ಮಹೇಂದ್ರ ಕೃಷ್ಣಮೂರ್ತಿ
ಪತ್ರಕರ್ತ ವೈ.ರವಿ ಇನ್ನಿಲ್ಲ ಎಂದರೆ ನಂಬಲಾಗುತ್ತಿಲ್ಲ.
ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಕಾಸರಗೋಡಿನವರಾದ ಅವರು ಪ್ರಜಾವಾಣಿಯ ಹಿರಿಯ ಪತ್ರಕರ್ತರು.
ರವಿ ಎಂದರೆ ಹೀರೊ ರೀತಿ. ಎತ್ತರದ ನಿಲುವು, ಕೆಂಪಗೆ, ಹೆಚ್ಚು ಮಾತನಾಡದ ಮೃದುಭಾಷಿ. ಆದರೆ ಅಪ್ಪಟ ಪತ್ರಕರ್ತ.
ಅವರೊಂದಿಗೆ ಮಂಗಳೂರಿನಲ್ಲಿ ನನ್ನ ಕೆಲಸದ ನೆನಪು ಎಂದಿಗೂ ಮಾಸದು. ಮಂಗಳೂರಿನಲ್ಲಿ ಪ್ರಜಾವಾಣಿ ಪತ್ರಿಕೆ ಮುದ್ರಣಕ್ಕೆ ಹೋಗುತ್ತಿದ್ದದ್ದೇ ರಾತ್ರಿ 2 ಗಂಟೆಗೆ. ಆ ದಿನ ಮಾತ್ರ ರಾತ್ರಿ ಏಳಕ್ಕೆ ಶುರುವಾದ ಅವರ ಮೊಬೈಲ್ ಕಾಲ್ ಗಳು ನಿಲ್ಲುತ್ತಲೇ ಇರಲಿಲ್ಲ.
ಯಾವತ್ತೂ ಅವರು ವಿಚಲಿತರಾಗಿದ್ದು ನಾನು ನೋಡೇ ಇರಲಿಲ್ಲ. ಆ ದಿನ ನನಗಂತೂ ಮರೆಯಲಾರದ ದಿನ. ಯಾರಿಗೂ ಗೊತ್ತಾದ ಸ್ಕೂಪ್ ಸ್ಟೋರಿ ಬರೆದು ಅವರ ಕಂಪ್ಯೂಟರ್ ಫೋಲ್ಡರ್ ಗೆ ಹಾಕಿದ್ದೆನು. ಅದರ ಖುಷಿಯಲ್ಲೇ ಇದ್ದೆ. ಆ ಸುದ್ದಿ ಬರೆದದ್ದು ನನಗೆ ಬಿಟ್ಟರೆ ರವಿ ಅವರಿಗೆ ಮಾತ್ರ ಗೊತ್ತಿತ್ತು.
ಅವರಿಂದ ಯಾವ ಮಾತು ಹೊರಡಲಿಲ್ಲ. ಅದು ಅವರ ಸ್ಟೈಲ್. ಆದರೆ ಯಾಕೊ ವಿಚಲಿತರಾಗಿದ್ದರು. ಲಕ್ಷಣ ಕೊಡಸೆ ಅವರ ಬಳಿಕ ಮಂಗಳೂರಿನ ಜವಾಬ್ದಾರಿ ಹೊತ್ತು ಬಂದಿದ್ದರು.
ಇನ್ನೇನು ಬಾಗಿಲು ಮುಚ್ಚಿ ಮನೆಗೆ ಹೊರಡಬೇಕು ಎನ್ನುವಷ್ಟರಲ್ಲಿ ಅವರ ಕ್ಯಾಬಿನ್ ಒಳಗೆ ಕರೆದರು. ಇಷ್ಟೆಲ್ಲ ಫೋನ್ ಕರೆಗಳು ಏಕೆಂದು ಗೊತ್ತಾ ನಿಮಗೆ ? ಎಂದರು. ನಾನು, ಮುಖ,ಮುಖ ನೋಡಿದೆ.
