ರಂಗನಕೆರೆ ಮಹೇಶ್
ಬಹು ದಿನಗಳ ಹಿಂದಿನ ಘಟನೆ…ನಾನು ಕಾರ್ಯ ನಿಮಿತ್ತ ರಾಯದುರ್ಗಕ್ಕೆ ಹೋಗಬೇಕಾಗಿತ್ತು. ನೇರವಾಗಿ ರಾಯದುರ್ಗಕ್ಕೆ ಬಸ್ ಇಲ್ಲದ ಕಾರಣ ಹುಳಿಯಾರಿನಿಂದ ಬಳ್ಳಾರಿಗೆ ಸರ್ಕಾರಿ ಬಸ್ ಹತ್ತಿ ಹೊರಟೆ. ಹಾನ್ಗಲ್ ಕ್ರಾಸ್ನಿಂದ ಮೊಳಕಾಲ್ಮೂರು ಮೂಲಕ ರಾಯದುರ್ಗಕ್ಕೆ ಹೋಗಬಹುದು.
ಸರಿ ಹಾನ್ಗಲ್ ಕ್ರಾಸ್ಗೆ ಟಿಕೇಟ್ ಪಡೆದು ಬಸ್ ಇಳಿದೆ. ನನ್ನನ್ನು ಬಿಟ್ಟರೆ ಮತ್ತಾರು ಬಸ್ನಿಂದ ಇಳಿಯಲಿಲ್ಲ. ನಾನೊಬ್ಬನೇ ಇಳಿದುದನ್ನು ಗಮನಿಸಿದ ಸುಮಾರು 85ರ ಪ್ರಾಯದ ಅಜ್ಜಿಯೊಬ್ಬರು ನನ್ನ ಬಳಿ ಹಣದ ಸಹಾಯ ಕೇಳಿದರು.
ಆದರೆ ನನ್ನಲ್ಲಿ ಚಿಲ್ಲರೆಯಿಲ್ಲದ ಕಾರಣ ನನ್ನ ಬಳಿ ಹಣ ಇಲ್ಲ ಎಂದೇ…ಆದ್ರೆ ಆ ಅಜ್ಜಿ ತನ್ನ ಹಸಿವನ್ನು ಮೂಕ ವೇದನೆಯ ಮೂಲಕ ತೋರ್ಪಡಿಸಿ ಮುಂದೆ ಹೋಯಿತು.
ಸಮಯ ಆಗಲೇ 3 ರ ಗಡಿ ದಾಟಿದ್ದರಿಂದ ನಾನು ಏನಾದರೂ ತಿಂದು ಅಜ್ಜಿಗೆ ಏನಾದರೂ ಕೊಡಿಸೋಣ ಎಂದು ಸಹ ಅಲ್ಲಿಯೇ ಇದ್ದ ಡಾಬಾ ಬಳಿ ಹೋದೆ. ಅಜ್ಜಿಯನ್ನು ಸಹ ಕರೆದೊಯ್ದು ಅಜ್ಜಿಗೆ ತಿಂಡಿ ಕೊಡಲು ಹೇಳಿದೆ.
ಆದ್ರೆ ಸಮಯ ಮೀರಿದ್ದರಿಂದ ಒಂದೇ ಒಂದು ಪ್ಲೇಟ್ ಅನ್ನ ಇರುವುದಾಗಿ ಡಾಬಾ ಮಾಲೀಕ ಹೇಳಿದ. ನನ್ನದು ಹೇಗೋ ಆಗುತ್ತದೆ ಅದನ್ನೇ ಕೊಡುವಂತೆ ತಿಳಿಸಿ ಹಣ ಕೊಟ್ಟು ಮತ್ತೆ ಬಸ್ ನಿಲ್ಲುವ ಸ್ಥಳದಲ್ಲಿ ಬಂದು ನಿಂತೆ. ಆದರೆ ಅಲ್ಲಿಂದ ಖಾಸಗಿ ಬಸ್ ಗಳ ಸಂಚಾರವಾಗಿರುವುದರಿಂದ ಬಸ್ ಬರುವುದು ತಡವಾಯಿತು.
ಅತ್ತಿತ್ತ ನೋಡುತ್ತಾ ನಿಂತಿರುವ ವೇಳೆ ಮತ್ತೆ ಅಜ್ಜಿಯ ಕಡೆ ಗಮನ ಹರಿಯಿತು. ಅಜ್ಜಿ ಅನ್ನಸಾರನ್ನು ಹಿಡಿದು ಊಟ ಮಾಡದೆ ಮುಂದಕ್ಕೆ ಹೋಗುತ್ತಿತ್ತು.
