ಜಿ ಎನ್ ಮೋಹನ್
ನಾನು ಚಂಪಾ ಮನೆಯ ಬಾಗಿಲು ತಟ್ಟಿದಾಗ ರಾತ್ರಿ 9 ಗಂಟೆ ದಾಟಿತ್ತು.
ಕೃಷಿ ಅಧಿಕಾರಿಯಾಗಿದ್ದ ಅಣ್ಣ ಇದ್ದ ನರಗುಂದದಿಂದ ಹೊರಟು ಕೆಂಪು ಮಣ್ಣಿನ ಧಾರವಾಡ ಸೇರಿಕೊಳ್ಳುವ ವೇಳೆಗೆ ಕತ್ತಲು ಕವಿದುಹೋಗಿತ್ತು.
ಬಾಗಿಲು ತೆಗೆದ ಚಂಪಾ ‘ನೇರಾ ಇಲ್ಲೇ ಬಂದ್ರೇನು?’ ಅಂದರು
‘ಹೌದು ಸರ್, ಯಾಕೆ ಕೇಳಿದ್ರಿ’ ಎಂದೆ
9 ಗಂಟೆ ದಾಟಿ ಬಂದದ್ದಕ್ಕೆ ಚಂಪಾ ಬಾಗಿಲು ತೆಗೆಯುವ ಮನಸ್ಸಿನಲ್ಲಿರಲಿಲ್ಲ ಅನಿಸಿತ್ತು.
ಅವರು ‘ಛೆ ಛೆ ಹಾಗಲ್ಲ, ಎದುರುಗಡೆ ಜೈಲ್ ಇದೆ, ಪಕ್ಕ ಪೊಲೀಸ್ ಸ್ಟೇಷನ್ ಇದೆ, ಮತ್ತೊಂದು ಮಗ್ಗುಲಿಗೆ ಜೂ, ಮತ್ತೆ ಆ ಕಡೆ ಇರೋದೇ ಹುಚ್ಚಾಸ್ಪತ್ರೆ ಎನ್ನುತ್ತಾ ತಮ್ಮ ವಿಶಿಷ್ಟ ಭೌಗೋಳಿಕ ಪರಿಸ್ಥಿತಿಯನ್ನು ವಿವರಿಸಿ ‘ದಾರಿ ತಪ್ಪಿದ್ದಿದ್ರೆ ಯಾವುದಾದರೂ ಒಂದರ ಪಾಲಾಗ್ತಿದ್ರಲ್ಲಾ ಅದಕ್ಕೆ ಕಾಳಜಿ ಮಾಡಿದೆ ಅಷ್ಟೇ’ ಎಂದರು,
ನಾನು ಅದೇ ತಾನೇ ಕಾಲೇಜು ಮೆಟ್ಟಿಲು ಹತ್ತಿದ್ದ ಸಮಯ
ಚಂಪಾ ಬರೆದ ನೆಲ್ಸನ್ ಮಂಡೇಲಾ ಕವಿತೆಗೆ ಫಿದಾ ಆಗಿ ಹೋಗಿದ್ದೆ. ಅದನ್ನು ಓದಿ ಮುಗಿಸುವ ವೇಳೆಗೆ ಅವರು ಜೈಲು ಅನುಭವ ಕಥನ ಕೈಗೆ ಸಿಕ್ಕಿತ್ತು
ಅದರ ಕೊನೆಯ ಪುಟ ತಿರುಗಿಸುವ ವೇಳೆಗೆ ಚಂಪಾ ಅವರದೇ ಭಾಷೆಯಲ್ಲಿ ಹೇಳಬೇಕೆಂದರೆ ಅವರು ‘ಪ್ರೇಕ್ಷಣೀಯ ವ್ಯಕ್ತಿತ್ವ’ ಆಗಿ ಹೋಗಿದ್ದರು.
ಹಾಗಾಗಿ ಒಮ್ಮೆ ಕೈಕುಲುಕುವ ಆಸೆಯಿಂದ ಅಲ್ಲಿದ್ದೆ.
ನನಗೆ ಚಂಪಾ ಕವಿತೆಗಳಿಗಿಂತ ಒಂದು ಕೈ ಹೆಚ್ಚಿಗೆ ಅವರ ನಾಟಕಗಳೇ ಇಷ್ಟ.
