Thursday, November 21, 2024
Google search engine
Homeಸಾಹಿತ್ಯ ಸಂವಾದಅಂತರಾಳಜಿ ಎಸ್ ಅಮೂರ್ ಅವರ ನೆಪದಲ್ಲಿ...

ಜಿ ಎಸ್ ಅಮೂರ್ ಅವರ ನೆಪದಲ್ಲಿ…

ಜಿ.ಎನ್.ಮೋಹನ್


ಜಿ ಎಸ್ ಅಮೂರರು ಆ ಪ್ರಶಸ್ತಿಯನ್ನು ನನಗೆ ಪ್ರದಾನ ಮಾಡಿದರು ಎನ್ನುವುದು ನನ್ನ ಹೆಮ್ಮೆ.

ಒಂದು ಪ್ರಶಸ್ತಿ ಫಲಕದ ಕಾರಣಕ್ಕೆ ನನಗೆ ಒಂದು ಪ್ರಶಸ್ತಿಯ ಬಗ್ಗೆ ಮೋಹ ಹುಟ್ಟಿತ್ತು ಎಂದರೆ ನೀವು ನಂಬಬೇಕು. ಹಾಗೆ ಅತಿ ಆಸೆ ಹುಟ್ಟಿಸಿದ್ದು ಪುತಿನ ಪ್ರಶಸ್ತಿ ಫಲಕ. ನಾನು ಆ ಪ್ರಶಸ್ತಿ ಫಲಕದ ಬಗ್ಗೆ ಎಷ್ಟು ಮೋಹಿತನಾಗಿದ್ದನೆಂದರೆ ನನಗೆ ಪ್ರಶಸ್ತಿ ಕೊಡದಿದ್ದರೂ ಒಂದು ಫಲಕ ಕೊಟ್ಟಿದ್ದರೂ ಧನ್ಯ! ಎಂದುಕೊಳ್ಳುವಷ್ಟು.

ಪುತಿನ ಪ್ರಶಸ್ತಿಯ ಫಲಕ ನೀವು ನೋಡಿದ್ದರೆ ನನ್ನ ಆಸೆಯನ್ನು ನೀವು ಖಂಡಿತಾ ಸರಿಯಾಗಿ ಗ್ರಹಿಸುತ್ತೀರಿ. ಪು ತಿ ನ ಅವರ ತವರು ಆ ಮೇಲುಕೋಟೆಯನ್ನೇ ಮೂಲವಾಗಿಸಿಕೊಂಡ ಕಂಚಿನ ವಿನ್ಯಾಸವದು. ಒಂದು ಹೂವು ಅಥವಾ ಚಾಮರ ಎನ್ನಬಹುದಾದ ವಿನ್ಯಾಸದೊಳಗೆ ಅಡಗಿದ್ದ ಮೇಲುಕೋಟೆಯ ದೃಶ್ಯ.

ಒಂದು ದಿನ ಜಿ ಎಸ್ ಶಿವರುದ್ರಪ್ಪನವರ ಫೋನ್ ಕಾಲ್. ನನಗೋ ಅಚ್ಚರಿ ಜಿ ಎಸ್ ಎಸ್ ಯಾಕೆ ಫೋನ್ ಮಾಡ್ತಿದ್ದಾರೆ ಅಂತ. ಎತ್ತಿದಾಗ ಆ ಕಡೆಯಿಂದ ಮೆಲು ದನಿಯಲ್ಲಿ ಅಭಿನಂದನೆಗಳು ಎಂದರು. ಗೊತ್ತಾಗಲಿಲ್ಲ. ನಿಮಗೆ ಈ ಸಾಲಿನ ಪು ತಿ ನ ಪ್ರಶಸ್ತಿ ಕೊಡುತ್ತಿದ್ದೇವೆ ಎಂದರು.

ನನಗೋ ಸ್ವರ್ಗಕ್ಕೆ ಮೂರೇ ಗೇಣು. ಪ್ರಶಸ್ತಿ ಬಂತು ಅಂತ ಅಲ್ಲ. ನಾನು ಕನವರಿಸುತ್ತಿದ್ದ ಪ್ರಶಸ್ತಿ ಫಲಕ ಸಿಗುತ್ತೆ ಅಂತ.

ಈ ಪ್ರಶಸ್ತಿ ಸಮಿತಿಯ ಅಧ್ಯಕ್ಷರು ಜಿ ಎಸ್ ಎಸ್. ಸದಸ್ಯರಾಗಿದ್ದವರು ಪ್ರಶಸ್ತಿ ಆಯ್ಕೆಯ ಸಮಿತಿಯಲ್ಲಿದ್ದವರು ಎಚ್ ಎಸ್ ವೆಂಕಟೇಶಮೂರ್ತಿ, ಬಿ ಆರ್ ಲಕ್ಷ್ಮಣರಾವ್, ಜಿ ಪಿ ಬಸವರಾಜು. ನನ್ನ ‘ಪ್ರಶ್ನೆಗಳಿರುವುದು ಶೇಕ್ಸ್ ಪಿಯರನಿಗೆ’ ಕೃತಿಗೆ ಬಹುಮಾನ ಘೋಷಿಸಲಾಗಿತ್ತು.

