Friday, November 22, 2024
Google search engine
Homeಸಾಹಿತ್ಯ ಸಂವಾದಅಂತರಾಳದಂಡು ಪಾಳ್ಯದ ಮಕ್ಕಳಿಗೆ ಪೊಲೀಸ್ ಆಗುವ ಕನಸು...

ದಂಡು ಪಾಳ್ಯದ ಮಕ್ಕಳಿಗೆ ಪೊಲೀಸ್ ಆಗುವ ಕನಸು…

ಜಿ ಎನ್ ಮೋಹನ್


“ಎಲ್ಲಿ ಒಮ್ಮೆ ಕಣ್ಣು ಮುಚ್ಚಿ’ ಎಂದರು.

ಹಣೆಯಲ್ಲಿ ನಾಮ, ಮುಖದಲ್ಲಿ ತುಂಬಿ ತುಳುಕುವ ಭಕ್ತಿ. ಸರಿ ಇನ್ನು ಕೈಜೋಡಿಸಿ ಪ್ರಾರ್ಥನೆ ಮಾಡಲು ಹಚ್ಚುತ್ತಾರೆ ಎಂದುಕೊಂಡು ನಾನು ಕಣ್ಣು ಮುಚ್ಚಿದೆ.

‘ಈಗ ಏನು ಕಾಣುತ್ತಿದೆ’ ಅಂದರು. ‘ಏನಿಲ್ಲ ಬರೀ ಕತ್ತಲೆ, ಅಂಧಕಾರ’ ಎಂದೆ. ‘ಕಣ್ಣು ಬಿಡಿ’ ಎಂದರು. ಬಿಟ್ಟೆ.

ಈಗ ಏನು ಕಾಣಿಸುತ್ತಿದೆ ಎಂದು ಕೇಳಿದರು. ಇಡೀ ಜಗತ್ತು.ಅಂದೆ.

ಅದೇ, ಅದೇ ವ್ಯತ್ಯಾಸ. ಸರಿಯಾಗಿ ಕಣ್ಣು ಬಿಟ್ಟು ನೋಡಿದರೆ ಜಗತ್ತು, ಅಲ್ಲಿನ ಸಂಕಟ, ಹಾಗೆಯೇ ಅದಕ್ಕೆ ಬೇಕಿರುವ ಪರಿಹಾರ ಎಲ್ಲಾ ಕಾಣುತ್ತದೆ. ಆದರೆ ನಾವು ನಮ್ಮ ಕಣ್ಣು ಮುಚ್ಚಿ ಕುಳಿತಿದ್ದೇವೆ. ಎಲ್ಲೆಡೆಯೂ ಅಂಧಕಾರ ಮಾತ್ರ ಕಾಣುತ್ತಿದೆ ಎಂದರು.

ಅವರು ಮಣಿ.
ಮಣಿ ಅಲಿಯಾಸ್ ವಿ ರಾಘವಾಚಾರ್ ಮಣಿ ಅಲಿಯಾಸ್ ಮಣಿ ಅಂಕಲ್.

ಹೀಗೆ ಮಾತನಾಡುವ ವೇಳೆಗೆ ಓಡಿಬಂದ ಮಗುವೊಂದು ಅವರ ತೊಡೆಯೇರಿ ಕುಳಿತಿತು. ಇನ್ನೊಂದು ಮಗು ಅವರ ಕೊರಳು ಬಳಸಿತ್ತು. ಇನ್ನೊಂದು ಅವರ ತೋಳು ಹಿಡಿದು ಜಗ್ಗುತ್ತಿತ್ತು.

ಮತ್ತೊಂದು ಮಗದೊಂದು ನಾನು ಎಣಿಸುತ್ತಾ ಹೋದೆ. 100, 101, 102.. ಸಂಖ್ಯೆ ಬೆಳೆಯುತ್ತಲೇ ಹೋಯಿತು.

