Thursday, November 21, 2024
Google search engine
Homeಮರೀಚಿಕೆಬದಲಾದ ಸಂತ ಕೆ ಬಿ ಯ ಮರೆಯಲಿ ಹೇಗೆ?

ಬದಲಾದ ಸಂತ ಕೆ ಬಿ ಯ ಮರೆಯಲಿ ಹೇಗೆ?

ಲೇಖಕರು-ಡಾ.ಓ.ನಾಗರಾಜು

ದಲಿತ ಚಳವಳಿ ಯ ಮೂಲ ಅಸ್ಮಿತೆ ಎಂದರೆ ಪ್ರೊ. ಬಿ ಕೆ.ಅವರು. ಕರ್ನಾಟಕ ದಲ್ಲಿ ಅಂಬೇಡ್ಕರ್ ಅವರ ಸಾಮಾಜಿಕ ವಿಮೋಚನಾ ರಥವನ್ನು ದಮನಿತರ ಪರವಾಗಿ ದಲಿತ ಚಳವಳಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖೇನ ಪರಿಣಾಮ ಕಾರಿಯಾಗಿ ಎಳೆದವರು ಅದೇ ಪ್ರೊ ಬಿ ಕೃಷ್ಣಪ್ಪ ಮತ್ತು ದೇವನೂರು ಮಹದೇವ ಕವಿ ಸಿದ್ದಲಿಂಗಯ್ಯ ಅರವಿಂದಮಾಲಗತ್ತಿ ಹೆಚ್ ಗೋವಿಂದಯ್ಯ ಇನ್ನಿತರರು.. ಇವರ ಸಾಲಿನಲ್ಲಿ ಗುರುತಿಸಿ ಕೊಳ್ಳುವ ಮತ್ತೊರ್ವ ಯೋಗ್ಯರಾದ ವರೆಂದರೆ ಪ್ರೊ.ಕೆ ಬಿ ಸಿದ್ದಯ್ಯ ಅವರು. ಕವಿ ಕೆ ಬಿ ಎಂದೇ ಖ್ಯಾತಿ ಪಡೆದಿರುವ ಸಿದ್ದಯ್ಯ ದಲಿತ ಸಾಹಿತ್ಯಕ ಸಾಂಸ್ಕೃತಿಕತೆಯ ಅಸ್ಮಿತೆಯ ರೂಪಕ ಮಾತ್ರವಲ್ಲ ಸಾಮಾಜಿಕ ಸಾಕ್ಷೀಪ್ರಜ್ಞೆ ಕೂಡ.

ಇವರು ಸಮಾಜ ಘಾತುಕ ಘಟನಾವಳಿಗಳಿಗೆ ಪ್ರತಿರೋಧಒಡ್ಡಿ ಪ್ರತಿಭಟನೆ ಹೋರಾಟ ಚಳವಳಿಗಳ ಮುಂಚೂಣಿಯಲ್ಲಿ ನಿಲ್ಲುತ್ತಿದ್ದುದರ ಜೊತೆಗೆ ಪರಂಪರೆಯ ಹುಡುಕಾಟದ ಫಲಶೃತಿಎಂಬಂತೆ ಖಂಡಕಾವ್ಯಗಳ ರಚನೆ ಮಾಡಿರುವರು.ತಾ ಕಂಡ ನೈಜ ಆಧ್ಯಾತ್ಮಿಕ ಬೆಳಕನ್ನುಜಗತ್ತಿಗೆ ಪಸರಿಸಿ ಚಿಂತನೆ ಗೆ ಸಹೃದಯರನ್ನೂ ಸಜ್ಜುಗೊಳಿಸಿರುವರು ಮತ್ತು ಆಧ್ಯಾತ್ಮದ ಅವಧೂತರಂತೆಯ ಭೌತಿಕ ಶರೀರ ಚಹರೆಯಲ್ಲಿ ವ್ಯಕ್ತಿತ್ವ ದಲ್ಲಿ ಸಮಕಾಲೀನ ಸಾಮಾಜಿಕ ಅಸಮಾನತೆಗೆ ಸ್ಫೋಟಿಸುವ ವೈಖರಿಯಲ್ಲಿ ಒಗಟಿನ ವ್ಯಷ್ಠಿಯಾಗುಳಿದರು.

ಯಾರಿಗಾದರೂ ಹೆಸರ ಕೇಳಿದರೇನೆ ಅವರು ಸಿಡಿಲ ಪೊಟ್ಟಣ ಎಂಬಂತೆ ದೃಗೋಚರಿಸುವರು.ಹೀಗೆ ಅವರು ಕಾವ್ಯಲೋಕಕ್ಕೆ ಸಾಮಾಜಿಕ ಪರಿಸರಕ್ಕೆ ಸಾಂಸ್ಕೃತಿಕ ಭೂಮಿಕೆ ಗೆ ತಮ್ಮನ್ನು ತಾವು ತೆರೆದು ಕೊಂಡರುವರು ಮತ್ತು ತೆತ್ತುಕೊಂಡಿದ್ದಾರೆ ಕೂಡ.

ಮಿಗಿಲಾಗಿ ಗಣನೀಯ ಕೊಡುಗೆ ಯನ್ನಂತು ಜಾತ್ಯಾತೀತವಾಗಿ ಸಮಾಜಕ್ಕೆ ನೀಡಿದ್ದಾರೆ. ಬನ್ನಿ ಸಹೃದಯರೇ, ನಾ ಕಂಡ ಕೆ ಬಿ ಸಿದ್ದಯ್ಯ ಅವರನ್ನು ಹಲವು ನಿದರ್ಶನಗಳ ಸಮೇತ ನಿಮಗೆ ಭೇಟಿ ಮಾಡಿಸುತ್ತೇನೆ ಬನ್ನಿ..

ಕಳೆದುಕೊಂಡದ್ದನ್ನು ಕಳಕೊಂಡಲ್ಲೇ ಹುಡುಕಿದರು ದಕ್ಕದಂತಹ ದಕ್ಲಾಕಥಾದೇವಿ ಸುತ ಬಕಾಲ ಸಂತನನ್ನು ಮಣೆಗಾರ ಸಮಾಜೋ ಆರ್ಥಿಕ ನಿಧಿ ಗಲ್ಲೇಬಾನೆ ಯಲ್ಲಿ ಹುಡಕುವ ಬನ್ನಿ.

ತಮಗಾಗಿ ಮನೆಗಾಗಿ ಏನೂ ಮಾಡಿಕೊಳ್ಳದೆ ಹೋದ ಕಾವ್ಯ ಸಂಪತ್ತನ್ನು ನಮಗೆ ಒದಗಿಸಿ ಬೆಳ್ಳಂಬೆಳಿಗ್ಗೆ ಅಂಗಿಯ ಮೇಲೆ ಲುಂಗಿ ಸುತ್ತಿಕೊಂಡು ಕೈಯಲ್ಲೊಂದು ಬಡಿಗೆ ಹಿಡಿದು ಕೊಂಡು ವಾಯುವಿಹಾರ ಕ್ಕೆ ತೆರಳಿದರೇನೋ ಎಂಬಂತೆ ಭವದ ಹಂಗು ತೊರೆದು ನಮ್ಮಿಂದ ದೂರ ಹೋದ ಸಾಂಸ್ಕೃತಿಕ ಪಕೀರನ ಬಗ್ಗೆ ತಿಳಿಯೋಣ.

ಗೆಳೆಯರೇ, ಇದು ಕೆಬಿ ಯವರನ್ನು ಕುರಿತ ಮಾತುಕತೆಯಷ್ಟೆ. ಅವರ ಕಾವ್ಯಾನುಸಂಧಾನ ಸಮಾಲೋಚನೆಯನ್ನು ಬೇರೆ ವೇದಿಕೆಯಲ್ಲಿ ಚರ್ಚೆ ಮಾಡೋಣ?

ಕೆ .ಬಿ . ಸಾಂಗತ್ಯ :
———
ಸಮಾಜ ಮತ್ತು ಸಂಸ್ಕೃತಿ ಚಿಂತಕರಾದ ಕೆ ಬಿ ಸಿದ್ದಯ್ಯ ಮತ್ತು ನನ್ನ ನಡುವಣ ನಂಟು ಸುಮಾರು ವಸಂತಗಳು ಹದಿನೆಂಟು.2002 ರಿಂದ ಆರಂಭಗೊಂಡುಒಂಭತ್ತು ವರ್ಷಕಾಲ ನಾನು ಅವರ ಕಾವ್ಯ -ಭಾಷಣ ಸಂಬಂಧದ ನಿಜವಾದ ಶ್ರೋತೃ.ಆನಂತರದ ಒಂಭತ್ತುಸಂವತ್ಸರಗಳಲ್ಲಿ ತುಸು ಅಂತರ ಕಾಯ್ದುಕೊಂಡಂತೆ ಸಾಹಿತ್ಯ ಸಂರಚನಾ ಹಾದಿಯಲ್ಲಿ ಅವರೊಟ್ಟಿಗಿನ ಭಾವನಾತ್ಮಕ ಬೆಸುಗೆ ಜತನದ ಸಹ ಪಯಣಿಗ.
ಕೆ ಬಿ ಅವರನ್ನು ನನಗೆ ಮೊದಲು ಪರಿಚಯಿಸಿದವರೆಂದರೆ ತುರುವೇಕೆರೆ ಯಲ್ಲಿ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದ ಪ್ರೊ. ಸಿ ಚೌಡಯ್ಯರವರು. ನಾನಾಗ ತುರುವೇಕೆರೆ ಯಲ್ಲಿ ಕೆಲಸ ಮಾಡುತ್ತಿದ್ದೆ. ನಾವಿಬ್ಬರು ಅಲ್ಲದೆ ಪ್ರೊ. ಟಿ ಗಂಗಾಧರಯ್ಯ ಟ್ರೈನ್ ಮೇಟ್ಸು. ಒಂದು ಕಾಲಕ್ಕೆ ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಬಲಿಷ್ಠ ಉದ್ದಿಮೆ ಕೋರ ಅಂಗಡಿ ಮಾಲಿಕರ ಅತಿಕ್ರಮಣಕ್ಕೆ ಒಳಗಾಗಿ ಸ್ವತ್ತು ಕೈಜಾರುವುದರಲಿತ್ತು. ಆಗ ದಕ್ಷ ಪ್ರಾಂಶುಪಾಲರಾಗಿದ್ದ ಇದೇಚೌಡಪ್ಪನವರು ಮೈದಾನಕ್ಕೆ ಕಾಂಪೌಂಡ್ ತೊಡಿಸಿ ಇಂದು ನಾವುಕಾಣುವ ಸ್ಥಿತಿಗೆ ತಂದಿಟ್ಟರು. ಆಗ ಕೆಲವರ ಕೆಂಗಣ್ಣಿಗೆ ಗುರಿಯಾದುದಲ್ಲದೆ ತುರುವೇಕೆರೆಗೆ ಎತ್ತಂಗಡಿಗೆ ತುತ್ತಾದರು.