ಇಷ್ಟೆಲ್ಲಾ ದೊಡ್ಡ ಹೆಸರುಗಳು ಕೂಡಿ ನನ್ನ ಕವನ ಸಂಕಲನವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದರು ಎನ್ನುವುದೇ ನನಗೆ ರೋಮಾಂಚನ ಕೊಟ್ಟಿದ್ದಾಗ ಜಿ ಎಸ್ ಎಸ್ ಮೆಲ್ಲನೆ ದನಿಯಲ್ಲಿ ಜಿ ಎಸ್ ಆಮೂರರು ಈ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಾರೆ ಎಂದರು. ವಾರೆವ್ವಾ..! ಅನಿಸಿತು.

ಹತ್ತು ಹಲವು ಒಳ್ಳೆಯದೆಲ್ಲವೂ ಸೇರಿ ನನ್ನೆಡೆಗೆ ನಡೆದು ಬಂದದ್ದು ಅಂತಿದ್ದರೆ ಅದು ಈ ಪ್ರಶಸ್ತಿಯೇ.

ಈ ಸಂಭ್ರಮ ನನ್ನೊಳಗೆ ಎಷ್ಟಿತ್ತೆಂದರೆ ನಾನು ಈ ಸಮಾರಂಭದಂದೇ ನನ್ನ ಕವನ ಸಂಕಲನದ ಎರಡನೆಯ ಮುದ್ರಣ ಬಿಡುಗಡೆ ಮಾಡಿಸಬೇಕೆಂದು ‘ಅಭಿನವ’ದ ರವಿಕುಮಾರ್ ಅವರ ಬೆನ್ನು ಬಿದ್ದೆ. ಅಷ್ಟೇ ಅಲ್ಲದೆ ಎ ಎನ್ ಮುಕುಂದ್ ಅವರು ಅದ್ಭುತವಾಗಿ ತೆಗೆದಿದ್ದ ಪುತಿನ ಅವರ ಫೋಟೋವನ್ನು ಇಟ್ಟುಕೊಂಡು ಗ್ರೀಟಿಂಗ್ ಕಾರ್ಡ್ ಸಹಾ ತಯಾರಿಸಿದೆ.

ಪ್ರಶಸ್ತಿ ಸಮಾರಂಭದ ದಿನ ಜಿ ಎಸ್ ಅಮೂರರು ಇನ್ಸ್ಟಿಟ್ಯೂಟ್ ಆ ವರ್ಲ್ಡ್ ಕಲ್ಚರ್ ಗೆ ಬರುತ್ತಿದ್ದಂತೆಯೇ ‘ಎಲ್ಲಿ ಮೋಹನ್’ ಎಂದು ಕೇಳುತ್ತಲೇ ಬಂದರು.ನನ್ನ ಅವರ ಭೇಟಿ ಅದೇ ಮೊದಲು.ಆ ಮೊದಲು ಅವರ ಅನೇಕ ಭಾಷಣಗಳಿಗೆ ಕಿವಿಯಾಗಿದ್ದೆ ಅಷ್ಟೇ. ಜಿ ಎಸ್ ಎಸ್ ನನ್ನನ್ನು ಕರೆದು ಅವರ ಮುಂದೆ ನಿಲ್ಲಿಸಿದರು. ಜಿ ಎಸ್ ಎಸ್, ಅಮೂರ್ ಹಾಗೂ ನಾನೂ ತಿಂಡಿ ಕಾಫಿ ಮುಗಿಸುವವರೆಗೆ ನಡೆಸಿದ ಹರಟೆ ನನ್ನ ಮನಸ್ಸಿನಲ್ಲಿ ಸ್ಥಿರವಾಗಿ ನಿಂತಿದೆ.

ವೇದಿಕೆಯ ಮೇಲೆ ನನ್ನ ಕವಿತೆಗಳ ಬಗ್ಗೆ ಅಪಾರ ಪ್ರೀತಿ ಹರಿಸಿದ ಆಮೂರರು ನಾನು ಸಂಕೋಚಗೊಳ್ಳುವಂತೆ ಮಾಡಿದರು. ಪ್ರಶಸ್ತಿಯನ್ನು ಅವರು ನನ್ನ ಉಡಿಗೆ ತುಂಬುವಾಗ ಪ್ರಶಸ್ತಿ ಫಲಕದ ಕಾರಣವೂ ಸೇರಿ ಅಭಿನವ, ಜಿ ಎಸ್ ಎಸ್ , ಎಚ್ ಎಸ್ ವಿ, ಬಿ ಆರ್ ಎಲ್, ಜಿ ಪಿ ಹೀಗೆ ಅನೇಕರ ಕಾರಣಕ್ಕೆ ಮನಸ್ಸು ಮೂಕವಾಗಿತ್ತು.

ನಾನು ಪಡೆದ ಪ್ರಶಸ್ತಿಗಳ ಪೈಕಿ ನನ್ನೊಡನೆ ಸಂಸಾರ ಮಾಡಿರುವುದು ಬೆರಳೆಣಿಕೆಯಷ್ಟು ಮಾತ್ರ. ಅದರಲ್ಲಿ ಮೊದಲ ಸಾಲಲ್ಲಿ ನಿಲ್ಲುವುದು ಈ ಪುತಿನ ಪ್ರಶಸ್ತಿಯೇ ಅದರೊಂದಿಗೆ ಇಷ್ಟೊಂದು ನೆನಪು ತಳುಕು ಹಾಕಿಕೊಂಡಿರುವಾಗ ಅದನ್ನು ಬಿಡುವುದಾದರೂ ಹೇಗೆ..? .

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?