ನಿಮ್ಮ ಸ್ಟೋರಿ ಹಾಕಬಾರದೆಂದು ಎಷ್ಟೆಲ್ಲ ಸಾಹಸ ಪಡುತ್ತಿದ್ದಾರೆ ನೋಡಿ. ಯಾರು, ಯಾರೆಲ್ಲ ಕಾಲ್ ಮಾಡಿದ್ರು ಗೊತ್ತಾ? ಎಂದರು. ನಾನು, ವಿವರ ಕೇಳುವ ಗೋಜಿಗೆ ಹೋಗಲಿಲ್ಲ.
ಬೆಳಿಗ್ಗೆ ಎದ್ದವನೇ ಪ್ರಜಾವಾಣಿ ತೆಗೆದರೆ ಮುಖಪುಟದಲ್ಲಿ ಕಲರ್ ಸಹಿತ ಸುದ್ದಿ ಪ್ರಕಟ. ಆ ದಿನ ಬೆಳಿಗ್ಗೆಯೇ 8ಕ್ಕೆ ಲೋಕಾಯುಕ್ತರಾದ ನ್ಯಾಯಮೂರ್ತಿ ವೆಂಕಟಾಚಲಯ್ಯ ಅವರಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಮೇಲೆ ದಾಳಿ. ಇಡೀ ಸಂಜೆವರೆಗೂ ಅವರು ತಮ್ಮ ಕೈಯಲ್ಲಿ ಇಟ್ಟುಕೊಂಡಿದ್ದ ಪ್ರಜಾವಾಣಿಯನ್ನು ಬಿಟ್ಟಿರಲಿಲ್ಲ.
ವೆನ್ಲಾಕ್ ಆಸ್ಪತ್ರೆಯಲ್ಲಿ ಕೋಟ್ಯಂತರ ಮೌಲ್ಯದ ಔಷಧಿಗಳನ್ನು ವೆನ್ಲಾಕ್ ಆಸ್ಪತ್ರೆ ಹಿಂಭಾಗದ ಬಾವಿಯಲ್ಲಿ ಮುಚ್ಚಿಡಲಾಗಿದೆ. ರೋಗಿಗಳಿಗೆ ಕೊಡದೇ ಇಟ್ಟಿದ್ದ ಲಕ್ಷಾಂತರ ಮೌಲ್ಯದ ಔಷಧಿಗಳನ್ನು ಸರ್ಕಾರಿ ಕಚೇರಿಯೊಂದರ ಹಿಂಭಾಗ ಗೌಪ್ಯವಾಗಿ ಸುಡಲಾಗಿದ್ದ ಬಗ್ಗೆ ನನ್ನ ವಿಶೇಷ ವರದಿಇತ್ತು.
ಸುದ್ದಿ ನಂಬಿದ ನ್ಯಾಯಮೂರ್ತಿ ವೆಂಕಟಾಚಲಯ್ಯ ಅವರು ಸಿಬ್ಬಂದಿಯನ್ನು ಬಾವಿಗೆ ಇಳಿಸಿಯೇ ಬಿಟ್ಟರು.ರಾಶಿ, ರಾಶಿ ಔಷಧಿಗಳು ಸಿಕ್ಮವು. ಅಮೇಲಿನದು ಬೇರೆ ವಿಷಯ.
ವೈ.ರವಿ ಸ್ವಲ್ಪ ಬಾಗಿದ್ದರೆ ಆ ಸುದ್ದಿ ಬರುತ್ತಿರಲಿಲ್ಲ. ಮಂಗಳೂರಿನಲ್ಲಿ ಅವರು ಇದ್ದಾಗ ಒಂದಿಷ್ಟು ಕಹಿ ಘಟನೆಗಳ ಕಾರಣ ಬೆಂಗಳೂರಿಗೆ ವರ್ಗ ಮಾಡಿಸಿಕೊಂಡರು. ವಿಜು ಪೊಣಚ್ಚ, ರಾಮದೇವ ರಾಖೆ ಅವರು ರವಿ ಅವರೊಂದಿಗೆ ಇದ್ದರು. ಬಸವರಾಜ್ ಸಂಪಳ್ಳಿ, ಹರ್ಷವರ್ಧನ್,ಡಿ.ಬಿ.ನಾಗರಾಜ್, ರಾಜೇಶ್ ರೈ ಚಟ್ಲ, ಪ್ರಕಾಶಂ, ಇನ್ನೂ ಅನೇಕರಿದ್ದೆವು.