ಅಪ್ಪ, ಕೊಡೆಗಳು, ಟಿಂಗರ ಬುಡ್ಡಣ್ಣ, ಕುಂಟಾ ಕುಂಟಾ ಕುರುವತ್ತಿ, ಗೋಕರ್ಣದ ಗೌಡಶಾನಿ, ಜಗದಾಂಬೆಯ ಬೀದಿನಾಟಕ ಹೀಗೆ..
ಸರ್ ನಿಮ್ಮ ‘ಕೊಡೆಗಳು’ ಅಂದೆ..
ಅಷ್ಟಕ್ಕೇ ಚಂಪಾ ಬಿದ್ದೂ ಬಿದ್ದೂ ನಕ್ಕರು.
ನಾನು 9 ಗಂಟೆ ದಾಟಿ ಬಂದ ಅಪರಾಧಕ್ಕಾಗಿ ದೂಸರಾ ಮಾತನಾಡದೆ ಸುಮ್ಮನೆ ಕುಳಿತಿದ್ದೆ.
ಸಾವರಿಸಿಕೊಂಡು ಅವರು ‘ನಾನು ಬಿದ್ದೂ ಬಿದ್ದೂ ನಕ್ಕೆ ಅಲ್ಲ’ ಎಂದರು
‘ಹೌದು ಸಾರ್ ಉರುಳಾಡಿಕೊಂಡು ನಕ್ರಿ’ ಎನ್ನಬೇಕಿದ್ದವನು ಪಾಪದ ಹುಡುಗನಂತೆ ಕಣ್ಣು ಮಿಟುಕಿಸುತ್ತಾ ಕುಳಿತೆ
‘ಕೊಡೆಗಳು ಅಂದ್ರಲ್ಲಾ ಅದಕ್ಕೆ ನನಗೆ ನೆನಪಿಗೆ ಬಂತು
ಈ ಲಂಕೇಶ್ ಮತ್ತೆ ಟಿ ಎನ್ ಸೀತಾರಾಮ್ ಬೆಂಗಳೂರಲ್ಲಿ ನನ್ನ ಕೊಡೆಗಳು ನಾಟಕ ಮಾಡಿದ್ರು
ಅದರಲ್ಲಿ ಒಂದು ಸೀನ್ ನಲ್ಲಿ ನೆಲದ ಮೇಲೆ ಬಿದ್ದು ಹೊರಳಾಡಿಕೊಂಡು ನಗತಿದ್ರು.
ನನಗೆ ಕನ್ಫ್ಯೂಷನ್ ಆಯ್ತು ಯಾಕಪ್ಪಾ ಹೀಂಗ ಮಾಡಲಿಕ್ಕತ್ತಾರಲ್ಲಾ ಅಂತ
ಆಮೇಲೆ ಗೊತ್ತಾಯಿತು. ನಾನು ನಾಟಕದಲ್ಲಿ ‘ಬಿದ್ದೂ ಬಿದ್ದೂ ನಗುವರು’ ಅಂತ ಬರೆದಿದ್ದೆ
ಇಬ್ಬರೂ ಅಕ್ಷರಶ ನೆಲದ ಮೇಲೆ ಬಿದ್ದು ಉರುಳಾಡಿಕೊಂಡು ನಗತಿದ್ದರು’ ಅಂದರು.
ಹೀಗೂ ಉಂಟೇ ..! ಅಂತ ನಾನು ಅವರನ್ನು ನೋಡುತ್ತಾ ಕೂತೆ.
ಆ ವೇಳೆಗೇ ಚಂಪಾ ಖಡಕ್ ಮತ್ತು ಹರಿತ ಮಾತಿಗೆ ಹೆಸರಾಗಿದ್ದರು.
ಅಣ್ಣನ ಬೆನ್ನಿಗೆ ಬಿದ್ದೇ ನಾನು ನೂರೂರು ಸುತ್ತಿದ್ದೆ. ಅದರಲ್ಲಿ ಸವಣೂರು ಸಹಾ ಒಂದು
ಸವಣೂರು ಅಂದ್ರೆ ಖಾರಕ್ಕೆ ಹೆಸರುವಾಸಿ.