ಸಾಹಿಗಳ ಚಿಂತಕರ ನಿರಂತರ ಒಡನಾಟದ ಚೌಡಪ್ಪಒಂದು ದಿನ ನನಗೆ ಗಾಂಧಿವಾದಿ ದಾಸೇಗೌಡರನ್ನು ಪರಿಚಯಿಸುವುದಾಗಿ ಹೇಳಿ ತುಮಕೂರಿನ ವಿದ್ಯೋದಯ ಲಾ ಕಾಲೇಜು ಆವರಣದ ಕೊಠಡಿಯಲ್ಲಿನ ಅವರ ವಾಸ್ತವ್ಯಕ್ಕೆ ಕರೆದುಕೊಂಡು ಹೋದರು. ಅಲ್ಲಿ ಯಾವುದೋ ಕಾರ್ಯಕ್ರಮ ಆಯೋಜನೆಗೊಂಡಂತೆ ಇತ್ತು.ದಾಸೇಗೌಡರನ್ನು ಕಂಡಾದಮೇಲೆ ಅದಾಗತಾನೆ ಆಗಮಿಸಿದ ವ್ಯಕ್ಕಿಯೊಬ್ಬರನ್ನು ಚೌಡಪ್ಪ ಬಲು ಆತ್ಮೀಯತೆಯಿಂದ ಮಾತಾಡಿಸಿದರು ಮತ್ತು ನನ್ನನ್ನು ಹತ್ತಿರ ಕರೆದು ‘ಇವರು ಓ ನಾಗರಾಜು ಡಿಗ್ರಿ ಕಾಲೇಜು ಕನ್ನಡ ಲೆಕ್ಚರರ್’ ಎಂದರು. ನಾನು ನಮಸ್ಕರಿಸಿ ಹಸ್ತಲಾಘವ ಮಾಡಿದೆ ಅಷ್ಟೆ ಏನು ಮಾತಾಡಲಿಲ್ಲ. ಹೌದಾ..ಎಂದು ದಿಟ್ಟಿಸಿ ನೋಡಿದ ಅವರು ದಾಸೇಗೌಡರತ್ತ ಸರಿದುಹೋದರು. ನನ್ನ ಕಡೆ ತಿರುಗಿದ ಚೌಡಪ್ಪನವರು ರೀ..ನಾಗರಾಜ್. . ಅವರನ್ನ ಸರಿಯಾಗಿ ಮಾತಾಡಿಸೋದಲ್ಲವೇನ್ರಿ ಎಂದರು. ನಾನಿದ್ದು ಅವರು ಯಾರು ಅಂತ ಕೇಳಿದೆ. ಚೌಡಪ್ಪಗೊಳ್ಳೆಂದು ನಕ್ಕು ಬಿಟ್ಟರು. ನನಗೆ ಪೆಚ್ಚೆನಿಸಿತು.ನಾಗರಾಜ್ ಅವರು ದಲಿತ ಕವಿ ಕೆ ಬಿ ಸಿದ್ದಯ್ಯ ಕಣ್ರಿ..ಹೋರಾಟಗಾರರು ಸಿದ್ಧಾರ್ಥ ವಿದ್ಯಾಸಂಸ್ಥಯಲ್ಲಿ ಇಂಗ್ಲಿಷ್ ಲೆಕ್ಚರರ್ ಆಗಿದ್ದಾರೆ. ಎಂದು ವಿವರಿಸಿದರು. ನಿಜ ಹೇಳಬೇಕೆಂದರೆ ಕೆ ಬಿ ಸಿದ್ದಯ್ಯ ರ ಹೆಸರು ಕೇಳಿದ್ದೆ ಅವರ ಕೃತಿಗಳಾದ ಬಕಾಲ ದಕ್ಲಾಕಥಾದೇವಿ ಟೈಟಲ್ ತಿಳುಕೊಂಡಿದ್ದೆ. ಕೆಲ ದಲಿತ ಚಳವಳಿ ಗಳಲ್ಲಿ ನಾನುಭಾಗವಹಿಸಿದ್ದಾಗ ಇವರ ಹೋರಾಟ ಗೀತೆಗಳನ್ನು ಗುಂಪಿನಲ್ಲಿ ಗುನುಗಿದ್ದೆ ಬಿಟ್ಟರೆ ಅವರನ್ನು ಪ್ರತ್ಯಕ್ಷ ನೋಡಿದ್ದುಅಂದೇ.

ಕಾರ್ಯಕ್ರಮ ದ ನಂತರ ದಾಸೇಗೌಡರು ತಮ್ಮ ಗೂಡು ಸೇರಿಕೊಂಡ ಮೇಲೆ ಮಹಡಿ ಮೇಲಿನ ವಿಶಾಲ ತಾರಸಿಯಮೇಲೆ ಪಾನಗೋಷ್ಠಿ ಏರ್ಪಟ್ಟಿತು. ಆಗ ಆಯ್ದ ಕೆಲವರು ಮಾತ್ರಇದ್ದರು. ಆ ಸಂಜೆ ಗೋಷ್ಠಿ ಯಲ್ಲಿ ಕೆ ಬಿಯವರ ಮಾತು ಬಲು ಜೋರಿತ್ತು. ಸೇವನೆಯಲ್ಲಿನಿರಂತರತೆ ಇತ್ತು. ಚೌಡಪ್ಪನವರು ಪರಿಚಯಿಸಿದಾಗಿನಿಂದ ನಾನು ಅವರು ನಮ್ಮವರೆಂಬ ಹೆಮ್ಮೆಯಲ್ಲಿ ಗಮನಿಸುತ್ತಲೇ ಇದ್ದೆ . ಆ ಕ್ಷಣ ನನಗನಿಸಿದ್ದು ಹೇಳುವೆ. ಕವಿ ಕಲಾವಿದರಿಗೆ ಕೆಲವು ವ್ಯಸನಗಳಿತ್ತವೆ.ಇವರಿಗೂ ವ್ಯಸನ ಇರುವುದು ತಪ್ಪಲ್ಲ ಅಂದುಕೊಂಡೆ. ಏಕೆಂದರೆ ಅಲ್ಲಿ ನಾನೂ ಕೊಂಚ ತಕೊಂಡಿದ್ದೆ.

ಹೀಗೆ ಆರಂಭವಾಯಿತು ನಮ್ಮ ಅವರ ಭೇಟಿ.ಆನಂತರ ನನ್ನ ಬಿಡುವಿನ ವೇಳೆಯಲ್ಲಿ ಅವಕಾಶಸಿಕ್ಕಾಗಲೆಲ್ಲಅವರ ಎಲ್ಲಾ ಬಗೆಯ ಕಾರ್ಯಕ್ರಮ ಗಳಿಗೆತಪ್ಪದೆ ಹೋಗುತ್ತಿದ್ದೆ ಕಿವಿಯಾಗುತ್ತಿದ್ದೆ ಆನಂದಿಸುತ್ತಿದ್ದೆ. ಇದರಿಂದ ನನಗೆ ಹಲವಾರು ಗೆಳೆಯರ ಸಾಂಗತ್ಯ ದೊರಕಿತು. ಮಾತ್ರ ಮತ್ತೆಂದೂ ಅವರೊಂದಿಗೆ ಪಾನಸೇವನೆ ಸಾಧ್ಯವಾಲಿಲ್ಲ. ಮತ್ತು ಅವರ ಆಪ್ತ ವರ್ತುಲದೊಳಗೆ ನನಗೆ ಪ್ರವೇಶಿಕೆ ಸಿಗಲಿಲ್ಲ ಇಷ್ಟಕ್ಕೂ ನಾನಾಗ ಅವರ ಶ್ರೋತೃಮಾತ್ರಆಗಿದ್ದೆ.

ನಾನು ಅವರ “ಅನಾತ್ಮ-ಗಲ್ಲೇಬಾನಿ” ಕೃತಿಗಳು ಲೋಕಾರ್ಪಣೆ ಗೊಂಡಾಗ ಉತ್ಸುಕತೆ ಯಿಂದ ಭಾಗವಹಿಸಿದ್ದೆ. 2003 ಡಿಸೆಂಬರ್ 31 ಸಂಜೆ ಯಲ್ಲಿ ತುಮಕೂರು ಎಂಪ್ರೆಸ್ ಜೂನಿಯರ್ ಕಾಲೇಜಿನಲಿ ಅನಾತ್ಮಕೃತಿಯ ಬಿಡುಗಡೆ ನಡೆಯಿತು. ಮಲ್ಲೇಪುರಂ ಮತ್ತುಗುರುಗಳಾದ ಕೀರಂಸೊಗಸಾಗಿ ಕವಿ ಮತ್ತು ಕೃತಿ ಬಗ್ಗೆ ಮಾತಾಡಿದರು. ಕೀರಂ ಕೆಬಿಯವರನ್ನು ಅವಧೂತ ಎಂದು ಸಂಬೋಧಿಸಿದರು.