ನಂತರ ನಾನು ರವಿ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಬೆಂಗಳೂರಿನಲ್ಲಿ. ಅವರೊಂದಿಗೆ ಕೆಲಸ ಮಾಡುವುದೇ ಖುಷಿಯಾದ ವಿಚಾರವಾಗಿತ್ತು. ಯಾರನ್ನೂ ತೆಗಳದ, ಹೊಗಳದ ಅವರಿಗೆ ಬಡ್ತಿಯಲ್ಲೂ ಹಿನ್ನಡೆಯಾಗಿತ್ತು. ಇದು ಅವರಿಗೆ ಬೇಸರವನ್ನೂ ತರಿಸಿತ್ತು. ಕೊನೆಗೆ ಬಡ್ತಿ ಸಿಕ್ಕರೂ ಅವರು ಅದನ್ನು ನಿರಾಕರಿಸಿದರು. ನಾನು ಕೇಳಿದ್ದಕ್ಕೆ, ಈಗ ಯಾಕ್ ಬೇಕು ಅದು ಎಂದಿದ್ದರು.
ಪತ್ರಕರ್ತರಿಗೆ ವೇಜ್ ಬೋರ್ಡ್ ಜಾರಿ ವಿಚಾರದಲ್ಲಿ ಅತಿ ಗಟ್ಟಿಯಾಗಿ ನಿಂತಿದ್ದರು. ಶ್ರೀನಗರದಲ್ಲೂ ಕೆಲಸ ಮಾಡಿ ತೋರಿಸಿದರು. ಕೊನೆಗೆ ಅವರನ್ನು ಗುಲ್ಬರ್ಗಾಕ್ಕೆ ವರ್ಗ ಮಾಡಲಾಗಿತ್ತು.
ಯಾರನ್ನೂ ನೋಯಿಸಿದ ಅವರ ಮನದಲ್ಲಿ ಎಷ್ಟು ನೋವುಗಳಿದ್ದವೋ ಗೊತ್ತಿಲ್ಲ. ಪತ್ರಿಕೋದ್ಯಮ ಅವರಿಗೆ ಖಂಡಿತಾ ನೋವು ಕೊಟ್ಟಿತ್ತು ಎಂಬುದು ನನಗೆ ಗೊತ್ತು. ಈ ಕಾಲಃಟ್ಟದಲ್ಲಿ ಪತ್ರಿಕೋದ್ಯಮದ ಸೇವೆ ಗುರುತಿಸುವರು ಕಡಿಮೆಯೇ ಸರಿ. ಏನು ಇಲ್ಲದಂತೆ, ಎಲೆ ಮಾರಿಕಾಯಿಯಂತೆ, ಪತ್ರಕರ್ತನ ಹಮ್ಮುಬಿಮ್ಮು ಇಲ್ಲದಂತೆ ನಡೆದು ಹೋಗಿದ್ದಾರೆ.
ರವಿ ಅವರನ್ನು ಪ್ರಜಾವಾಣಿಯಲ್ಲಿ ಸಾಕಷ್ಟು ಕಿರಿಯ ಸಹದ್ಯೋಗಿಗಳು ಇಷ್ಟಪಡುತ್ತಿದ್ದರು. ಅವರ ಹೀರೊ ಲುಕ್ ನೋಡುವುದೇ ಖುಷಿ ಎನಿಸುತ್ತಿತ್ತು.
ಅವರ ಆತ್ಮಕ್ಕೆ ಶಾಂತಿ ಸಿಗಲಿ.