ಅದು ಹ್ಯಾಗೋ ಚಂಪಾ ಸವಣೂರಿನವರು ಎನ್ನುವುದನ್ನು ಪತ್ತೆ ಹಚ್ಚಿದ್ದೆ.
‘ಸಾರ್ ನೀವು ಸವಣೂರಿನವರಾಗಿದ್ದಕ್ಕೆ ಈ ಖಾರಾ ಜಾಸ್ತಿಯೇನು’ ಅಂತ ಧೈರ್ಯ ಮಾಡಿ ಕೇಳಿಯೇಬಿಟ್ಟೆ.
‘ನಾನು ಸವಣೂರು ವೀಳೆಯದೆಲೆ ಇದ್ದ ಹಾಗೆ. ಆ ವೀಳೇದೆಲೆ ಸಿಕ್ಕಾಪಟ್ಟೆ ಖಾರ ಇರುತ್ತೆ.
ಅದರ ಜೊತೆಗೆ ನಮ್ಮಪ್ಪನೇ ಸಿಕ್ಕಾಪಟ್ಟೆ ಜಗಳಗಂಟ. ಆ ಕಾಲಕ್ಕೇ ಮುರುಘಾಮಠದಲ್ಲಿ ಗಲಾಟೆ ಮಾಡಿದ ಅಂತ ನಮ್ಮಪ್ಪನ್ನ ಒದ್ದು ಹೊರಗೆ ಹಾಕಿದ್ರು. ಆ ಡಿ ಎನ್ ಎ ನನ್ನೊಳಗೂ ಬಂದುಬಿಟ್ಟಿದೆ’ ಎಂದು ನಗುತ್ತಾ ಹೇಳಿದರು.
ನನಗೆ ಚಂಪಾ ಇಷ್ಟ ಆಗೋದೇ ಇದಕ್ಕೆ. ವ್ಯಂಗ್ಯಕ್ಕೆ ಬೇರೆಯವರನ್ನ ಮಾತ್ರವಲ್ಲ ತಮ್ಮನೂ ಒಡ್ಡಿಕೊಳ್ಳುತ್ತಾರೆ ಅನ್ನೋದಕ್ಕೆ.
‘ವ್ಯಂಗ್ಯ ಕವನ ಬರೆದು ಸಾಕಾಯ್ತು ಅಂತ ನಾಟಕಕ್ಕೆ ಹೊರಳ್ಕೊಂಡೆ.
ಏನು ಗೊತ್ತಾ ಹೈದ್ರಾಬಾದ್ ನಲ್ಲಿದ್ದಾಗ ವಿಶ್ವನಾಥ ಮಿರ್ಲೆ ಗೋಡೆಗಳು ಅಂತ ನಾಟಕ ಬರೆದರು. ನಾನು ಓದಿ ಇನ್ಸ್ಪೈರ್ ಆದವನೇ
ಒಂದೇ ರಾತ್ರಿಯಲ್ಲಿ ಕೊಡೆಗಳು ಬರೆದುಬಿಟ್ಟೆ. ಆಮೇಲೆ ನೋಡು ನಾಟಕವೇ ಆಗಿಹೋಯ್ತು’.
ಈ ನಾಟಕ ಬರೆದದ್ದಕ್ಕಾಗಿಯೇ ರಾತ್ರೋರಾತ್ರಿ ಪೊಲೀಸರು ಬಂದು ‘ಇಲ್ಲೇ ವಾಕಿಂಗ್ ಹೋಗಿ ಬರೋಣ ಬನ್ನಿ ಸಾರ್’ ಅಂತ
ಕೈ ಹಿಡಿದು ನಡೆಸಿಕೊಂಡು ಎದುರುಗಡೆ ಇದ್ದ ಜೈಲಿಗೆ ಹಾಕಿದ್ರು.
‘ಜಗದಂಬೆಯ ಬೀದಿ ನಾಟಕ’ದಲ್ಲಿ ತುರ್ತುಪರಿಸ್ಥಿತಿ ತಂದಿಟ್ಟ ಇಂದಿರಾಗಾಂಧಿಯೆ ವಸ್ತು.