ಅರೆ ಹೊಟ್ಟೆ ಹಸಿವಾಗಿದೆ ಎಂದು ಕೇಳಿದ ಅಜ್ಜಿ ಎಲ್ಲಿಗೆ ಹೋಗುತ್ತದೆ ಎಂದು ಹಿಂಬಾಲಿಸಿ ಹೋದೆ. ಅದೇ ರಸ್ತೆಯ ಮರದ ಬುಡದಲ್ಲಿ ಜೀವವಿದ್ದರೂ ನಿರ್ಜಿವ ವಸ್ತುವಿನಂತೆ ಮಲಗಿದ್ದ ವ್ಯಕ್ತಿಗೆ ತುತ್ತು ಕೊಡಲು ಅಜ್ಜಿ ಮುಂದಾಗಿತ್ತು. ಆದ್ರೆ ಆತ ಅಜ್ಜಿಯನ್ನು ದೊಣ್ಣೆಯಿಂದ ಹೊಡೆಯುತ್ತಾ ಕೆಟ್ಟ ಭಾಷೆಯಲ್ಲಿ ಬೈಗುಳ ಹಾಕುತ್ತಾ ಅಜ್ಜಿಗೆ ಹಿಂಸೆ ಕೊಡುತ್ತಿದ್ದ.
ಇದ್ರ ಪರಿವೆಯೇ ಇಲ್ಲದೆ ಅಜ್ಜಿ ತುತ್ತು ಉಣಿಸುತ್ತಾ ಅಳುತ್ತಾ ಕೊಡುವ ಹಿಂಸೆಯನ್ನು ಸಹಿಸಿಕೊಂಡು ಏನೇನೋ ರೋಧಿಸುತ್ತಿತ್ತು. ಕುತೂಹಲ ತಡೆಯಲಾರದೆ ಅಲ್ಲಿಯೇ ಇದ್ದ ಅಂಗಡಿಯವರನ್ನು ಅಜ್ಜಿಗೂ ಆ ವ್ಯಕ್ತಿಗೆ ಇರುವ ಸಂಬಂದ ಏಕೆ ಈ ಅಜ್ಜಿ ಆತ ಅಷ್ಟು ಹಿಂಸೆ ನೀಡಿದರೂ ಸುಮ್ಮನಿದೆ ಎಂದು ಕೇಳಿದೆ.
ಆತ ಆ ಅಜ್ಜಿಯ ಒಬ್ಬನೇ ಮಗ. ಮಧ್ಯಮ ವರ್ಗದ ಕುಟುಂಬವಾಗತ್ತು. ಆದರೆ ಇತ್ತೀಚೆಗೆ ಗಂಡ ಹೆಂಡತಿ ಮಧ್ಯೆ ಯಾವುದೋ ವಿಷಯಕ್ಕೆ ಮನಸ್ತಾಪ ಉಂಟಾಗಿ ಸಂಸಾರ ಬೇರೆಯಾಗಿದೆ. ಇದರಿಂದ ಬೇಸತ್ತು ಮಗ ಹುಚ್ಚನಾಗಿ ಹೋಗಿದ್ದಾನೆ.
ತನ್ನ ಮಗನ ಸ್ಥಿತಿ ನೋಡಿ ಅಜ್ಜಿ ತನ್ನ ಗ್ರಾಮವನ್ನು ತೊರೆದು ಹುಚ್ಚನಾಗಿರುವ ಮಗನ ಯೋಗಕ್ಷೇಮ ನೋಡಿಕೊಳ್ಳುತ್ತಿದೆ. ಯಾರು ಏನೇ ಕೊಟ್ಟರೂ ಅದನ್ನು ತನ್ನ ಮಗನಿಗೆ ತಿನ್ನಿಸುತ್ತದೆ.
ಮುಂದೆ ಎಂದಾದರೂ ಮಗ ಸರಿಯಾಗ ಬಹುದೆಂಬ ಆಸೆಯಿಂದ ಅಜ್ಜಿ ಕಾಲ ನೂಕುತ್ತಿದೆ ಎಂದು ವಿವರಿಸಿದರು. ಇದನ್ನೇ ಅಲ್ಲವೇ ತಾಯಿ ಪ್ರೀತಿ ಎನ್ನುವುದು.. ತಂದೆ-ತಾಯಂದಿರು ಮನೆಯಲ್ಲಿದ್ದರೆ ತೊಂದರೆಯಾಗುತ್ತದೆ ಎಂದು ವೃದ್ದಾಶ್ರಮಗಳಿಗೆ ಸೇರಿಸುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಮಕ್ಕಳಿಗೆ ಇಂತಹ ಪ್ರಸಂಗಗಳು ಪಾಠವಾಗಬೇಕಾಗಿದೆ.
ಕಣ್ಣು ಎದುರಿಗೆ ಕಾಣುವ ನಿಜವಾದ ದೇವರು ತಂದೆ ತಾಯಿಗಳು ಮೊದಲು ಅವರ ಸೇವೆ ಮಾಡಿ
Thayeegintha migilada Devarila kannige kanuva Devaru thande and Thayee