ಕೆ ಬಿ ಅವರ ಪರಿಶುದ್ಧ ಅಭಿಮಾನಿ ಆಗಿದ್ದ ನನಗೆ ತುಂಬಾನೆ ಆನಂದವಾಗಿತ್ತು. ಅದೇ ಖುಷಿಯ ಬೆಚ್ಚನೆಯಲ್ಲಿ ಭಾವಕೋಶದೊಳಗೆ ಇದ್ದನಲ್ಲ ಕವಿ?ಅವನು ಗೋಚರಿಸಿದ ದೆಸೆ ಅವಧೂತ ಹೆಸರಿನ ಕವಿತೆಯನ್ನು ಕೆಬಿ ಮೇಲೆಯೇ ಬರೆದುಬಿಟ್ಟೆ. ಸೊರಬ ಕಾಲೇಜಿನಲ್ಲಿ ಇದ್ದಾಗಲೇ ನನಗೆ ಕವಿತೆ ಗೀಚುವ ಹವ್ಯಾಸವಿತ್ತು. ಅಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಕೂಡ ಆಗಿದ್ದೆ.ಹೀಗೆ ಕೆ. ಬಿ ಅವರ ಪ್ರೇರಣೆ ಯಿಂದ
ಹಾಗೆ ಬರೆಯುತ್ತಾ ಹೋದೆ.

ಕೆಬಿ ಯವರ ಗಲ್ಲೇಬಾನೆ ಬಿಡುಗಡೆ ನನ್ನನ್ನು ರೋಮಾಂಚನ ಗೊಳಿಸಿತ್ತು. ಆ ಕೃತಿ ಲೋಕಾರ್ಪಣೆ ಯ ಜವಾಬ್ದಾರಿಯನ್ನು ಹಿರಿಯ ಮಿತ್ರರು ಬೆಳಗೆರೆ ಕೃಷ್ಣ ಮೂರ್ತಿ ಯವರು ವಿಶೇಷ ಕಾಳಜಿ ಯಿಂದ ನಿರ್ವಹಿಸಿದರು . ಕಾರ್ಯಕ್ರಮಕ್ಕೆ ಆಗಮಿಸಿದ್ದ ವರಿಗೆ ಹೊಸಬಗೆಯ ಆಹಾರಾತಿಥ್ಯ ಬೆರಗು ಮೂಡಿಸಿತು. ಮಾಮೂಲಿ ದೇಸಿಸೊಗಡಿನ ಮುದ್ದೆ ಅವರೆ ಕಾಳುಹುಳಿಸಾರು ಮುಂತಾದವುಗಳನ್ನು ಇಂತಹ ಗಂಭೀರ ಕಾರ್ಯಕ್ರಮಗಳಲ್ಲಿ ಯಾವುದೇಎಗ್ಗಿಲ್ಲದೆ ಬಳಸಲು ಅಡ್ಡಿ ಇಲ್ಲ ಎಂಬಂತೆ ನಾಂದಿಹಾಡಿದಂತಿತ್ತು.

ಮಿಗಿಲಾಗಿ ಕಚ್ಚಾ ರೂಪದ ಅಡಿಕೆ ಪಟ್ಟೆ ಅದಾಗತಾನೆ ಉಂಬುವ ಲೋಹತಟ್ಟೆಸ್ವರೂಪಕ್ಕೆ ಜಿಗಿದು ಆ ದಿನ ನಮ್ಮ ಕೈಗಳಲ್ಲಿ ಬಳಕೆಗೆ ಒಳಪಟ್ಟಾಗ ಗಲ್ಲೇಬಾನೆಯ ವಿಶಿಷ್ಟ ಅನುಭವ ಜಲ ನಮ್ಮ ಮನದಒಡ್ಡಿನೊಳಗೆ ವರ್ಷ ಧಾರೆಯಕೆಂಪು ಸಲಿಲದಂತೆ ತುಂಬಿಕೊಂಡಿತು. ಬೆಳಗೆರೆ ಕೃಷಿಪರಿಸರಸ್ನೇಹಿ ಲೇಖಕರಾದ್ದರಿಂದ ಅದೇ ಕಾರ್ಯಕ್ರಮ ದಲ್ಲಿ ತೆಂಗಿನ ನೀರಾ ಕೂಡ ಬಂದವರಿಗೆ ವ್ಯವಸ್ಥೆ ಮಾಡಿ ಗಮನ ಸೆಳೆದದ್ದುವಿಶೇಷತೆಗಳಲ್ಲಿ ವಿಶೇಷ ಸಂಗತಿ ಎನ್ನಬೇಕು. ಅವರು ತುಮಕೂರು ವಿ.ವಿ ಯಲ್ಲಿ ಮೌಲ್ಯಮಾಪನಮಾಡುವ ತಾಣದಲ್ಲಿ ಗಲ್ಲೇಬಾನೆ ಗೆ ಮಾರುಕಟ್ಟೆ ನಿರ್ಮಿಸಿದ ಪರಿ ಮಗದೊಂದು ವಿದ್ಯಮಾನ ವೇ ಸರಿ. ಹೀಗೆ ಕೆಬಿ ಮತ್ತವರ ರಾಚನಿಕ ಸಾಹಸ ಮಯತೆ ನನ್ನನ್ನು ಆವರಿಸಿಕೊಂಡಂತೆ ಕೆ ಬಿ ನನ್ನಲ್ಲಿ ಆಲದಂತೆ ಬೆಳೆದರು.

ಮುನಿಯ ಮೇಲಿನ ನನ್ನ ಮುನಿಸು:
————–
2004 ರಲ್ಲಿ ದೇಶವು ನಿಬ್ಬೆರಗಾಗುವಂತಹ ಸುನಾಮಿ ಚಂಡಮಾರುತ ಅಪ್ಪಳಿಸಿ ಅಗಾಧ ಪ್ರಮಾಣದ ಪ್ರಾಣ -ಆಸ್ತಿ ಹಾನಿಆಯಿತು. ಆಗ ಸಾರ್ವಜನಿಕರು ಸಂಘ ಸಂಸ್ಥೆಗಳು ಸರ್ಕಾರಗಳು ಸಂತ್ರಸ್ತರ ನೆರವಿಗೆ ನಿಂತವು.ಬೇಸರದ ಸಂಗತಿ ಎಂದರೆ ನೆರೆಸಂತ್ರಸ್ತರ ಸಹಾಯಕ್ಕೆಂದುಹೋದ ಕೆಲ ನರಾಧಮರು ಧನ ಕನಕ ಲೂಟಿಗೈದರು. ಕೆಲಕಾಮಾಂಧರು ದಿಕ್ಕೆಟ್ಟ ಮಾನಿನಿಯರ ಮಾನ ಹರಣ ಮಾಡಿದರು. ಇದರಿಂದ ನನ್ನ ಕವಿ ಮನಸ್ಸು ಮರುಗಿಆಕ್ರೋಶಗೊಂಡಿತು ಪರಿಣಾಮ ಸುನಾಮಿ ಮತ್ತು ಸಮಾಜ ಸುನಾಮಿ ಹೆಸರಿನ ಎರಡು ಕವಿತೆ ಗೀಚಿದೆ.ಕವಿತೆಗಳಲ್ಲಿ ಗೋಮುಖ ವ್ಯಾಘ್ರರ ನಡೆಯನ್ನು ಖಂಡಿಸಿದೆ.ಅಷ್ಟೊತ್ತಿಗೆ ನನ್ನ ನವೀನ ಕವಿತೆ ಗಳು ರಚನೆಗೊಂಡು ಅವುಗಳ ಸಂಖ್ಯೆಹೆಚ್ಚಿತ್ತು. ಸಂಕಲನ ಹೊರತರುವ ಮೂಲಕ ಅವುಗಳಿಗೆ ಗತಿಕಾಣಿಸಬೇಕೆಂದು ಬಗೆದೆ. ಡಿಟಿಪಿ ಮಾಡಿಸಿ ನನ್ನ ನೆಚ್ಚಿನ ಕವಿ ಬಕಾಲ ರ ಬಳಿಗೆ ಮುನ್ನುಡಿ ಬೇಡಿ ಬಂದೆ. ಕವಿಗಳು ಕರಡು ಪ್ರತಿಯನ್ನು ಕೈಯಲ್ಲಿ ಹಿಡಿದು ನನ್ನ ಮುಂದೆಯೇ ಕವಿತೆಗಳ ಮೇಲೆ ಕಣ್ಣಾಡಿಸಿದರು. ಪುಟತಿರುವುತ್ತಲೇ ಇದ್ದರು. “ಗುರುಜ್ಯೋತಿ” ಶೀರ್ಷಿಕೆ ಯ ಕವಿತೆ ಓದುತ್ತ ಈ ಸಾಲುಗಳು ಚೆನ್ನಾಗಿವೆ ನಾಗರಾಜ್ ಎನ್ನುತ್ತ “ಒಡಲಒಳಗೆ ಕಿಚ್ಚ ಉರಿಸಿ ಹಣತೆ ಹಚ್ಚಲಾಗದು ಗುರುವು ಮೊದಲು ತಾನು ಬೆಳಗಿ ದೀಪ ಮುಡಿಸ ಬೇಕಿದೆ ಮಾನವತೆಯ ಎಣ್ಣೆ ಎರೆದು ಜಗವ ಬೆಳಗಬೇಕಿದೆ ” ಇವೇ ಅವರು ವಾಚಿಸಿದ ಪದಗಳು.
ನಿಜಕ್ಕೂ ನಾನು ಆಗ ಉಬ್ಬಿಹೋದೆ .ಕವನ ಇಷ್ಟವಾಗಿರಬೇಕು ಮುನ್ನುಡಿ ಬರೆದುಕೊಡಲು ಒಪ್ಪುವರು ಎಂದುಕೊಂಡೆ .ಉಕ್ಕಿ ಬಂದ ಆನಂದ ಕ್ಕೆ ತಮ್ಮ ಬಗ್ಗೆಯೂ ಕವಿತೆ ಬರೆದಿದ್ದೇನೆ ಸಾರ್ ಎಂದು ಹೆಮ್ಮೆಯಿಂದ ನುಡಿದೆ.ಆದರೆ ಆ ಕ್ಷಣ ಆದದ್ದೇ ಬೇರೆ .ಕವನ ಸಂಕಲನದ ಕರಡು ಪ್ರತಿಯನ್ನು ನನ್ನ ಕೈಯಲ್ಲಿಟ್ಟು”ಬಿಡುವಿಲ್ಲನನಗೆ ನಾಗರಾಜ್ ನಿನ್ನ ಇನ್ನೊಂದು ಪುಸ್ತಕ ಕ್ಕೆ ಮುನ್ನುಡಿ ಬರೆದುಕೊಡ್ತೇನೆ ಈಗ ಆಗಲ್ಲ “ಎಂದು ಬಿಟ್ಟರು.
ಅವರ ನಡೆ ನನ್ನ ಬರವಣಿಗೆಗೇ ಗತಿ ಕಾಣಿಸಿ ಬಿಟ್ಟಂತಾಯಿತು.
ಆರಂಭದ ಯಾವುದೇ ಪ್ರಾಕಾರದ ಕಲಾಕೃತಿ ಕಲಾವಿದನ ಮನೋಜನ್ಯಚೊಚ್ಚಿಲಕೂಸು.ತಾನೆತ್ತ ಕಂದಮ್ಮ ಸುರೂಪದ್ದೊ ಕುರೂಪದ್ದೊ ಹೆತ್ತವಳಿಗೆ ಗೌಣ. ಕೂಸು ಜನಿಸಿದ ಮೇಲೆ ತಾನೆ ಅದರ ಮೂಗು ಮುಸುಡಿ ಇತರೆ ಅಂಗಾಂಗಳ ತಿದ್ದುವುದು.
ಹಿರಿಯರು ಹಾಗೆಮಾಡಬವುದಿತ್ತು ಎಂಬುದು ನನ್ನ ಆಗಿನ ಭಾವನೆ . ಆದರೆ ನೀವು ನಂಬಲಿಕ್ಕಿಲ್ಲ ನನ್ನ ಆವರೆಗಿನ ಉತ್ಸಾಹವೆಲ್ಲ ಭರತನು ಭೂಮಂಡಲದ ಷಟ್ಖಂಡಗಳನ್ನು ಗೆದ್ದು ತನ್ನ ದಿಗ್ವಿಜಯವನ್ನು ಶಾಸನ ಕೆತ್ತಿಸಲು ವೃಷಭಾಚಲಕ್ಕೆ ಬಂದು ನೋಡಿದಾಗಅಲ್ಲಿ ಈ ಹಿಂದಿನ ರಾಜರು ತಮ್ಮ ಸಾಧನೆಗಳನ್ನು ಕೆತ್ತಿಸಿಜಾಗವೇ ಇಲ್ಲವಾಗಿಸಿದ್ದರು ಇದನ್ನು ಕಂಡ ಭರತನಿಗೆ ಗರ್ವರಸ ಸೋರಿಹೋಗುವಂತೆ ನನಗೆ ಇನ್ನಿಲ್ಲದ ಜಿಗುಪ್ಸೆ ಜಿನುಗಿಬಿಟ್ಟಿತು. ಇನ್ನೆಂದೂ ಏನೂ ಬರೆಯಬಾರದು ಎಂದುಕೊಂಡು ಹಿಂತಿರುಗಿದೆ. ಆ ಕ್ಷಣ ದಿಂದಲೇ ಕೆ ಬಿಯವರ ಮೇಲೆ ನನಗಿದ್ದ ಪ್ರೀತಿ ಗೌರವದ ಪ್ರಭೆ ಕೊಂಚ ಮಸುಕಾಗಿಬಿಟ್ಟಿತು.
ನನಗೆ ಗೊತ್ತು ಅವರು ಸದಾ ಒಂದಿಲ್ಲೊಂದು ಕಾರ್ಯ ಒತ್ತಡ ದಲ್ಲಿ ಮುಳುಗಿರುತ್ತಾರೆಂದು. ಹಾಗಾಗಿ ಸುಮ್ಮನಾದೆ.

