನಕ್ಕೆ, ಸಂಕಿರಣಕ್ಕೆ ಎಂದು ಅವರು ಮೇಲಿಂದ ಮೇಲೆ ಭಾರತಕ್ಕೆ ಬಂದಿದ್ದರು. ಫಿಡೆಲ್ ಮತ್ತೆ ಅವರನ್ನು ಹೊಸ ರೀತಿಯ ಭಾರತ ಯಾತ್ರೆಗೆ ಸಜ್ಜು ಮಾಡಿಬಿಟ್ಟರು.

ಭಾರತಕ್ಕೆ ಹೋಗಿ ಮೊದಲು ನುಗ್ಗೇಕಾಯಿಯ ಬಗ್ಗೆ ಅಧ್ಯಯನ ಮಾಡು, ಪ್ರಯೋಗಿಸಿ ನೋಡು, ಅನುಭವಿಗಳಿಂದ ಕಿವಿ ಮಾತು ಕೇಳು. ಬರುವಾಗ ಮಾತ್ರ ಬರಿಗೈಲಿ ಬರಬೇಡ ಎಂದು ಹೇಳಿಬಿಟ್ಟರು.

ಹಾಗೆ ಹೊರಟ ಹ್ಯೂರ್ಗೋ ಕಾಲಿಟ್ಟದ್ದು ತಮಿಳುನಾಡು, ಆಂಧ್ರ ಹಾಗೂ ಕೇರಳಕ್ಕೆ. ನುಗ್ಗೇಕಾಯಿಯ ಹತ್ತಾರು ವಿಧಗಳನ್ನು ಕೈಲಿ ಹಿಡಿದು ಹತ್ತಿರವಿದ್ದ ಬೀದಿ ಬದಿ ಹೋಟೆಲ್ ಗಳಿಗೆ, ಡಾಬಾಗಳಿಗೆ ನುಗ್ಗುತ್ತಿದ್ದರು. ಇದರಲ್ಲಿ ಏನು ವೆರೈಟಿ ಮಾಡಲು ನಿಮಗೆ ಬರುತ್ತೋ ಮಾಡಿ ಎನ್ನುತ್ತಿದ್ದರು. ಮಾಡಿದ್ದು ಉಂಡು ಅದರ ಟಿಪ್ಪಣಿ ಬರೆಯುತ್ತಿದ್ದರು. ಹಾಗೆ ಬರೆದ ಟಿಪ್ಪಣಿ ಕ್ಯಾಸ್ಟ್ರೋ ಅವರಿಗೆ ರವಾನೆಯಾಗುತ್ತಿತ್ತು.

ಕ್ಯಾಸ್ಟ್ರೋ ಅದನ್ನು ಓದುತ್ತ ಹೋದವರೇ ಫೋನ್ ಮಾಡಿ ೧೦೦ ಟನ್ ನುಗ್ಗೇಕಾಯಿ ಬೀಜ ತಗೊಂಡು ಬಾ ಎಂದು ಆದೇಶಿಸಿಯೇ ಬಿಟ್ಟರು. ಯಾವಾಗ ೧೦೦ ಟನ್ ಬೀಜ ಕ್ಯೂಬಾದ ಗಡಿಯೊಳಗೆ ಬಂದು ಇಳಿಯಿತೋ ಕ್ಯಾಸ್ಟ್ರೋ ಸಂತಸಕ್ಕೆ ಪಾರವೇ ಇರಲಿಲ್ಲ. ಎಳೆಯ ಮಗುವಿನಂತೆ ಆ ಬೀಜಗಳನ್ನು ಆಯ್ದುಕೊಂಡು ತಮ್ಮ ಮನೆಯ ಕಂಪೌಂಡ್ ನಲ್ಲಿ ಕೃಷಿಗೆ ಇಳಿದೇಬಿಟ್ಟರು.