‘ಏನು ಇಷ್ಟೊಂದು ಮಕ್ಕಳು’ ಎಂದೆ. ಅವರು ಮುಖ ಬಾಡಿಸಿಕೊಂಡವರೇ ‘ಇಲ್ಲಿ ಬರೀ 170 ಮಂದಿ ಇದ್ದಾರೆ ಇನ್ನೂ 1300 ಮಕ್ಕಳು ಈ ಮನೆಯೊಳಗೆ ಸೇರಿಕೊಳ್ಳಬೇಕು ಎನ್ನುವ ಹಂಬಲ ನನ್ನದು’ ಎಂದರು.

ನನ್ನ ಶಾಕ್ ಅರಿವಾಯಿತೇನೋ.. ‘ಕರ್ನಾಟಕದ ಬೇರೆ ಬೇರೆ ಜೈಲುಗಳಲ್ಲಿ 1500 ಜೀವಾವಧಿ ಕೈದಿಗಳಿದ್ದಾರೆ. ಆ ಎಲ್ಲರ ಮಕ್ಕಳು ಹೀಗೆ ನನ್ನ ತೆಕ್ಕೆಗೆ ಬರಬೇಕು ಎನ್ನುವುದು ನನ್ನ ಕನಸು’ ಎಂದರು.

ನನಗೆ ಇನ್ನೂ ಒಂದು ಶಾಕ್ ಆಯಿತು. ಅಂದರೆ ಇಲ್ಲಿ ಹೀಗೆ ನನ್ನ ಕಣ್ಣೆದುರಿಗೆ ಆಡುತ್ತಿರುವ, ಓಡುತ್ತಿರುವ, ಕುಣಿಯುತ್ತಿರುವ ಮಕ್ಕಳೆಲ್ಲಾ…???.

‘ನಾನು ಕಣ್ಣು ಮುಚ್ಚಿಕೊಂಡಿದ್ದರೆ ಇದೆಲ್ಲಾ ಆಗುತ್ತಲೇ ಇರಲಿಲ್ಲವೇನೋ, ನಾನು ಕಣ್ಣು ಬಿಟ್ಟು ಜಗತ್ತು ನೋಡಿದ ಕಾರಣ ಆಯಿತು’ ಎಂದರು.

ಹೀಗೆ ಕೈದಿಗಳ ಮಕ್ಕಳೊಡನೆ ಬದುಕು ನಡೆಸಬೇಕು ಎಂದು ಯಾವ ನ್ಯಾಯಾಲಯವೂ ಅವರಿಗೆ ಯಾವ ಆದೇಶವನ್ನೂ ನೀಡಿರಲಿಲ್ಲ. ಆದರೆ ಈ ಮಣಿ ಅಂಕಲ್ ತಾವೇ ತಾವಾಗಿ ಕೈದಿಗಳ ಬದುಕಿನೊಳಗೆ ನಡೆದುಕೊಂಡು ಬಂದುಬಿಟ್ಟಿದ್ದರು.

ಮಣಿ ಅವರ ಮನೆ ಇರುವುದು ರಾಜಾಜಿನಗರದಲ್ಲಿ. ಕೆಲಸ ರಿಸರ್ವ್ ಬ್ಯಾಂಕ್ ನಲ್ಲಿ.

ಪ್ರತೀ ದಿನ ಕೆಲಸಕ್ಕೆ ಹೋಗುವಾಗ ಅವರ ಕಿವಿಗೆ ಹೆಂಗಸರು ಮಕ್ಕಳ ಅಳುವ ಶಬ್ದ ಕೇಳಿಸುತ್ತಿತ್ತು. ಏನಿದು ಹೀಗೆ ಎಂದು ತಿರುಗಿ ನೋಡಿದರೆ ಅದು ಸೆಂಟ್ರಲ್ ಜೈಲು.

ಜೀವಾವಧಿ ಶಿಕ್ಷೆಗೊಳಗಾಗಿದ್ದ ಗಂಡನನ್ನು ಕಾಣಲು ಮಕ್ಕಳೊಡನೆ ಬಂದ ಹೆಂಗಸರು ಅಲ್ಲಿ. ಅಪ್ಪ ಕಂಡ ತಕ್ಷಣವೇ ಕಣ್ಣೀರಿನ ಅಲೆ.

