ಜಿ ಎನ್ ಮೋಹನ್
ತೇಜಸ್ವಿ ಎಂದ ತಕ್ಷಣ ನಾನು ಆ ಪುಸ್ತಕವನ್ನು ಒಂದೇ ಏಟಿಗೆ ಬಾಚಿಕೊಂಡೆ
ಆದರೆ ನೀವು ನಂಬಬೇಕು ಮೊದಲ ಬಾರಿಗೆ, ಮೊತ್ತ ಮೊದಲ ಬಾರಿಗೆ ತೇಜಸ್ವಿ ಬರೆದ ಒಂದಕ್ಷರವೂ ಅರ್ಥವಾಗಲಿಲ್ಲ
ಆಶ್ಚರ್ಯ ಆದರೂ ನಿಜ
ಅದಕ್ಕೆ ಕಾರಣವಿತ್ತು- ತೇಜಸ್ವಿಯವರ ಬಹು ಜನಪ್ರಿಯ ಕೃತಿ ‘ಕರ್ವಾಲೋ’ ಜರ್ಮನ್ ಭಾಷೆಯಲ್ಲಿತ್ತು.
ತೇಜಸ್ವಿ ಹೇಗೆ ಜಗತ್ತಿನ ನಾನಾ ಕಡೆ ಓದುಗರ ಮನ ಗೆದ್ದಿದ್ದಾರೆ ಎನ್ನುವುದಕ್ಕೆ ಈ ಕೃತಿ ಸಹಾ ಒಂದು ಸಾಕ್ಷಿಯಾಗಿ ಹೋಯಿತು.
ಕತ್ರಿನಾ ಬಿಂದರ್ ಹಾಗೂ ಪ್ರೊ ಬಿ ಎ ವಿವೇಕ ರೈ ಅವರು ತಿಂಗಳುಗಟ್ಟಲೆ ಜರ್ಮನಿಯಲ್ಲಿ ಕುಳಿತು ತೇಜಸ್ವಿಯವರನ್ನು ಜರ್ಮನ್ ಅಂಗಳಕ್ಕೆ ನಡೆಸಿಕೊಂಡು ಹೋಗಿದ್ದರು.
ನಿಮಗೆ ಗೊತ್ತಿರಲಿ- ವಿವೇಕ ರೈ ಅವರು ಸುಮಾರು ಒಂದು ದಶಕದಿಂದ ಜರ್ಮನಿಯ ವಿಶ್ವವಿದ್ಯಾಲಯಗಳಲ್ಲಿ ಕನ್ನಡದ ಕಂಪನ್ನು ಹರಡುತ್ತಿದ್ದಾರೆ. ಕನ್ನಡದ ಮಹತ್ ಕೃತಿಗಳು, ಚಲನಚಿತ್ರಗಳು, ಗೀತೆಗಳು ಅಲ್ಲಿನ ವಿವಿಗಳಲ್ಲಿ ಸಾಕಷ್ಟು ಜನಪ್ರಿಯ.
ಹಾಗೆ ಅವರು ಮನದುಂಬಿ ಕರ್ವಾಲೋ ಬಗ್ಗೆ ಮಾತಾಡಿದ್ದರ ಪರಿಣಾಮವೇ ಆ ಕೃತಿ ಜರ್ಮನ್ ಭಾಷೆಯಲ್ಲಿ ಸಿಗಬೇಕು ಎನ್ನುವ ಹುಕಿ ಅಲ್ಲಿನ ಡೀನ್ ಹೈಡ್ರೂನ್ ಬ್ರೂಕ್ನರ್ ಅವರಿಗೆ ಬಂತು.
ಒಂದು ದಿನ ಇದ್ದಕ್ಕಿದ್ದಂತೆ ಜರ್ಮನಿಯಿಂದ ಫೋನ್ ಮಾಡಿದ ವಿವೇಕ ರೈ ಅವರು ಮೋಹನ್ ತುರ್ತಾಗಿ ನನಗೆ ತೇಜಸ್ವಿಯವರ ಒಳ್ಳೆಯ ಫೋಟೋಗಳು ಬೇಕು ಎಂದರು.
ಅವರು ನನಗೆ ಕೊಟ್ಟ ಸಮಯ ಕೆಲವು ಗಂಟೆಗಳು ಮಾತ್ರ.