‘ನಾನು ಕ್ಯಾಸ್ಟ್ರೋ ಮನೆ ಮುಂದೆ ಹಾದು ಹೋಗುವಾಗ ನೋಡುತ್ತೇನೆ ಭಾರತದ ಹೆಸರು ಹೇಳುತ್ತಿದ್ದ ಎಷ್ಟೊಂದು ನುಗ್ಗೇಕಾಯಿ ಮರಗಳು. ಅದರಲ್ಲಿ ತೂಗುತ್ತಿದ್ದ ನೂರಾರು ನುಗ್ಗೇಕಾಯಿ’ ಎಂದು ಬರೆದಿದ್ದು ಕೆ ಪಿ ನಾಯರ್.

ಕ್ಯೂಬಾ ಬಗ್ಗೆ ಸತತವಾಗಿ ಬರೆಯುತ್ತ ಬಂದಿರುವ ನಾಯರ್ ಕ್ಯಾಸ್ಟ್ರೋ ೯೦ ನೆಯ ಹುಟ್ಟುಹಬ್ಬಕ್ಕೆ ಒಂದಷ್ಟು ದಿನ ಮುನ್ನಾ ಅಲ್ಲಿದ್ದರು.

ಕೆ ಪಿ ನಾಯರ್ ಪ್ರಕಾರ ಕ್ಯಾಸ್ಟ್ರೋ ಅವರ ನುಗ್ಗೇಕಾಯಿ ಉತ್ಸಾಹಕ್ಕೆ ಅಲ್ಲಿನ ಮಾಧ್ಯಮಗಳೂ ಸಾಥ್ ನೀಡಿದವು. ಕ್ಯಾಸ್ಟ್ರೋ ತಮ್ಮ ಮನೆಯ ಅಂಗಳದಲ್ಲಿ ನುಗ್ಗೆಕಾಯಿ ಆರೈಕೆಯಲ್ಲಿದ್ದ ಫೋಟೋಗಳನ್ನು ಪ್ರಕಟಿಸಿದವು. ಅಷ್ಟೇ ಅಲ್ಲ, ಕ್ಯಾಸ್ಟ್ರೊ ತಮ್ಮ ಅಂಕಣವೊಂದನ್ನು ನುಗ್ಗೇಕಾಯಿಯ ಗುಣಗಾನಕ್ಕೆ ಮೀಸಲಿಟ್ಟರು.

‘ಫಿಡೆಲ್ ಗೆ ಒಳ್ಳೆಯ ಊಟ, ವೈನ್ ಹಾಗೆ ನುಗ್ಗೆಕಾಯಿ ಸೂಪ್ ಎಂದರೆ ಪ್ರಾಣ’ ಎಂದು ನೆನಸಿಕೊಂಡದ್ದು ಕ್ಯಾಸ್ಟ್ರೋ ಅವರಿಗೆ ದಶಕಗಳ ಕಾಲ ಅಡುಗೆ ಮಾಡಿ ಬಡಿಸಿದ ಎರಾಸ್ಮೋ ಹರ್ನಾಂಡಿಸ್ ಲಿಯೋನ್.

ಕ್ಯೂಬಾ ಮೇಲೆ ಅಮೆರಿಕಾ ನಿರ್ಬಂಧ ಹೇರಿದಾಗ, ಜಗತ್ತಿನ ಇತರ ಅನೇಕ ರಾಷ್ಟ್ರಗಳೂ ನಿರ್ಬಂಧ ಹೇರುವಂತೆ ನೋಡಿಕೊಂಡಾಗ ದೇಶ ತತ್ತರಿಸಿ ಹೋಗಿತ್ತು. ಆಹಾರ ಇಲ್ಲದೆ ಜನ ತತ್ತರಿಸತೊಡಗಿದಾಗ ನೊಂದು ಹೋದ ಕ್ಯಾಸ್ಟ್ರೋ ಜೈವಿಕ ತಂತ್ರಜ್ಞಾನದ ಮೊರೆ ಹೊಕ್ಕಿದ್ದರು. ಕ್ಯೂಬಾ ಹಸಿವು ಕಾಣದೆ ಬದುಕಲು ಹೊಸ ಹೊಸ ದಾರಿ ಹುಡುಕತೊಡಗಿದ್ದರು.