ಪ್ರತೀ ದಿನ ಅದೇ ಜೈಲು, ಅದೇ ಅಳು. ಆದರೆ ಮಕ್ಕಳು ಮಾತ್ರ ಬೇರೆ ಬೇರೆ.

ಆಗ ಮಣಿ ಅವರಿಗೆ ಅನಿಸಿತು ಮಕ್ಕಳಿಗೇಕೆ ಈ ಶಿಕ್ಷೆ. ಇದು ಒಂದು ದಿನದ ಹೊಯ್ದಾಟವಲ್ಲ ಹಲವು ವರ್ಷಗಳ ಕಾಲ ಇವರ ಮನಸ್ಸು ಮಕ್ಕಳ ಅಳುವಿನಿಂದ ಕುಸಿದು ಹೋಗಿತ್ತು.

ತಾವು ರಿಸರ್ವ್ ಬ್ಯಾಂಕ್ ನಿಂದ ನಿವೃತ್ತಿಯಾದಾಗ ಕೈಗೆ ಒಂದಷ್ಟು ಹಣ ಬಂದದ್ದೇ ತಡ ಇವರ ಕನಸಿಗೆ ರೆಕ್ಕೆ ಬಂತು. ಪತ್ನಿ ಸರೋಜಿಯವರೊಡನೆ ತಮ್ಮ ನೋವು ಹಂಚಿಕೊಂಡರು.

ಅಷ್ಟೇ ಆ ನಂತರ ಇಬ್ಬರೂ ತಿರುಗಿ ನೋಡಲಿಲ್ಲ. ‘ಸೋಕೇರ್ ಇಂಡ್’ (So Care Ind) ಹುಟ್ಟಿದ್ದು ಹೀಗೆ.

ನನ್ನ ಕೈ ಹಿಡಿದಿದ್ದ ಪುಟಾಣಿಯೊಬ್ಬ ತನ್ನ ಕನಸುಗಳನ್ನು ಬಿಚ್ಚಲು ಆರಂಭಿಸಿದ.

‘ನಾನು ದೊಡ್ದವನಾದ ಮೇಲೆ ಪೋಲೀಸ್ ಆಫೀಸರ್ ಆಗ್ತೀನಿ’ ಅಂದ. ನಾನು ಅವನ ಕಣ್ಣುಗಳನ್ನೇ ದಿಟ್ಟಿಸಿದೆ. ಅವನ ಕಣ್ಣೊಳಗೆ ದೃಢವಾದ ಆತ್ಮವಿಶ್ವಾಸವಿತ್ತು. ಅಂದುಕೊಂಡದ್ದನ್ನು ಸಾಧಿಸುವ ಛಲ ಇಣುಕುತ್ತಿತ್ತು.

ಆತ ದಂಡು ಪಾಳ್ಯದ ಗ್ಯಾಂಗ್ ನ ಕೂಸು. ಹುಟ್ಟಿದ್ದು ಜೈಲಿನೊಳಗೆ. ಕಣ್ಣು ಬಿಟ್ಟ ತಕ್ಷಣ ಕಂಡದ್ದು ಪಾತಕಿಗಳ ಲೋಕ. ಕೊಲೆ ಸುಲಿಗೆ ದರೋಡೆ, ಹತ್ಯೆ ಹೀಗೆ ನೊರೆಂಟು ಕಾರಣಗಳಿಗೆ ಕೈಕೋಳ ತೊಡಿಸಿಕೊಂಡು ಸರಳುಗಳ ಹಿಂದಿರುವ ಜನ. ಬಂಧೀಖಾನೆಯೊಳಗೆ ತೆವಳಿದ, ಅಂಬೆಗಾಲಿಟ್ಟ ಈ ಮಗು ಈಗ ಮಣಿ ದಂಪತಿಗಳ ಅಂಗಳದಲ್ಲಿ ನಿಂತಿತ್ತು.