2007 ರಲ್ಲಿ ರಂಗಾರೆಡ್ಡಿಕೋಡಿರಾಂಪುರ ಅವರ ಮಾರ್ಗದರ್ಶನ ದ ನನ್ನ ಪಿಹೆಚ್. ಡಿ ಪದವಿ ಪ್ರಬಂಧ ಮೂಲದ “ತುಮಕೂರು ಜಿಲ್ಲೆಯ ಗ್ರಾಮ ದೇವತೆಗಳು “ಹೆಸರಿನ ಮೊದಲ ಕೃತಿ ಹೊರಬಂತು. ಅದಕ್ಕೆ ರಾಜ್ಯ ಮಟ್ಟದ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ ಪ್ರಾಪ್ತವಾಯಿತು.
ಬಹುಶ : ನನ್ನ ಬರವಣಿಗೆಗೆ ಒಂದು ತಿರುವು ತೀವ್ರತೆ ಅಲ್ಲಿಂದ ಶುರುವಾಯಿತು ಎನ್ನಬೇಕು. ಆ ಕೃತಿ ಗೆ ಹಿರಿಯ ರಾದ ದುರ್ಗಾದಾಸ್ ಮತ್ತು ಕರೀಗೌಡಬೀಚನಹಳ್ಳಿ ಯವರು ಮುನ್ನುಡಿ -ಬೆನ್ನುಡಿ ಬರೆದು ಹರಸಿದ್ದರು
ಅದಾದ ಕೆಲ ವರ್ಷಗಳಲ್ಲಿ ಇದೇ ನನ್ನ ಕೃತಿ ತುಮಕೂರು ವಿ.ವಿ ಯ ಕೆಲವರ ಬೇಜವಾಬ್ದಾರಿತನದಿಂದ ಮತ್ತು ನನಗೆ ತುಂಬಾ ಪರಮಾಪ್ತನಾಗಿದ್ಗ ಗೆಳೆಯನಿಂದ ಸಂಪೂರ್ಣ ಕೃತಿ ಚೌರ್ಯಕ್ಕೆಒಳಪಟ್ಟಿತು. ನಿಜಕ್ಕೂ ನನಗೆ ಆಘಾತವಾಯಿತು.ವಿದ್ವಾಂಸವಲಯದಲ್ಲಿ ಇದು ಬಹುಚರ್ಚೆಗೆ ಒಳಗಾಯಿತು.ಆಗ ವಾಸ್ತವ ಸಂಗತಿ ಯನ್ನು ಪ್ರಚುರಪಡಿಸಿದ ಪ್ರಜಾವಾಣಿ ಪತ್ರಿಕೆಯ ಮಹೇಂದ್ರ ನಂದನವನ ಮತ್ತು ಮರಿಯಪ್ಪ ಅವರನ್ನು ನಾನು ಈಗಲೂ ಮರೆಯುವಂತಿಲ್ಲ. ಆದರೆ
ನ್ಯಾಯಕ್ಕಾಗಿ ನಾನು ಆಗ್ರಹಿಸುತ್ತಿರುವ ಹೊತ್ತಿನಲ್ಲಿ ನಮ್ಮ ಕೆಬಿಯವರು ಆ ಪೈರಸಿ ಪರಾಕ್ರಮಿಯ ಪರನಿಂತರು.ಆಗ ಮತ್ತಷ್ಟು ನಮ್ಮ ಅವರ ನಡುವೆ ಗ್ಯಾಪ್ ಸೃಷ್ಟಿ ಯಾಯಿತು. ಕಾಲ ನ್ಯಾಯಾಧೀಶ ನ ನಂಬಿ ನಾನು ತಟಸ್ಥ ನಾದೆ. ನಾನೆಂದೂ ಅವರನ್ನು ಪ್ರಶ್ನಿಸಿಲಿಲ್ಲ.
ಅವರೂ ಎಂದಿನಂತೆ ಸಿಕ್ಕಾಗ ಪ್ರೀತಿಯಿಂದ ಕಾಣುವುದನ್ನು ಮುಂದುವರೆಸಿದ್ದರು.
ಮನದೊಳಗೆ ಮಾತ್ರ ಜೊತೆಯಲ್ಲಿ ಇರುವವರನ್ನಾದರು ಇವರು ತಿದ್ದುವ ಯತ್ನ ಮಾಡಲಿಲ್ಲವಲ್ಲ ಎಂಬ ಅಸಹನೆ ಇದ್ದೇ ಇತ್ತು. ಈ ಸಂಬಂಧ ಕೆಲ ಮಿತ್ತರಲ್ಲಿ ಕಾರಿಕೊಂಡಿದ್ದೆ ಕೂಡ.ಅದು ನೀಹ ತಿಮ್ಲಾಪುರ ಇನ್ನಿತರರಿಗೆ ಗೊತ್ತಿದೆ.
ಇದೆಲ್ಲದರ ನಡುವೆ ಎಲ್ಲ ಸಂಗತಿ ತಿಳಿದುಕೊಂಡಿದ್ದ ಅಂದಿನ ದಲಿತ ಚಳವಳಿಯ ಮುಂಚೂಣಿಯಲ್ಲಿದ್ದು ಈಗಲೂ ಕ್ರಿಯಾಶೀಲರಾಗಿರುವ ಕುಂದೂರುತಿಮ್ಮಯ್ಯ ಅವರು ನನ್ನೆಲ್ಲಾ ಸಾಹಿತ್ಯ ಸಂಬಂಧದ ಕಾರ್ಯಕ್ರಮಗಳಿಗೆ ಬಂದು ಬೆನ್ನು ತಟ್ಟುತ್ತಾ ಇದ್ದುದು ನನಗೆ ಖುಷಿ ಕೊಟ್ಟಿರುವಂತದ್ದು. ಕೆಬಿಯವರೂ ಬರುತ್ತಿದ್ದರು ಇಲ್ಲವೆಂದಲ್ಲ..