ಹೇಳಿದ್ದರು- “ಅವರು ಹಸಿದು ಸಾಯುವಂತೆ ಮಾಡಿದರು. ನಾವು ಹಂಚಿ ತಿನ್ನುವುದನ್ನು ಕಲಿತೆವು. ರೋಗಗಳಿಂದ ನರಳಿ ಸಾಯುವಂತೆ ಮಾಡಿದರು. ಹಸಿರು ಎಲೆಗಳಿಂದ ಜೀವ ಉಳಿಸಿಕೊಂಡೆವು. ನಮ್ಮ ದನಿಗಳನ್ನು ಕುಗ್ಗಿಸಲು ಯತ್ನಿಸಿದರು. ಅವು ಮರುಧ್ವನಿಗಳಾದವು ನಿಮ್ಮ ಎದೆಗಳಲ್ಲಿ..”

ಅಂತಹ ಹಸಿವಿನ ಸಮಯದಲ್ಲಿಯೇ ಭಾರತ ಮನೆ ಮನೆಗಳಿಗೆ ಹೋಗಿ ಗೋದಿ ಸಂಗ್ರಹಿಸಿ ಕ್ಯೂಬಾ ಗೆ ಕಳಿಸಿಕೊಟ್ಟಿತ್ತು. ಆ ಗೋದಿ ಹೊತ್ತ ‘ಕೆರಿಬ್ಬಿಯನ್ ಪ್ರಿನ್ಸೆಸ್’ ಹಡಗು ಕ್ಯೂಬಾದ ಬಂದರಿಗೆ ಬಂದಾಗ ಖುದ್ದು ಕ್ಯಾಸ್ಟ್ರೋ ಅಲ್ಲಿಗೆ ತೆರಳಿ- “ನೀವು ಕಳಿಸಿದ ಗೋದಿ ಹೋರಾಟದಲ್ಲಿ ನಾವು ಒಬ್ಬಂಟಿಯಲ್ಲ ಎಂದು ಸಾರಿದೆ. ಈ ಗೋದಿಯಿಂದ ಕ್ಯೂಬಾದ ಪ್ರತಿಯೊಬ್ಬ ಪ್ರಜೆಗೂ ಒಂದು ವಾರ ಉತ್ತಮ ಬ್ರೆಡ್ ನೀಡುತ್ತೇನೆ” ಎಂದು ಭಾವುಕರಾಗಿ ನುಡಿದಿದ್ದರು.

ಈಗ ಭಾರತ ಮತ್ತು ಕ್ಯೂಬಾದ ಮಧ್ಯೆ ಅದೇ ರೀತಿಯ ಬಾಂಧವ್ಯ ಬೆಸೆಯಲು ಮುಂದಾಗಿದ್ದು -ನುಗ್ಗೇಕಾಯಿ.

ಎಲ್ಲ ರೀತಿಯ ಅಮಿನೊ ಆಸಿಡ್ ಹೊಂದಿರುವ ಏಕೈಕ ಗಿಡವೆಂದರೆ ಅದು ನುಗ್ಗೇಕಾಯಿ.

ಒಂದು ಹೆಕ್ಟೇರ್ ಜಾಗದಲ್ಲಿ ೩೦೦ ಟನ್ ನುಗ್ಗೆಕಾಯಿ ಎಲೆ ಬೆಳೆಯಬಹುದು. ಈ ಎಲೆಗಳ ವೈದ್ಯಕೀಯ ಗುಣ ನಿಬ್ಬೆರಗಾಗಿಸುತ್ತದೆ. ಜೀರ್ಣ ಕ್ರಿಯೆಗೆ ಈ ಸೊಪ್ಪು, ಕಾಯಿ ಅತ್ಯುತ್ತಮ. ಒಳ್ಳೆಯ ನಿದ್ದೆ ಬೇಕೆಂದರೂ ಇದು ಬೆಸ್ಟ್ ಎಂದು ಉದ್ಘರಿಸಿದರು.