ಯಾವ ಲೋಕದೊಳಗೆ ಈ ಮಗು ಅರಳಿತ್ತೋ ಆ ಲೋಕಕ್ಕೆ ವಿರುದ್ಧವಾಗಿ ಬೆಳೆದು ನಿಲ್ಲಲು ಪ್ರಯತ್ನಿಸಿತ್ತು. ಅದಕ್ಕೆ ಮಣಿ ಎಂಬ ಮಿಣಿ ಮಿಣಿ ಬೆಳಕು ಆಸರೆಯಾಗಿ ಸಿಕ್ಕಿತ್ತು.

ಅಲ್ಲಿದ್ದ ಮಕ್ಕಳು ಶಬ್ದ ಸಾಗರವನ್ನೇ ಸೃಷ್ಟಿಸುತ್ತಿದ್ದರು, ಕಾಲನಿಗೂ ಕಾಲು ಬಂದಂತಿತ್ತು.

ನನ್ನ ಭುಜದ ಮೇಲೆ ಕೈ ಇಟ್ಟ ಮಣಿ ‘ಇಲ್ಲಿರುವ ಮಕ್ಕಳಲ್ಲಿ ಬಹುತೇಕ ಎಲ್ಲರೂ ಕೊಲೆಗಳನ್ನು ಕಂಡಿದ್ದಾರೆ. ತನ್ನ ತಂದೆಯೇ ತಾಯಿಯನ್ನು ಕತ್ತು ಹಿಸುಕಿ ಕೊಂದ, ಬೆಂಕಿ ಹಚ್ಚಿದ, ತಲೆ ಒಡೆದು ಸಾಯಿಸಿದ್ದನ್ನು ಕಂಡಿದ್ದಾರೆ. ಇನ್ನು ಕೆಲವರು ತಾಯಿಯೇ ತಂದೆಯ ಕೊಲೆ ಮಾಡಿದ್ದನ್ನು ಕಂಡಿದ್ದಾರೆ’.

‘ಅಗೋ ಅಲ್ಲಿ’ ಎಂದವರೇ ಮುಗ್ದತೆಯನ್ನೇ ಮೈಯಾಗಿಸಿಕೊಂಡಿದ್ದ ಒಬ್ಬ ಹುಡುಗಿಯತ್ತ ಬೆರಳು ತೋರಿಸಿದರು.

‘ಆಕೆ ನಿನ್ನೆ ತಾನೇ ನ್ಯಾಯಾಲಯಕ್ಕೆ ಹೋಗಿ ತನ್ನ ತಂದೆ ತನ್ನ ತಾಯಿಗೆ ಬೆಂಕಿ ಹಚ್ಚಿದ್ದನ್ನು ವಿವರಿಸಿ ಬಂದಿದ್ದಾಳೆ. ಆ ಕೊಲೆಯಲ್ಲಿ ಈಕೆಯೇ ಪ್ರಮುಖ ಸಾಕ್ಷಿ’ ಎಂದರು.

ನಾನು ಆ ಹುಡುಗಿಯತ್ತ ನೋಡಿದೆ. ಕೆಲವೇ ಕ್ಷಣಗಳ ಹಿಂದೆ ಆಕೆ ನನ್ನೊಡನೆ ‘ನಾನು ದೊಡ್ಡವಳಾದ ಮೇಲೆ ಡಾಕ್ಟರ್ ಆಗ್ತೀನಿ’ ಅಂದಿದ್ದಳು.

ಬೆಂಕಿ ಕಂಡು ತತ್ತರಿಸಿ ಹೋಗಿದ್ದ ಹುಡುಗಿ ಈಗ ಬೆಂಕಿಗಲ್ಲ, ಇಡೀ ಸಮಾಜದ ನೋವಿಗೇ ಮುಲಾಮು ಹಚ್ಚುವ ವೈದ್ಯೆಯಾಗಲು ಬಯಸಿದ್ದಳು.