ತಕ್ಷಣ ನನಗೆ ನೆನಪಾದದ್ದು ನನ್ನಂತೆಯೇ ತೇಜಸ್ವಿಯನ್ನು ಇನ್ನಿಲ್ಲದಂತೆ ಹಚ್ಚಿಕೊಂಡ ಹಾಗೂ ತೇಜಸ್ವಿಯವರ ಅನೇಕ ಕಾರ್ಯಕ್ರಮಗಳಿಗೆ ಹೋಗಿ, ಅವರ ಮನೆಗೆ ಭೇಟಿ ಕೊಟ್ಟು ಅವರನ್ನು ತಮ್ಮ ಕ್ಯಾಮೆರಾದೊಳಗೆ ಕೂರಿಸಿಕೊಂಡಿದ್ದ ಡಿ ಜಿ ಮಲ್ಲಿಕಾರ್ಜುನ್.
ತೇಜಸ್ವಿ ಕೆಲಸ ಎಂದರೆ ಹತ್ತು ಜನರ ಉತ್ಸಾಹ ತುಂಬಿಕೊಳ್ಳುವ ಮಲ್ಲಿ ಕೆಲವೇ ನಿಮಿಷಗಳಲ್ಲಿ ಫೋಟೋಗಳನ್ನು ನನ್ನ ಮೇಲ್ ಗೆ ಕಳಿಸಿದರು. ಅದು ಅಲ್ಲಿಂದ ಜರ್ಮನಿಗೆ ಹೋಯಿತು.
ಇನ್ನೊಂದು ವರ್ಷಕ್ಕಾದರೂ ಈ ಕೃತಿ ಬರುತ್ತದೆ ಎಂದುಕೊಂಡಿದ್ದಾಗ ಒಂದು ತಿಂಗಳೊಳಗೆ ಮತ್ತೆ ವಿವೇಕ ರೈ ಫೋನು.
ಪುಸ್ತಕ ಎಲ್ಲಿಗೆ ಕಳಿಸಲಿ?
ಅರೆ! ಅನಿಸಿತು.
ಈ ಮಧ್ಯೆ ತೇಜಸ್ವಿ ಜರ್ಮನ್ ಭಾಷಿಕರ ಮನ ಹೊಕ್ಕ ಸಂಗತಿಯನ್ನು ಕನ್ನಡಿಗರಿಗೂ ತಿಳಿಸಬೇಕು ಎನ್ನುವ ಹಂಬಲ
ಎನ್ ಆರ್ ವಿಶುಕುಮಾರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದರು.
ಅವರ ತೇಜಸ್ವಿ ಪ್ರೀತಿಯನ್ನೂ ಬಳಸಿಕೊಂಡು ಬೆಂಗಳೂರಿನ ‘ನಯನ’ದಲ್ಲಿ ಜರ್ಮನ್ ಕರ್ವಾಲೋ ಬಿಡುಗಡೆಯಾಯಿತು.
ರಾಜೇಶ್ವರಿ ತೇಜಸ್ವಿ, ಬಿ ಎಲ್ ಶಂಕರ್, ಪ್ರೊ ಸಿ ಎನ್ ರಾಮಚಂದ್ರನ್ ಅವರು ಅಂದು ತುಂಬಾ ಆತ್ಮೀಯವಾಗಿ ನಮಗೆ ಗೊತ್ತಿಲ್ಲದ ತೇಜಸ್ವಿಯನ್ನು ಕಟ್ಟಿಕೊಟ್ಟರು
ನಾನು ತೇಜಸ್ವಿ ಮಗಳು ಈಶಾನ್ಯೆಯೊಂದಿಗೆ ಕುಳಿತು ಇನ್ನೂ ವಿಭಿನ್ನ ತೇಜಸ್ವಿಯನ್ನು ನನ್ನೊಳಗೆ ಕರೆದುಕೊಂಡೆ.
ಹಾಗೆ ಬರೆಯುತ್ತಾ ಈ ಪುಸ್ತಕದ ಪ್ರಕಾಶಕರು ಯಾರು ಎಂದು ನೋಡಿದೆ- ಆಶ್ಚರ್ಯವಾಯಿತು
‘ದ್ರೌಪದಿ ವೆರ್ಲಾಗ್’
ಜರ್ಮನ್ನರು ದ್ರೌಪದಿಯನ್ನೂ ಹಾರಿಸಿಕೊಂಡು ಹೋಗಿದ್ದರು.