ಬದಲಾದ ಸಂತ ಕೆಬಿಯ ಮರೆಯಲಿ ಹೇಗೆ?:
————————–

ನನ್ನ ಕುರಂಗರಾಜ ಪುಸ್ತಕ ಬಿಡುಗಡೆ ಕಾರ್ಯಕ್ರಮ ದಲ್ಲಿ ಕೆ. ಬಿ ಅವರಿಂದ ಆ ಒಂದು ವಿದ್ಯಮಾನ ಜರುಗದೇ ಹೋಗಿದ್ದರೆ, ಅವರು ನನ್ನ ಮನೋಸ್ಮೃತಿಯ ಕ್ಷಿತಿಜದಹೊರಗೆ ಪ್ರಾಯಶ:ಉಳಿದು ಬಿಡುತ್ತಿದ್ದರೇನೊ! ಅವರು ಎದುರುಗೊಂಡಾಗ ನಾನವರಿಗೆ ವ್ಯಕ್ತಪಡಿಸುತ್ತಿದ್ದ ತೋರಿಕೆಯಗೌರವಾದರ ಮತ್ತುಅವರ ಖಂಡಕಾವ್ಯಗಳಲ್ಲಿ ಹುದುಗಿರುವ ಆಧ್ಯಾತ್ಮಅಂತ:ಶಕ್ತಿ ಯ ನಿರಂತರದ ನೆನಕೆ ಕಾಲಕ್ರಮಣಿಯಲ್ಲಿ ನನ್ನ ವಿಸ್ಮೃತಿಯ ಕೂಪ ಸೇರಿ ನಾನು ತೀರಾ ಸಣ್ಣವನಾಗುತ್ತಿದ್ದೆ ಎಂದು ಅವರ ಅನುಪಸ್ಥಿತಿಯ ಖಾಲಿತನದಲ್ಲಿ ಅನಿಸುತ್ತಿದೆ. ಸದ್ಯ ಹಾಗಾಗಲಿಲ್ಲ.

ಹೌದು ಒಂದು ಹಂತದವರೆಗೆ ಕೆ ಬಿ ನನ್ನ ಅಸಹನೆಯ ಸ್ವಾರ್ಥದ ಕೊಂಪೆಯಲ್ಲಿ ಅನಾದರಣೀಯರಾಗಿಯೂ ನನ್ನೊಳಗಿದ್ದರು. ಆ ಘಟನೆ ತರುವಾಯದ ಘಳಿಗೆಯಿಂದ ನನ್ನ ಪ್ರತಿಭಾ ನೆನೆಪಿನ ಭಂಡಾರ ದೊಳಗೆ ಸಂತುಷ್ಟ ಸಂಚಿತ ಠೇವಣಿಯಾಗಿ ಬಿಟ್ಟರು.

2019ರ ಜೂನ್ತಿಂಗಳು ಈಯತ್ತೆ23 ರ ಇಳಿಹೊತ್ತಿನ ಅಹರ್ನಿಶಿ ಸಂಕ್ರಮಣ ಕಾಲದಲ್ಲಿ ತುಮಕೂರು ಬಾಲಭವನದ ಸಭಾಂಗಣ ಆಬಾಲವಯೋ ಪ್ರಾಜ್ಞರಿಂದ ಕಲಾಭಿಜನರ್ಕಳಿಂದ ತುಂಬಿತುಳುಕುತ್ತಿತ್ತು. ಅಂದು ನನ್ನ ರಚನೆಯ ಕುರಂಗರಾಜ ನಾಟಕ ಕೃತಿ ಯ ಲೋಕಾರ್ಪಣೆ ಮತ್ತು ಪ್ರದರ್ಶನ ಪ್ರಸ್ತುತಿಗೆ ಕ್ಷಣಗಣನೆ ಆರಂಭವಾಗಿತ್ತು .ಇದು ತುಮಕೂರು ದವನ ಭೂಮಿಕೆ ಸಾಂಸ್ಕೃತಿಕ ಟ್ರಸ್ಟ್ ನಿಂದ ಆಯೋಜನೆಗೊಂಡಿತ್ತು.ಕುರಂಗ ರಾಜ ರಂಗ ಕೃತಿ ನಾನು 2010 ರಲ್ಲಿ ಬರೆದ ಐತಿಹಾಸಿಕ ಕಾದಂಬರಿ “ಕುರಂಗರಾಜ ವೈಭವ “ದ ರೂಪಾಂತರ.ಆ ಕಾದಂಬರಿ ಗೆ ದಲಿತ ಕವಿ ಹೆಚ್ ಗೋವಿಂದಯ್ಯ ಮುನ್ನುಡಿ ಬರೆದು ಪ್ರೋತ್ಸಾಹಿಸಿದ್ದರು ಬೆನ್ನುಡಿ ಬರೆದದ್ದು ನನ್ನ ಪದವಿಗೆ ಗುರುಗಳಾಗಿದ್ದ ಮಲನಮೂರ್ತಿ ಅವರು. ರಂಗಕೃತಿ ಕುರಂಗರಾಜಕ್ಕೆ
ಗೆಳೆಯ ವಡ್ಡಗರೆ ನಾಗರಾಜಯ್ಯ ಮುನ್ನುಡಿಯನ್ನೂ. ಹೆಸರಾಂತ ರಂಗಕರ್ಮಿ ಗುಡಿಹಳ್ಳಿನಾಗರಾಜ ಅವರು ಬೆನ್ನುಡಿಯನ್ನು ಬರೆದಿರುವರು.

ನಾನು ವಿಶೇಷ ಕಾಳಜಿ ವಹಿಸಿ ನಾಟಕ ರೂಪಕ್ಕೆ ತಂದಿರುವೆ. ಅದು ಅಪ್ರಕಟಿತ ರೂಪದಲ್ಲಿ ಇದ್ದಾಗಲೇ ನೆಲಮಂಗಲ ರಂಗ ಶಿಕ್ಷಣ ಕೇಂದ್ರದ ಸಂಸ್ಥಾಪಕರು ಸಿದ್ದರಾಜು ಅವರು ಮೂರ್ನಾಲ್ಕು ಕಡೆ ಪ್ರದರ್ಶನ ಮಾಡಿಸಿದ್ದರು. ಈಗ ರಂಗ ಕೃತಿ ಬಿಡುಗಡೆ ಮತ್ತು ರಂಗಪ್ರಸ್ತುತಿಒಟ್ಟಿಗೆ ನಡೆದರೆ ಚೆಂದ ಎಂದು ನನ್ನ ಹಿತೈಷಿಗಳಾದ ಬಸವರಾಜಪ್ಪ ಆಪಿನಕಟ್ಟೆ ಸಲಹೆ ನೀಡಲಾಗಿಅವರ ಸಹಕಾರ ದಿಂದಲೇ ಕಾರ್ಯಕ್ರಮ ರೂಪುಗೊಂಡಿತ್ತು. ಯುವ ಮಿತ್ರ ಕೌತಮಾರನಹಳ್ಳಿ ಕಾಂತರಾಜು ನಿರ್ದೇಶಿಸಿದ್ದರು.

ಗ್ರಂಥಸ್ತ ರೂಪದ ಕುರಂಗರಾಜ ನಾಟಕ ಕೃತಿ ಯನ್ನು ನಾನು ಕೆ ಬಿ ಸಿದ್ದಯ್ಯ ಅವರಿಂದಲೇ ಲೋಕಾರ್ಪಣೆ ಮಾಡಿಸಬೇಕು ಎಂದು ಹಂಬಲಿಸಿದೆ. ಕಾರಣ ನನ್ನ ಈವರೆಗಿನ ಆರು ಕೃತಿಗಳಲ್ಲಿ ಯಾವುದಕ್ಕೂ ಮುನ್ನುಡಿ ಯನ್ನಾಗಲೀ ಬೆನ್ನುಡಿಯನ್ನಾಗಲಿ ಬರೆದಿಲ್ಲ. ಮತ್ತು ಯಾವ ಕೃತಿಯನ್ನುಅವರಿಂದ ಬಿಡುಗಡೆ ಮಾಡಿಸಿಲ್ಲ. ಅಂದು ಆದ ಕಹಿ ಅನುಭವದಿಂದಾಗಿ ಅವರಿಂದ ಅಂತರ ಕಾಯ್ದುಕೊಂಡಂತೆ ನನ್ನ ಸಾಹಿತ್ಯ ಕೃಷಿ ಸಾಗಿತ್ತು . ಅವರಿಂದ ಮುನ್ನುಡಿ ಬರೆಯಲ್ಪಟ್ಟುನನ್ನ ಮೊದಲ ಕೃತಿ ಎಂಬ ಖ್ಯಾತಿಗೆ ಪಾತ್ರ ವಾಗಬೇಕಿದ್ದ ಕವನ ಸಂಕಲನ ವು ನನ್ನ ನಾಲ್ಕನೇ ಕೃತಿಯಾಗಿ ಸುಪರ್ಣಿಯರೇ” ಹೆಸರಿನಲ್ಲಿ ಮೂಡಿ ಬಂತು.ಅದಕ್ಕೆ ನನ್ನ ಸೃಜನಶೀಲ ಪ್ರಕ್ರಿಯೆಗೆ ಯಾವೊತ್ತೂ ಪೋಷಕರಾಗಿರುವ ಗುರುಗಳು ಪ್ರೊ ಬರಗೂರು ರಾಮಚಂದ್ರಪ್ಪ ರವರು ಮುನ್ನುಡಿ ಬರೆದು ಹರಸಿರುವರು.”ಅರಿವಿನ ಲಯದೊಳಗೆ ” ಹೆಸರಿನ ಜಾನಪದ ಕೃತಿಗೆ ಮಲನ ಮೂರ್ತಿ ಮುನ್ನುಡಿ ಬರೆದರು.