‘ಪ್ರಾರ್ಥಿಸುವ ತುಟಿಗಳಿಗಿಂತ ಕೆಲಸ ಮಾಡುವ ಕೈಗಳು ದೊಡ್ಡದು ಅಲ್ಲವೇ?’ ಎಂದರು.

ಮಣಿ ಅವರಿಗೇನೋ ಕರುಳು ಕರಗಿತ್ತು ಆದರೆ ಅವರು ನಡೆದ ಹಾದಿಯೇನೂ ಸುಲಭದ್ದಾಗಿರಲಿಲ್ಲ. ಪ್ರತೀ ಬಂದೀಖಾನೆ ಸುತ್ತಿದರು ನ್ಯಾಯಾಲಯದ ಅಂಗಳದಲ್ಲಿ ನಿಂತರು.

‘ಪ್ರತಿಯೊಬ್ಬ ಕೊಲೆಗಾರ ಸಹಾ ಸಮಾಜದ ಬಗ್ಗೆ ನಕಾರಾತ್ಮಕ ಭಾವನೆ ಹೊಂದಿರುತ್ತಾನೆ. ಸಮಾಜ ಹೀಗಿರುವುದಕ್ಕೇ ನಾನು ಹೀಗಾದೆ ಎಂದು ನಂಬಿಸಿಕೊಳ್ಳಲು ಯತ್ನಿಸುತ್ತಿರುತ್ತಾನೆ. ಆದರೆ ಸಮಾಜಕ್ಕೆ ಕರುಣೆಯ ಕಣ್ಣಿದೆ ಎನ್ನುವುದನ್ನು ತಿಳಿಸಲು ನಾನು ಈ ಎಲ್ಲವನ್ನೂ ಮಾಡುತ್ತಿದ್ದೇನೆ. ಇದರಿಂದ ಆ ಕೊಲೆಗಾರನೊಳಗಿರುವ ಕ್ರೋಧ ಒಂದಿಷ್ಟು ಕಡಿಮೆಯಾದರೂ ಸಮಾಜಕ್ಕೆ ಎಷ್ಟೋ ಆರೋಗ್ಯ ಸಿಕ್ಕಿದಂತಲ್ಲವೇ?’ ಎಂದು ಪ್ರಶ್ನಿಸಿದರು.

ನಾನು ಕುಳಿತ ಜಾಗ ನೋಡಿಕೊಂಡೆ. ಅದು ಅತಿಥಿ ಕೊಠಡಿ.

ಜೈಲಿನಿಂದ ಪೆರೋಲ್ ಮೇಲೆ ಆಚೆ ಬರುವ ಕೈದಿಗಳು ತಮ್ಮ ಮಕ್ಕಳನ್ನು ನೋಡಲು ಇಲ್ಲಿಗೆ ಬರುತ್ತಾರೆ

ಈ ಕೋಣೆ ಹಲವು ಕಥೆಗಳಿಗೆ ಸಾಕ್ಷಿಯಾಗಿದೆ. ಮಗು ಬೆಳೆದ ರೀತಿ, ಅದರ ಕಣ್ಣಲ್ಲಿನ ವಿಶ್ವಾಸ, ಅಪ್ಪನೆಡೆಗೆ ಇನ್ನೂ ಉಳಿಸಿಕೊಂಡಿರುವ ಪ್ರೀತಿ ಕೈದಿಗಳ ಕಣ್ಣು ತುಂಬುವಂತೆ ಮಾಡುತ್ತದೆ. ಇನ್ನೆಂದೂ ನಾನು ಇಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ ಎಂದು ಬಿಕ್ಕಿದವರು ಇದ್ದಾರೆ.