ಯಾವಾಗ ನುಗ್ಗೇಕಾಯಿ ಹಸಿದವರ ಮಿತ್ರ ಎನಿಸಿಹೋಯಿತೊ ಕ್ಯಾಸ್ಟ್ರೋ ಇಡೀ ದೇಶದಲ್ಲಿ ಅದು ಚಳವಳಿಯಾಗುವಂತೆ ನೋಡಿಕೊಂಡರು. ಅವರ ಮನೆಯಂಗಳದಿಂದ ಜಿಗಿದ ನುಗ್ಗೆಕಾಯಿ ದೇಶವಿಡೀ ಆವರಿಸಿಕೊಂಡು ನಿಂತಿತು. ಅಷ್ಟೇ ಅಲ್ಲ ಸಾವಿರಾರು ಎಕರೆ ಜಾಗದಲ್ಲಿ ಅದನ್ನು ಬೆಳೆಯಲು ಮುಂದಾಯಿತು.

ಅಲ್ಲಿಗೇ ನಿಲ್ಲದೆ ಚೀನಾದೊಂದಿಗೆ ಕೈ ಜೋಡಿಸಿ ಇನ್ನಷ್ಟು ಸಂಶೋಧನೆಗೆ ಅಡಿಪಾಯ ಹಾಕಿತು. ನುಗ್ಗೆಕಾಯಿಯಿಂದ ಕ್ಯಾನ್ಸರ್ ನಂತಹ ದೈತ್ಯನನ್ನೂ ಮಣಿಸುವುದು ಹೇಗೆ ಎಂದು ಸಂಶೋಧನೆಗಿಳಿಯಿತು.

ಈ ಮಧ್ಯೆ ವೆನೆಜುವೆಲಾದ ಅಧ್ಯಕ್ಷ ಹ್ಯೂಗೋ ಚಾವೆಜ್ ಕ್ಯೂಬಾಗೆ ಬಂದರು. ಅವರಿಗಿದ್ದ ಕ್ಯಾನ್ಸರ್ ಚಿಕಿತ್ಸೆಗಾಗಿ. ನುಗ್ಗೇಕಾಯಿಯ ಮಹಿಮೆ ಅವರಿಗೂ ಗೊತ್ತಾಯಿತು.

ಕ್ಯೂಬಾದಿಂದ ವೆನೆಜುವೆಲಾಗೂ ನುಗ್ಗೇಕಾಯಿ ಎಂಟ್ರಿ ಕೊಟ್ಟಿತು. ಅಲ್ಲಿಂದ ಲ್ಯಾಟಿನ್ ಅಮೆರಿಕಾದ ಎಲ್ಲಾ ದೇಶಗಳಿಗೂ ಪಸರಿಸಿತು. ಆಫ್ರಿಕಾದಲ್ಲಿಯೂ ನುಗ್ಗೇಕಾಯಿ.

ಎರಡು ಮೀನು ತುಂಡು ಬ್ರೆಡ್ ನಿಂದ ಎಲ್ಲರ ಹಸಿವು ತಣಿಸಿದ ಕ್ರಿಸ್ತ ಎನ್ನುತ್ತಾರೆ. ಆದರೆ ಇಲ್ಲಿ ನುಗ್ಗೇಕಾಯಿ ಬಡವರ ಬೆಳೆಯಾಗಿ ಹೋಗಿತ್ತು. ಕಣ್ಣೀರು ಒರೆಸುತ್ತಿತ್ತು.

ಹಾಗಾಗಿಯೇ ಕ್ಯೂಬಾ ಅದನ್ನು ವಿಮೋಚನೆಯ ಮರ ಎಂದಾಗ ಹಸಿದವರೆಲ್ಲರೂ ಹೌದೌದೆಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?