ದೇವರಹಳ್ಳಿ ಧನಂಜಯ
ಕ್ಷಮಿಸಿಬಿಡು ಪ್ರಭುವೇ
ದೀಪ ಎಂಬುದು ಮೌಢ್ಯ ಅಜ್ಞಾನ
ಅಂಧಕಾರ ತೊಲಗಿಸುವ ಬೆಳಕು
ಅಂದು ಕೊಂಡಿದ್ದಕ್ಕೆ.
ಕ್ಷಮಿಸಿಬಿಡು ಪ್ರಭುವೇ
ಎಲ್ಲರ ಒಳಿತಿಗಾಗಿ
ಸರ್ವಶಕ್ತನಲ್ಲಿ ದಿನವೂ
ಪ್ರಾರ್ಥಿಸಿಕೊಂಡದ್ದಕ್ಕೆ.
ಸಹಬಾಳ್ವೆಯ
ಕನಸು ಕಂಡಿದ್ದಕ್ಕೆ
ಕ್ಷಮಿಸಿಬಿಡು ಪ್ರಭುವೇ
ದಿನವಿಡೀ ದುಡಿದು
ಗೂಡು ಸೇರುವ ಹಕ್ಕಿಗಳಂತೆ
ಮನೆಗೆ ಮರಳಿದ್ದಕ್ಕೆ
ಗೋಧೂಳಿಯಲ್ಲಿ
ನಿಮ್ಮ ಆಣತಿ ಇಲ್ಲದೆ
ಪ್ರತಿದಿನ ಹಣತೆ ಹಚ್ಚಿದ್ದಕ್ಕೆ.
ಹಣತೆ ಅಚ್ಚುವುದು ಸಂಸ್ಕಾರ
ಅಂದುಕೊಂಡಿದ್ದಕ್ಕೆ
ಲೇಖನ, ವರದಿ ಬರಹಗಳನ್ನು ನೀವು ವಾಟ್ಸಾಪ್ ಮಾಡಬಹುದು:9844817737
ಕ್ಷಮಿಸಿಬಿಡು ಪ್ರಭುವೇ
ಆಯ್ಕೆಯ ಮೂಲಕವೇ
ನಿಮಗೆ ಶಕ್ತಿ ತುಂಬಿದ್ದೇವೆ
ಅಂದು ಕೊಂಡಿದ್ದಕ್ಕೆ
ನಿಮ್ಮ ಶಕ್ತಿ
ನಮ್ಮ ಒಳಿತಿಗೆ ಎಂದು
ನಂಬಿ ಕೊಂಡಿದ್ದಕ್ಕೆ
ಕ್ಷಮಿಸಿಬಿಡು ಪ್ರ ಭುವೇ
ಕತ್ತಲಲ್ಲೂ ಕಾಣುವ
ಆಳ್ವಿಕೆಯ ಹುಳುಕುಗಳನ್ನು
ಬೆಳಕಲ್ಲು ಕಾಣದೆ ಹೋಗಿದ್ದಕ್ಕೆ
ಭ್ರಮೆಯ ಬೆಳಕಲ್ಲಿ
ಕತ್ತಲ ಸತ್ಯಗಳ ಮರೆಮಾಚು ತಿರುವ
ನಿಜ ಮುಖವ
ಅರಿಯದೇ ಕುರುಡಾಗಿದ್ದಕ್ಕೆ.
ಕ್ಷಮಿಸಿಬಿಡು ಪ್ರಭುವೇ
ಶ್ರಮಿಕರ ಕಿಸೆಯಲ್ಲಿ
ನೀನಿಟ್ಟ ಅಜ್ಞಾತ ಕತ್ತರಿಯ
ನೋಡದೆ ಹೋಗಿದ್ದಕ್ಕೆ
ಭ್ರಮೆಯ ಬ್ರಹ್ಮ
ರಕ್ಷಣೆಗೆ ಬರಲಾರ ಎಂಬ
ಕಟು ಸತ್ಯ
ಅರಿಯದೆ ಹೋಗಿದ್ದಕ್ಕೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ದೇವರಹಳ್ಖಿಯವರಾದ ಧನಂಜಯ ವೃತ್ತಿಯಲ್ಲಿ ಶಿಕ್ಷಕರು. ಕೆಲಕಾಲ ಪ್ರಜಾವಾಣಿ ವರದಿಗಾರರಾಗಿದ್ದ ಅವರು ಹಲವು ಮಹತ್ವದ ವರದಿಗಳನ್ನು ಮಾಡಿದ್ದಾರೆ. ಸಮಾಜ, ಪರಿಸರ, ಸಮಾನತೆ, ನೀರು, ಕಾಡು ಹೀಗೆ ಅನೇಕ ಹೋರಾಟಗಳಿಗೆ ಜೀವ ತುಂಬುವ ಕೆಲಸವನ್ನು ಮಾಡಿದ್ದಾರೆ.