ಹಾಗೆ ಮಣಿ ಅವರು ಹೇಳುತ್ತಿರುವಂತೆಯೇ ಆಚೆ ಯಾವುದೋ ವಾಹನ ಬ್ರೇಕ್ ಹಾಕಿದ ಸದ್ದು. ಹೊರಗೆ ನೋಡಿದೆ. ಮಕ್ಕಳು ‘ಹೋ’ ಎನ್ನುತ್ತ ಆಟೋ ಹತ್ತುತ್ತಿದ್ದರು.

ನೀಟಾದ ಯೂನಿಫಾರ್ಮ್, ಮುಖಕ್ಕೆ ಒಂದು ಚಂದನೆಯ ನಗು. ‘ಯಾವ ಶಾಲೆಗೆ ಹೋಗುತ್ತಾರೆ’ ಎಂದು ಕೇಳಿದೆ. ಮಣಿ ಯಾವ ಶಾಲೆಯ ಹೆಸರೂ ಬಿಟ್ಟುಕೊಡಲಿಲ್ಲ

‘ಇವರೆಲ್ಲಾ ಎಲ್ಲಾ ಪ್ರತಿಷ್ಠಿತರ ಮಕ್ಕಳು ಯಾವ ಶಾಲೆಯಲ್ಲಿ ಕಲಿಯುತ್ತಿದ್ದಾರೋ ಅಲ್ಲಿಯೇ ಕಲಿಯುತ್ತಿದ್ದಾರೆ.’

‘ನಾವು ಅರ್ಜಿ ಹಿಡಿದು ಶಾಲೆ ಶಾಲೆ ಸುತ್ತುತ್ತೇವೆ. ಎಲ್ಲವನ್ನೂ ಬಿಡಿಸಿಹೇಳುತ್ತೇವೆ. ಮಕ್ಕಳನ್ನು ಪ್ರತ್ಯೇಕಿಸಿ ಇಟ್ಟರೆ ಅವರೂ ಮುಂದೆ ಒಬ್ಬ ಅಪರಾಧಿಯಾಗಲು ನಾವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹಾಗಾಗುವುದು ಬೇಡ ಎನ್ನುತ್ತೇವೆ.’

‘ಬಹುತೇಕ ಎಲ್ಲಾ ಶಾಲೆಗಳೂ ನಮ್ಮ ಮನವಿಗೆ ಸ್ಪಂದಿಸಿವೆ. ಅಷ್ಟೇ ಅಲ್ಲ ಫೀಸ್ ನಲ್ಲಿ ರಿಯಾಯಿತಿಯನ್ನೂ ಕೊಟ್ಟಿವೆ’ ಎಂದರು.

‘ಮಕ್ಕಳ ಹಿನ್ನೆಲೆಯನ್ನು ಮಾತ್ರ ಬಹಿರಂಗಪಡಿಸಬೇಡಿ ಎಂದು ನಾವು ಅವರಿಗೆ ಕೇಳಿಕೊಳ್ಳುತ್ತೇವೆ’ ಎಂದರು.

‘ಆದರೂ ತರಗತಿಗಳಲ್ಲಿ ಕಥೆ ಹೇಳುವಾಗ, ಪಾಠ ಮಾಡುವಾಗ ಕಳ್ಳ ಕಾಕರ, ಕೊಲೆಗಾರರ ಕಥೆ ಬರುತ್ತದೆ. ಹಾಗೆ ಬಂದಾಗ ಈ ಮಕ್ಕಳು ಏನೂ ಹೇಳದೆ ಹೇಗೆ ತಲ್ಲಣಿಸಿಹೋಗುತ್ತಾರೋ ಎಂದು ನನಗೆ ಭಯವಾಗುತ್ತದೆ’ ಎನ್ನುವಾಗ ಸದಾ ನಗುವ, ಹಾಸ್ಯ ಮಾಡುತ್ತಲೇ ಇರುವ ಮಣಿಯವರ ಕಣ್ಣು ಸಹಾ ಒದ್ದೆಯಾಗಿತ್ತು.