ಈ ನಡುವೆ ನಮ್ಮಿಬ್ಬರ ನಡುವೆ ಆಶಾದಾಯಕ ಸನ್ನಿವೇಶ ವೊಂದು ಘಟಿಸಿತು. ಅದೆಂದರೆ ಹೆಚ್ ವಿ ವೆಂಕಟಾಚಲ ಅವರ ಮೈತ್ರಿ ನ್ಯೂಸ್ ಪತ್ರಿಕೆ ಕಛೇರಿ ಉದ್ಘಾಟನೆ ದಿನ ನಾನು ಕೆ ಬಿ ಮುಖಾಮುಖಿ ಆದೆವು.ಅದೇವೇಳೆ ಕಸಾಪ ಜಿಲ್ಲಾದ್ಯಕ್ಷರಾದ ಬಾ ಹ ರಮಾಕುಮಾರಿ ಬಂದರು. ಅಚ್ಚರಿ ಎಂದರೆ ವೆಂಕಟಾಚಲ ಅವರು ಹೊಸ ಕಲರ್ ಪ್ರಿಂಟಿಂಗ್ ಮೆಷಿನ್ ನಲ್ಲಿ ಕೆ ಬಿ ಸಿದ್ದಯ್ಯ ರಿಂದ ಒಂದು ಕಲರ್ ಪ್ರಿಂಟ್ ಕಾಪಿ ತೆಗೆಸಿದರು.ಅದು ನನ್ನ ಮುದ್ರಣ ಹಂತದ ಕಾದಂಬರಿ ಯ ಮುಖಪುಟ ವಿನ್ಯಾಸದ್ದು. ಕೃತಿ ಸಂಬಂಧದ ಮುಖ ಪುಟ ಚಿತ್ರ ವನ್ನು ಗೆಳೆಯರಾದ ಎಸ್ ರಾಘವೇಂದ್ರ ಅವರು ಪ್ರಿಂಟ್ ತೆಗೆಸಿಕೊಂಡುಹೋಗಿದ್ದರು ಅದರ ಸಾಫ್ಟ್ ಕಾಪಿ ಅಲ್ಲೇ ಇತ್ತು.ವೆಂಕಟಾಚಲ ಅವರು ಸಂದರ್ಭ ವನ್ನು ಸರಿಯಾಗಿ ಬಳಸಿಕೊಂಡರು.

ಕೆ ಬಿ “ಕವರ್ ಪೇಜ್ ಚೆನ್ನಾಗಿದೆ. ಕರಡು ಪ್ರತಿ ತಂದುಕೊಡು ಓದುತ್ತೇನೆ “ಎಂದರು ನಾನು ಆಗಲಿ ಎಂದೆ . ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸಿದಂತೆ ಪುಸ್ತಕ ಬಿಡುಗಡೆ ಮೊದಲೇ ದೇ ಕವರ್ ಪೇಜ್ ನ ಅನಾವರಣ ಗೊಂಡಿತು. ಕಂಟಲಗೆರೆ ರಮಾಕುಮಾರಿ ಮೇಡಮ್ ಕೆ ಬಿ ಎಲ್ಲರನ್ನು ಒಳಗೊಂಡ ಮುಖ ಪುಟ ಬಿಡುಗಡೆ ಸಂಬಂಧ ದ ಫೋಟೋ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸಂಚಲನ ಮೂಡಿಸಿತು. ಇದರಿಂದ ಎಲ್ಲರಮನಸ್ಸು ಕೊಂಚ ತಿಳಿಗೊಂಡಿತು
2018 ರ ಡಿಸೆಂಬರ್ ತಿಂಗಳಲ್ಲಿ ನನ್ನ ನೆಚ್ಚಿನ ಗುರುಗಳು ಬರಗೂರು ರಾಮಚಂದ್ರಪ್ಪ ರವರಿಂದ ಅದೇ ಬೃಹತ್ ಕಾದಂಬರಿ “ಹಟ್ಟಿ ಅರಳಿ ಹೂವಾಗಿ ” ಕೃತಿ ಲೋಕಾರ್ಪಣೆ ಯಾಯಿತು. ಆ ಕಾದಂಬರಿ ಗೆ ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರ ದ ಪ್ರಾಧ್ಯಾಪಕರು ಬಿ ಗಂಗಾಧರ ಅವರು ಮುನ್ನುಡಿ ಬರೆದರೆ ಬೆನ್ನುಡಿಯನ್ನು ನನ್ನ ಬರವಣಿಗೆಯ ಪ್ರೇರಕರಾಗಿರುವ ಪತ್ರಕರ್ತಮಿತ್ರ ರಾದ ಕೆ ಈ ಸಿದ್ದಯ್ಯ ರಚಿಸಿರುವರು.

ನನ್ನ ಎಲ್ಲಾ ಕೃತಿ ಗಳ ಬಿಡುಗಡೆ ಮತ್ತು ಸಂವಾದ ದಂತಹ ಇನ್ನಿತರ ಕಾರ್ಯಕ್ರಮ ಗಳಿಗೆ ಇದೇ ಕೆಬಿಯವರು ತಪ್ಪದೆ ಹಾಜರಾಗುತ್ತಿದ್ದರು ಶ್ರೋತೃಗಳಾಗಿದ್ದು ತೆರಳುತ್ತಿದ್ದರು.

ನನ್ನ ಏಳನೆಯ ಕೃತಿ ಪ್ರಸ್ತುತ ಬಿಡುಗಡೆಗೆ ಕಾದಿರುವ “ನಮ್ದೂ ಒಂದು ಬಾಳು” ಶೀರ್ಷಿಕೆ ಯ ಕಥಾ ಸಂಕಲನ ಕ್ಕಾದರು ಕೆಬಿಯವರಿಂದ ಮುನ್ನುಡಿ ಬರೆಸಬೇಕು ಎಂಬ ಆಲೋಚನೆ ಬಂತು. ಶಿವಣ್ಣ ತಿಮ್ಲಾಪುರ ಅವರನ್ನು ವಿಚಾರಿಸಿದಾಗ. ಕೆ ಬಿ ಓದಿ ಬರೆಯುವ ಸ್ಥಿತಿಯಲ್ಲಿ ಇಲ್ಲ ಎಂಬುದು ತಿಳಿದುಬಂತು. ಅವರು ಹೃದ್ರೋಗ ಸಮಸ್ಯೆಕಾರಣಕ್ಕೆ ಬೆಂಗಳೂರು ಆಸ್ಪತ್ರೆ ಸೇರಿದಾಗ ನಾನು ಮತ್ತು ಶಿಷ್ಯ ಮಿತ್ರರಾದ ಲಕ್ಷ್ಮೀರಂಗಯ್ಯ ಹೋಗಿ ನೋಡಿ ಕೊಂಡು ಬಂದ ಮೇಲೆ ಯಾವುದಾದರೂ ಕೃತಿಗೆ ಮುನ್ನುಡಿ ಬರೆಸಬೇಕು ಎಂಬ ಹೆಬ್ಬಯಕೆಮೂಡಿತ್ತು .ಆದರೆ ಅದು ಸಾಧ್ಯವಾಗದೇ ಹೋಯಿತು.

ಕುರಂಗರಾಜ ಬಿಡುಗಡೆ ವೇಳೆ
ಅವರನ್ನು ಒಳಗೊಳ್ಳಲೇಬೇಕು ಅನಿಸಿ ಬಿಟ್ಟಿತು. ಹಾಗಾಗಿ ಸದಾ ಜಂಗಮರಂತೆ ಅಡ್ಡಾಡುತಿದ್ದ ಅವರನ್ನ ಜಂಗಮ ವಾಣಿ ಮುಖೇನ ಸಂಪರ್ಕ ಸಾಧಿಸಿದೆ. ನನ್ನ ಆಸೆಯನ್ನು ಹೇಳಿಕೊಂಡೆ.” ನಾನು ಹೊರಗಡೆ ಇದ್ದೀನಿ ಪುಸ್ತಕ ಮನೆಗೆ ತಂದುಕೊಡು ಕಾರ್ಯಕ್ರಮ ಕ್ಕೆ ಬರ್ತೀನಿ” ಎಂದರು. ನಾನು ಅಷ್ಟಕ್ಕೆ ಸುಮ್ಮನಾಗದೆ “ನೀವು ಮನೆಯಲ್ಲಿ ಇರುವಾಗಲೇ ಬಂದು ಆ ಬಗ್ಗೆ ಮಾತಾಡುತ್ತೇನೆ “ಎಂದೆ. ಅದಕ್ಕವರು ” ಬೇಡ ನಾಗರಾಜ್, ನಾನು ಖಂಡಿತ ಬರ್ತೀನಿ. ಅಂದಹಾಗೆ ಉದ್ಘಾಟನೆಗೆ ಯಾರು ಮಾಡ್ತಾರೆ” ಎಂದು ಕೇಳಿದರು. ನಾನು ಹೇಳಿದೆ “ಪ್ರಸಿದ್ಧ ರಂಗನಿರ್ದೇಕರು ರಾಷ್ಟ್ರೀಯ ನಾಟಕ ಶಾಲೆಯ ಮುಖ್ಯಸ್ಥರು ಆಗಿರುವ ಶ್ರೀ ಸಿ ಬಸವ ಲಿಂಗಯ್ಯ ಮಾಡ್ತಾರೆ ಅಧ್ಯಕ್ಷತೆಯನ್ನು ಡಾ ಲಕ್ಷ್ಮಣದಾಸ್ ಅವರು ವಹಿಸಿಕೊಳ್ಳುವರು” ಎಂದೆ.
“ಗುಡ್..ಬಸ್ಸೂಗೆ ನಾನೂ ಬರಾಕೆ ಹೇಳ್ತೀನಿ ನೀನು ಎಲ್ಲ ರೆಡಿ ಮಾಡಿಕೊ “ಎಂದು ಫೋನಿನಲ್ಲೇ ಭರವಸೆ ನೀಡಿದರು. ಮನೆಗೆ ಆಹ್ವಾನ ಪತ್ರಿಕೆ ಕೊಡಲು ಹೋದಾಗ ಪುಸ್ತಕ ಕೊಡು ಎಂದರು. ಅಲ್ಲೇ ಇದ್ದ ಅಕ್ಕಾವ್ರು “ಪುಸ್ತಕ ತಂದುಕೊಟ್ಟಿದ್ದಾರೆ ಅಂತ ಆವತ್ತೇನಿಮಗೆ ಹೇಳ್ದೆಅಲ್ವಾ” ಎಂದರು ಸರಿ ಎಂದು ನನ್ನಲ್ಲಿ ಇದ್ದ ಇನ್ನೊಂದು ಪುಸ್ತಕ ಅವರ ಕೈಲಿರಿಸಿ ಬಂದೆ.