ಇಂದಿರಾಗಾಂಧಿಯನ್ನ ಜಗದಂಬೆ ಮಾಡಿ ಉಳಿದವರನ್ನ ಷಂಡರನ್ನಾಗಿಸಿ ನಾಟಕ ಬರೆದರು ಚಂಪಾ.
ಪರಿಣಾಮ ೨೬ ರಾತ್ರಿ ಜೈಲು.
‘ಅಲ್ಲಾ ಸರ್ ಜೈಲಲ್ಲಿ ನಿಮಗೆ ಏನಾದ್ರೂ..’ ನನ್ನ ಮಾತನ್ನು ಕತ್ತರಿಸಿ ‘ನೋಡಪ್ಪಾ ನಾನು ಒಂದು ಪದ್ಯ ಬರೆದಿದ್ದೇನೆ
ನನ್ನ ಮನೆಯ ಪಕ್ಕ ಪೊಲೀಸ್ ಸ್ಟೇಷನ್ ಇದೆ ಹಾಗಾಗಿ ನನಗೆ ಕಳ್ಳರ ಭಯವಿಲ್ಲ ಆದರೆ ಪೊಲೀಸರದ್ದೇ ಭಯ ಅಂತ. ಹಾಗೆ ಇದೂನೂ’ ಅಂತ ನಕ್ಕರು.
‘ಅದು ಸರಿ ಸರ್ ನಿಮ್ಮ ಕೆಲಸ ಹೋಗಿದ್ದಿದ್ರೆ’ ಅಂತ ಒಂದು ಕ್ವಶ್ಚನ್ ಮಾರ್ಕ್ ಅವರ ಮುಂದಿಟ್ಟೆ
ಅವರು ಒಂದಿಂಚೂ ಕನ್ಫ್ಯೂಸ್ ಆಗಲಿಲ್ಲ. ‘ನೀವು ತುಂಬಾ ಕಳಕೊಳ್ಳುತ್ತಿದ್ರಿ’ ಅಂದರು. ‘ಏನು’ ಎನ್ನುವಂತೆ ಮುಖ ನೋಡಿದೆ.
‘ನನ್ನ ಕೆಲಸ ಹೋಗಿದ್ದಿದ್ರೆ ನಾನು ರಾಜಕಾರಣಕ್ಕೆ ಬಂದು ಈ ವೇಳೆಗೆ ಮಂತ್ರಿಯಾಗಿ ನಿಮ್ಮೆದುರು ಕೂತಿರ್ತಿದ್ದೆ. ನೀವು ಆ ಭಾಗ್ಯ ಕಳಕೊಂಡ್ರಿ’ ಎಂದರು.
ಚಂಪಾಗೆ ಚಂಪಾನೇ ಸಾಟಿ ಅಂದುಕೊಂಡೆ
ಅಂದಿನಿಂದ ಇಂದಿನವರೆಗೆ ನಾನೂ, ಚಂಪಾ ಹಲವಾರು ಬಾರಿ ಮಾತಾಡಿದ್ದೇವೆ, ಹರಟೆ ಹೊಡೆದಿದ್ದೇವೆ.
ಮೊನ್ನೆ ಮೊನ್ನೆ ಅವರ ಹುಟ್ಟುಹಬ್ಬದ ಸಂಭ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಆಚರಿಸಿದ್ದರು. ನಾನೂ ಒಬ್ಬ ಭಾಷಣಕಾರ.
ನಾನು ಒಂದು ಮಾತು ಹೇಳಿದೆ. ‘ಚಂಪಾ ಅಂದ್ರೆ ಅವರ ಬಾಯಿ ಮುಚ್ಚಿಸುವವರಿಲ್ಲ, ಚಂಪಾಗೆ ಪ್ರಶ್ನೆ ಮಾಡಿ ಉತ್ತರ ಪಡೆಯದೇ ಇರಲು ಸಾಧ್ಯವೇ ಇಲ್ಲ ಎನ್ನುತ್ತಾರೆ.