ತಕ್ಷಣ ಚೇತರಿಸಿಕೊಂಡವರೇ ‘ಅಗೋ ಅಲ್ಲಿ ನೋಡಿ’ ಎಂದರು. ಒಬ್ಬ ಹುಡುಗಿಯತ್ತ ಬೆಟ್ಟು ಮಾಡಿದವರೇ ‘ಆಕೆ ತನ್ನ ತರಗತಿಯ 48 ಮಕ್ಕಳ ಪಾಕಿ 5ನೇ rank ಪಡೆದಿದ್ದಾಳೆ’ ಎಂದರು.

ಹಾಗೆ ಹೇಳುವಾಗ ಅವರೊಳಗೊಬ್ಬ ಜವಾಬ್ದಾರಿಯುತವಾದ ತಂದೆ ಎದ್ದು ಕುಳಿತಿದ್ದ.

‘ನಾನು ಆ ಕೈದಿಗಳು ಎಂದೆಂದೂ ಕೊಡಲಾಗದ ಒಂದನ್ನು ಈ ಮಕ್ಕಳಿಗೆ ಕೊಟ್ಟೆ- ಅದು ಸ್ವಾತಂತ್ರ್ಯ’ ಎಂದರು.

ಮಕ್ಕಳು ಬೆಳೆಯುತ್ತ ಹೋಗುತ್ತಿದ್ದಾರೆ . ಅವರ ಖರ್ಚು ವೆಚ್ಚ ಸಹಾ ಬೆಳೆಯುತ್ತಲೇ ಇದೆ. ಹಾಗೆಯೇ ಮಕ್ಕಳ ಸಂಖ್ಯೆಯೂ ಏರುತ್ತಿದೆ. ಇಡೀ ಸಂಸ್ಥೆಯನ್ನು ಅನುಭವಿ ಟ್ರಸ್ಟಿಗಳ ತಂಡ ಮುನ್ನಡೆಸುತ್ತಿದೆ. ಶೃಂಗೇರಿಯ ಶಾರದಾ ಪೀಠ ಬೆನ್ನಿಗೆ ನಿಂತಿದೆ. (socareind.org) (080-23321864, 23329774)
——
ಅಂತಹ ಮಣಿ, ಮಕ್ಕಳ ಪ್ರೀತಿಯ ಅಂಕಲ್ ಮಣಿ ಕೆಲವು ವರ್ಷಗಳ ಹಿಂದೆ ಇಲ್ಲವಾಗಿ ಹೋದರು.

ಮಣಿ- ಸರೋಜಿ ದಂಪತಿಗಳೊಡನೆ ಕಳೆದ ಹಲವು ದಿನಗಳು ನೆನಪಿಗೆ ಬಂತು. ಆ ಮಕ್ಕಳು ನೆನಪಾದರು, ಪೋಲೀಸ್ ಅಧಿಕಾರಿ ಆಗುತ್ತೇನೆ, ಡಾಕ್ಟರ್ ಆಗುತ್ತ್ತೇನೆ, ಮಾಸ್ತರ್ ಆಗುತ್ತೇನೆ ಅನ್ನುತ್ತಾ ಇದ್ದ ಮಕ್ಕಳು. ನಾನು ಹೊರಡುವಾಗ ‘ನೀವು ಎಲ್ಲಿಂದ ಬಂದಿರಿ?’ ಎಂದು ಕೇಳಿದ್ದರು.

‘ಬದುಕು ಬಂದೀಖಾನೆ’ ಯಿಂದ ಎನ್ನುವ ಮಾತು ನಾಲಿಗೆಯ ತುದಿವರೆಗೆ ಬಂದಿತ್ತು.

‘ನನಗೂ ನಿನಗೂ ಹೃದಯದ ಬಾಗಿಲು ತೆರೆದವರೇ ಇಲ್ಲ’ ಎನ್ನುವ ಎಕ್ಕುಂಡಿಯವರ ಕವಿತೆಯ ಸಾಲುಗಳನ್ನು ಮಣಿ ಸುಳ್ಳು ಮಾಡಿ ಹಾಕಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?