ನಿಜ ಹೇಳ್ತಿದೀನಿ ಸ್ನೇಹಿತರೇ, ಕೆ ಬಿ ಯವರು ಕುರಂಗರಾಜ ನಾಟಕ ಬಿಡುಗಡೆ ಗೆ ಒಪ್ಪಿದ್ದಾರೆ ಬಂದೇಬರುತ್ತಾರೆ ಇನ್ನೇನು ಕೆಲವೇ ಕ್ಷಣಗಳಲಿ ಅದೂ ನೆರವೇರಿಬಿಡುತ್ತದೆ ಎಲ್ಲಾ ಸರಿ. ಆದರೆ ಕೃತಿ ಲೋಕಾರ್ಪಣೆ ಮಾಡಿ ಏನು ಮಾತಾಡುವರೋ ಎಂಬ ಅಳುಕು ಅವರು ಬರಲು ಒಪ್ಪಿಕೊಂಡಾಗಿನಿಂದ ಶುರುವಾಗಿತ್ತು.

ಏಕೆಂದರೆ ಹದಿನೆಂಟು ವರ್ಷಾವಧಿಯಲ್ಲಿ ನನ್ನ ಅವರ ನಡುವಿನ ಸುಮಧುರ ಬಾಂಧವ್ಯ ಹಾಗು ಇರಿಸು ಮುರಿಸಿನ ಬಗ್ಗೆ ಏನೇನಾಯ್ತು ಎಂದು ಎಲ್ಲ ಬಿಡಿಸಿ ನಿಮಗೆ ಹೇಳಿದ್ದೇನೆ.
ಅವರು ನನ್ನ ಬಗ್ಗೆ ಕೃತಿ ಕುರಿತು ಪಾಸಿಟಿವ್ಆಗಿ ನುಡಿಯುವರೊ ಅಥವಾ ನೆಗೆಟಿವ್ ಆಗಿ ಮಾತಾಡುವರೊ ಎಂಬ ಭಾವನೆ ಬಹುತೇಕ ನನ್ನ ಒಡನಾಡಿಗಳಿಗೆಲ್ಲ ಮೂಡಿತು.

ಬನ್ನಿ, ಕೆ ಬಿ ಸಿದ್ದಯ್ಯ ಅವರ ಬಗೆಗಿನ ನನ್ನೆಲ್ಲಾ ಕ್ಲೇಶನುಮಾನಗಳು ಕೊಚ್ಚಿ ಹೋಗಿ ಅವರ ಬಗ್ಗೆ ಇನ್ನಿಲ್ಲದ ಗೌರವಾದರ ಮೂಡಿದಂತಹ ಸನ್ನಿವೇಶ ತಿಳಿಸುವೆ.

ನೇಪಥ್ಯದಲ್ಲಿ ರಂಗ ಕಲಾವಿದರುಕುರಂಗರಾಜ ನಾಟಕ ಪ್ರದರ್ಶನ ಕ್ಕೆ ಸಜ್ಜಾಗಿರುವರು. ಇತ್ತ
ವೇದಿಕೆ ಕಾರ್ಯಕ್ರಮ ಶುರುವಾಯಿತು. ಗಣ್ಯರೆಲ್ಲ ಆಸೀನರಾದರು.

ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಕೂಡ ನೆರವೇರಿತು. ಈಗ ಪುಸ್ತಕ ಲೋಕಾರ್ಪಣೆ ಆಗಬೇಕು..ಸಭೆ ಸ್ಥಬ್ಧ ವಾಗಿತ್ತು .ಕವಿ ಕೆ ಬಿ ಸಿದ್ದಯ್ಯ ವಸ್ತ್ರ ದ ಗಂಟು ಬಿಚ್ಚಿ ಅದರೊಳಗೆ ಬಂಧಿಯಾಗಿದ್ದ ಬಿದಿರುಬುಟ್ಟಿ ತೆರೆರದರು ಬುಟ್ಟಿಯಲ್ಲಿದ್ದ ಪುಸ್ತಕ ಗಳನ್ನುಎತ್ತಿಕೊಂಡು ಅವರ ಎಡ ಬಲ ದಲ್ಲಿ ಇದ್ದ ಲಕ್ಷ್ಮಣದಾಸ್ ಮತ್ತು ಬಸವಲಿಂಗಯ್ಯ ಅವರಿಗೆ ಕೊಟ್ಟರು. ಪುಸ್ತಕ ಎಲ್ಲರಿಗೂ ಹಸ್ತಾಂತರ ಆಯಿತು ನನ್ನ ಕೈಯಲ್ಲಿ ಪುಸ್ತಕ ಇದ್ದರೂ ಕೆ ಬಿ ಅವರು ತಕೊ ನಾಗರಾಜ್ ಪುಸ್ತಕ ಬಿಡುಗಡೆ ಮಾಡಿದೀನಿ ಎನ್ನುತ್ತ ಮತ್ತೊಂದು ಕೃತಿ ನೀಡಿದರು. ನಾನು ನಕ್ಕೆ.
ಇನ್ನು ಎಲ್ಲರೂ ತಮ್ಮಕೈಯ್ಯಲ್ಲಿರುವ ಪುಸ್ತಕ ಗಳನ್ನು ಸಭಿಕರಿಗೆ ಮಾಧ್ಯಮ ಮಿತ್ರರೆಲ್ಲರಿಗೂ ತೋರಿಸಬೇಕು.

ಆಗ ಎಲ್ಲರೂ ನೋಡುತ್ತಿರುವಂತೆ ಕೆ ಬಿ ಸಿದ್ದಯ್ಯ ಅವರು ಕ್ಷಣಹೊತ್ತು ಎದೆಮಟ್ಟಕ್ಕೆ ಕೃತಿ ಹಿಡಿದು ತೋರುತ್ತ ಇದ್ದಕ್ಕಿದ್ದಂತೆ ಕುರಂಗರಾಜ ನಾಟಕ ಕೃತಿ ಯನ್ನು ತಮ್ಮ ನೆತ್ತಿಯಮೇಲೆ ಇಟ್ಟುಕೊಂಡುಬಿಟ್ಟರು. ಮತ್ತದನ್ನು ಹೊತ್ತು ಕೊಂಡವರಂತೆ ಮೀಡಿಯಾ ಮುಂದೆ ತೋರಿಸಿದರು. ಅವರನ್ನು ನೋಡಿ ಬಸವಲಿಂಗಯ್ಯನವರೂ ಕೃತಿಯನ್ನ ತಲೆಮೇಲಿಟ್ಟುಕೊಂಡರು.ನನಗೆ ಅಲ್ಲಿ ಎಲ್ಲವೂ ಸಂಭ್ರಮದ ಘಳಿಗೆಗಳೇ ಆಗಿದ್ದವು.ಅವರು ಆ ರೀತಿ ಪುಸ್ತಕ ವನ್ನು ತಲೆ ಮೇಲೆ ಧರಿಸಿದಾಗ ನಾನು ಮೂಕವಿಸ್ಮಿನಾಗಿದ್ದೆ ಮತ್ತು ಭ್ರಾಂತಿಯಲ್ಲಿ ಮುಳುಗಿದ್ದೆ. ಅದೇ
ಬಸವಲಿಂಗಯ್ಯಅವರು ಮಾತಾಡುತ್ತ ಮಣೆಗಾರ ಸಮುದಾಯದ ರಾಜನೊಬ್ಬನಿದ್ದ ಎಂಬುದನ್ನ ತಿಳಿದು ವಿಸ್ಮಯ ವ್ಯಕ್ತಪಡಿಸುತ್ತಲೇ ಉತ್ತೇಜನ ಕಾರಿ ನುಡಿಗಳನ್ನಾಡಿ ಶುಭಕೋರಿದರು.

ವಿಶಿಷ್ಟರೀತಿಯಲ್ಲಿ ಕೃತಿ ಬಿಡುಗಡೆ ಮಾಡಿದ ನಮ್ಮ ಕೆ ಬಿಯವರು ಮಾತಾಡುತ್ತ” ನೀವು ನೋಡಿದಿರಿ ನಾನು ಕುರಂಗರಾಜ ನ ಪಾದಗಳನ್ನು ತಲೆಯ ಮೇಲೆಇಟ್ಟುಕೊಂಡಿದ್ದು. ಅವನು ನಮ್ಮ ರಾಜ.ಅವನಿಗೆ ಪರಂಪರೆಯ ಪ್ರಜ್ಞೆ ಇತ್ತು. ಶರಣರ ಬಗ್ಗೆ ಗೊತ್ತಿತ್ತು. ಚರ್ಮದ ನಾಣ್ಯಗಳನ್ನ ಚಲಾವಣೆಗೆ ತಂದಿದ್ದ. ನಾವು ಮೆರೆಸದೆಅವನನ್ನಇನ್ಯಾರು ಮೆರೆಸುವರು. ನಾಗರಾಜ್ ಒಳ್ಳೆಯ ಕೆಲಸ ಮಾಡಿದ್ದಾನೆ “ಎನ್ನುತ್ತಾ ಕುರಂಗರಾಜ ಮತ್ತು ಹೈದರಾಲಿ ಭೇಟಿ ಸಂದರ್ಭದ ಸಂಭಾಷಣೆ ಸಭಿಕರಿಗೆ ಓದಿ ಅರ್ಥೈಸಿದರು.

ಹಾಗೆ ಹೇಳುತ್ತಿರುವಾಗ ಅವರ ಮೊಗದಲ್ಲಿ ಬುದ್ಧನ ನಗೆ ಸುಳಿದಾಡುತ್ತಿತ್ತು. ಅವರಾಡುವ ಪ್ರತಿ ಮಾತು ನನ್ನನ್ನು ರೋಮಾಂಚನಗೊಸುತ್ತಿತ್ತು ಹಾಗು ನನ್ನ ಸಂಶೋಧನೆಯ ಫಲಶೃತಿ ನನ್ನ ಕಣ್ಮುಂದೆಯೇ ಗೋಚರವಾಗಿತ್ತು.

