ರಂಗನಕೆರೆ ಮಹೇಶ್
ತುಮಕೂರಿನಿಂದ ಊರಿಗೆ ಬರಲು KSRTC ಬಸ್ ಹತ್ತಿ ಕುಳಿತಿದ್ದೆ…ಸೀಟ್ ಸಿಕ್ಕದ 3 ಮಂದಿ ವಿದ್ಯಾರ್ಥಿನಿಯರು ಅಸ್ಪಷ್ಟ ಕನ್ನಡ ಭಾಷೆಯಲ್ಲಿ ಚರ್ಚೆಯಲ್ಲಿ ತೊಡಗಿದ್ದರು.
ಕನ್ನಡ ಭಾಷೆಯ ಮಧ್ಯೆ ಹೆಚ್ಚು ಇಂಗ್ಲಿಷ್ ಪದಗಳೇ ಬಳಕೆಯಾಗುತ್ತಿದ್ದವು. ಅದರಲ್ಲಿ ಒಬ್ಬ ವಿದ್ಯಾರ್ಥಿನಿ ತನಗೆ ಕನ್ನಡ ಮಾತನಾಡಲು ಬರುವುದೇ ಇಲ್ಲ ಎಂದು ಗರ್ವದಿಂದ ಬೀಗುತ್ತಿದ್ದಳು.
ನಾನು ಅವರ ಮಾತಿನ ಮಧ್ಯೆ ಪ್ರವೇಶಿಸಿ ಕನ್ನಡಿಗರಾಗಿ ಮಾತೃಭಾಷೆಗೆ ಹೀಗೆಲ್ಲಾ ಅವಮಾನ ಮಾಡಬಾರದು ಎಂದು ಅವರನ್ನು ಮೆಲ್ಲನೆ ಮಾತಿಗೆಳೆದು ಕನ್ನಡ ಭಾಷೆಯ ಹಿರಿಮೆ, ಸಾವಿರಾರು ವರ್ಷದ ಇತಿಹಾಸವನ್ನು ಅವರ ಮುಂದೆ ಬಿಚ್ಚಿಟ್ಟೆ. ಇಷ್ಟು ಹೇಳಿದ್ದೆ ತಡ ಅದಲ್ಲೊಬ್ಬ ವಿದ್ಯಾರ್ಥಿನಿ ಸಾರ್ ನೀವು ಏನು ಕೆಲಸ ಮಾಡುತ್ತೀರಾ ಎಂದು ಪ್ರಶ್ನಿಸಿದರು. ಆಗ ನಾನೊಬ್ಬ ರೈತ, ಕೃಷಿಯಲ್ಲಿ ತೊಡಗಿದ್ದೇನೆ ಎಂದು ಹೇಳಿದೆ.
ಆಗ ಮೂವರು ವಿದ್ಯಾರ್ಥಿನಿಯರು ಖಂಡಿತ ನೀವು ರೈತರಲ್ಲ… ಶಿಕ್ಷಕರೋ…ಉಪನ್ಯಾಸಕರೊ…ಅಥವಾ ಬೇರೇನೂ ಇರಬೇಕು ಎಂದು ನನ್ನಲ್ಲಿ ವಾದಿಸಿದರು.
ಏಕೆ ನಾನೇಕೆ ನಿಮಗೆ ರೈತನಾಗಿ ಕಾಣುತ್ತಿಲ್ಲ ಎಂದು ಪ್ರಶ್ನಿಸಿದೆ. ತಕ್ಷಣವೇ ನನ್ನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯನ್ನು ತೋರಿಸಿ ಅವ್ರು ರೈತರಿರ ಬಹುದು. ನೀವು ಮಾತ್ರ ರೈತರಾಗಲು ಸಾಧ್ಯವೇ ಇಲ್ಲ ಎಂದು ವಿದ್ಯಾರ್ಥಿನಿಯರು ಬಹಳ ಹೊತ್ತು ಚರ್ಚಿಸಿದರು.
ನಾನೇಕೆ ನಿಮಗೆ ರೈತನಾಗಿ ಕಾಣುತ್ತಿಲ್ಲ, ಅವರೇಕೆ ನಿಮಗೆ ರೈತರಾಗಿ ಕಾಣುತ್ತಾರೆ ಎಂದು ಪ್ರಶ್ನಿಸಿದೇ. ರೈತರೆಂದರೆ ನಿಮ್ಮ ಪಕ್ಕದಲ್ಲಿ ಕುಳಿರುವರ ಹಾಗೆ ಪಂಚೆ. ಹೆಗಲ ಮೇಲೆ ಟವಲ್ ಹಾಕಿರುತ್ತಾರೆ ಎಂಬ ಡ್ರಸ್ ಕೋಡ್ ಬಗ್ಗೆ ವಿವರಿಸಿದರು. ಹಾಗಾದರೆ ರೈತರು ಪ್ಯಾಂಟ್ ಶರ್ಟ್ ಹಾಕಬಾರದೆ? ಎಂದು ಪ್ರಶ್ನಿಸಿದೆ.