ಆದರೆ ಅದು ನನ್ನಿಂದ ಸಾಧ್ಯ’ ಎಂದೆ
ಸಭಾಂಗಣದಲ್ಲಿದ್ದವರೆಲ್ಲರಿಗೂ ಆಶ್ಚರ್ಯ. ‘ಏನಪ್ಪಾ’ ಅಂತ
ನಾನು ಚಂಪಾಗೆ ಕೇಳಿದೆ
ಸರ್ ನೀವು “ನನ್ನ ಹೃದಯ ರಾಜೇಶ್ವರಿ ನನ್ನ ಶಾಲ್ಮಲಾ,
ನನ್ನ ಬದುಕ ಭುವನೇಶ್ವರಿ ನನ್ನ ಶಾಲ್ಮಲಾ’ ಅಂತ ಬರೆದಿದ್ದೀರಲ್ಲಾ
ಹೇಳಿ ಸಾರ್ ಯಾರು ಆ ಶಾಲ್ಮಲಾ” ಅಂದೆ
ಚಂಪಾ ಬಾಯಿಯೇ ಬಿಡಲಿಲ್ಲ. ನನ್ನ ಪ್ರಶ್ನೆಗೆ ಉತ್ತರವನ್ನೇ ಕೊಡಲಿಲ್ಲ.
ಹುಸಿನಗು ಬೀರುತ್ತಾ ಎದುರು ನೋಡುತ್ತಿದ್ದರು
ನಾನೂ ಆ ಕಡೆ ನೋಡಿದೆ. ನೀಲಾ ಪಾಟೀಲರು ಮೊದಲ ಸಾಲಿನಲ್ಲಿಯೇ ಕುಳಿತಿದ್ದರು.
ಇನ್ನು ಈ ದಿನವಂತೂ ಉತ್ತರ ಸಿಗಲು ಸಾಧ್ಯವೇ ಇಲ್ಲ ಎಂದು ಸುಮ್ಮನಾದೆ.
—
ಬಿಜಾಪುರದ ಮುಧೋಳದಲ್ಲಿ ಸಾಹಿತ್ಯ ಸಮ್ಮೇಳನ.
ನನ್ನ ವಿಶೇಷ ಉಪನ್ಯಾಸ ಮುಗಿಸಿ ರೂಮಿಗೆ ಹಿಂದಿರುಗುತ್ತಿದ್ದೆ.
ಹಿಂದಿನಿಂದ ಯಾರೋ ಕರೆದರು. ನೋಡಿದರೆ ರವಿ ಬೆಳಗೆರೆ
ಭಾಷಣ ಚೆನ್ನಾಗಿತ್ತು ಅಂತ ತಿಳಿಸಲು ಕೂಗಿದ್ದ
ಅದೂ ಇದೂ ಮಾತನಾಡುತ್ತಾ ಬೀದಿಯಲ್ಲೇ ನಿಂತೆವು.
‘ಏನು ಗೊತ್ತಾ’ ಅಂತ ರವಿ ಕಿವಿಯ ಬಳಿ ಪಿಸುಗುಟ್ಟಿದ.
‘ಏನು’ ಅಂದೆ. ‘ಈ ಚಂಪಾ ಸಹವಾಸ ಅಲ್ಲಾ ಮಾರಾಯ’ ಎಂದ
‘ಏಕೆ’ ಎನ್ನುವಂತೆ ನೋಡಿದೆ.
“ಅಲ್ಲಾ ‘ಲೇಖಕರ ವಿಳಾಸಗಳು’ ಅಂತ ಪುಸ್ತಕ ಮಾಡ್ತೀನಿ ಅಂತ ಹೊರಟಿದ್ದಾರಲ್ಲಾ ಬುದ್ದಿ ಇದೆಯಾ ಯಾರು ಕೊಂಡ್ಕೊಳ್ತಾರೆ ಮಾರಾಯ ಅದನ್ನ. ಅದರ ಬದಲು ‘ಲೇಖಕರ ವಿಲಾಸಗಳು’ ಅಂತ ಮಾಡ್ಲಿ, ಸೂಪರ್ ಡೂಪರ್ ಸೇಲ್” ಅಂದ
ಮರುಕ್ಷಣ ನಾವಿಬ್ಬರು ಅದು ಬೀದಿ ಎನ್ನುವುದನ್ನೇ ಮರೆತು ಚಂಪಾ ಹೇಳಿದಂತೆಯೇ ಅಕ್ಷರಶಃ ‘ಬಿದ್ದೂ ಬಿದ್ದೂ’ ನಕ್ಕೆವು.