ಕಾರ್ಯಕ್ರಮ ಮುಗಿದ ಮೇಲೆ ನಾನು ಕೆಬಿಯವರಿಗೆಫೋನ್ ಮಾಡಿ “ಕುರಂಗರಾಜ ನಾಟಕ ಕೃತಿ ಯನ್ನು ತಲೆ ಹೊತ್ತು ನನಗೆ ಋಣ ಭಾರ ಹೇರಿದಿರಿ”ಅಂದೆ.ಅದಕ್ಕವರು “ನಾಗರಾಜ್ ಆದು ನನ್ನ ಡ್ಯೂಟಿ. ಯಾವೊತ್ತೂ ಮಾಡಬೇಕಿತ್ತು ಇವತ್ತು ಮಾಡಿದೀನಿ.ಬಸೂನ ಚೆನ್ನಾಗಿ ಟ್ರೀಟ್ ಮಾಡಿ ಕಳಿಸಿದ್ದೀಯತಾನೆ” ಎಂದು ಕೇಳಿದರು.” ಮಾಡಿದ್ದೇನೆ ಸರ್ ಲಕ್ಷ್ಮಣದಾಸ್ ಅವರನ್ನ ಜತೆ ಮಾಡಿಕಳಿಸಿದೀನಿ” ಎಂದಾಗ “ಗುಡ್ ..ಯಾವಾಗಾದ್ರು ಸಿಗು ಮಾತಾಡೋಣ” ಎಂದು ಮಾತಿಗೆ ವಿರಾಮ ಹೇಳಿದರು.

ಕೆ ಬಿ ನಂತರ ವಾಟ್ ನೆಕ್ಸ್ಟ್
——————-
ಸ್ನೇಹಿತರೇ, ಮನಸ್ಸಿಗೆ ತುಂಬಾ ನೋವಾಗುತ್ತದೆ. ಆನಂತರ ಅವರನ್ನ ಭೇಟಿ ಮಾಡಲಾಗಲಿಲ್ಲ ಅವರು ಕಾರ್ಯಕ್ರಮದಲ್ಲಿ ಬಕಾಲ ಮುನಿಯಾಗಿಯೇ ನನ್ನ ಕಣ್ಣಿಗೆ ಕಂಡರು
ಹೇಳಬೇಕೆಂದರೆ ಕೆ ಬಿ ಸಿದ್ದಯ್ಯ ಅವರು ಇತ್ತೀಚೆಗೆ ತುಂಬಾ ಬದಲಾಗಿದ್ದರು ಅವರಿಗೆ ಸಮಾಜಕ್ಕೆ ಒಳಿತಾಗುವಂತದ್ದನ್ನು ಏನಾದರೂ ಮಾಡಬೇಕೆಂಬ ತುಡಿತವಿತ್ತು ಎಂದು ಸಂಸ್ಕೃತಿ ಚಿಂತಕರಾದ ಬೆಂಗಳೂರಿನ ಆರ್ ಲೋಕೇಶ್ ಹೇಳುವಾಗ ಹಿಂದೆಂದಿಗಿಂತ ಪ್ರಸ್ತುತ ಕೆ ಬಿ ನಮ್ಮೊಡನೆ ಇರಬೇಕಿತ್ತು ಅನಿಸುತ್ತದೆ.

ಈಗ ಅವರು ಪಂಚ ಭೂತಗಳಲ್ಲಿ ಲೀನವಾಗಿ ಕೆಂಕೆರೆಯಲ್ಲಿ ಅವರ ತೋಟದ ಆ ಆಲ ಈ ಅಂಕಾಲೆ ಯ ತಂಪನೆಯ ನೆಳಲಲ್ಲಿ ಚಿರನಿದ್ರೆಗೆ ಜಾರಿರುವರು.ಮಾತ್ರ ಅಂದಿನ ಅವರ ನಡೆಯ ಕಾರಣಕ್ಕೆ ನನ್ನ ಪಂಚೇಂದ್ರಿಯಗಳಿಗೆ ನಿಲುಕುತ್ತಲೇ ಇರವರು . ನನ್ನ ವಿಭಾವ ಕೋಶದೊಳಗೆ ಪ್ರವೇಶಿಕೆ ಪಡೆದುಕೊಂಡಿರುವ ಕೆಲವೇ ಅನಭಾವಿ ಗಣ್ಯಮಾನ್ಯರ ಗಡಣ ಜತನದ ಸಂಯೋಗದಲಿ ಅಲ್ಲಮನಂತೆ ಪ್ರಶಾಂತ ಪೀಠಸ್ಥರಾಗಿರುವರು. ನಮಗೆಲ್ಲಾ ಅವರು ಅನುಕರಣೀಯರು.ಇದು ನನ್ನ ಮನೋಭೂಮಿಕೆ ಮೂಲದ ಸಾಕ್ಷಿಪ್ರಜ್ಞೆಯ ಪ್ರಾಮಾಣಿಕ ವಚನ.

ಇದೇ ಸಮಯದಲ್ಲಿ ನಾನು ಒಂದೆರಡು ಮಾತು ಹೇಳಲೇಬೇಕು. ನಮ್ಮ ಕೆ ಬಿಯವರು ಕೆಲವು ವೈರುಧ್ಯಗಳನ್ನುಮೀರಿ ಮತ್ತಷ್ಟು ಸಾಹಿತ್ಯ-ಸಾಂಸ್ಕೃತಿಕ ಪರಿಪೂರ್ಣತೆ ಯನ್ನು ಸಾಧಿಸಬಹುದಿತ್ತು. ತನ್ನ ನಂತರದಲ್ಲಿ ತನ್ನದೇ ಕನಸುಗಳನ್ನು ಸಾಕಾರ ಗೊಳಿಸುವಂತಹ ಸಮರ್ಥಶಾಲಿ ಸಾಂಸ್ಕೃತಿಕ ಯುವ ಪಡೆಯನ್ನು ಕಟ್ಟಬೇಕಿತ್ತುಎಂಬುದು ಕೆ ಬಿ ಯವರನ್ನು ಹತ್ತಿರದಿಂದ ಕಂಡುಂಡ ನನ್ನ ಅನಭವದ ಮಾತು.
ಹಾಗೆಂದು ನಾನು ಹೊರಗಿದ್ದು ನುಡಿಯುತ್ತಿದ್ದೇನೆ ಎಂದು ಯಾರೂ ಭಾವಿಸಬೇಕಿಲ್ಲ.ನನ್ನೊಳಗೆ ಕೆಬಿ ಇರುವರು ಅವರಾಡಿಸಿದ ಮಾತೇ ಇದು ಎಂದು ಪ್ರಾಜ್ಞರು ತಿಳಿಯಬೇಕು.ಸ್ಫೋಟಗುಣ ಕೆಬಿ ಯವರ ಆಯುಧ.ಅದು ಬುದ್ದನ ಅಹಿಂಸಾ ಸ್ವರೂಪದ್ದು. ಆದರೆ ಅವರ ಗೈರುಹಾಜರಿ ಯಲ್ಲಿ ಪ್ರಚಲಿತ ವಿದ್ಯಮಾನ ಗಳಿಗೆ ಅವರಂತೆ ಸ್ಪೋಟಿಸುವವರು ನನಗೆ ಕಾಣುತ್ತಿಲ್ಲ.

ಯಾರೂ ಇಲ್ಲವೆಂದಲ್ಲ.ಇದ್ದರೂ ಕೆಲ ಇತಿಮಿತಿಗಳ ಸಂಕೋಲೆಗಳಲ್ಲಿ ಇಚ್ಛಾಶಕ್ತಿಯ ಕೊರತೆಯಲ್ಲಿ ಪ್ರಲೋಭನೆ ಮತ್ತು ವ್ಯಸನಗಳಲ್ಲಿ ಬಂಧಿಯಾಗಿರುವರು.

ಇದೆಲ್ಲವನ್ನ ನೋಡಿದರೆ ಒಂದುಬಗೆಯಲ್ಲಿ ದೊಡ್ಡ ಶೂನ್ಯವೊಂದು ಎದುರಾಗಿದೆ ಎಂದು ಯಾರೇ ಸಮಾಜಮುಖಿಯಾಗಿ ಆಲೋಚಿಸುವಂತವರಿಗೆ ಅನಿಸುವಂತದ್ದು.

ಬೆಲ್ಲದಮಡು ರಂಗಶ್ಯಾಮಯ್ಯರ ನಿರ್ಗಮನ, ಬಂದಗುಂಟೆ ಯವರ ಶರಶಯ್ಯೆ,ಚೇಳೂರು ವೆಂಟೇಶ್ ನ ಅಗಲಿಕೆ ಪ್ರಸ್ತುತ ಕೆ ಬಿ ಯವರ ಅನುಪಸ್ಥಿತಿ ನಮ್ಮನ್ನ ನೋವಿನ ಮಡುವಿನಲ್ಲಿ ಮುಳುಗಿಸಿದಂತಾಗಿದೆ.

ಕುಂದೂರುತಿಮ್ಮಯ್ಯ ದೊರೈರಾಜ್ ನರಸೀಯಪ್ಪ ಇವರು ನಮಗೊಂದು ಆಶಾಕಿರಣವಾಗಿರುವುದು ಸಮಾಧಾನ ದ ಸಂಗತಿ.
ಆದರೆ ಬದ್ಧತೆ ಉಳ್ಳಂತ ಯುವಕರು ಇಂದು ಮುಖ್ಯವಾಹಿನಿಗೆ ಬರಬೇಕಿದೆ.ಸಾಮುದಾಯಿಕ ನಾಯಕತ್ವ ವಹಿಸಿಕೊಳ್ಳುವ ಅಗತ್ಯವಿದೆ.
ಈಗ ಹೇಳಿ ಕೆ ಬಿ ನೇಪಥ್ಯಕ್ಕೆ ಸರಿದಿರುವ ಆತಂಕಕಾರಿ ಈ ಹೊತ್ತಿನಲ್ಲಿ ಅವರಂತೆ ದಮನಿತರ ಪರವಾಗಿ ಸ್ಫೋಟಿಸುವವರು ಯಾರು?
——–

ಲೇಖಕರು
ಸಾಹಿತಿ- ಸಂಶೋಧಕ- ರಂಗಪ್ರೇಮಿ.
ತುಮಕೂರು
9448659646
dr.o.nagaraj@gmail.com

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

ಇನ್ಸ್ಪೆಕ್ಟರ್ ಸಲ್ಮಾನ್ ಕೆ ಎನ್ on ಕ್ರೀಡಾಕೂಟ ಝಲಕ್
Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?