ಆಗ ವಿದ್ಯಾರ್ಥಿಗಳು ನಮ್ಮ ಅನುಭವಕ್ಕೆ ಬಂದಂತೆ ಹಾಗೂ ಪಠ್ಯದಲ್ಲಿರುವಂತೆ ರೈತರು ಪಂಚೆ ಟವಲ್ ಹಾಕಿರುತ್ತಾರೆ. ಅಲ್ಲದೆ ಎಲ್ಲಾ ಕಡೆ ರೈತರ ಚಿತ್ರಗಳನ್ನು ತೋರಿಸುವಾಗ ಮಾಸಿದ ಅಲ್ಲಲ್ಲಿ ಹರಿದ ಬಟ್ಟೆಯ ಭಾವಚಿತ್ರ ಹಾಕಿರುತ್ತಾರೆ ಎಂದು ಸಮಜಾಯಿಸಿ ನೀಡಿದರು.
ಕೊನೆಗೆ ರೈತರು ಸಹ ಮನುಷ್ಯರೇ ಅವರಿಗೆ ನೀವು ತಿಳಿಸಿದ ಡ್ರಸ್ ಮಾತ್ರ ಧರಿಸಬೇಕೇಂಬ ಕಾನೂನು ಇಲ್ಲ. ಹಿಂದಿನಿಂದಲೂ ಅಧಿಕಾರಿಗಳು ಹಾಗೂ ಮಾಧ್ಯಮಗಳು ರೈತರನ್ನು ಟವಲ್ ಹಾಗೂ ಪಂಚೆ ಧಿರಿಸಿನಲ್ಲಿ ಬಿಂಬಿಸುತ್ತಾ ಬಂದಿದ್ದಾರೆ. ರೈತರು ಸಹ ತಮಗೆ ಬೇಕಾದ ಧಿರಿಸುಗಳನ್ನು ಧರಿಸಬಹುದು ಎಂದು ವಿದ್ಯಾರ್ಥಿಗಳಲ್ಲಿ ನಂಬಿಕೆ ಬರಿಸುವಷ್ಟರಲ್ಲಿ ಗುಬ್ಬಿ ಬಸ್ ನಿಲ್ದಾಣ ಬಂದಿತ್ತು.
ನನ್ನ ಮನದಲ್ಲಿ ಮೂಡಿದ ಆಶ್ಚರ್ಯಕರ ವಿಷಯವೆಂದರೆ ಅವರೆಲ್ಲ ಗುಬ್ಬಿ ಸುತ್ತಮುತ್ತಲ ಹಳ್ಳಿಯವರಾಗಿದ್ದು, ಅವರ ತಂದೆಯರು ಕೃಷಿ ಬಿಟ್ಟು ಒಬ್ಬರು ಬಡಗಿ, ಮತ್ತೊಬ್ಬರು ಶಿಕ್ಷಕರು, ಇನ್ನೊಬ್ಬರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾರೆ. ಆದರೆ ವಾಸ ಮಾತ್ರ ಗುಬ್ಬಿಯಲ್ಲಿದ್ದಾರೆ.
ನಮ್ಮ ಗ್ರಾಮೀಣ ಭಾಗದ ಮಕ್ಕಳಲ್ಲಿಯೇ ರೈತ, ಅವರು ಕೃಷಿ ಬದುಕು ಕಾಣೆಯಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ನಗರ ಪ್ರದೇಶದ ಮಕ್ಕಳಿಗೆ ರೈತ ಮತ್ತು ಕೃಷಿಯನ್ನು ಅರ್ಥ ಮಾಡಿಸುವುದು ಹೇಗೆ ಎಂಬ ಯಕ್ಷ ಪ್ರಶ್ನೆ ನನ್ನನ್ನು ಕಾಡುತ್ತಿದೆ.
ಲೇಖಕರಾದ ರಂಗನಕೆರೆ ಮಹೇಶ್ ಪತ್ರಕರ್ತರು.
ತುಂಬಾ ಚೆನ್ನಾಗಿದೆ
👳♂